Tere Ishk Mein BO ; ಧನುಷ್ ಅಬ್ಬರ - ಆಮಿರ್, ಅಕ್ಷಯ್ ದಾಖಲೆ ಛಿದ್ರ ; ಮೊದಲ ದಿನ ಗಳಿಸಿದ್ದೆಷ್ಟು ತೇರೆ ಇಷ್ಕ್ ಮೇ ?
ಹೆಚ್ಚೇನು ಇಲ್ಲ. ನಾಲ್ಕು ವರ್ಷದ ಹಿಂದಿನವರೆಗೆ ಒಂದಾದ ಮೇಲೊಂದು ಗೆಲುವನ್ನು ಕಂಡವರು ಧನುಷ್. ಆದರೆ.. 2021ರ ನಂತರ ಧನುಷ್‌ಗೆ ಅದೃಷ್ಟ ಕೈ ನೀಡಿದೆ. ಮಾಡಿದ ಯಾವ ಚಿತ್ರ ಕೂಡ ಮೊದಲಿನಂತೆ ಧಾಂ ಧೂಂ ಎಂದು ಸದ್ದು ಮಾಡುತ್ತಿಲ್ಲ. ಆರಂಭದಲ್ಲಿ ಕೆಲ ಚಿತ್ರಗಳು ನಿರೀಕ್ಷೆ ಮೂಡಿಸಿವೆಯಾದರೂ ಬಾಕ್ಸಾಫೀಸ್‌ನಲ್ಲಿ ಚಿತ್ರಗಳು ಗೆಲ್ಲಲಿಲ್ಲ. ''ವಾತಿ'' ಮತ್ತು ''ರಾಯನ್'' ಹೊರತು ಪಡಿಸಿದರೆ...
''ಅತರಂಗಿ ರೇ'' .. ''ಕ್ಯಾಪ್ಟನ್ ಮಿಲ್ಲರ್''.. ''ಕುಬೇರ''.. ''ಇಡ್ಲಿ ಕಡೇ''.. ಹೀಗೆ ಧನುಷ್ ಕೈಗೆ ಒಂದಾದ ಮೇಲೊಂದರಂತೆ ದಕ್ಕಿದ್ದು ಕೇವಲ ನಿರಾಸೆ ಮಾತ್ರ. ಆದರೆ ಈಗ ಈ ಸೋಲಿನ ಸರಪಳಿ ಕಳಚಿ ಬೀಳುವ ಎಲ್ಲ ಲಕ್ಷಣ ಕಂಡು ಬರುತ್ತಿವೆ.

ಯಾಕೆಂದರೆ ಮೊದಲ ದಿನ ''ತೇರೆ ಇಷ್ಕ್ ಮೇ'' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದಕ್ಕೆ ಪುರಾವೆ ಎನ್ನುವಂತೆ ''ತೇರೆ ಇಷ್ಕ್ ಮೇ'' ಮೊದಲ ದಿನ ₹ 16.50 ಕೋಟಿ ಹಣವನ್ನು ಬಾಕ್ಸಾಫೀಸ್‌ನಲ್ಲಿ ಕೊಳ್ಳೆ ಹೊಡೆದಿದೆ ಎಂದು ''ಸ್ಯಾಕ್ನಿಲ್'' ವರದಿ ಮಾಡಿದೆ.
ಇನ್ನು ಮೊದಲ ದಿನ ₹16.50 ಕೋಟಿ ಕೊಳ್ಳೆ ಹೊಡೆಯುವ ಮೂಲಕ ಧನುಷ್, ಬಾಲಿವುಡ್‌ನ ಸೂಪರ್ ಸ್ಟಾರ್‌ಗಳಾದ ಆಮಿರ್ ಖಾನ್ ಮತ್ತು ಅಕ್ಷಯ್ ಕುಮಾರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಹೌದು, ಈ ವರ್ಷ ತೆರೆಗೆ ಬಂದ ಆಮಿರ್ ಖಾನ್ ಅಭಿನಯದ ''ಸಿತಾರೆ ಜಮೀನ್ ಪರ್'' ಮೊದಲ ದಿನ ₹ 10.7 ಕೋಟಿ ಗಳಿಸಿತ್ತು.

