Dhurandhar 2 Box Office Day 4 ; 95,000 ಶೋ, ಧುರಂಧರ್ ಅಬ್ಬರ ; ಕೇವಲ ನಾಲ್ಕೇ ದಿನ- ದಂಗಲ್ ದಾಖಲೆ ಧೂಳಿಪಟ
ಬಾಲಿವುಡ್‌ನಲ್ಲಿ ಕಳೆದ ಕೆಲ ವರ್ಷಗಳಿಂದ ಅಕ್ಷರಶಃ ಬರಗಾಲದ ವಾತಾವರಣ ಇತ್ತು. ಮಾಡಿದ ಎಲ್ಲ ಚಿತ್ರಗಳು ಒಂದಾದ ಮೇಲೊಂದರಂತೆ ದೊಪ್ಪನೆ ನೆಲಕ್ಕುರಳುತ್ತಿದ್ದ ಹಿನ್ನೆಲೆ ಆತಂಕ ಹಲವರಲ್ಲಿ ಮನೆ ಮಾಡಿತ್ತು. ಸಾಲದಕ್ಕೆ ದಕ್ಷಿಣ ಚಿತ್ರರಂಗದವರ ಅಬ್ಬರ. ಹಿಂದಿ ಮಾರುಕಟ್ಟೆಯಲ್ಲಿ ಸೌತ್ ಸ್ಟಾರ್‌ಗಳ ಅಬ್ಬರ ಬಾಲಿವುಡ್‌ನ ಬೆಚ್ಚಿ ಬೀಳಿಸಿತ್ತು. ಆದರೆ.. ವರ್ಷಾಂತ್ಯದಲ್ಲಿ ಬಂದ ''ಧುರಂಧರ್'' ಮಲಗಿದ್ದ ಬಾಲಿವುಡ್‌ನ ಬಡಿದೆಬ್ಬಿಸಿತ್ತು. ಬಾಕ್ಸಾಫೀಸ್‌ನಲ್ಲಿ ಹಣದ ಮಳೆ ಆಯ್ತು.ಈಗ ''ಧುರಂಧರ್ 2'' ಸರದಿ.
ಹೌದು, ''ಧುರಂಧರ್ 2''.. ಈ ವರ್ಷ ಬಾಕ್ಸಾಫೀಸ್‌ಗೆ ಬಂದು ಅಪ್ಪಳಿಸಿದ ಧೂಮಕೇತು.ಆದಿತ್ಯ ಧರ್ ನಿರ್ದೇಶನದ ಮತ್ತು ರಣವೀರ್ ಸಿಂಗ್ ಅಭಿನಯದ ಈ ಚಿತ್ರ ಸದ್ಯ ಚರಿತ್ರೆ ಬರೆಯುತ್ತಿದೆ.ದಾಖಲೆಗಳನ್ನೆಲ್ಲಾ ಪುಡಿ ಪುಡಿ ಮಾಡುತ್ತಿದೆ. ಇನ್ನೂ ''ಧುರಂಧರ್ 2'' ಜ್ವರ ಭಾರತದೆಲ್ಲೆಡೆ ಹೇಗೆ ಹಬ್ಬಿದೆ ಅಂದರೆ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ಪ್ರಕಾರ ನಿನ್ನೆ (ಮಾರ್ಚ್ 22) ಒಂದೇ ದಿನ ಚಿತ್ರ ₹114.85 ಕೋಟಿಯನ್ನು ಕೊಳ್ಳೆ ಹೊಡೆದಿದೆ. ಈ ಮೂಲಕ ಕೇವಲ ನಾಲ್ಕೇ ದಿನದಲ್ಲಿ ₹454.12 ಕೋಟಿಯನ್ನು ದೋಚಿದೆ ''ಧುರಂಧರ್ 2''.

