Dhurandhar Box Office Day 19; ಬೆಳ್ಳಿತೆರೆಯಲ್ಲಿ ಧುರಂಧರ್ ಧಗಧಗ, ಜವಾನ್ ದಾಖಲೆ ಧೂಳಿಪಟ-ರಣ್ವೀರ್‌ಗೆ 4ನೇ ಸ್ಥಾನ
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಜಗತ್ತಿನ ಹಲವು ಭಾಷೆಯ ಚಿತ್ರಗಳನ್ನು ಎಲ್ಲಿ ಬೇಕೋ ಅಲ್ಲಿ .. ಯಾವಾಗ ಅಂದ್ರೆ ಅವಾಗ ನೋಡುವ ಸೌಲಭ್ಯ ಇದೆ. ಚಿತ್ರಮಂದಿರಕ್ಕೆ ಈ ಓಟಿಟಿ ತೀವೃ ಸ್ಪರ್ಧೆಯನ್ನೊಡ್ಡುತ್ತಿದೆ. ಇನ್ನು ಮೊದಲಾದರೆ ಕೇವಲ ಒಂದು ಪೋಸ್ಟರ್ ಸಾಕಿತ್ತು. ಚಿತ್ರಮಂದಿರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು. ಆದರೆ ಈಗ ..
ಎಷ್ಟೇ ಪ್ರಚಾರ ಮಾಡಿದರು ಕೂಡ ಚಿತ್ರಮಂದಿರಕ್ಕೆ ಚಿತ್ರವೊಂದು ಬಂದಿದ್ದು ಹೋಗಿದ್ದು ಕೂಡ ಈಗೀಗ ಹಲವರಿಗೆ ಗೊತ್ತೇ ಆಗುವುದಿಲ್ಲ. ಹೊಸಬರು ಎಷ್ಟೇ ಭಿನ್ನವಾದ ಆಲೋಚನೆ ಮಾಡಿದರು ಕೂಡ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದು ತರಲು ಕೂಡ ಸಾಧ್ಯವಾಗುತ್ತಿಲ್ಲ.

ಇದು ಕೇವಲ ಹೊಸಬರ ಕಥೆ ಮಾತ್ರ ಅಲ್ಲ. ವರ್ಷಾನುವರ್ಷಗಳಿಂದ ನಾನೇ ಸೂಪರ್ ಸ್ಟಾರ್ ಎಂದುಕೊಂಡು ಓಡಾಡುತ್ತಿರುವ ಹಳೆಯ ಹುಲಿಗಳ ಘರ್ಜನೆಗೆ ಕೂಡ ಪ್ರೇಕ್ಷಕರು ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಬೇರೆ ಬೇರೆ ಭಾಷೆಯಲ್ಲಿ ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರಗಳು ಕೂಡ ಇತ್ತೀಚೆನ ದಿನಗಳಲ್ಲಿ ಮಕಾಡೆ ಮಲಗಿವೆ. ಅದರಲ್ಲಿಯೂ ಬಾಲಿವುಡ್‌ನಲ್ಲಂತೂ ಸೂಪರ್ ಸ್ಟಾರ್‌ಗಳ ಚಿತ್ರಗಳನ್ನೇ ಪ್ರೇಕ್ಷಕರು ರಿಜೆಕ್ಟ್ ಮಾಡುತ್ತಿದ್ದಾರೆ. ಇದಕ್ಕೆ ''ಸಿಕಂದರ್'' .. ''ಕೇಸರಿ 2''..''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ''.. ''ಪರಮ ಸುಂದರಿ''..''ವಾರ್ 2''.. ''ಬಾಘಿ-4''..''ಸನ್ ಆಫ್ ಸರ್ದಾರ್ 2'' ಸೇರಿ ಈ ವರ್ಷ ತೆರೆಗೆ ಬಂದ ಹಲವು ಚಿತ್ರಗ ಸೋಲು ಉದಾಹರಣೆಯಂತೆ ಕಣ್ಮುಂದೆ ಇವೆ.
ಹೀಗಾಗಿ ಬಾಲಿವುಡ್‌ನವರ ಕಥೆ ಮುಗೀತು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ.. ಪ್ರೇಕ್ಷಕರ ನಾಡಿ ಮಿಡಿತ ಬಲ್ಲ ನಿರ್ದೇಶಕ ಉತ್ತಮವಾದ ಚಿತ್ರವನ್ನು ಮಾಡಿದರೆ ಗೆಲುವು ಸಿಕ್ಕಿಯೇ ಸಿಗುತ್ತದೇ. ಈ ಮಾತನ್ನು ಮತ್ತೊಮ್ಮೆ ರುಜುವಾತು ಮಾಡಿದ ನಿರ್ದೇಶಕ ಆದಿತ್ಯ ಧರ್ ಸದ್ಯ ತಮ್ಮ ''ಧುರಂಧರ್'' ಚಿತ್ರದ ಮೂಲಕ ಮಲಗಿದ್ದ ಬಾಲಿವುಡ್‌ನ ಬಡಿದೆಬ್ಬಿಸಿದ್ದಾರೆ.
