Kingdom Box Office Day 1;ಲೈಗರ್ ಶಾಪದಿಂದ ಮುಕ್ತರಾದ್ರಾ ವಿಜಯ್ ದೇವರಕೊಂಡ?ಕಿಂಗ್‌ಡಮ್ ಮೊದಲ ದಿನ ಗಳಿಸಿದ್ದೆಷ್ಟು?
ಅದೃಷ್ಟ ಅನ್ನೋದು ಅಷ್ಟು ಸುಲಭವಾಗಿ ಯಾರ ಸ್ವತ್ತು ಆಗಲ್ಲ. ರಾತ್ರೋರಾತ್ರಿ ಆರಕ್ಕೇರಿದವರು ಮಾರನೇ ದಿನವೇ ಮೂರಕ್ಕಿಳಿದು ಬಿಡಬಹುದು. ಮೂರಕ್ಕಿಳಿದವರು ಮಾರನೇ ದಿನವೇ ಆರಕ್ಕೇರಿ ಬಿಡಬಹುದು. ಇದಕ್ಕೆ ರಶ್ಮಿಕಾ ಮಂದಣ್ಣ ಅವರ ಆಪ್ತ ಗೆಳೆಯ ವಿಜಯ್ ದೇವರಕೊಂಡ ಸದ್ಯದ ಉದಾಹರಣೆ. ಹೌದು, ಹೆಚ್ಚೇನು ಇಲ್ಲ. ಎಂಟು ವರ್ಷದ ಹಿಂದೆ ವಿಜಯ್ ದೇವರಕೊಂಡ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದರೆ ಆಂಧ್ರದಲ್ಲಿ ಕಂಪನವಾಗುತ್ತಿತ್ತು.
ಕಾಲೇಜ್ ನ ಯುವಕ-ಯುವತಿಯರ ದಂಡು ಚಿತ್ರಮಂದಿರದ ಮುಂದೆ ಕಾಣ್ತಿತ್ತು. ''ಅರ್ಜುನ್ ರೆಡ್ಡಿ'' ಇಂಥಹದ್ದೊಂದು ವಾತಾವರಣವನ್ನು ವಿಜಯ್ ದೇವರಕೊಂಡ ಪಾಲಿಗೆ ನಿರ್ಮಿಸಿ ಕೊಟ್ಟಿತ್ತು. ''ಗೀತಾ ಗೋವಿಂದಂ'' ಚಿತ್ರದಿಂದ ಆ ವಾತಾವರಣ ಇನ್ನಷ್ಟು ಕಳೆಗಟ್ಟಿತ್ತು. ಆದರೆ ಆ ನಂತರ ಎದುರಾಗಿದ್ದು ಮಾತ್ರ ಅಕ್ಷರಶಃ ಬರಗಾಲ.

ನ್ಯಾಷನಲ್ ಸ್ಟಾರ್ ಆಗುವ ಹುಚ್ಚಿನಲ್ಲಿ ಕಣ್ಮುಂದೆ ಇದ್ದ ಚಿನ್ನದ ಮಾರುಕಟ್ಟೆಯನ್ನು ವಿಜಯ್ ದೇವರಕೊಂಡ ಕಳೆದುಕೊಂಡರು. ಇದಕ್ಕೆ ಕೈಗನ್ನಡಿ ಎಂಬಂತೆ ''ಟ್ಯಾಕ್ಸಿವಾಲಾ'' ಹೊರತು ಪಡಿಸಿದರೆ ವಿಜಯ್ ದೇವರಕೊಂಡಗೆ ಆ ನಂತರ ದಕ್ಕಿದ್ದು ಬಹುತೇಕ ಸೋಲೇ. ಹೆಚ್ಚು ಕಡಿಮೆ ಇವರು ಅಭಿನಯಿಸಿದ ಆರು ಚಿತ್ರಗಳು ಮಕಾಡೆ ಮಲಗಿದವು.
ಆದರೆ ಈಗ ದೇವರಕೊಂಡ ಬದುಕಿನಲ್ಲಿ ಭರವಸೆಯ ಬೆಳಕು ಮೂಡಿದಂತೆ ಇದೆ. ಯಾಕೆಂದರೆ ನಿನ್ನೆ [ ಜುಲೈ 31] ಬಿಡುಗಡೆಯಾದ ''ಕಿಂಗ್‌ಡಮ್'' ಮೊದಲ ದಿನ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಇದಕ್ಕೆ ಪುರಾವೆ ಎನ್ನುವಂತೆ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ''ಕಿಂಗಡಮ್''ನ ಮೊದಲ ದಿನದ ಗಳಿಕೆಯನ್ನು ಹಂಚಿಕೊಂಡಿದ್ದು ಚಿತ್ರ ಮೊದಲ ₹ 15.50 ಕೋಟಿ ಹಣ ಗಳಿಸಿದೆ ಎಂದು ಹೇಳಿದೆ.