ಸ್ಯಾಕ್ನಿಲ್ ಪ್ರಕಾರ ''ಧುರಂಧರ್ 2'' ಚಿತ್ರದ ನಾಲ್ಕು ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಪೇಯ್ಡ್ ಪ್ರೀಮಿಯರ್ (ಬುಧವಾರ) ₹43 ಕೋಟಿ
ಮೊದಲ ದಿನ (ಗುರುವಾರ)₹102 ಕೋಟಿ
ಎರಡನೇ ದಿನ (ಶುಕ್ರವಾರ) ₹80.72 ಕೋಟಿ
ಮೂರನೇ ದಿನ (ಶನಿವಾರ) ₹113 ಕೋಟಿ
ನಾಲ್ಕನೇ ದಿನ (ಭಾನುವಾರ)₹114.85 ಕೋಟಿ
ಒಟ್ಟು ಗಳಿಕೆ ₹454.12
ಹೀಗೆ ನಾಲ್ಕು ದಿನದಲ್ಲಿ₹454.12 ಕೋಟಿಯನ್ನು ಗಳಿಸಿರುವ ''ಧುರಂಧರ್ 2'' ಕೇವಲ ಈ ನಾಲ್ಕೇ ದಿನದಲ್ಲಿ ಆಮಿರ್ ಖಾನ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ''ದಂಗಲ್'' ಚಿತ್ರವನ್ನು ಬಾಕ್ಸಾಫೀಸ್‌ನಲ್ಲಿ ಸೆಡ್ಡು ಹೊಡೆದಿದೆ.

ಹೌದು, 2016ರಲ್ಲಿ ಬಂದಿದ್ದ ''ದಂಗಲ್'' ಭಾರತದಲ್ಲಿ ₹387 ಕೋಟಿಯನ್ನು ಗಳಿಸಿತ್ತು. ಈ ಗಳಿಕೆಯನ್ನು ''ಧುರಂಧರ್ 2'' ಕೇವಲ ನಾಲ್ಕು ದಿನದಲ್ಲಿ ಹಿಂದಿಕ್ಕಿದೆ. ಕೇವಲ ''ದಂಗಲ್'' ಮಾತ್ರವಲ್ಲ ''ಪಿಕೆ'' (₹340.80 ಕೋಟಿ ) ''ಸಂಜು'' (₹342.53 ಕೋಟಿ ) ''ಟೈಗರ್ ಜಿಂದಾ ಹೈ'' (₹339.16 ಕೋಟಿ) ''ಬಾಹುಬಲಿ'' ( ₹421 ಕೋಟಿ) ಗಳಿಕೆಯನ್ನು ಕೂಡ ''ಧುರಂಧರ್ 2'' ಕೇವಲ ನಾಲ್ಕು ದಿನದಲ್ಲಿ ಹಿಂದಿಕ್ಕಿದೆ.
ನಾಲ್ಕು ದಿನದಲ್ಲಿ 95,000 ಶೋ
ಇನ್ನೂ ''ಸ್ಯಾಕ್ನಿಲ್'' ಹಂಚಿಕೊಂಡ ಮಾಹಿತಿಯ ಪ್ರಕಾರ ಇಲ್ಲಿಯವರೆಗೆ ''ಧುರಂಧರ್ 2'' ಚಿತ್ರ 95,201 ಪ್ರದರ್ಶನಗಳನ್ನು ಭಾರತದೆಲ್ಲೆಡೆ ಕಂಡಿದೆ. ಪೇಯ್ಡ್ ಪ್ರಿವ್ಯೂವ್ ನಲ್ಲಿ 11,294 ಪ್ರೀಮಿಯರ್ ಪ್ರದರ್ಶನ ನಡೆದಿದ್ದರೆ, ಮೊದಲ ದಿನ 21,633 ಎರಡನೇ ದಿನ 20,125 ಮೂರನೇ ದಿನ 20,917 ನಾಲ್ಕನೇ ದಿನ 21,202 ಪ್ರದರ್ಶನವನ್ನು ''ಧುರಂಧರ್ 2'' ಕಂಡಿದೆ.
ಸದ್ಯ ''ಧುರಂಧರ್ 2'' ಚಿತ್ರದ ಅಲೆ ಕಡಿಮೆಯಾಗುವ ಲಕ್ಷಣಗಳು ಬಾಕ್ಸಾಫೀಸ್‌ನಲ್ಲಿ ಕಂಡು ಬರುತ್ತಿಲ್ಲ. ರಜೆಯ ಮಜಾ ಮುಗಿದ ಹಿನ್ನೆಲೆ ಇಂದು ( ಮಾರ್ಚ್ 23 ) ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬರುವ ಸಾಧ್ಯತೆ ಇದೆ. ಆದರೂ ಕೂಡ ₹20 ಕೋಟಿ + ಚಿತ್ರ ಗಳಿಸುತ್ತೆ ಎನ್ನುವ ವಿಶ್ವಾಸ ಬಾಲಿವುಡ್ ಪಂಡಿತರಿಗಿದೆ. ಮುಂಬರುವ ದಿನಗಳಲ್ಲಿ ''ಧುರಂಧರ್ 2'' ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











