Dhurandhar Box Office Day 17 ; ಮುಂದುವರೆದ ಧುರಂಧರ್ ರಣಬೇಟೆ, ಅನಿಮಲ್-ಪಠಾಣ್ ದಾಖಲೆ ಪುಡಿಪುಡಿ
ಚಿತ್ರರಂಗ ಮಾತ್ರ ಅಲ್ಲ ಯಾವುದೇ ಕ್ಷೇತ್ರವಾದರು ಕೂಡ ಅಲ್ಲಿ ಗೆಲುವು ಮತ್ತು ಸೋಲು ಮಾಮೂಲು. ಆದರೆ .. ಗೆದ್ದಾಗ ಹಿರಿಹಿರಿ ಹಿಗ್ಗುವ ಅನೇಕರು ಸೋತಾಗ ಕುಗ್ಗಿ ಹೋಗುತ್ತಾರೆ. ತಮ್ಮ ಮೇಲೆ ತಾವೇ ನಂಬಿಕೆ ಕಳೆದುಕೊಳ್ಳುತ್ತಾರೆ. ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ಸೋಲೇ ಗೆಲುವಿನ ಸೋಪಾನ ಎಂದು ನಿರಂತರ ಪ್ರಯತ್ನ ಮಾಡುತ್ತಾರೆ. ಆದರೂ ಕೂಡ ಒಮ್ಮೊಮ್ಮೆ....
ಅದೆಷ್ಟೇ ಪ್ರಯತ್ನವನ್ನು ಮಾಡಿದರೂ ಕೂಡ ಗೆಲುವು ಎನ್ನುವುದು ಸಿಗದೇ ಮತ್ತೆ ಸತಾಯಿಸುತ್ತೆ. ಇನ್ನೂ ಕೆಲ ಒಮ್ಮೆ ಅದೃಷ್ಟ ಕೈ ಕೊಡುತ್ತೆ. ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಸಾಲು ಸಾಲು ಸಿನಿಮಾಗಳು ಶುರುವಾದಷ್ಟೇ ಬೇಗ ನಿಂತು ಹೋಗುತ್ತವೆ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಹಲವರು ತಮ್ಮ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಇವರ ಈ ಪ್ರಯತ್ನಕ್ಕೆ ಒಂದಲ್ಲೊಂದು ಪ್ರಯತ್ನಕ್ಕೆ ಬೆಲೆ ಸಿಗುತ್ತೆ. ಇದಕ್ಕೆ ರಣವೀರ್ ಸಿಂಗ್ ಸದ್ಯದ ಉದಾಹರಣೆ.

ಹೌದು, ಕಳೆದ ಎರಡು ವರ್ಷಗಳಿಂದ ಬೆಳ್ಳಿತೆರೆಯಿಂದ ದೂರ ಇದ್ದ ರಣವೀರ್ ಸಿಂಗ್ ಹಲವು ಪ್ರಯತ್ನಗಳನ್ನು ಮಾಡುತ್ತಿದ್ದರು. ಆದರೆ.. ದಕ್ಕಿದ್ದು ಕೇವಲ ನಿರಾಸೆ ಮಾತ್ರ. ಕರಣ್ ಜೋಹರ್ ನಿರ್ಮಾಣದ ''ತಖ್ತ್ ''.. ಶಂಕರ್ ನಿರ್ದೇಶನದಲ್ಲಿ ಬರಬೇಕಿದ್ದ ''ಅನ್ನಿಯನ್'' ಚಿತ್ರದ ರಿಮೇಕ್, ಹನುಮಾನ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನದ ''ರಾಕ್ಷಸ್''.. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ''ಬೈಜೂ ಬವರಾ''..
ಹೀಗೆ ಅನೇಕ ಸಿನಿಮಾಗಳು ಇನ್ನೇನು ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಒಂದಿಲ್ಲೊಂದು ವಿಘ್ನಗಳಿಂದಾಗಿ ನಿಂತು ಹೋದವು. ಇದೆಲ್ಲದರಿಂದ ಖುದ್ದು ರಣ್ವೀರ್ ಸಿಂಗ್ ಬೇಸತ್ತು ಹೋಗಿದ್ದರು. ಆದರೆ ಈಗ ರಣವೀರ್ ಸಿಂಗ್ ಶ್ರಮ ಸಾರ್ಥಕವಾಗಿದೆ. ಬಾಕ್ಸಾಫೀಸ್‌ನಲ್ಲಿ ''ಧುರಂಧರ್'' ಅಕ್ಷರಶಃ ಅಬ್ಬರಿಸುತ್ತಿದೆ. ದಾಖಲೆ ಮೇಲೆ ದಾಖಲೆ ಬರೆಯುತ್ತಾ ಮುನ್ನುಗ್ಗುತ್ತಿದೆ.
