Andhra King Taluka Day 6 Collection; ಬಾಕ್ಸಾಫೀಸ್‌ನಲ್ಲಿ ಹೇಗಿದೆ 'ಆಂಧ್ರಕಿಂಗ್' ದರ್ಬಾರ್?
ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಿಗೆ ಪಾಸಿಟಿವ್ ಟಾಕ್ ಬರೋದೆ ಅಪರೂಪ. ನಿರೀಕ್ಷೆ ಹೆಚ್ಚಾಗಿ ಸಿನಿಮಾಗಳು ಪ್ರೇಕ್ಷಕರಿಗೆ ನಿರಾಸೆ ಮೂಡಿಸುತ್ತಿದೆ. ಆದರೆ ತೆಲುಗಿನ 'ಆಂಧ್ರಕಿಂಗ್ ತಾಲೂಕ' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದಾರೆ. ಆದರೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಕುಂಟುವಂತಾಗಿದೆ.
ರಾಮ್ ಪೊತಿನೇನಿ ಹಾಗೂ ಉಪೇಂದ್ರ ನಟನೆಯ 'ಆಂಧ್ರಕಿಂಗ್ ತಾಲೂಕ' ಸಿನಿಮಾ ಕಳೆದ ಗುರುವಾರ ತೆರೆಗೆ ಬಂದಿತ್ತು. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಬಿಡುಗಡೆಯಾಗಿದೆ. ಭರ್ಜರಿ ಪ್ರಚಾರ ಕೂಡ ಮಾಡಲಾಗಿತ್ತು. ಚಿತ್ರಕ್ಕೆ ಒಳ್ಳೆ ಟಾಕ್ ಬಂದಿದೆ. ಮುಖ್ಯವಾಗಿ ರಾಮ್ ಹಾಗೂ ಉಪೇಂದ್ರ ನಟನೆಗೆ ಫುಲ್ ಮಾರ್ಕ್ಸ್ ಸಿಕ್ಕಿದೆ. ಆದರೆ ಯಾಕೋ ಸಿನಿಮಾ ನೋಡಲು ಪ್ರೇಕ್ಷಕರು ಹಿಂದೇಟು ಹಾಕುತ್ತಿದ್ದಾರೆ.

ನವೆಂಬರ್ ಸಿನಿಮಾ ಬಿಡುಗಡೆಗೆ ಒಳ್ಳೆ ಟೈಮ್ ಅಲ್ಲ ಎನ್ನುವ ಮಾತು ಚಿತ್ರರಂಗದಲ್ಲಿದೆ. ಇದು ಅನ್‌ಸೀಸನ್ ಎಂದೇ ಹೇಳಲಾಗುತ್ತದೆ. ಆದರೂ ತಮ್ಮ ಸಿನಿಮಾ ಮೇಲಿನ ನಂಬಿಕೆಯಿಂದ ಚಿತ್ರತಂಡ ಸಿನಿಮಾ ಬಿಡುಗಡೆಗೆ ಧೈರ್ಯ ಮಾಡಿತ್ತು. ಈ ವಾರ 'ಅಖಂಡ- 2' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಹಾಗಾಗಿ 'ಆಂಧ್ರಕಿಂಗ್ ತಾಲೂಕ' ಸಿನಿಮಾ ನೋಡಲು ಪ್ರೇಕ್ಷಕರು ಹಿಂದೇಟು ಹಾಕುತ್ತಿರುವಂತೆ ಕಾಣ್ತಿದೆ.
ಇನ್ನೆರಡು ದಿನಗಳಲ್ಲಿ ಸಿನಿಮಾ ಚೇತರಿಸಿಕೊಳ್ಳದೇ ಇದ್ದರೆ ಶುಕ್ರವಾರದಿಂದ 'ಅಖಂಡ' ಬಾಲಯ್ಯನ ಆರ್ಭಟ ಶುರುವಾಗಲಿದೆ. ಆ ಬಳಿಕ 'ಆಂಧ್ರಕಿಂಗ್' ದರ್ಬಾರ್ ನಡೆಯುವುದಿಲ್ಲ. ಇದು ಸಹಜವಾಗಿಯೇ ಚಿತ್ರತಂಡದ ಬೇಸರಕ್ಕೆ ಕಾರಣವಾಗಿದೆ. ಇತ್ತೀಚೆಗೆ ರಾಮ್ ನಟನೆಯ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಒಳ್ಳೆ ಟಾಕ್ ಕೂಡ ಗಿಟ್ಟಿಸಿಕೊಂಡಿರಲಿಲ್ಲ. ಬಹಳ ದಿನಗಳ ಬಳಿಕ ಈ ಚಿತ್ರದ ಮೂಲಕ ಗೆದ್ದಿದ್ದಾರೆ. ಆದರೆ ಸಂಪೂರ್ಣ ಗೆಲುವು ಸಿಕ್ಕಿಲ್ಲ ಎನ್ನುವುದು ಬೇಸರದ ಸಂಗತಿ.

ಅಂದಾಜು 50 ಕೋಟಿ ರೂ. ಬಜೆಟ್‌ನಲ್ಲಿ 'ಆಂಧ್ರಕಿಂಗ್ ತಾಲೂಕ' ಸಿನಿಮಾ ನಿರ್ಮಾಣವಾಗಿದೆ. ಆದರೆ ಮೊದಲ 6 ದಿನಕ್ಕೆ 23 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ. ನೆಟ್ ಕಲೆಕ್ಷನ್ 15 ಕೋಟಿ ರೂ. ತಲುಪಿದೆ. ಸಿನಿಮಾ ಬ್ರೇಕ್‌ಈವನ್ ಸಾಧಿಸಲು ಬಹಳ ದೂರು ಕ್ರಮಿಸಬೇಕಿದೆ. ಇತ್ತೀಚೆಗೆ ಸಕ್ಸಸ್ ಮೀಟ್ ಕೂಡ ಮಾಡಿ ಪ್ರೇಕ್ಷಕರಿಗೆ ಚಿತ್ರತಂಡ ಧನ್ಯವಾದ ತಿಳಿಸಿದೆ.
ಖ್ಯಾತ ಸಿನಿಮಾ ನಟ(ಸೂರ್ಯ ಕುಮಾರ್) ಹಾಗೂ ಆತನ ಅಭಿಮಾನಿ(ಸಾಗರ್) ಕಥೆ 'ಆಂಧ್ರಕಿಂಗ್ ತಾಲೂಕ' ಚಿತ್ರದಲ್ಲಿದೆ. ಅಭಿಮಾನಿಗಳ ಅಭಿಮಾನ ಎಂಥದ್ದು ಎಂದು ಗೊತ್ತೇಯಿದೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಅಭಿಮಾನಿಗಳು ನೆಚ್ಚಿನ ನಟನನ್ನು ಆರಾಧಿಸುತ್ತಾರೆ. ಅಂತಹ ಅಭಿಮಾನಿಗಳ ಕಥೆ ಈ ಚಿತ್ರದಲ್ಲಿದೆ. ಒಂದು ಹಂತಕ್ಕೆ ತಮ್ಮ ನೆಚ್ಚಿನ ನಟನ 100ನೇ ಸಿನಿಮಾ ಆರ್ಥಿಕ ಕಾರಣರಗಳಿಂದ ನಿಂತು ಹೋದಾಗ ಸಾಗರ್ ಸಹಾಯ ಮಾಡಲು ಮುಂದಾಗುತ್ತಾನೆ.
ನಟ ಸೂರ್ಯಕುಮಾರ್ ನಟನೆಯ 100ನೇ ಸಿನಿಮಾ ನಿಂತು ಹೋಗುತ್ತದೆ. ಸಿನಿಮಾ ಪೂರ್ಣಗೊಳಿಸಲು 3 ಕೋಟಿ ರೂ. ಅವಶ್ಯಕತೆ ಇರುತ್ತದೆ. ಯಾರ ಬಳಿ ಕೇಳಿದರೂ ಹಣ ಸಿಗಲ್ಲ. ದಿಢೀರನೆ ಆತನ ಬ್ಯಾಂಕ್ ಖಾತೆಗೆ 3 ಕೋಟಿ ರೂ. ಹಣ ಜಮೆ ಆಗುತ್ತದೆ. ಆ ಹಣ ಕೊಟ್ಟಿದ್ದು ಯಾರು ಎಂದು ಹುಡುಕುತ್ತಾ ಹೋದ ಆತನಿಗೆ ಅಭಿಮಾನಿ ಸಾಗರ್ ಬಗ್ಗೆ ಗೊತ್ತಾಗುತ್ತದೆ. ಮುಂದೆ ತನ್ನ ಅಭಿಮಾನಿ ಸಾಗರ್ ಬೆಂಬಲಕ್ಕೆ ಸೂರ್ಯ ನಿಲ್ಲುವ ಕಥೆ ಚಿತ್ರದಲ್ಲಿದೆ.
ಭಾವನಾತ್ಮಕ ಸನ್ನಿವೇಶಗಳನ್ನು ಸೊಗಸಾಗಿ ತೆರೆಗೆ ತಂದು ನಿರ್ದೇಶಕ ಮಹೇಶ್ ಬಾಬು ಪಚ್ಚಿಗೊಲ್ಲ ಗೆದ್ದಿದ್ದಾರೆ. ಅಭಿಮಾನಿಗಳು ಸಿನಿಮಾ ನೋಡುತ್ತಾ ತಮ್ಮನ್ನು ತಾವು ತೆರೆಮೇಲೆ ನೋಡಿಕೊಂಡಿದ್ದಾರೆ. ಬಹಳ ದಿನಗಳ ಬಳಿಕ ಒಂದೊಳ್ಳೆ ಸಿನಿಮಾ ಬಂತು ಎಂದು ಸಂಭ್ರಮಿಸಿದ್ದಾರೆ. ಆದರೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಿನಿಮಾ ವಿಫಲವಾಗುತ್ತಿದೆ.


Click it and Unblock the Notifications











