Drishyam 3 Day 4 Boxoffice: ಫಸ್ಟ್ ವೀಕೆಂಡ್ 'ದೃಶ್ಯಂ- 3' ಹೊಸ ದಾಖಲೆ, ಎಲ್ಲೆಲ್ಲೂ ಭರ್ಜರಿ ಕಲೆಕ್ಷನ್
ಮಿಶ್ರ ಪ್ರತಿಕ್ರಿಯೆ ನಡುವೆಯೂ ಬಾಕ್ಸಾಫೀಸ್‌ನಲ್ಲಿ 'ದೃಶ್ಯಂ- 3' ಆರ್ಭಟ ಜೋರಾಗಿದೆ. ಮೊದಲ ಮೂರು ದಿನಕ್ಕೆ 100 ಕೋಟಿ ರೂ. ಕ್ಲಬ್ ಸೇರಿ ದಾಖಲೆ ಬರೆದಿದ್ದ ಸಿನಿಮಾ 4ನೇ ದಿನವಾದ ಭಾನುವಾರವೂ ಭರ್ಜರಿ ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ಮೋಹನ್ ಲಾಲ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಂದ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ.
'ದೃಶ್ಯಂ' ಸರಣಿಯ 2 ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಹಾಗಾಗಿ ಸರಣಿಯ 3ನೇ ಚಿತ್ರಕ್ಕೆ ಪ್ರೇಕ್ಷಕರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಮೇ 21ರಂದು ಗುರುವಾರ ಸಿನಿಮಾ ತೆರೆಗಪ್ಪಳಿಸಿತ್ತು. ದೇಶ ವಿದೇಶಗಳಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. ಭಾರೀ ನಿರೀಕ್ಷೆಯಿಂದ ಹೋದವರಿಗೆ ಕೊಂಚ ನಿರಾಸೆಯಾಗಿದ್ದು ಸುಳ್ಳಲ್ಲ. ಆದರೆ ಮೋಹನ್ ಲಾಲ್ ನಟನೆ ಎಲ್ಲವನ್ನು ಮರೆಸಿಬಿಟ್ಟಿದೆ. ನಿಧಾನವಾಗಿ ಫ್ಯಾಮಿಲಿ ಆಡಿಯನ್ಸ್ ಸಿನಿಮಾ ನೋಡಲು ಮುಗಿಬೀಳುತ್ತಿದ್ದಾರೆ.

ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಹಾಗೂ ಶನಿವಾರ ಕಲೆಕ್ಷನ್ ಕೊಂಚ ಕಮ್ಮಿ ಆಗಿತ್ತು. ಅದು ಸಹಜ ಕೂಡ. ಆದರೆ ಭಾನುವಾರದ ರಜಾ ದಿನ 'ದೃಶ್ಯಂ- 3' ಚಿತ್ರದ ಗಳಿಕೆಗೆ ವರವಾಗಿದೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಿಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗಿದೆ. ಎಲ್ಲಾ ಕಡೆ ಒಳ್ಳೆ ರೆಸ್ಪಾನ್ಸ್ ಇದೆ. ಕರ್ನಾಟಕದಲ್ಲಿ ಕೂಡ ಮೋಹಲ್ ಲಾಲ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ದಾಖಲೆಯ ಕಲೆಕ್ಷನ್ ಮಾಡ್ತಿದೆ. ಕನ್ನಡ ವರ್ಷನ್ ಕೂಡ ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಹಿಂದಿನ ಭಾಗಗಳಲ್ಲಿ ಹೇಳಿದ್ದ ಕಥೆಯನ್ನು ಇಲ್ಲಿ ಮುಂದುವರೆಸಿದ್ದಾರೆ. ಬಹುತೇಕ ಅದೇ ಪಾತ್ರವರ್ಗ ಕಾಣಿಸಿಕೊಂಡಿದೆ. ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಮಾಡಿದ್ದಾರೆ ಎನ್ನಲಾಗ್ತಿದೆ. ಸಿನಿಮಾ ಚಿತ್ರೀಕರಣಕ್ಕೆ ಕಡಿಮೆ ಖರ್ಚು ಆಗಿದ್ದರೂ ಮೋಹನ್ ಲಾಲ್, ಮೀನಾ ಹಾಗೂ ನಿರ್ದೇಶಕ ಜಿತು ಜೋಸೆಫ್ ಭಾರೀ ಸಂಭಾವನೆ ಪಡೆದಿದ್ದಾರೆ. ಸದ್ಯ ಓಟಿಟಿ, ಸ್ಯಾಟಲೈಟ್ ರೈಟ್ಸ್ ಭರ್ಜರಿ ದರಕ್ಕೆ ಮಾರಾಟವಾಗಿದೆ. ಬಾಕ್ಸಾಫೀಸ್‌ನಲ್ಲಿ ಕೂಡ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ.

4 ದಿನಗಳ ಕಲೆಕ್ಷನ್
ಸಿನಿಮಾ ತೆರೆಕಂಡು ಕೇವಲ 58 ಗಂಟೆಗಳಲ್ಲಿ 100 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡವೇ ಘೋಷಿಸಿದೆ. ಇದೀಗ ಒಟ್ಟಾರೆ 4 ದಿನಕ್ಕೆ 150 ಕೋಟಿ ರೂ. ಗಡಿ ದಾಟಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. sacnilk ವರದಿ ಪ್ರಕಾರ ಸಿನಿಮಾ 141.34 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಭಾನುವಾರ ಮಲಯಾಳಂ ವರ್ಷನ್ ಮಾತ್ರ 13.95 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದ್ದು ಶನಿವಾರಕ್ಕಿಂತ ಹೆಚ್ಚಾಗಿದೆ. ಭಾರತದಲ್ಲಿ ಮೊದಲ 4 ದಿನಕ್ಕೆ 63.34 ಕೋಟಿ ರೂ. ಗ್ರಾಸ್ ಕಲೆಕ್ಷನ್ ಜೊತೆಗೆ 54.55 ಕೋಟಿ ರೂ. ನೆಟ್ ಕಲೆಕ್ಷನ್ ಆಗಿದೆ.
'ಕರುಪ್ಪು' ಫೈಟ್
ವಾರದ ಹಿಂದೆ ತಮಿಳಿನಲ್ಲಿ ಸೂರ್ಯ ನಟನೆಯ 'ಕರುಪ್ಪು' ಸಿನಿಮಾ ತೆರೆಕಂಡು ಗೆದ್ದಿತ್ತು. ಆ ಚಿತ್ರಕ್ಕೆ ಈಗ ಬಾಕ್ಸಾಫೀಸ್‌ನಲ್ಲಿ 'ದೃಶ್ಯಂ- 3' ಬಹಳ ಪೈಪೋಟಿ ಕೊಡುತ್ತಿದೆ. 'ಕರುಪ್ಪು' ಚಿತ್ರದ ಸಾಕಷ್ಟು ಸ್ಕ್ರೀನ್‌ಗಳನ್ನು 'ದೃಶ್ಯಂ- 3' ಕಬಳಿಸಿಕೊಂಡಿದೆ. ಐಪಿಎಲ್ ಫೀವರ್ ನಡುವೆಯೂ ಈ ಎರಡೂ ಸಿನಿಮಾಗಳು ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಿದೆ.
ಬುಕ್‌ಮೈ ಶೋ ದಾಖಲೆ
'ದೃಶ್ಯಂ- 3' ಕ್ರೇಜ್ ಹೇಗಿದೆ ಎನ್ನುವುದು ಆನ್ಲೈನ್ ಟಿಕೆಟ್ ಬುಕ್ಕಿಂಗ್‌ನಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಮೊದಲ 4 ದಿನಕ್ಕೆ 20 ಲಕ್ಷದ 29 ಸಾವಿರ ಟಿಕೆಟ್ ಬುಕ್ ಆಗಿದೆ. ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ ಸಿನಿಮಾ 25 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆ ಬಳಿಕ ಕೂಡ ಬುಕ್‌ಮೈ ಶೋನಲ್ಲಿ ಟ್ರೆಂಡ್ ಜೋರಾಗಿದೆ. 5ನೇ ದಿನ(ಸೋಮವಾರ) ಕೂಡ ಗಂಟೆಗೆ 3 ಸಾವಿರಕ್ಕೂ ಅಧಿಕ ಟಿಕೆಟ್ ಬುಕ್ ಆಗ್ತಿದೆ.
ಕರ್ನಾಟಕ ಕಲೆಕ್ಷನ್
ಮೋಹನ್ ಲಾಲ್ ಸಿನಿಮಾಗಳಿಗೆ ಕರ್ನಾಟಕದಲ್ಲಿ ಕೂಡ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ರಾಜ್ಯದಲ್ಲಿ 'ದೃಶ್ಯಂ- 3' ಸಿನಿಮಾ ಮೊದಲ 3 ದಿನಕ್ಕೆ 7.07 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಕೆಲವರು ಲೆಕ್ಕ ಹಾಕಿದ್ದು. ನಾಲ್ಕನೇ ದಿನ 2 ಕೋಟಿ ರೂ. ದೋಚಿರುವ ಅಂದಾಜಿದೆ. 5 ದಿನಕ್ಕೆ ಹೆಚ್ಚು ಕಮ್ಮಿ 10 ಕೋಟಿ ರೂ. ಗಡಿ ದಾಟುವ ಸುಳಿವು ಸಿಕ್ತಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications