Dhamaal 4 Box Office Day 3 ; ಬಾಕ್ಸಾಫೀಸ್‌ನಲ್ಲಿ 'ಧಮಾಲ್ 4' ಧಮಾಕ, ಅಕ್ಷಯ್ ಕುಮಾರ್‌ಗೆ ಸೆಡ್ಡು ಹೊಡೆದ ಅಜಯ್ ದೇವಗನ್
ಯಾವುದೇ ಚಿತ್ರವಾದರು ಕೂಡ ಬಿಡುಗಡೆಯಾದ ನಂತರ ಚಿತ್ರಮಂದಿರ ತುಂಬಬೇಕು, ಚಿತ್ರ ಗೆಲ್ಲಬೇಕೆಂದರೆ ಯುವ ಸಮೂಹ ಚಿತ್ರಮಂದಿರಕ್ಕೆ ಬರಬೇಕು. ಮನೆ ಮಂದಿಯೆಲ್ಲ ಜೊತೆಯಾಗಿ ಬಂದು ಚಿತ್ರವನ್ನು ನೋಡಬೇಕು. ಆಗಲೇ ಆ ಚಿತ್ರ ಗೆಲ್ಲಲು ಸಾಧ್ಯ. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಯಲು ಸಾಧ್ಯ.
ಆದರೆ ಈಗೀಗ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ. ಅಂಗೈಯಲ್ಲಿಯೇ ಮನರಂಜನೆ ಇರುವಾಗ ಚಿತ್ರಮಂದಿರಕ್ಕೆ ಯಾಕೆ ಹೋಗಬೇಕೆನ್ನುವುದು ಅನೇಕರ ವಾದ. ಹಾಗಂಥ.. ಎಲ್ಲ ಚಿತ್ರವನ್ನು ಎಲ್ಲರೂ ಓಟಿಟಿಯಲ್ಲಿ ನೋಡುವುದಿಲ್ಲ. ಅಲ್ಲೊಂದು.. ಇಲ್ಲೊಂದು.. ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುತ್ತವೆ. ಬಾಕ್ಸಾಫೀಸ್‌ನಲ್ಲಿ ಹಣವನ್ನು ಕೂಡ ಗಳಿಸುತ್ತವೆ. ಉದಾಹರಣೆಗೆ ''ಧಮಾಲ್ 4''.

ಧಮಾಲ್ ಧಮಕಾ
ಹೌದು, ಕಳೆದ ವಾರ (ಜುಲೈ 10) ತೆರೆಗೆ ಬಂದ ಅಜಯ್ ದೇವಗನ್, ರಿತೇಶ್ ದೇಶಮುಖ್, ಅರ್ಷದ್ ವಾರ್ಸಿ, ಜಾವೇದ್ ಜಾಫ್ರಿ, ಅಂಜಲಿ ಆನಂದ್ ಅಭಿನಯದ ''ಧಮಾಲ್ 4'' ಮೊದಲ ವಾರಾಂತ್ಯದಲ್ಲಿ ಬಾಕ್ಸಾಫೀಸ್‌ನಲ್ಲಿ ಧಮಾಕ ಮಾಡಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ₹65 ಕೋಟಿಯನ್ನು ಗಳಿಸಿದೆ.
ಇನ್ನು ಈ ಮೂರು ದಿನದಲ್ಲಿ ಚಿತ್ರದ ಗಳಿಕೆ ದಿನದಿಂದ ದಿನಕ್ಕೆ ಏರಿಕೆ ಆಗಿದೆ ಹೊರತು ಚೂರು ಕಡಿಮೆಯಾಗಿಲ್ಲ. ಇಷ್ಟೇ ಅಲ್ಲ ನಿನ್ನೆ (ಜುಲೈ 12) ಚಿತ್ರದ ಪ್ರದರ್ಶನದ ಸಂಖ್ಯೆಯೂ ಕೂಡ ಹೆಚ್ಚಾಗಿದೆ. ಸ್ಯಾಕ್ನಿಲ್ ಪ್ರಕಾರ ಮೊದಲ ದಿನ (ಜುಲೈ 10) ಭಾರತದೆಲ್ಲೆಡೆ 10,669 ಪ್ರದರ್ಶನಗಳನ್ನು ಕಂಡಿದ್ದ ಈ ಚಿತ್ರ ನಿನ್ನೆ (ಜುಲೈ 12)11,481 ಪ್ರದರ್ಶನ ಕಂಡಿದೆ.
