₹2 ಕೋಟಿಯನ್ನೂ ಕೂಡ ಗಳಿಸಲಿಲ್ಲ ಉತ್ತರ ಪ್ರದೇಶದ ಫೈರ್ ಬ್ರಾಂಡ್ ಸಿಎಂ ಯೋಗಿ ಆದಿತ್ಯನಾಥ್ ಜೀವನಾಧಾರಿತ ಚಿತ್ರ
ಚಿತ್ರರಂಗದವರಾಗಿರಲಿ.. ರಾಜಕೀಯ ಗಣ್ಯರಾಗಿರಲಿ ಅಥವಾ ಯಾವುದೇ ಕ್ಷೇತ್ರದ ಸಾಧಕರಾಗಿರಲಿ.. ಯಾರದ್ದಾದರೂ ಆತ್ಮಕಥೆ ಬೆಳ್ಳಿತೆರೆಯ ಮೂಲಕ ಚಿತ್ರ ರೂಪಕದಲ್ಲಿ ಅನಾವರಣವಾಗುತ್ತೆ ಎಂಬ ಸುದ್ದಿ ಹೊರ ಬಂದರೆ ಸಾಕು, ಹಲವರು ರೋಮಾಂಚನಗೊಳ್ಳುತ್ತಾರೆ. ಚಿತ್ರ ನೋಡಲು ಕಾತುರದಿಂದ ಕಾಯುತ್ತಾರೆ. ಸಾಧಕರ ಬದುಕಿನ ಪ್ರಯಾಣವನ್ನು ಕಂಡು ಪ್ರೇರೆಪಿತರಾಗುತ್ತಾರೆ. ಇನ್ನೂ ಇಂತಹ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಕೂಡ ಸದ್ದು ಮಾಡುತ್ತವೆ.
ಈ ಹಿನ್ನೆಲೆ ಹಲವು ಸಾಧಕರ ಬದುಕಿನ ಕತೆಯ ಮೇಲೆ ಚಿತ್ರರಂಗ ಕೂಡ ಒಂದು ಕಣ್ಣಿಟ್ಟಿರುತ್ತೆ. ಅವಕಾಶ ಸಿಕ್ಕಾಗ, ಸಮಯ -ಸಂದರ್ಭ ಕೂಡಿ ಬಂದಾಗ ಚಿತ್ರವನ್ನು ಕೂಡ ಮಾಡಲು ಸಿನಿ ಉದ್ಯಮ ಮುಂದಾಗುತ್ತೆ. ಇದಕ್ಕೆ ಸಾಕ್ಷಿ ಎಂಬಂತೆ ''ಎಮ್.ಎಸ್.ಧೋನಿ''ಯಿಂದ ಹಿಡಿದು ಭಾರತದ ಪ್ರಧಾನ ಮಂತ್ರಿ ''ನರೇಂದ್ರ ಮೋದಿ'', ಮಾಜಿ ಪ್ರಧಾನಿಗಳಾದ ''ಅಟಲ್ ಬಿಹಾರಿ ವಾಜಪೇಯಿ'' ಅವರವರೆಗೆ ಹಲವರ ಕಥೆಗಳು ಬೆಳ್ಳಿತೆರೆಯಲ್ಲಿ ಅನಾವರಣಗೊಂಡಿವೆ. ಪ್ರೇಕ್ಷಕರ ಹೃದಯವನ್ನೂ ಗೆದ್ದಿವೆ. ಆ ಪೈಕಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೀವನ ಕಥೆ "ಅಜೇಯ್" ಕೂಡ ಒಂದು.

ಹೌದು. "ಅಜೇಯ್- ದಿ ಅನ್ ಟೋಲ್ಡ್ ಸ್ಟೋರಿ ಆಫ್ ಯೋಗಿ" ಚಿತ್ರ ಕಳೆದ ವಾರ (ಸೆಪ್ಟೆಂಬರ್ 19) ತೆರೆಗೆ ಬಂದಿದೆ. ಆದರೆ ಅದ್ಯಾಕೋ ಈ ಚಿತ್ರದ ಸದ್ದು ಇಲ್ಲ. ಸುದ್ದಿಯೂ ಇಲ್ಲ. ಬಾಕ್ಸಾಫೀಸ್ ನಲ್ಲಿ ಹಣದ ಹೊಳೆ ಕೂಡ ಹರಿಯಲಿಲ್ಲ. ಇದಕ್ಕೆ ಪುರಾವೆ ಎನ್ನುವಂತೆ ಚಿತ್ರ ಒಂದು ವಾರದಲ್ಲಿ ಕೇವಲ ₹1.6ಕೋಟಿಯನ್ನು ಮಾತ್ರ ಗಳಿಸಿದೆ ಎಂದು ಬಾಕ್ಸಾಫೀಸ್ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿ ಮಾಡಿದೆ.
ಸ್ಯಾಕ್ನಿಲ್ ಪ್ರಕಾರ ''ಅಜೇಯ್'' ಚಿತ್ರದ ಮೊದಲ ಎರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ [ಶುಕ್ರವಾರ] ₹ 0.25 ಲಕ್ಷ
ಎರಡನೇ ದಿನ [ಶನಿವಾರ] ₹ 0.35 ಲಕ್ಷ
ಮೂರನೇ ದಿನ [ಭಾನುವಾರ]₹ 0.45 ಲಕ್ಷ
ನಾಲ್ಕನೇ ದಿನ [ಸೋಮವಾರ] ₹ 0.10 ಲಕ್ಷ
ಐದನೇ ದಿನ [ಮಂಗಳವಾರ] ₹ 0.16 ಲಕ್ಷ
ಆರನೇ ದಿನ [ಬುಧವಾರ] ₹ 0.15 ಲಕ್ಷ
ಏಳನೇ ದಿನ [ಗುರುವಾರ] ₹0.11 ಲಕ್ಷ
ಒಟ್ಟು ಗಳಿಕೆ - ₹ 1.57 ಕೋಟಿ

ಹೀಗೆ ಮೊದಲ ವಾರದಲ್ಲಿ ಯೋಗಿ ಅವರ ಬಯೋಪಿಕ್ ''ಅಜೇಯ್ - ದಿ ಅನ್‌ಟೋಲ್ಟ್ ಸ್ಟೋರಿ ಆಫ್ ಯೋಗಿ'' ಚಿತ್ರ ಕೇವಲ ₹ 1.57 ಕೋಟಿಯನ್ನಷ್ಟೇ ಗಳಿಸಿದೆ. ₹ 2ಕೋಟಿಯ ಗಡಿಯನ್ನು ಕೂಡ ದಾಟುವಲ್ಲಿ ಚಿತ್ರ ವಿಫಲವಾಗಿದೆ.
ಇನ್ನೂ ಈ ಚಿತ್ರದ ಎದುರು ಬಿಡುಗಡೆಯಾದ ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ಅಭಿನಯದ ''ಜಾಲಿ ಎಲ್‌ಎಲ್‌ಬಿ 3'' ಮೊದಲ ವಾರ ₹74 ಕೋಟಿಯ ಆಸು ಪಾಸು ಹಣ ಕೊಳ್ಳೆ ಹೊಡೆದಿದ್ದು, ಸದ್ಯ ಈ ವಾರ ಅಂದರೆ (ಅಕ್ಟೋಬರ್ 2) ''ಕಾಂತಾರ-ಚಾಪ್ಟರ್ 1'' ವಿಶ್ವದೆಲ್ಲೆಡೆ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.
''ಕಾಂತಾರ'' ಜೊತೆಯಲ್ಲಿ ವರುಣ್ ಧವನ್ ಮತ್ತು ಜಾಹ್ನವಿ ಕಪೂರ್ ಅಭಿನಯದ ''ಸನ್ನಿ ಸಂಸ್ಕಾರಿ ಕೀ ತುಳಸಿ ಕುಮಾರಿ'' ಕೂಡ ಅವತ್ತೇ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ಯೋಗಿ ಅವರ ಈ ಆತ್ಮಕಥೆಗೆ ಮುಂಬರುವ ದಿನಗಳಲ್ಲಿ ಚಿತ್ರಮಂದಿರ ಸಿಗುವುದು ಬಹುತೇಕ ಅನುಮಾನ. ಎರಡು ಕೋಟಿಯ ಗಡಿಯನ್ನು ಕೂಡ ಈ ಚಿತ್ರ ದಾಟುವುದು ಅನುಮಾನ ಎನ್ನುವ ಅಭಿಪ್ರಾಯ ಸದ್ಯ ಮುಂಬೈನಲ್ಲಿ ವ್ಯಕ್ತವಾಗುತ್ತಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications










