Coolie vs War- 2; ಬಾಕ್ಸಾಫೀಸ್ ವಾರ್ 3ನೇ ದಿನಕ್ಕೆ ಸಂಪೂರ್ಣವಾಗಿ 'ಕೂಲಿ' ಸೈಡ್ ಆಗೋತ್ತು!
ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಬಿಡುಗಡೆಯಾಗಿರುವ 'ಕೂಲಿ' ಹಾಗೂ 'ವಾರ್- 2' ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡ್ತಿವೆ. ಲಾಂಗ್ ವೀಕೆಂಡ್ ಚಿತ್ರಗಳ ಗಳಿಕೆಗೆ ವರವಾಗಿದೆ. ಎರಡೂ ಚಿತ್ರಗಳಿಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಆದರೂ ರಜನಿಕಾಂತ್ ಮ್ಯಾಜಿಕ್ ಸಿನಿರಸಿಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ಕಲೆಕ್ಷನ್ ಮಾಡ್ತಿದೆ.
'ವಾರ್-2' ಹಾಗೂ 'ಕೂಲಿ' ಎರಡೂ ಸಿನಿಮಾಗಳು ಭಾರೀ ನಿರೀಕ್ಷೆ ಮೂಡಿಸಿದ್ದರು. ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್ ಸಿನಿಮಾ 'ವಾರ್- 2'. ತೆಲುಗು ನಟ ಜ್ಯೂ. ಎನ್‌ಟಿಆರ್ ನಟಿಸಿದ್ದು ನಿರೀಕ್ಷೆ ಹೆಚ್ಚಿಸಿತ್ತು. ತಾರಕ್ ಕಾರಣಕ್ಕೆ ಸಿನಿಮಾ ಇದೀಗ ಒಳ್ಳೆ ಕಲೆಕ್ಷನ್ ಮಾಡ್ತಿದೆ. ಆಂಧ್ರ, ತೆಲಂಗಾಣದಲ್ಲಿ ತೆಲುಗು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ನೋಡುತ್ತಿದ್ದಾರೆ. ಹಾಗಾಗಿ ಚಿತ್ರದ ಗಳಿಕೆಯಲ್ಲಿ ದೊಡ್ಡ ಪಾಲು ತೆಲುಗು ಬೆಲ್ಟ್‌ನಿಂದಲೇ ಬರ್ತಿದೆ.

ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಷನ್ ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿತ್ತು. ಸಾಲದ್ದಕ್ಕೆ ಉಪೇಂದ್ರ, ನಾಗಾರ್ಜುನ, ಆಮೀರ್ ಖಾನ್ ರೀತಿಯ ಘಟಾಟುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದರು. ಚಿತ್ರದ ಟೀಸರ್, ಟ್ರೈಲರ್, ಸಾಂಗ್ಸ್ ಹಿಟ್ ಆಗಿತ್ತು. ಸಹಜವಾಗಿಯೇ ಸಿನಿಮಾ ಕುತೂಹಲ ಮೂಡಿಸಿತ್ತು. ಅದಕ್ಕೆ ತಕ್ಕಂತೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ನಡೆದಿತ್ತು. ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಲೋಕೇಶ್ ಕನಕರಾಜ್ ಸೋತಿದ್ದಾರೆ. ಆದರೆ ರಜನಿಕಾಂತ್ ನೋಡೋಕೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹೋಗುತ್ತಿದ್ದಾರೆ.