ಇನ್ನು ಅಕ್ಷಯ್ ಕುಮಾರ್ ಅಭಿನಯದ ''ಜಾಲಿ ಎಲ್‌ಎಲ್‌ಬಿ-3'' ₹ 12.5 ಕೋಟಿಯನ್ನು ಗಳಿಸಿತ್ತು. ಈ ಎರಡು ಚಿತ್ರದ ಮೊದಲ ದಿನದ ಗಳಿಕೆಯನ್ನು ''ತೇರೆ ಇಷ್ಕ್ ಮೇ'' ಹಿಂದಿಕ್ಕಿದೆ. ಕೇವಲ ಇವೆರಡು ಚಿತ್ರಗಳು ಮಾತ್ರವಲ್ಲ ಹದಿನೈದು ದಿನದ ಹಿಂದೆ ಬಿಡುಗಡೆಯಾದ ಅಜಯ್ ದೇವಗನ್, ಆರ್ ಮಾಧವನ್ ಮತ್ತು ರಕುಲ್ ಪ್ರೀತ್ ಸಿಂಗ್ ಅಭಿನಯದ ''ದೇ ದೇ ಪ್ಯಾರ್ ದೇ 2'' ಚಿತ್ರದ ಗಳಿಕೆಯನ್ನು ಕೂಡ ಧನುಷ್ ಅಭಿನಯದ ಈ ಚಿತ್ರ ಹಿಂದಿಕ್ಕಿದೆ.
ಹೀಗೆ ಸೂಪರ್ ಸ್ಟಾರ್‌ಗಳನ್ನು ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಹಿಂದಿಕ್ಕಿದ ಧನುಷ್, ಹೊಸ ಹುಡುಗನ ದಾಖಲೆ ಮುರಿಯುವಲ್ಲಿ ಎಡವಿದ್ದು ವಿಪರ್ಯಾಸ. ಹೌದು, ಈ ವರ್ಷ ಬಾಲಿವುಡ್‌ನಲ್ಲಿ ಹೊಸದೊಂದು ಅಲೆ ಎದ್ದಿತ್ತು. ಆ ಅಲೆಯ ಹೆಸರು ''ಸೈಯಾರ''. ಹೊಸ ಹುಡುಗ ಅಹಾನ್ ಪಾಂಡೆ ಈ ಚಿತ್ರದ ನಾಯಕ. ಮೋಹಿತ್ ಸೂರಿಯ ಈ ಪ್ರೇಮ ಕಾವ್ಯ ಮೊದಲ ದಿನ ₹ 21.5 ಕೋಟಿ ಹಣ ದೋಚಿತ್ತು. ಈ ಮೂಲಕ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಪ್ರೇಮಕಥೆಯಾಧಾರಿತ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆನಂದ್ ಎಲ್ ರೈ ಅವರ ''ತೇರೆ ಇಷ್ಕ್ ಮೇ'' ಲವ್ ರೇಸ್‌ನಲ್ಲಿ ಮೊದಲ ದಿನ ಎರಡನೇ ಸ್ಥಾನಕ್ಕೆ ತೃಪ್ತಿಯನ್ನು ಪಟ್ಟಿದೆ.
ಸದ್ಯ ''ತೇರೆ ಇಷ್ಕ್ ಮೇ'' ಚಿತ್ರಕ್ಕೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಾಕ್ಸಾಫೀಸ್‌ನ ಪಂಡಿತರು ನಿರೀಕ್ಷಿಸಿದ ಆರಂಭ ಬಾಕ್ಸಾಫೀಸ್‌ನಲ್ಲಿ ಸಿಕ್ಕಿದೆ. ನಿನ್ನೆಯ ಬೆಳಿಗ್ಗೆಯ ಪ್ರದರ್ಶನಕ್ಕಿಂತ ರಾತ್ರಿಯ ಪ್ರದರ್ಶನದ ಸಮಯದಲ್ಲಿ ಚಿತ್ರಮಂದಿರದ ಆವರಣದಲ್ಲಿ ಜನಸಂದಣಿ ಹೆಚ್ಚು ಕಂಡು ಬಂದಿದೆ. ಇಂದು (ಶನಿವಾರ ) ಮತ್ತು ನಾಳೆ (ಭಾನುವಾರ) ''ತೇರೆ ಇಷ್ಕ್ ಮೇ'' ಚಿತ್ರತಂಡಕ್ಕೆ ತುಂಬಾನೇ ಮಹತ್ವದ ದಿನಗಳು. ಇವೆರಡು ದಿನದಲ್ಲಿ ಚಿತ್ರ ಗಳಿಕೆಯಲ್ಲಿ ಏರಿಕೆ ಕಂಡು ಬರುತ್ತಾ..? ಅಥವಾ ಕುಸಿಯುತ್ತಾ..? ವಾರಾಂತ್ಯದ ಗಳಿಕೆ ಎಷ್ಟಾಗಲಿದೆ..? ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