ಹೌದು, ಧುರಂಧರ್ ತೆರೆಗೆ ಬಂದು ನಿನ್ನೆಗೆ ( ಡಿಸೆಂಬರ್ 23 ) 19 ದಿನಗಳಾಗಿವೆ. ಆದರೆ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ನಿಜಾ. ಮೊದಲೆರಡು ವಾರಕ್ಕೆ ಹೋಲಿಸಿಕೊಂಡರೆ ನಿನ್ನೆಯ ಗಳಿಕೆ ಕಡಿಮೆ ಇದೆ. ಆದರೂ ಕೂಡ ಈ ಚಿತ್ರ ಎರಡಂಕಿಯನ್ನು ಪಾರು ಮಾಡಿದೆ. ಸೋಮವಾರಕ್ಕಿಂತ (ಡಿಸೆಂಬರ್ 22) ಗಳಿಕೆಯಲ್ಲಿ 4.55% ಏರಿಕೆ ಕಂಡು ಬಂದಿದೆ. ಬಾಲಿವುಡ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ಪ್ರಕಾರ ಸೋಮವಾರ ₹ 16.5 ಕೋಟಿಯನ್ನು ಗಳಿಸಿದ್ದ ಧುರಂಧರ್ ಮಂಗಳವಾರ ಅಂದಾಜು ₹ 17.25 ಕೋಟಿಯನ್ನು ಕೊಳ್ಳೆ ಹೊಡೆದಿದೆ. ಈ ಮೂಲಕ ಈ 19 ದಿನದಲ್ಲಿ ₹ 590.55 ಕೋಟಿಯನ್ನು ''ಧುರಂಧರ್'' ಗಳಿಸಿದೆ.

ಇನ್ನು ಬಾಕ್ಸಾಫೀಸ್‌ನ ಸಮರದಲ್ಲಿ ಸದ್ಯ ₹ 590.55 ಕೋಟಿಯನ್ನು ಗಳಿಸಿ ಯಶಸ್ವೀ ಪ್ರದರ್ಶನ ಕಾಣ್ತಿರುವ ''ಧುರಂಧರ್'' ಶಾರುಖ್ ಖಾನ್ ಅಭಿನಯದ ''ಜವಾನ್'' ಚಿತ್ರದ ದಾಖಲೆಯನ್ನು ಕೂಡ ಮುರಿದಿದೆ. ಹೌದು, ಅಸಲಿಗೆ 2023ರಲ್ಲಿ ತೆರೆಗೆ ಬಂದಿದ್ದ ''ಜವಾನ್'' 8 ವಾರ ಪ್ರದರ್ಶನ ಕಂಡಿತ್ತು. ''ಸ್ಯಾಕ್ನಿಲ್'' ಪ್ರಕಾರ ಈ 8 ವಾರದಲ್ಲಿ ₹ 640.25 ಕೋಟಿಯನ್ನು ಗಳಿಸಿತ್ತು.
ಆದರೆ.. ಜವಾನ್ ಕೇವಲ ಹಿಂದಿಯಲ್ಲಿ ಮಾತ್ರ ತೆರೆಗೆ ಬಂದಿರಲಿಲ್ಲ. ತೆಲುಗು ಮತ್ತು ತಮಿಳಿನಲ್ಲಿ ಕೂಡ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ₹ 640.25 ಕೋಟಿಯಲ್ಲಿ ಆಂಧ್ರ ಮತ್ತು ತಮಿಳುನಾಡಿನ ಪಾಲು ಕ್ರಮವಾಗಿ ₹27.86 ಕೋಟಿ ಮತ್ತು ₹30.08 ಕೋಟಿ ಇತ್ತು. ಹಿಂದಿಯಲ್ಲಿ ಈ ಚಿತ್ರ ₹582.31 ಕೋಟಿಯನ್ನು ದೋಚಿತ್ತು. ಈಗ ''ಧುರಂಧರ್'' ₹ 590.55 ಕೋಟಿಯನ್ನು ಗಳಿಸಿದೆ. ಈ ಮೂಲಕ ಕೇವಲ ಹಿಂದಿಯಲ್ಲಿ ಅತೀ ಹೆಚ್ಚು ಹಣ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ''ಧುರಂಧರ್'' ನಾಲ್ಕನೇ ಸ್ಥಾನಕ್ಕೇರಿದೆ.
ಕೇವಲ ಹಿಂದಿಯಲ್ಲಿ ಅತೀ ಹೆಚ್ಚು ಹಣ ಗಳಿಸಿದ ಟಾಪ್ 10 ಚಿತ್ರಗಳ ಪಟ್ಟಿ ಈ ಕೆಳಗಿನಂತೆ ಇದೆ
1. ಪುಷ್ಪ 2 - ₹836.09 ಕೋಟಿ
2. ಸ್ತ್ರೀ 2 - ₹627.5 ಕೋಟಿ
3. ಛಾವಾ - ₹600.38 ಕೋಟಿ
4. ಧುರಂಧರ್* - ₹590.55 ಕೋಟಿ ( 19 ದಿನ )
5. ಜವಾನ್ - ₹582.31 ಕೋಟಿ
6. ಗದರ್ 2 - ₹525.5 ಕೋಟಿ
7. ಪಠಾಣ್ - ₹524.53 ಕೋಟಿ
8. ಬಾಹುಬಲಿ 2- ₹511 ಕೋಟಿ
9. ಅನಿಮಲ್ - ₹505 ಕೋಟಿ
10. ಕೆಜಿಎಫ್ -2 - ₹434.62ಕೋಟಿ
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











