ಬಾಕ್ಸಾಫೀಸ್ ಅಚ್ಚರಿ ; ಕಾಟೇರ, ಮ್ಯಾಕ್ಸ್ ದಾಖಲೆ ಮುರಿದ 'ಸು ಫ್ರಮ್ ಸೋ'
ಕನ್ನಡ ಚಿತ್ರರಂಗದಲ್ಲಿ ಕೆಲವರು ಇನ್ನೂ ಕೆ.ಜಿ.ಎಫ್‌ನ ಗುಂಗಿನಲ್ಲಿದ್ದಾರೆ. ಆ ಛಾಯೆಯಲ್ಲಿಯೇ ಹೊರಳಾಡಿ .. ಉರುಳಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಎಂಬ ಭ್ರಮಾ ಲೋಕದ ಬೆನ್ನತ್ತಿದ್ದಾರೆ. ಆದರೆ.. ಇದೇ ಸಮಯದಲ್ಲಿ ಇನ್ನು ಕೆಲವರು ಹೊಸ ಬಗೆಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹೊಸ ಹೊಸ ಆಲೋಚನೆಗಳಿಂದ ಎಲ್ಲರನ್ನು ನಿಬ್ಬೇರಗಾಗಿಸುತ್ತಿದ್ದಾರೆ. ಭಿನ್ನ ಧಾಟಿಯ ಚಿತ್ರಗಳಿಂದ ಗಮನ ಸೆಳೆಯುವುದಲ್ಲದೇ ಗೆಲ್ಲುವಲ್ಲಿ ಕೂಡ ಯಶಸ್ವಿ ಆಗುತ್ತಿದ್ದಾರೆ. ಉದಾಹರಣೆಗೆ ''ಸು ಫ್ರಮ್ ಸೋ'' ತಂಡವನ್ನೇ ತೆಗೆದುಕೊಳ್ಳಿ.
ಹೌದು.. ''ಸು ಫ್ರಮ್ ಸೋ''.. ಕನ್ನಡ ಚಿತ್ರರಂಗದ ಸದ್ಯದ ಸೋಜಿಗ. ಅಬ್ಬರದ ಪ್ರಚಾರ ಇಲ್ಲ.. ಚಿತ್ರದಲ್ಲಿ ಹೇಳಿಕೊಳ್ಳುವಂತಹ ಯಾವುದೇ ದೊಡ್ಡ ಸ್ಟಾರ್ ಇಲ್ಲ. ಆದರೂ ಇವತ್ತು ಎಲ್ಲರ ಎಲ್ಲರ ಬಾಯಲ್ಲಿ ''ಸು ಫ್ರಮ್ ಸೋ'' ನಲಿಯುತ್ತಿದೆ. ಕನ್ನಡಿಗರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವಲ್ಲಿ ಯಶಸ್ವಿಯಾಗಿದೆ. ಇಷ್ಟೇ ಅಲ್ಲ ಹತ್ತು ಹಲವು ದಾಖಲೆಗಳನ್ನು ಕೂಡ ಈ ಹೊಸ ತಂಡ ಮುರಿಯುತ್ತಿದೆ. ಇವರ ಅಬ್ಬರದ ಮುಂದೆ ಸದ್ಯ ಯಾವ ಸೂಪರ್ ಸ್ಟಾರ್ ಕೂಡ ಇಲ್ಲ.

ಹೌದು ಅಚ್ಚರಿ ಎನಿಸಿದರೂ ಸತ್ಯ. ವಾರದ ಹಿಂದೆ ಯಾರೆಂದರೆ ಯಾರಿಗೂ ಗೊತ್ತಿರದ ''ಸು ಫ್ರಮ್ ಸೋ'' ಚಿತ್ರ ಕೇವಲ ಎರಡು ದಿನದಲ್ಲಿ ಕರುನಾಡನ್ನು ಆವರಿಸಿಕೊಂಡಿದೆ. ಇಷ್ಟೇ ಅಲ್ಲ ದರ್ಶನ್ ಅಭಿನಯದ ''ಕಾಟೇರ'' ಸುದೀಪ್ ಅಭಿನಯದ ''ಮ್ಯಾಕ್ಸ್'' ಚಿತ್ರದ ದಾಖಲೆಯನ್ನು ಮುರಿದಿದೆ. ರಾಜ್ ಬಿ ಶೆಟ್ಟಿ ಮತ್ತು ತಂಡದ ಈ ಅಬ್ಬರದ ಮುಂದೆ ಉಪೇಂದ್ರ ನಿರ್ದೇಶನದ ''ಯುಐ'' ಚಿತ್ರದ ದಾಖಲೆ ಕೂಡ ಲೆಕ್ಕಕ್ಕಿಲ್ಲ.
ಹಾಗಂಥ ಮೊನ್ನೆ ಬಿಡುಗಡೆಯಾದ ''ಸು ಫ್ರಮ್ ಸೋ'' ಈ ಎಲ್ಲ ಚಿತ್ರಗಳ ಗಳಿಕೆಯನ್ನು ಹಿಂದಿಕ್ಕಿದೆ ಎಂದುಕೊಳ್ಳಬೇಡಿ. ಯಾಕಂದರೆ ಅದಕ್ಕೆ ಇನ್ನು ಸಮಯ ಇದೆಯಾದರು ಈ ಚಿತ್ರ ಸದ್ಯ ''ಬುಕ್ ಮೈ ಶೋ''ದಲ್ಲಿ ಪವಾಡ ಮಾಡುತ್ತಿದೆ. ಕರ್ನಾಟಕದಲ್ಲಿ ಈ ಚಿತ್ರದ ಕ್ರೇಜ್ ಹೇಗಿದೆ ಎನ್ನುವುದಕ್ಕೂ ಕೂಡ ''ಬುಕ್ ಮೈ ಶೋ''ದಲ್ಲಿನ ಅಂಕಿ ಅಂಶ ಕೈಗನ್ನಡಿಯಂತೆ ಇವೆ.
ಆ ಪ್ರಕಾರ ನೋಡುವುದಾದರೆ ''ಸು ಫ್ರಮ್ ಸೋ'' ಚಿತ್ರ ನೋಡಲು ಕನ್ನಡಿಗರು ಮುಗಿ ಬಿದ್ದಿದ್ದು ಒಂದೇ ದಿನ ಚಿತ್ರದ ಟಿಕೆಟ್‌ಗಳು ದಾಖಲೆ ಮಟ್ಟದಲ್ಲಿ ಬುಕ್ಕಿಂಗ್ ಆಗಿವೆ. ಎಲ್ಲಿ ನೋಡಿದರೂ ಟಿಕೆಟ್‌ಗಳ ಬರ ಎದುರಿಸುವಂತಾಗಿದೆ. ಚಿತ್ರದ ಟಿಕೆಟ್ ಸಿಕ್ಕವನೇ ಅದೃಷ್ಟಶಾಲಿ ಎನ್ನುವ ಮಾತು ಕೇಳಿ ಬರುತ್ತಿದೆ.
ಬುಕ್ ಮೈ ಶೋದಲ್ಲಿ ಅತೀ ಹೆಚ್ಚು ಟಿಕೆಟ್ ಬುಕ್ ಆದ ಚಿತ್ರಗಳ ಪಟ್ಟಿ
ಸು ಫ್ರಮ್ ಸೋ - 126.77K
ಯುಐ - 120.44K
ಕಾಟೇರಾ -118K
ಮ್ಯಾಕ್ಸ್ - 99.72K

ಕಳೆದ ಎರಡು ವರ್ಷದ ಹಿಂದೆ ಬಿಎಂಎಸ್ ಟ್ರೆಂಡ್ ಶುರುವಾಗಿತ್ತು. ಅಂದಿನಿಂದ ಸಿಕ್ಕ ಮತ್ತು ಸೃಷ್ಟಿಯಾದ ಈ ದಾಖಲೆಗಳನ್ನು ''ಸು ಫ್ರಮ್ ಸೋ'' ಮುರಿದಿದೆ. ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಬುಕ್ ಆದ ಹಿನ್ನೆಲೆ ಕನ್ನಡ ಚಿತ್ರರಂಗ ಸದ್ಯ ಸಂಭ್ರಮದ ಅಲೆಯಲ್ಲಿ ತೇಲುತ್ತಿದೆ.
ಇನ್ನು ''ಸು ಫ್ರಮ್ ಸೋ'' ಕ್ರೇಜ್ ಹೇಗಿದೆ ಅಂದರೆ ಬೆಂಗಳೂರಿನಲ್ಲಿ ಚಿತ್ರದ ಪ್ರದರ್ಶನಗಳ ಸಂಖ್ಯೆ ಹೆಚ್ಚಾಗಿದೆ. ವಿಶೇಷ ಅಂದರೆ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಚಿತ್ರದ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಕೇವಲ ಬೆಂಗಳೂರು ಮಾತ್ರವಲ್ಲ ಮೈಸೂರು.. ಹುಬ್ಬಳ್ಳಿ.. ಧಾರವಾಡ.. ಶಿವಮೊಗ್ಗ..ಮಂಗಳೂರು.. ಹೀಗೆ ರಾಜ್ಯದೆಲ್ಲೆಡೆ ಸದ್ಯ ರಾಜ್ ಬಿ ಶೆಟ್ಟಿ ಹುಡುಗರದ್ದೇ ಹವಾ.
ಹೀಗೆ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಅಲೆಯನ್ನು ಸೃಷ್ಟಿಸಿರುವ, ಮಲಗಿದ್ದ ಚಿತ್ರರಂಗಕ್ಕೆ ಬೂಸ್ಟರ್ ಡೋಸ್ ನೀಡಿರುವ ''ಸು ಫ್ರಮ್ ಸೋ'' ಇನ್ನು ಯಾವೆಲ್ಲಾ ದಾಖಲೆಗಳನ್ನು ಬರೆಯುತ್ತೆ, ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಸದ್ಯ ಕಾದು ನೋಡಬೇಕಿದೆ.


Click it and Unblock the Notifications











