Border 2 Box Office Day 25 ; ಸನ್ನಿ ಡಿಯೋಲ್ ಅಬ್ಬರ ; ಶಾರುಖ್ ಖಾನ್-ಸಲ್ಮಾನ್ ಖಾನ್ ದಾಖಲೆ ಉಡೀಸ್
ಹೊಸಬರ ಅಬ್ಬರದ ಮುಂದೆ ಚಿತ್ರರಂಗದ ಹಳೆಯ ಹುಲಿಗಳು ಮಂಕಾಗಿವೆ ಎನ್ನುವ ಮಾತು ಕಳೆದ ಹಲವು ವರ್ಷಗಳಿಂದ ಕೇಳಿ ಬರುತ್ತಿತ್ತು. ಇದಕ್ಕೆ ಕೈಗನ್ನಡಿ ಎಂಬಂತೆ ಮೆಗಾ ಸ್ಟಾರ್ ಚಿರಂಜೀವಿ ಅವರಿಂದ ಹಿಡಿದು ಅಕ್ಷಯ್ ಕುಮಾರ್ ವರೆಗೆ.. ಸಲ್ಮಾನ್ ಖಾನ್ ಅವರಿಂದ ಹಿಡಿದು ನಾಗಾರ್ಜುನವರೆಗೆ... ಹಲವರ ಚಿತ್ರಗಳು ಒಂದಾದ ಮೇಲೊಂದರಂತೆ ಮಕಾಡೆ ಮಲಗುತ್ತಿದ್ದವು. ಆದರೆ ಈ ವರ್ಷ ಹಳೆಯ ಹುಲಿಗಳು ಮತ್ತೆ ಘರ್ಜಿಸುತ್ತಿವೆ.
ಉದಾಹರಣೆಗೆ 7 ವರ್ಷಗಳಿಂದ ಗೆಲುವನ್ನೇ ಕಾಣದ ಚಿರಂಜೀವಿ ಈ ವರ್ಷ ''ಮನಶಂಕರ ವರಪ್ರಸಾದ ಗಾರು'' ಚಿತ್ರದ ಮೂಲಕ ಗೆದ್ದಿದ್ದಾರೆ. ಇನ್ನು ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್ ಮೊದಲಿನ ಲಯಕ್ಕೆ ಇನ್ನೂ ಬಂದಿಲ್ಲವಾದರೂ ಸದ್ಯ ಉತ್ತರ ಭಾರತದಲ್ಲಿ ಸನ್ನಿ ಡಿಯೋಲ್ ಅಬ್ಬರ ಜೋರಾಗಿದೆ. 68ನೇ ವರ್ಷದಲ್ಲಿ ಮತ್ತೆ ಮೈಕೊಡವಿ ಎದ್ದು ನಿಂತಿರುವ ಸನ್ನಿ ಡಿಯೋಲ್ ಸದ್ಯ ''ಬಾರ್ಡರ್ 2'' ಚಿತ್ರದ ಮೂಲಕ ಮತ್ತೊಮ್ಮೆ ಗೆದ್ದಿದ್ದಾರೆ. ಇಷ್ಟೇ ಅಲ್ಲ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರ ಚಿತ್ರಗಳನ್ನು ಕೂಡ ಬಾಕ್ಸಾಫೀಸ್‌ನಲ್ಲಿ ಹಿಂದಿಕ್ಕಿದ್ದಾರೆ.

ಹೌದು, 2023ರಲ್ಲಿ ಸಲ್ಮಾನ್ ಖಾನ್ ಅಭಿನಯದ ''ಟೈಗರ್ 3'' ತೆರೆಗೆ ಬಂದಿತ್ತು. ಬಾಕ್ಸಾಫೀಸ್‌ನ ಅಂಕಿ-ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ₹285.52 ಕೋಟಿಯನ್ನು ಕೇವಲ ಭಾರತದಲ್ಲಿ ದೋಚಿತ್ತು.