ಸ್ಯಾಕ್ನಿಲ್ ಪ್ರಕಾರ ''ಧಮಾಲ್ 4'' ಚಿತ್ರದ ಮೂರು ದಿನದ ಗಳಿಕೆ ಈ ಕೆಳಗಿನಂತೆ ಇದೆ
ದಿನ ಭಾರತದ ಒಟ್ಟು ನೆಟ್ ಗಳಿಕೆ (India Net)
ಮೊದಲ ದಿನ (ಶುಕ್ರವಾರ) ₹14.00 ಕೋಟಿ
ಎರಡನೇ ದಿನ (ಶನಿವಾರ) ₹22.50 ಕೋಟಿ
ಮೂರನೇ ದಿನ (ಭಾನುವಾರ) ₹28.50 ಕೋಟಿ
ಒಟ್ಟು ಭಾರತದ ನೆಟ್ ಕಲೆಕ್ಷನ್ ₹65.00 ಕೋಟಿ
''ವೆಲ್ಕಮ್ ಟು ದಿ ಜಂಗಲ್'' ಹಿಂದಿಕ್ಕಿದ ''ಧಮಾಲ್ 4''
ಇನ್ನು ಬಾಕ್ಸಾಫೀಸ್‌ನ ಈ ರೇಸ್‌ನಲ್ಲಿ ಅಕ್ಷಯ್ ಕುಮಾರ್ ಅಂಡ್ ಗ್ಯಾಂಗ್ ಅಭಿನಯದ ''ವೆಲ್ಕಮ್ ಟು ದಿ ಜಂಗಲ್'' ಚಿತ್ರವನ್ನು ಕೂಡ ಸೆಡ್ಡು ಹೊಡೆದಿದೆ. ''ಧಮಾಲ್'' ಶುರುವಾಗುವ 15 ದಿನಗಳ ಮುನ್ನ ಬಂದಿದ್ದ ''ವೆಲ್ಕಮ್ ಟು ದಿ ಜಂಗಲ್'' ಮೊದಲ ಮೂರು ದಿನದಲ್ಲಿ ₹63.75 ಕೋಟಿ ಗಳಿಸಿತ್ತು. ''ಧಮಾಲ್ 4'' ಒಂದು ಹೆಜ್ಜೆ ಮುಂದಿದೆ.

ಮಿಶ್ರ ಪ್ರತಿಕ್ರಿಯೆ ನಡುವೆಯೂ ಅಬ್ಬರ
ಹಾಗೇ ನೋಡಿದರೆ ''ಧಮಾಲ್ 4'' ಎಲ್ಲರ ಹೃದಯ ಗೆದ್ದಿಲ್ಲ. ಬದಲಿಗೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಲಿವುಡ್‌ನ ಹಲವು ಖ್ಯಾತ ವಿಮರ್ಷಕರು ಈ ಚಿತ್ರವನ್ನು ತೆಗಳಿದ್ದಾರೆ. ಇನ್ನು ಪ್ರೇಕ್ಷಕರ ವರ್ಗದಲ್ಲಿಯೂ ಕೂಡ ಈ ಚಿತ್ರದ ವಿಚಾರದಲ್ಲಿ ಎರಡು ಗುಂಪುಗಳಿವೆ. ಆದರೂ ಕೂಡ ''ಧಮಾಲ್ 4'' ಮೊದಲ ಮೂರು ದಿನ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುವಲ್ಲಿ ಯಶಸ್ವಿಯಾಗಿದೆ.
ಇಂದಿನಿಂದ ಅಸಲಿ ಪರೀಕ್ಷೆ ಶುರು
ಸದ್ಯ ಬಾಕ್ಸಾಫೀಸ್‌ನಲ್ಲಿ ಮೈದಾನ ಖಾಲಿ ಇದೆ. ಮುಂದಿನ ಮೂರು ವಾರ ಹೇಳಿಕೊಳ್ಳುವಂತಹ ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ.ಇದು ''ಧಮಾಲ್ 4'' ಚಿತ್ರಕ್ಕೆ ಸಹಕಾರಿಯಾಗುವ ಸಾಧ್ಯತೆ ಇದೆ. ಇನ್ನು ಯಾವುದೇ ಚಿತ್ರವಾದರು ಕೂಡ ಅಸಲಿ ಪರೀಕ್ಷೆ ಶುರುವಾಗುವುದೇ ಸೋಮವಾರದಿಂದ. ವಾರದ ದಿನಗಳಲ್ಲಿಯೂ ''ಧಮಾಲ್ 4'' ಗಳಿಕೆ ಹೀಗೆಯೇ ಮುಂದುವರೆದರೆ ಅಥವಾ ಒಂದಂಕಿಗೆ ಕುಸಿಯದೇ ಇದ್ದರೆ ''ಧಮಾಲ್ 4'' ಬ್ಲಾಕ್ ಬಸ್ಟರ್ ಆಗುವುದರಲ್ಲಿ ಡೌಟಿಲ್ಲ ಎನ್ನುವ ಮಾತು ಸದ್ಯ ಬಾಲಿವುಡ್ ಟ್ರೇಡ್ ವಲಯದಲ್ಲಿ ಕೇಳಿ ಬರುತ್ತಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications