Ghaati Box Office Day 1 ; ಅನುಷ್ಕಾ ಶೆಟ್ಟಿಗೆ ಭಾರೀ ಹಿನ್ನಡೆ, ಮೊದಲ ದಿನವೇ ''ಘಾಟಿ''ಯಲ್ಲಿ ಕುಸಿತ ?
ಅದೃಷ್ಟ ಅನ್ನೋದು ಅಷ್ಟು ಸುಲಭವಾಗಿ ಯಾರ ಸ್ವತ್ತು ಆಗಲ್ಲ. ರಾತ್ರೋರಾತ್ರಿ ಆರಕ್ಕೇರಿದವರು ಮಾರನೇ ದಿನವೇ ಮೂರಕ್ಕಿಳಿದು ಬಿಡುತ್ತಾರೆ. ಲಕ್ ಅನ್ನುವ ''ಕಿಕ್'' ಅಷ್ಟು ಸುಲಭಕ್ಕೆ ಯಾರಿಗೂ ಹತ್ತಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆಯೇ ಅನುಷ್ಕಾ ಶೆಟ್ಟಿ. ಹೌದು, ಅನುಷ್ಕಾ ಶೆಟ್ಟಿ ಪಕ್ಕದ ಆಂಧ್ರದಲ್ಲಿ ಮಿಂಚುತ್ತಿರುವ ಕನ್ನಡತಿ. ಎರಡು ದಶಕಗಳ ವೃತ್ತಿ ಬದುಕಿನಲ್ಲಿ ಇಲ್ಲಿಯವರೆಗೆ ಹಲವಾರು ಚಿತ್ರ ಮತ್ತು ವೈವಿಧ್ಯಮಯ..
ಪಾತ್ರವನ್ನು ಮಾಡಿರುವ ಅನುಷ್ಕಾ ಹಿಂದೊಮ್ಮೆ ಟಾಲಿವುಡ್‌ನ ಮಹಾರಾಣಿಯಾಗಿ ಮೆರೆದವರು. ನಿರ್ಮಾಪಕರ ಕಣ್ಣಿಗೆ ಚಿನ್ನದ ಗಣಿಯಂತೆ ಕಂಡವರು. ಆದರೆ ಈಗ ಕಾಲ ಬದಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅನುಷ್ಕಾಗೆ ನಸೀಬು ಕೈ ಕೊಟ್ಟಂತೆ ಇದೆ.

ಇದಕ್ಕೆ ಕೈಗನ್ನಡಿ ಎಂಬಂತೆ ಅನುಷ್ಕಾ ವೃತ್ತಿ ಬದುಕಿಗೆ ಮತ್ತೊಂದು ತಿರುವು ನೀಡುತ್ತೆ ಎಂದೇ ಅಂದುಕೊಳ್ಳಲಾಗಿದ್ದ ''ಘಾಟಿ'' ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗುವ ಎಲ್ಲ ಲಕ್ಷಣಗಳು ಸದ್ಯ ಕಂಡು ಬರುತ್ತಿವೆ.
ಹೌದು. ಚಿತ್ರಮಂದಿರದ ಅಂಗಳವನ್ನೇ ಪ್ರಯಾಸದಾಯಕವಾಗಿ ತಲುಪಿದ್ದ ''ಘಾಟಿ''ಯ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಎರಡು ವರ್ಷದ ನಂತರ ಬಿಡುಗಡೆಯಾಗುತ್ತಿರುವ ಅನುಷ್ಕಾ ಶೆಟ್ಟಿ ಅಭಿನಯದ ಚಿತ್ರ ಇದಾಗಿದ್ದರಿಂದ ಅಭಿಮಾನಿಗಳಲ್ಲೂ ಕೂಡ ಕುತೂಹಲ ಇತ್ತು.
ಆದರೆ. ನಿರೀಕ್ಷೆ ಹುಸಿಯಾಗಿದೆ. ಹೊಸ ನಾಯಕಿಯರ ಹಾವಳಿಯ ನಡುವೆ ಅನುಷ್ಕಾ ಶೆಟ್ಟಿ ಅವರ ಸ್ಟಾರ್ ಪವರ್ ಕೂಡ ಈ ಎರಡು ವರ್ಷಗಳಲ್ಲಿ ಕಳೆಗುಂದಿದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಮೊದಲ ದಿನ ''ಘಾಟಿ'' ಕೇವಲ ₹2 ಕೋಟಿಯನ್ನು ಗಳಿಸಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿಯನ್ನು ಮಾಡಿದೆ.
ಆಕ್ಯುಪೆನ್ಸಿ ವಿಚಾರಕ್ಕೆ ಬಂದರೆ ಅಲ್ಲಿಯೂ ಕೂಡ ಹೇಳಿಕೊಳ್ಳುವಂತಹ ಜನಜಂಗುಳಿ ಕಂಡು ಬಂದಿಲ್ಲ. ಹೈದರಾಬಾದ್‌ನಲ್ಲಿ ನಿನ್ನೆ ಕೇವಲ 30.50% ಮಾತ್ರ ಆಕ್ಯುಪೆನ್ಸಿ ಕಂಡು ಬಂದಿದೆ. ವಿಶಾಖಪಟ್ಟಣಂ ಮತ್ತು ಗುಂಟೂರಿನ ಪ್ರೇಕ್ಷಕರು ''ಘಾಟಿ'' ನೋಡಲು ತುಸು ಹೆಚ್ಚು ಆಸಕ್ತಿಯನ್ನು ತೋರಿಸಿದ್ದು ಈ ಎರಡು ಕಡೆ ಕ್ರಮವಾಗಿ 35.50 % ಮತ್ತು 41.75% ಆಕ್ಯುಪೆನ್ಸಿ ಕಂಡು ಬಂದಿದೆ.

ಇನ್ನು, ''ಘಾಟಿ''ಯ ಎದುರು ಹಲವು ಚಿತ್ರಗಳು ಬಿಡುಗಡೆಯಾಗಿವೆ. ಬಾಲಿವುಡ್‌ದಿಂದ ''ಬಾಘಿ'' ತೆರೆಗೆ ಬಂದಿದ್ದರೆ, ತಮಿಳಿನಲ್ಲಿ ''ಮದರಾಸಿ'' ಬಿಡುಗಡೆಯಾಗಿದೆ. ಕನ್ನಡದಲ್ಲಿ ''ಏಳುಮಲೆ'' ಹವಾ ಎದ್ದಿದೆ. ಇದೆಲ್ಲದರ ನಡುವೆ ಹಾಲಿವುಡ್‌ನ ''ಕಾಂಜುರಿಂಗ್ ಲಾಸ್ಟ್ ರೈಟ್ಸ್''ನ ಅಬ್ಬರ ಬೇರೆ. ಇದೆಲ್ಲದರಿಂದ ''ಘಾಟಿ'' ಚಿತ್ರಕ್ಕೆ ಹಿನ್ನೆಡೆಯಾಗಿರುವ ಸಾಧ್ಯತೆ ಇದೆ.
ಅಂದ್ಹಾಗೇ 2023ರಲ್ಲಿ ಬಿಡುಗಡೆಯಾಗಿದ್ದ ಅನುಷ್ಕಾ ಶೆಟ್ಟಿ ಅಭಿನಯದ ''ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ'' ಚಿತ್ರ ''ಸ್ಯಾಕ್ನಿಲ್'' ವರದಿಯ ಪ್ರಕಾರ ಮೊದಲ ದಿನ ₹2.4 ಕೋಟಿಯನ್ನು ಗಳಿಸಿತ್ತು. ಆದರೆ ಆ ನಂತರ ಶನಿವಾರ ಮತ್ತು ಭಾನುವಾರದ ಗಳಿಕೆಯಲ್ಲಿ ಏರಿಕೆ ಕಂಡು ಬಂದಿತ್ತು. ಇದೀಗ ''ಘಾಟಿ'' ಮೊದಲ ದಿನ ''ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ'' ಚಿತ್ರಕ್ಕಿಂತಲೂ ಹಿಂದೆ ಇದ್ದು ಇಂದು ಮತ್ತು ನಾಳೆ ಚಿತ್ರದ ಗಳಿಕೆಯಲ್ಲಿ ಸುಧಾರಣೆ ಕಂಡು ಬರುತ್ತಾ ಎನ್ನುವುದನ್ನು ನೋಡಬೇಕಿದೆ. ಈ ಎರಡು ದಿನದ ಗಳಿಕೆಯ ಮೇಲೆ ಅನುಷ್ಕಾ ಶೆಟ್ಟಿ ಅಭಿನಯದ ''ಘಾಟಿ'' ಚಿತ್ರದ ಭವಿಷ್ಯ ಕೂಡ ನಿಂತಿದೆ. ''ಘಾಟಿ'' ನಿರ್ಮಾಪಕರ ಕೈ ಹಿಡಿಯುತ್ತಾ ? ಅಥವಾ ಕೈ ಕಚ್ಚುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ


Click it and Unblock the Notifications











