ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ 10ನೇ ಸ್ಥಾನಕ್ಕೇರಿದ 'ಧುರಂಧರ್- 2'
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎನ್ನುವಂತೆ ಹಲವು ಬಾಕ್ಸಾಫೀಸ್ ದಾಖಲೆಗಳನ್ನು ಒಂದೇ ವಾರದಲ್ಲಿ 'ಧುರಂಧರ್- 2' ಚಿತ್ರ ಮುರಿದಿದೆ. 7 ದಿನಕ್ಕೆ 1000 ಕೋಟಿ ರೂ. ಕ್ಲಬ್ ಸೇರಿ ಸಿನಿಮಾ ಸಂಚಲನ ಸೃಷ್ಟಿಸಿದೆ. ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 10ನೇ ಸ್ಥಾನಕ್ಕೇರಿದೆ.
'ಕಾಂತಾರ-1' ಹಾಗೂ 'ಅನಿಮಲ್' ಚಿತ್ರಗಳ ಲೈಫ್‌ಟೈಮ್ ಕಲೆಕ್ಷನ್ ದಾಖಲೆಯನ್ನು ರಣ್‌ವೀರ್ ಸಿಂಗ್ ಸಿನಿಮಾ ಒಂದೇ ವಾರಕ್ಕೆ ಹಿಂದಿಕ್ಕಿದೆ. ಕಳೆದ ವರ್ಷ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ ಡಿಸೆಂಬರ್‌ವರೆಗೆ 'ಕಾಂತಾರ- 1' ಮೊದಲ ಸ್ಥಾನದಲ್ಲಿತ್ತು. ಆದರೆ ಒಂದೇ ತಿಂಗಳಲ್ಲಿ 'ಧುರಂಧರ್' ಚಿತ್ರ ಮೊದಲ ಸ್ಥಾನಕ್ಕೆ ಏರಿ ಅಚ್ಚರಿ ಮೂಡಿಸಿತ್ತು. ಇದೀಗ ಸೀಕ್ವೆಲ್ ಒಂದೇ ವಾರದಲ್ಲಿ ರಿಷಬ್ ಶೆಟ್ಟಿ ಸಿನಿಮಾ ಮೀರಿಸಿ ಮುನ್ನುಗ್ಗುತ್ತಿದೆ.

'ಧುರಂಧರ್'-2 ಸಿನಿಮಾ ಇಷ್ಟೆಲ್ಲಾ ಸದ್ದು ಮಾಡುತ್ತಿದ್ದರೂ 'ಪುಷ್ಪ'-2 ಗಳಿಕೆ ಮುಂದೆ ಕೊಂಚ ಡಲ್ ಆಗಿದೆ. ಅಲ್ಲು ಅರ್ಜುನ್ ಚಿತ್ರಕ್ಕೆ ಟಿಕೆಟ್ ದರ ಹೆಚ್ಚಿಸಲಾಗಿತ್ತು. ಆ ಮಟ್ಟಿಗೆ ಈ ಚಿತ್ರಕ್ಕೆ ಟಿಕೆಟ್ ದರ ಹೆಚ್ಚಿಸಿಲ್ಲ. ಆದರೂ ಆದಿತ್ಯಧರ್ ನಿರ್ದೇಶನ ಸಿನಿಮಾ ಕಠಿಣ ಪೈಪೋಟಿ ಕೊಡುತ್ತಿದೆ. ಸದ್ಯ ರಣ್‌ಬೀರ್ ಕಪೂರ್ ನಟನೆಯ 'ಅನಿಮಲ್' ಸಿನಿಮಾ ಬಾಕ್ಸಾಫೀಸ್(917 ಕೋಟಿ ರೂ.) ಗಳಿಕೆ ಹಿಂದಿಕ್ಕಿ 'ಧುರಂಧರ್'-2 ಗೆಲುವಿನ ನಾಗಾಲೋಟ ಮುಂದುವರೆಸಿದೆ.