3ನೇ ದಿನ 'ವಾರ್-2' ಗಳಿಕೆ
ಚಿತ್ರದ ಗಳಿಕೆ ಬಗ್ಗೆ ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಪ್ರತಿಕ್ರಿಯಿಸಿಲ್ಲ. sacnilk.com ವೆಬ್ ಸೈಟ್ ವರದಿ ಪ್ರಕಾರ ಮೊದಲ ದಿನ 52 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಸಿನಿಮಾ 2ನೇ ದಿನ 57.35 ಕೋಟಿ ರೂ. ಬಾಚಿಕೊಂಡಿತ್ತು. 3ನೇ ದಿನ 33 ಕೋಟಿ ರೂ. ಮಾತ್ರ ಗಳಿಸಿದೆ ಎನ್ನಲಾಗ್ತಿದೆ. ಕೃಷ್ಣ ಜನ್ಮಾಷ್ಟಮಿ ರಜೆ, ವೀಕೆಂಡ್ ಇದ್ದರೂ ಹೃತಿಕ್, ತಾರಕ್ ಸಿನಿಮಾ 50 ಕೋಟಿ ಗಳಿಸಲಿಲ್ಲ ಎಂದು ಬಾಕ್ಸಾಫೀಸ್ ಪಂಡಿತರು ಕಾಮೆಂಟ್ ಮಾಡುತ್ತಿದ್ದಾರೆ. ನಿಧಾನವಾಗಿ ಸಿನಿಮಾ ಕಲೆಕ್ಷನ್ ಇಳಿಕೆಯಾಗುತ್ತಿದೆ. ಇಂದು(ಭಾನುವಾರ) ಏನಾದರೂ ಮ್ಯಾಜಿಕ್ ಆಗಬೇಕು. ಇಲ್ಲದಿದ್ದರೆ 'ವಾರ್- 2' ಸಿನಿಮಾ ಗಳಿಕೆ ಮತ್ತಷ್ಟು ಕಮ್ಮಿ ಆಗುತ್ತದೆ ಎಂದು ಅಂದಾಜಿಸಲಾಗ್ತಿದೆ.
'ಕೂಲಿ' 3ನೇ ದಿನ ಕಲೆಕ್ಷನ್
ರಜನಿಕಾಂತ್ ನಟನೆಯ 'ಕೂಲಿ' ಚಿತ್ರ ಮೊದಲ ದಿನ 151 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಸನ್ ಪಿಕ್ಚರ್ಸ್ ಸಂಸ್ಥೆ ಘೋಷಿಸಿತ್ತು. 2 ಹಾಗೂ 3ನೇ ದಿನದ ಕಲೆಕ್ಷನ್ ಬಗ್ಗೆ ಇನ್ನು ಮಾಹಿತಿ ನೀಡಿಲ್ಲ. ಸಿನಿಮಾ ಬಾಕ್ಸಾಫೀಸ್ ವಿಶ್ಲೇಷಕ ಸುಮಿತ್ ಕಡೆಲ್ ಟ್ವೀಟ್ ಮಾಡಿ 'ಕೂಲಿ' ಸಿನಿಮಾ ಮೊದಲ 3 ದಿನದಲ್ಲೇ 300 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದಿದ್ದಾರೆ. ಭಾರತದಲ್ಲಿ ಮೊದಲ 3 ದಿನಕ್ಕೆ 158 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದ್ದು ವಿಶ್ವದಾದ್ಯಂತ ಒಟ್ಟಾರೆ 320 ಕೋಟಿ ರೂ, ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಅಂದಾಜಿಸಲಾಗುತ್ತಿದೆ.
'ಕೂಲಿ' ಕರ್ನಾಟಕ ಕಲೆಕ್ಷನ್
ಕರ್ನಾಟಕದಲ್ಲಿ ಕೂಡ ರಜನಿಕಾಂತ್ 'ಕೂಲಿ' ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಮೊದಲ ದಿನ ಟಿಕೆಟ್ ದರ ಗಣನೀಯವಾಗಿ ಏರಿಕೆಯಾಗಿತ್ತು. 13 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. 2ನೇ ದಿನ 8 ಕೋಟಿ ರೂ. ಹಾಗೂ 3ನೇ ದಿನ 5 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ.
'ವಾರ್-2' vs 'ಕೂಲಿ'
ಮೊದಲ 3 ದಿನದಲ್ಲಿ 'ವಾರ್-2' ಸಿನಿಮಾ ಕಲೆಕ್ಷನ್ 150 ಕೋಟಿ ರೂ. ಗಡಿಯಲ್ಲಿದೆ. 'ಕೂಲಿ' ಸಿನಿಮಾ ಗಳಿಕೆ 300 ಕೋಟಿ ರೂ. ದಾಟಿದೆ. ಸಹಜವಾಗಿಯೇ 'ಕೂಲಿ' ಕೈ ಮೇಲಾಗಿರುವುದು ಗೊತ್ತಾಗುತ್ತಿದೆ. ಭಾನುವಾರ ಕೂಡ 'ಕೂಲಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜಾದೂ ಮಾಡುವ ಸಾಧ್ಯತೆಯಿದೆ.


Click it and Unblock the Notifications