ಹೌದು, ''ಧುರಂಧರ್'' ತೆರೆಗೆ ಬಂದು ಇಂದಿಗೆ 18 ದಿನಗಳಾಗಿವೆ. ಆದರೆ ಹವಾ ಮಾತ್ರ ಕಡಿಮೆಯಾಗಿಲ್ಲ. ಇವತ್ತು ಕೂಡ ಚಿತ್ರಮಂದಿರದ ಎದುರು ನೂಕುನುಗ್ಗಲಿನ ವಾತಾವರಣ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ನಿನ್ನೆ (ಡಿಸೆಂಬರ್ 21 ) ಮೂರನೇ ಭಾನುವಾರ ₹ 38.25 ಕೋಟಿಯನ್ನು ಚಿತ್ರ ಗಳಿಸಿದೆ. ಈ ಮೂಲಕ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಚಿತ್ರ 17 ದಿನದಲ್ಲಿ ₹ 555.84 ಕೋಟಿಯನ್ನು ಕೊಳ್ಳೆ ಹೊಡೆದಿದೆ.
ಇನ್ನು ''ಧುರಂಧರ್'' ಅಬ್ಬರಕ್ಕೆ ಒಂದೊಂದೇ ದಾಖಲೆಗಳು ಪುಡಿ ಪುಡಿಯಾಗುತ್ತಿವೆ. ಈಗಾಗಲೇ ''ದಂಗಲ್''.. ''ಬಾಹುಬಲಿ-ದಿ ಬಿಗಿನಿಂಗ್''.. ''ಗದರ್ 2'' ಚಿತ್ರಗಳನ್ನು ಬಾಕ್ಸಾಫೀಸ್ ರೇಸ್‌ನಲ್ಲಿ ಹಿಂದಿಕ್ಕಿರುವ ''ಧುರಂಧರ್'' ಸದ್ಯ ರಣಬೀರ್ ಕಪೂರ್ ಅಭಿನಯದ ''ಅನಿಮಲ್'' ಚಿತ್ರದ ಗಳಿಕೆಯನ್ನು ಹಿಂದಿಕ್ಕಿದೆ. ''ಪಠಾಣ್'' ಚಿತ್ರದ ದಾಖಲೆ ಕೂಡ ''ಧುರಂಧರ್'' ಅಬ್ಬರದ ಎದುರು ಧೂಳಿಪಟವಾಗಿದೆ.

ಹೌದು, 2023ರಲ್ಲಿ ತೆರೆಗೆ ಬಂದಿದ್ದ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ''ಅನಿಮಲ್'' ಭಾರತದಲ್ಲಿ ₹553.87 ಕೋಟಿಯನ್ನು ದೋಚಿತ್ತು. 56 ದಿನ ಪ್ರದರ್ಶನ ಕಂಡಿತ್ತು. ಇನ್ನೂ ಅದೇ ವರ್ಷ ತೆರೆಗೆ ಬಂದ ಶಾರುಖ್ ಖಾನ್ ಕಂ ಬ್ಯಾಕ್ ಸಿನಿಮಾ ''ಪಠಾಣ್'' ಹತ್ತು ವಾರ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ₹ 543.09 ಕೋಟಿಯನ್ನು ಕೊಳ್ಳೆ ಹೊಡೆದಿತ್ತು. ಈ ಎರಡು ಚಿತ್ರಗಳನ್ನು ₹ 555.84 ಕೋಟಿಯನ್ನು ಗಳಿಸುವ ಮೂಲಕ ''ಧುರಂಧರ್'' ಹಿಂದಿಕ್ಕಿದೆ. ಈ ಮೂಲಕ ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನಕ್ಕೇರಿದೆ. ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಮೂರನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ.
ಸದ್ಯ ''ಧುರಂಧರ್'' ಎದುರು ''ಛಾವಾ'' ದಾಖಲೆ ಮುರಿಯುವ ಸವಾಲು ಇದೆ. ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಚಿತ್ರದ ಲಿಸ್ಟ್‌ನಲ್ಲಿ ಮೊದಲ ಸ್ಥಾನಕ್ಕೇರಲು ''ಕಾಂತಾರ-ಚಾಪ್ಟರ್ 1'' ಚಿತ್ರವನ್ನು ಕೂಡ ''ಧುರಂಧರ್'' ಹಿಂದಿಕ್ಕಬೇಕಿದೆ. ಸದ್ಯ ''ಧುರಂಧರ್'' ಚಿತ್ರದ ನಾಗಾಲೋಟವನ್ನು ನೋಡುತ್ತಿದ್ದರೆ ಇವೆರಡು ಚಿತ್ರಗಳ ದಾಖಲೆ ''ಧುರಂಧರ್'' ಮುರಿಯುವುದು ಖಚಿತ, ನಿಶ್ಚಿತ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