'ಕಲ್ಕಿ 2898AD' ಸಿನಿಮಾ 1042 ಕೋಟಿ ರೂ. ಗಳಿಕೆ ಕಂಡು ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. 7 ದಿನಕ್ಕೆ 1006 ಕೋಟಿ ರೂ. ದೋಚಿರುವ 'ಧುರಂಧರ್'-2 ಶೀಘ್ರದಲ್ಲೇ ಪ್ರಭಾಸ್ ಸಿನಿಮಾವನ್ನು ಹಿಂದಿಕ್ಕಲಿದೆ. ಆ ನಂತರ ಶಾರುಖ್ ಖಾನ್ ನಟನೆಯ 'ಪಠಾಣ್'(1050 ಕೋಟಿ ರೂ.) ಹಾಗೂ 'ಜವಾನ್'(1148 ಕೋಟಿ ರೂ.) ಸಿನಿಮಾಗಳ ಕಲೆಕ್ಷನ್ ದಾಟಿ ಬಳಿಕ 'ಕೆಜಿಎಫ್- 2'(1250 ಕೋಟಿ ರೂ.) ದಾಖಲೆ ಮುರಿಯುವ ಸುಳಿವು ಸಿಗುತ್ತಿದೆ.

ಪಟ್ಟಿಯಲ್ಲಿ 'ಧುರಂಧರ್' 4ನೇ ಸ್ಥಾನದಲ್ಲಿದೆ. 1968 ಕೋಟಿ ರೂ. ಕಲೆಕ್ಷನ್ ಮಾಡಿರುವ 'ದಂಗಲ್' ಸಿನಿಮಾ ಮೊದಲ ಸ್ಥಾನದಲ್ಲಿದೆ. ಓವರ್‌ಸೀಸ್ ಮಾರ್ಕೆಟ್‌ನಿಂದ ಆಮೀರ್ ಖಾನ್ ಚಿತ್ರಕ್ಕೆ ಹೆಚ್ಚಿನ ಪಾಲು ಸಿಕ್ಕಿತ್ತು. 'ಧುರಂಧರ್'-2 ಸಿನಿಮಾ 'ದಂಗಲ್' ದಾಖಲೆ ಮುರಿಯಬಹುದು ಎಂದು ಕೆಲವರು ಲೆಕ್ಕಾಚಾರ ಹಾಕುತ್ತಿದ್ದಾರೆ. ವಾರದ ಬಳಿಕ ಕೂಡ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಇದು ಕಷ್ಟವಾಗಲ್ಲ ಎನ್ನುವುದು ಕೆಲವರ ವಾದ. ಆದರೆ 1968 ಕೋಟಿ ರೂ. ಕಲೆಕ್ಷನ್ ಮೀರಿ 'ಧುರಂಧರ್'-2 ಹೊಸ ಇತಿಹಾಸ ನಿರ್ಮಿಸುತ್ತಾ ಕಾದು ನೋಡಬೇಕಿದೆ.
ಅತಿಹೆಚ್ಚು ಗಳಿಕೆ ಕಂಡ ಟಾಪ್ 10 ಸಿನಿಮಾಗಳ ಪಟ್ಟಿ
ಸಿನಿಮಾ ಕಲೆಕ್ಷನ್(ಕೋಟಿ ರೂ.ಗಳಲ್ಲಿ)
1. ದಂಗಲ್ - 1968 ಕೋಟಿ ರೂ.
2. ಬಾಹುಬಲಿ-2 - 1810 ಕೋಟಿ ರೂ.
3. ಪುಷ್ಪ-2 - 1642 ಕೋಟಿ ರೂ.
4. ಧುರಂಧರ್ - 1350 ಕೋಟಿ ರೂ.
5. RRR - 1300 ಕೋಟಿ ರೂ.
6. KGF- 2 - 1200 ಕೋಟಿ ರೂ.
7. ಜವಾನ್ - 1148 ಕೋಟಿ ರೂ.
8. ಪಠಾಣ್ - 1050 ಕೋಟಿ ರೂ.
9. ಕಲ್ಕಿ 2898AD - 1042 ಕೋಟಿ ರೂ.
10. ಧುರಂಧರ್-2*- 1006 ಕೋಟಿ ರೂ.
ಒಂದ್ಕಾಲದಲ್ಲಿ 1000 ಕೋಟಿ ರೂ. ಕಲೆಕ್ಷನ್ ಎನ್ನವುದು ಕನಸಿನ ಮಾತಾಗಿತ್ತು. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಅದು ಸುಲಭ ಎನ್ನವಂತಾಗಿದೆ. ಒಂದೇ ವಾರದಲ್ಲಿ 'ಧುರಂಧರ್-2' ಸಿನಿಮಾ 1000 ಕೋಟಿ ಕ್ಲಬ್ ಸೇರಿರುವುದು ತಮಾಷೆ ಮಾತಲ್ಲ. ಉತ್ತಮ ಸಿನಿಮಾ ಮಾಡಿದ್ರೆ ಜನ ನೋಡುತ್ತಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ವಿಕಿಪಿಡಿಯದಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











