'KGF- 2' ಹಾಗೂ 'ಕಾಂತಾರ-1' ಚಿತ್ರಗಳ ಈ ದಾಖಲೆ 'ಧುರಂಧರ್- 2' ಕೂಡ ಮುರಿಯಲು ಸಾಧ್ಯವಾಗಲಿಲ್ಲ
ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್'-2 ಸಿನಿಮಾ ಬಾಕ್ಸಾಫೀಸ್ ಆರ್ಭಟ ಮುಂದುವರೆದಿದೆ. ಈಗಾಗಲೇ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿದೆ. ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಹಲವು ದಾಖಲೆಗಳನ್ನು ಮುರಿದು ಸಂಚಲನ ಸೃಷ್ಟಿಸಿದೆ. ಆದರೆ 'KGF- 2' ಹಾಗೂ 'ಕಾಂತಾರ-1' ಚಿತ್ರಗಳ ಅದೊಂದು ದಾಖಲೆ ಮಾತ್ರ ಭದ್ರವಾಗಿದೆ.
ದೇಶ ವಿದೇಶಗಳಲ್ಲಿ 'ಧುರಂಧರ್'-2 ಸಿನಿಮಾ ಸದ್ದು ಮಾಡ್ತಿದೆ. ಆದರೆ ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಟ್ಟು ಬೇರೆ ರಾಜ್ಯಗಳಲ್ಲಿ ಆದಿತ್ಯಧರ್ ಸಿನಿಮಾ ಡಲ್ ಆಗಿದೆ. ಉತ್ತರ ಭಾರತ ಹಾಗೂ ಓವರ್‌ಸೀಸ್ ಮಾರ್ಕೆಟ್‌ನಲ್ಲಿ ಸಿನಿಮಾ ಕೊಳ್ಳೆ ಹೊಡೆದಿದೆ. ಹೌಸ್‌ಫುಲ್ ಪ್ರದರ್ಶನ ಕಂಡು ಇತಿಹಾಸ ನಿರ್ಮಿಸಿದೆ. ಐಪಿಎಲ್ ಆರ್ಭಟದ ನಡುವೆಯೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇತ್ತೀಚೆಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ದಂಪತಿ ಸಿನಿಮಾ ನೋಡಿ ಕೊಂಡಾಡಿದ್ದಾರೆ.

'ಧುರಂಧರ್' ಸಿನಿಮಾ ಹಿಂದಿಯಲ್ಲಿ ಮಾತ್ರ ಬಿಡುಗಡೆ ಆಗಿತ್ತು. ಓಟಿಟಿ ಸ್ಟ್ರೀಮಿಂಗ್ ವೇಳೆಗೆ ಬೇರೆ ಭಾಷೆಗಳಿಗೆ ಡಬ್ ಮಾಡಲಾಗಿತ್ತು. ಆದರೆ ಸೀಕ್ವೆಲ್ ವೇಳೆಗೆ ದಕ್ಷಿಣದ ಭಾಷೆಗಳಿಗೂ ಡಬ್ ಮಾಡಿ ಮಾಡಿ ಸಿನಿಮಾ ತೆರೆಗೆ ತರಲಾಗಿತ್ತು. ಕನ್ನಡಕ್ಕೂ ಡಬ್ ಆಗಿ 'ಧುರಂಧರ್'-2 ಸಿನಿಮಾ ಹಿಟ್ ಆಗಿದೆ. 'ಜೈಲರ್' ಹಾಗೂ 'ಪುಷ್ಪ'-2 ಸೇರಿದಂತೆ ಕೆಲ ಪರಭಾಷೆ ಸಿನಿಮಾಗಳು ಕನ್ನಡದಲ್ಲಿ ಕೂಡ ಸದ್ದು ಮಾಡಿವೆ. ಈಗ ಪ್ಯಾನ್ ಇಂಡಿಯಾ ಸಿನಿಮಾಗಳನ್ನು 5 ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗ್ತಿದೆ. ಆದರೆ 5 ಭಾಷೆಗಳಲ್ಲಿ 50 ಕೋಟಿ ರೂ. ಕಲೆಕ್ಷನ್ ಮಾಡಿದ ದಾಖಲೆ 'KGF- 2' ಹಾಗೂ 'ಕಾಂತಾರ-1' ಚಿತ್ರಗಳ ಹೆಸರಿನಲ್ಲಿ ಮಾತ್ರ ಇದೆ.
'ಬಾಹುಬಲಿ- 2' ಸಿನಿಮಾ ಕರ್ನಾಟಕದಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಆದರೆ ರಾಜ್ಯದಲ್ಲಿ ಆಗ ಡಬ್ಬಿಂಗ್ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ಇರಲಿಲ್ಲ. ಹಾಗಾಗಿ ಕನ್ನಡಕ್ಕೆ ಸಿನಿಮಾ ಡಬ್ ಆಗಿರಲಿಲ್ಲ. ದಕ್ಷಿಣದ 4 ರಾಜ್ಯಗಳಲ್ಲಿ(ಕರ್ನಾಟಕ, ಆಂಧ್ರ, ತೆಲಂಗಾಣ, ಕೇರಳ) ತಲಾ 50 ಕೋಟಿ ರೂ. ಕಲೆಕ್ಷನ್ ಮಾಡಿರುವ ದಾಖಲೆ 'ಕಾಂತಾರ-1', 'ಬಾಹುಬಲಿ-2', 'ಜೈಲರ್' ಹಾಗೂ 'ಕೆಜಿಎಫ್-2' ಸಿನಿಮಾಗಳ ಹೆಸರಿನಲ್ಲಿದೆ. ದಕ್ಷಿಣದ 4 ರಾಜ್ಯಗಳು ಸೇರಿದಂತೆ ಉತ್ತರ ಭಾರತದಲ್ಲಿ ಕೂಡ 50 ಕೋಟಿ ರೂ. ಕಲೆಕ್ಷನ್ ಮಾಡಿರುವ ದಾಖಲೆ 'ಕಾಂತಾರ-1', 'ಬಾಹುಬಲಿ-2' ಹಾಗೂ 'ಕೆಜಿಎಫ್-2' ಚಿತ್ರಗಳ ಹೆಸರಿನಲ್ಲಿದೆ.

ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ 'ಪುಷ್ಪ'-2 ಸಿನಿಮಾ ಕೇರಳದಲ್ಲಿ ನಿರಾಸೆ ಅನುಭವಿಸಿತ್ತು. 'ಧುರಂಧರ್'-2 ಚಿತ್ರಕ್ಕೂ ತಮಿಳುನಾಡು, ಕೇರಳ ಹಾಗೂ ತೆಲುಗು ರಾಜ್ಯಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ಸಿಕ್ಕಿಲ್ಲ. 21 ದಿನಕ್ಕೆ ಭಾರತದಲ್ಲಿ 'ಧುರಂಧರ್- 2' ಸಿನಿಮಾ 1247 ಕೋಟಿ ರೂ. ಗ್ರಾಸ್ ಕಲೆಕ್ಷನ್ ಜೊತೆಗೆ 1041 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ sacnilk ವರದಿ ಮಾಡಿದೆ.
ಸ್ಪೈ ಥ್ರಿಲ್ಲರ್ 'ಧುರಂಧರ್'-2 ಸಿನಿಮಾ ವಿಶ್ವದಾದ್ಯಂತ 1500 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ. 4 ತಿಂಗಳ ಅಂತರದಲ್ಲಿ 2 ಭಾಗಗಳಾಗಿ ತೆರೆಗೆ ಬಂದ ಸಿನಿಮಾ 2000 ಕೋಟಿ ರೂ. ಗಳಿಕೆ ಕಂಡು ಹೊಸ ಇತಿಹಾಸ ನಿರ್ಮಿಸಿದೆ. ಇದೊಂದು ಪ್ರೊಪಾಗಂಡಾ ಸಿನಿಮಾ ಎಂದು ಕೆಲವರು ಟೀಕಿಸಿದರೂ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಕಡಿಮೆ ಬಜೆಟ್‌ನಲ್ಲಿ ಬಹಳ ಬೇಗ ಎರಡೂ ಸಿನಿಮಾ ಕಟ್ಟಿಕೊಟ್ಟು ಆದಿತ್ಯಧರ್ ಗೆದ್ದಿದ್ದಾರೆ.


Click it and Unblock the Notifications