ಅಂದ್ಹಾಗೇ ವಿಜಯ್ ದೇವರಕೊಂಡ ಅಭಿನಯದ ಹಿಂದಿನ ಚಿತ್ರ ''ದಿ ಫ್ಯಾಮಿಲಿ ಸ್ಟಾರ್'' ಮೊದಲ ದಿನ ಆರು ಕೋಟಿಯ ಗಡಿಯನ್ನು ಕೂಡ ತಲುಪಿರಲಿಲ್ಲ. ''ಫ್ಯಾಮಿಲಿ ಸ್ಟಾರ್'' ಚಿತ್ರಕ್ಕೆ ಹೋಲಿಸಿಕೊಂಡರೆ ''ಕಿಂಗ್ಡಮ್'' ಚಿತ್ರದ ಮೊದಲ ದಿನದ ಗಳಿಕೆ ಹೆಚ್ಚಿದೆ. ಈ ಹಿನ್ನೆಲೆ ವಿಜಯ್ ದೇವರಕೊಂಡ ಮತ್ತೆ ಲಯಕ್ಕೆ ಮರಳಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಹಾಗಂಥ ದೇವರಕೊಂಡ ಅಭಿಮಾನಿಗಳು ಜಾಸ್ತಿ ಖುಷಿಯಾಗುವಂತೆ ಇಲ್ಲ. ಗೆದ್ದೇ ಎಂದು ವಿಜಯ್ ದೇವರಕೊಂಡ ಕೂಡ ಅಂದುಕೊಳ್ಳುವಂತೆ ಇಲ್ಲ. ಯಾಕೆಂದರೆ.. ''ಕಿಂಗ್ಡಮ್'' ಚಿತ್ರಕ್ಕೆ ಪ್ರೇಕ್ಷಕರ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇನ್ನು ವಿಜಯ್ ದೇವರಕೊಂಡ ವೃತ್ತಿ ಬದುಕಿಗೆ ಪೆಟ್ಟು ನೀಡಿದ ಚಿತ್ರಗಳಲ್ಲಿ ''ಲೈಗರ್'' ಕೂಡ ಒಂದು ಮತ್ತು ಪ್ರಮುಖವಾದದ್ದು. ''ಪ್ಯಾನ್ ಇಂಡಿಯಾ'' ಲೆವಲ್‌ನಲ್ಲಿ ಈ ಚಿತ್ರ ತೆರೆಗೆ ಬಂದಿತ್ತು. ಚಿತ್ರದ ಮೇಲೆ ಅಪಾರವಾದ ನಿರೀಕ್ಷೆಗಳಿದ್ದವು. ಇದಕ್ಕೆ ಪೂರಕವಾಗಿ ಚಿತ್ರ ಇದೇ ''ಸ್ಯಾಕ್ನಿಲ್'' ಉಲ್ಲೇಖಿಸಿರುವಂತೆ ಮೊದಲ ದಿನ ₹15.95 ಕೋಟಿ ಗಳಿಸಿತ್ತು.
ಈ ಗಳಿಕೆಯನ್ನು ಹಿಂದಿಕ್ಕುವಲ್ಲಿ ವಿಜಯ್ ದೇವರಕೊಂಡ ವಿಫಲರಾಗಿದ್ದಾರಾದರೂ ಕೂಡ ಎರಡನೇ ದಿನ ''ಲೈಗರ್'' ಮುಗ್ಗರಿಸಿ ಬಿದ್ದಿತ್ತು. ಆಮೇಲೆ ಮತ್ತೆ ಮೇಲೇಳಲೇ ಇಲ್ಲ. ಹೀಗಾಗಿ ಈಗ ''ಕಿಂಗ್ಡಮ್'' ಚಿತ್ರದ ವಾರಾಂತ್ಯದ ಗಳಿಕೆಯ ಮೇಲೆ ಎಲ್ಲರ ಕಣ್ಣಿದೆ. ಸೋಮವಾರದ ಪರೀಕ್ಷೆಯಲ್ಲಿ ''ಕಿಂಗ್ಡಮ್'' ಪಾಸಾದರಷ್ಟೇ ''ಲೈಗರ್'' ಶಾಪದಿಂದ ವಿಜಯ್ ದೇವರಕೊಂಡ ಮುಕ್ತಿಯನ್ನು ಪಡೆದಂತೆ ಎಂಬ ಅಭಿಪ್ರಾಯ ಸದ್ಯ ತೆಲುಗು ಉದ್ಯಮದಲ್ಲಿ ವ್ಯಕ್ತವಾಗುತ್ತಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