ಇನ್ನೂ ಅದೇ ವರ್ಷ 2023ರಲ್ಲಿ ತೆರೆಗೆ ಬಂದ ಶಾರುಖ್ ಖಾನ್ ಅಭಿನಯದ ''ಡುಂಕಿ'' ಭಾರತದ ಗಲ್ಲಾಪೆಟ್ಟಿಗೆಯಲ್ಲಿ ₹227 ಕೋಟಿಯನ್ನು ಗಳಿಸಿತ್ತು. ಈ ಎರಡು ಚಿತ್ರಕ್ಕಿಂತ ಹೆಚ್ಚಿನ ಹಣವನ್ನು ಈಗ ''ಬಾರ್ಡರ್ 2'' ಗಳಿಸಿದೆ. 25 ದಿನಗಳನ್ನು ಯಶಸ್ವಿಯಾಗಿ ಭಾರತದಲ್ಲಿ ಪೂರೈಸಿದೆ. 'ಸ್ಯಾಕ್ನಿಲ್'' ಪ್ರಕಾರ ಈ 25 ದಿನದಲ್ಲಿ ₹321.94 ಕೋಟಿಯನ್ನು ಗಳಿಸಿದೆ. ಈ ಮೂಲಕ ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಹಿಂದಿ ಚಿತ್ರಗಳ ಪಟ್ಟಿಯಲ್ಲಿ 13ನೇ ಸ್ಥಾನಕ್ಕೆ ''ಬಾರ್ಡರ್ 2'' ಏರಿದೆ.
ಇನ್ನೂ ಚಿತ್ರದ ನಿರ್ಮಾಪಕಿಯಾದ ನಿಧಿ ದತ್ತಾ ಚಿತ್ರದ ಅಂಕಿ ಅಂಶಗಳನ್ನು ಹಂಚಿಕೊಂಡಿದ್ದು ಆ ಪ್ರಕಾರ ''ಸ್ಯಾಕ್ನಿಲ್'' ಉಲ್ಲೇಖ ಮಾಡಿರುವುದಕ್ಕಿಂತ ಹೆಚ್ಚಿನ ಹಣವನ್ನು ಬಾರ್ಡರ್ 2 ಗಳಿಸಿದೆ. ನಿಧಿ ದತ್ತಾ ಹಂಚಿಕೊಂಡ ಫೋಸ್ಟ್ ಪ್ರಕಾರ 25 ದಿನದಲ್ಲಿ ಭಾರತದಲ್ಲಿ ಬಾರ್ಡರ್ 2 ₹353.89 ಕೋಟಿಯನ್ನು ದೋಚಿದೆ.
ಸದ್ಯ ''ಬಾರ್ಡರ್ 2'' ಎದುರು ''ಸಂಜು'' .. ''ದಂಗಲ್''.. ''ಅನಿಮಲ್''.. ''ಗದರ್ 2''.. ''ಪಠಾಣ್''.. ''ಜವಾನ್'' ಚಿತ್ರದ ಗಳಿಕೆಯನ್ನು ಹಿಂದಿಕ್ಕುವ ಸವಾಲು ಇದೆ. ಆ ಪೈಕಿ ''ಸಂಜು'' ಮತ್ತು ''ದಂಗಲ್'' ದಾಖಲೆಯನ್ನು ''ಬಾರ್ಡರ್ 2'' ಮುರಿಯುವ ವಿಶ್ವಾಸ ಬಾಲಿವುಡ್‌ನ ಟ್ರೇಡ್ ಪಂಡಿತರಿಗಿದೆ. ₹400 ಕೋಟಿಯ ಗಡಿಯನ್ನು ಬಾರ್ಡರ್ 2 ಪಾರು ಮಾಡುವ ನಂಬಿಕೆ ಇದೆ.

ಒಟ್ನಲ್ಲಿ ಸದ್ಯ ''ಬಾರ್ಡರ್ 2'' ಈ ವರ್ಷದ ಮೊದಲ ಬ್ಲಾಕ್‌ಬಸ್ಟರ್ ಚಿತ್ರ ಎನ್ನುವ ಹೆಗ್ಗಳಿಕೆಗೆ ಹಿಂದಿ ಚಿತ್ರರಂಗದಲ್ಲಿ ಪಾತ್ರವಾಗಿದೆ. ಇನ್ನು ಈ ತಿಂಗಳು ಬೇರೆ ಯಾವ ದೊಡ್ಡ ಚಿತ್ರಗಳು ಬಾಲಿವುಡ್‌ನಲ್ಲಿ ಬಿಡುಗಡೆಯಾಗುತ್ತಿಲ್ಲ. ಈ ವಿಚಾರ ''ಬಾರ್ಡರ್ 2'' ಚಿತ್ರಕ್ಕೆ ಸಹಕಾರಿಯಾಗುವ ಸಾಧ್ಯತೆ ಇದೆ. ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮುನ್ನ ''ಬಾರ್ಡರ್ 2'' ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











