Dhurandhar-2 Day 11 Boxoffice; 'ಧುರಂಧರ್'-2 ಆರ್ಭಟ; 'ಬಾಹುಬಲಿ-2', 'ಪುಷ್ಪ-2' ದಾಖಲೆ ಉಡೀಸ್
11ನೇ ದಿನವೂ ಬಾಕ್ಸಾಫೀಸ್‌ನಲ್ಲಿ 'ಧುರಂಧರ್'-2 ಆರ್ಭಟ ನಿಲ್ಲಲಿಲ್ಲ. ಶನಿವಾರಕ್ಕಿಂತ ಭಾನುವಾರ ಸಿನಿಮಾ ಕಲೆಕ್ಷನ್ ಜೋರಾಗಿತ್ತು. ಭಾರತದಲ್ಲೇ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. 'ಪುಷ್ಪ'-2 ಹಾಗೂ 'ಬಾಹುಬಲಿ'-2 ಸಿನಿಮಾಗಳ ಕೆಲ ದಾಖಲೆಗಳನ್ನು ಆದಿತ್ಯಧರ್ ಸಿನಿಮಾ ಮುರಿದು ಮುನ್ನುಗ್ಗುತ್ತಿದೆ.
ಕೇವಲ 11 ದಿನಕ್ಕೆ ವಿಶ್ವದಾದ್ಯಂತ 'ಧುರಂಧರ್'-2 ಸಿನಿಮಾ 1300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. 'ಪುಷ್ಪ'-2 ಬಿಟ್ಟರೆ ಇಷ್ಟು ವೇಗವಾಗಿ ಈ ಸಾಧನೆ ಬೇರೆ ಯಾವುದೇ ಭಾರತೀಯ ಸಿನಿಮಾಗಳು ಮಾಡಿರಲಿಲ್ಲ. ಶಾರುಖ್ ಖಾನ್ ನಟನೆಯ 'ಜವಾನ್' ಹಾಗೂ ಯಶ್ ಅಭಿನಯದ 'ಕೆಜಿಎಫ್- 2' ಸಿನಿಮಾಗಳ ಲೈಫ್‌ಟೈಮ್ ಬಾಕ್ಸಾಫೀಸ್ ಗಳಿಕೆಯನ್ನು ಹಿಂದಿಕ್ಕಿ ರಣ್‌ವೀರ್ ಸಿಂಗ್ ಸಿನಿಮಾ ದರ್ಬಾರ್ ನಡೆಸ್ತಿದೆ.

ಮಾರ್ಚ್ 18ರಂದು ಶುರುವಾದ ಪ್ರೀಮಿಯರ್ ಶೋಗಳಿಂದಲೇ 'ಧುರಂಧರ್- 2' ಅಬ್ಬರ ಜೋರಾಗಿತ್ತು. ಮೊದಲ ದಿನ ದಾಖಲೆ ಮಟ್ಟದ ಓಪನಿಂಗ್ ಪಡೆದಿದ್ದ ಸಿನಿಮಾ ಮೊದಲ ವೀಕೆಂಡ್ ಬಾಕ್ಸಾಫೀಸ್ ದೋಚಿತ್ತು. 2ನೇ ವೀಕೆಂಡ್ ಕೂಡ ಸ್ಪೈ ಥ್ರಿಲ್ಲರ್ ಸಿನಿಮಾ ಆರ್ಭಟ ಜೋರಾಗಿತ್ತು.
11ನೇ ದಿನದ ಕಲೆಕ್ಷನ್
ದೇಶಾದ್ಯಂತ ಭಾನುವಾರ(ಮಾರ್ಚ್ 29) 'ಧುರಂಧರ್-2' ಸಿನಿಮಾ 19, 270ಶೋಗಳಲ್ಲಿ ಪ್ರದರ್ಶನ ಕಂಡಿದೆ. ಭಾರತದಲ್ಲಿ ಮಾತ್ರ 68.10 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ sacnilk ವರದಿ ಮಾಡಿದೆ. ಶನಿವಾರಕ್ಕಿಂತ 6 ಕೋಟಿ ರೂ. ಹೆಚ್ಚು ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿದೆ. ಆ ಮೂಲಕ ಭಾರತದಲ್ಲಿ 11 ದಿನಕ್ಕೆ 1011 ಕೋಟಿ ರೂ. ಗ್ರಾಸ್ ಹಾಗೂ 846 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದಂತಾಗಿದೆ.
'ಪುಷ್ಪ-2' ದಾಖಲೆ ಉಡೀಸ್
ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದು ಗೊತ್ತೇಯಿದೆ. ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ ದಾಖಲೆ ಬರೆದಿತ್ತು. ಆ ದಾಖಲೆಯನ್ನು ಈಗ 'ಧುರಂಧರ್- 2' ಅಳಿಸಿ ಹಾಕಿದೆ. 'ಪುಷ್ಪ'-2 ಹಿಂದಿ ವರ್ಷಬ್ 812 ಕೋಟಿ ರೂ. ಗಳಿಕೆ ಕಂಡಿತ್ತು. ಅದನ್ನು ಆದಿತ್ಯಧರ್ ಸಿನಿಮಾ ಮೀರಿ ಮುನ್ನುಗ್ಗುತ್ತಿದೆ.
'ಬಾಹುಬಲಿ-2' ದಾಖಲೆ ಕೂಡ
ದಕ್ಷಿಣ ಅಮೆರಿಕಾದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾ ಎನ್ನುವ ದಾಖಲೆ 'ಬಾಹುಬಲಿ-2' ಹೆಸರಿನಲ್ಲಿತ್ತು. ಕೇವಲ 10 ದಿನಗಳಲ್ಲಿ 'ಧುರಂಧರ್- 2' ಅದನ್ನು ಹಿಂದಿಕ್ಕಿದೆ. ಈ ಬಗ್ಗೆ ಸ್ವತಃ 'ಬಾಹುಬಲಿ' ಸರಣಿ ಸಿನಿಮಾ ನಿರ್ಮಾಪಕ ಶೋಭು ಯರ್ಲಗಡ್ಡ ಸಂತಸ ವ್ಯಕ್ತಪಡಿಸಿದ್ದಾರೆ. "ನಿನ್ನೆ ನಾನು 'ಧುರಂಧರ್-2' ಸಿನಿಮಾ ನೋಡಿದೆ. ನನಗೆ ಅದು ತುಂಬಾ ಇಷ್ಟವಾಯಿತು. ಚಿತ್ರವನ್ನು ಸಂಪೂರ್ಣವಾಗಿ ಆನಂದಿಸಿದೆ ಎಂದು ಹೇಳಬೇಕಾಗಿಲ್ಲ. ಇದು ಎಲ್ಲಾ ದಾಖಲೆಗಳನ್ನು ಮುರಿದು ಭಾರತ ಮತ್ತು ವಿಶ್ವಾದ್ಯಂತ ಹೊಸ ಬಾಕ್ಸ್ ಆಫೀಸ್ ರೆಕಾರ್ಡ್ಸ್ ಸ್ಥಾಪಿಸುವುದನ್ನು ನೋಡಲು ಸಂತೋಷವಾಗಿದೆ. ಇಡೀ ತಂಡಕ್ಕೆ ಅಭಿನಂದನೆಗಳು" ಎಂದು ಟ್ವೀಟ್ ಮಾಡಿದ್ದರು.
ಕೆಜಿಎಫ್-2 ದಾಖಲೆ ಹಿಂದಕ್ಕೆ
ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 'ಧುರಂಧರ್-2' ಸಿನಿಮಾ ಹೆಸರು ಮೇಲೇರುತ್ತಲೇ ಇದೆ. 11 ದಿನಕ್ಕೆ 'ಕೆಜಿಎಫ್-2'(1250 ಕೋಟಿ ರೂ.) ಹಿಂದಿಕ್ಕಿ 'ಧುರಂಧರ್-2' ದರ್ಬಾರ್ ನಡೆಸುತ್ತಿದೆ. ಅಷ್ಟೇ ಅಲ್ಲ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್(1300 ಕೋಟಿ ರೂ.) ಸಿನಿಮಾ ದಾಖಲೆ ಕೂಡ ಪುಡಿಪುಡಿಯಾಗಿದೆ. ಸದ್ಯ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದೆ. ಇನ್ನೆರಡು ದಿನಗಳಲ್ಲಿ 'ಧುರಂಧರ್' ಸಿನಿಮಾ ಲೈಫ್‌ಟೈಮ್ ಕಲೆಕ್ಷನ್ ದಾಖಲೆಯನ್ನು ಸೀಕ್ವೆಲ್ ಮುರಿಯಲಿದೆ. ಪಟ್ಟಿಯಲ್ಲಿ 'ಪುಷ್ಪ- 2', 'ಬಾಹುಬಲಿ- 2' ಹಾಗೂ 'ದಂಗಲ್' ಸಿನಿಮಾಗಳು ಮೊದಲ 3 ಸ್ಥಾನ ಅಲಂಕರಿಸಿವೆ.


Click it and Unblock the Notifications