ಹೊಸ ಹುಡುಗನ ಅಬ್ಬರಕ್ಕೆ ಬೆಚ್ಚಿ ಬಿದ್ದ ಸೂಪರ್ ಸ್ಟಾರ್ಸ್, ಒಂದೇ ದಿನ ₹20 ಕೋಟಿ ಲೂಟಿ
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಜಗತ್ತಿನ ಹಲವು ಭಾಷೆಯ ಚಿತ್ರಗಳನ್ನು ಎಲ್ಲಿ ಬೇಕೋ ಅಲ್ಲಿ .. ಯಾವಾಗ ಅಂದ್ರೆ ಅವಾಗ ನೋಡುವ ಸೌಲಭ್ಯ ಇದೆ. ಚಿತ್ರಮಂದಿರಕ್ಕೆ ಈ ಓಟಿಟಿ ತೀವೃ ಸ್ಪರ್ಧೆಯನ್ನೊಡ್ಡುತ್ತಿದೆ. ಇನ್ನು ಮೊದಲಾದರೆ ಕೇವಲ ಒಂದು ಪೋಸ್ಟರ್ ಸಾಕಿತ್ತು. ಚಿತ್ರಮಂದಿರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು. ಆದರೆ ಈಗ..
ಎಷ್ಟೇ ಪ್ರಚಾರ ಮಾಡಿದರು ಕೂಡ ಚಿತ್ರಮಂದಿರಕ್ಕೆ ಚಿತ್ರವೊಂದು ಬಂದಿದ್ದು ಹೋಗಿದ್ದು ಕೂಡ ಈಗೀಗ ಹಲವರಿಗೆ ಗೊತ್ತೇ ಆಗುವುದಿಲ್ಲ. ಹೊಸಬರು ಎಷ್ಟೇ ಭಿನ್ನವಾದ ಆಲೋಚನೆ ಮಾಡಿದರು ಕೂಡ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದು ತರಲು ಕೂಡ ಸಾಧ್ಯವಾಗುತ್ತಿಲ್ಲ.

ಇದು ಕೇವಲ ಹೊಸಬರ ಕಥೆ ಮಾತ್ರ ಅಲ್ಲ. ವರ್ಷಾನುವರ್ಷಗಳಿಂದ ನಾನೇ ಸೂಪರ್ ಸ್ಟಾರ್ ಎಂದುಕೊಂಡು ಓಡಾಡುತ್ತಿರುವ ಹಳೆಯ ಹುಲಿಗಳ ಘರ್ಜನೆಗೆ ಕೂಡ ಪ್ರೇಕ್ಷಕರು ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಬೇರೆ ಬೇರೆ ಭಾಷೆಯಲ್ಲಿ ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರಗಳು ಕೂಡ ಇತ್ತೀಚೆನ ದಿನಗಳಲ್ಲಿ ಮಕಾಡೆ ಮಲಗಿವೆ.
ಅದರಲ್ಲಿಯೂ ಬಾಲಿವುಡ್‌ನಲ್ಲಂತೂ ಸೂಪರ್ ಸ್ಟಾರ್‌ಗಳ ಚಿತ್ರಗಳನ್ನೇ ಪ್ರೇಕ್ಷಕರು ರಿಜೆಕ್ಟ್ ಮಾಡುತ್ತಿದ್ದಾರೆ. ಇದಕ್ಕೆ ಸಿಕಂದರ್ .. ಕೇಸರಿ 2.. ಸೇರಿ ಈ ವರ್ಷ ತೆರೆಗೆ ಬಂದ ಹಲವು ಚಿತ್ರಗಳು ಉದಾಹರಣೆಯಂತೆ ಕಣ್ಮುಂದೆ ಇವೆ. ಹೀಗಿರುವಾಗ ಹೊಸ ಹುಡುಗನೊಬ್ಬ ಬಾಲಿವುಡ್‌ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಮೊದಲ ದಿನದಂದೇ ತನ್ನ ಮೊದಲ ಚಿತ್ರದ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದಾನೆ. ಆ ಹುಡುಗನ ಹೆಸರೇ ಅಹಾನ್ ಪಾಂಡೆ.
ಹೌದು, ಅಹಾನ್ ಪಾಂಡೆ.. ಬಾಲಿವುಡ್‌ನ ನಟ ಚಂಕಿ ಪಾಂಡೆಯ ಸಹೋದರನ ಮಗ. ಎಲ್ಲ ಸ್ಟಾರ್ ಮಕ್ಕಳಂತೆ ಅಹಾನ್ ಕೂಡ ಚಿತ್ರರಂಗಕ್ಕೆ ಬಂದಿದ್ದಾರೆ. ನಿನ್ನೆಯಷ್ಟೇ ಅಹಾನ್ ಮತ್ತು ಅನೀತಾ ಪಡ್ಡಾ ಅಭಿನಯದ 'ಸೈಯಾರ' ಬಿಡುಗಡೆಯಾಗಿದೆ. ವಿಶೇಷ ಅಂದರೆ ಈ ಚಿತ್ರಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಪ್ರೇಕ್ಷಕರಿಂದ ಸಿಗುತ್ತಿದೆ. ಇದು ಈಗ ಹಲವರ ಅಚ್ಚರಿಗೆ ಕಾರಣವಾಗಿದೆ.
ಯಾಕೆಂದರೆ.. ಅಹಾನ್ ಮತ್ತು ಅನೀತಾ ಇಬ್ಬರು ಹೊಸಬರು. ಆದರೂ ಕೂಡ ಚಿತ್ರಮಂದಿರಗಳಲ್ಲಿ ನೂಕುನುಗ್ಗಲಿನ ವಾತಾವರಣ ಇದೆ. ಸಾಮಾನ್ಯವಾಗಿ ಸ್ಟಾರ್‌ಗಳ ಚಿತ್ರಕ್ಕೆ ಈ ರೀತಿಯ ಹಬ್ಬದ ವಾತಾವರಣ ಇರುತ್ತೆ. ಆದರೆ.. ಹೊಸಬರ ಚಿತ್ರಕ್ಕೆ ಸಿಕ್ತಿರುವ ಈ ಪ್ರತಿಕ್ರಿಯೆ ಅಖಂಡ ಬಾಲಿವುಡ್‌ನ ಸದ್ಯ ದಂಗಾಗಿಸಿದೆ.

ತೆರೆಗೆ ಬಂದ ಬಹುತೇಕ ಕಡೆ ಹೌಸ್‌ಫುಲ್ ಪ್ರದರ್ಶನವನ್ನು ಕಾಣ್ತಿರುವ ಈ ಚಿತ್ರ ನಿನ್ನೆ { ಜುಲೈ 18 } ಒಂದೇ ದಿನದಲ್ಲಿ₹ 20 ಕೋಟಿಯನ್ನು ಕೊಳ್ಳೆ ಹೊಡೆದಿದೆ ಎಂದು ಸ್ಯಾಕ್ನಿಲ್ ವೆಬ್ ಸೈಟ್ ವರದಿಯನ್ನು ಮಾಡಿದೆ. ನೆನಪಿರಲಿ..ಅಕ್ಷಯ್ ಕುಮಾರ್ ಮತ್ತು ಆಮಿರ್ ಖಾನ್ ಅವರ ಚಿತ್ರಗಳೇ ಕೂಡ ಇತ್ತೀಚಿನ ದಿನಗಳಲ್ಲಿ ಮೊದಲ ದಿನ ಇಷ್ಟೊಂದು ಹಣವನ್ನು ಗಳಿಸಿಲ್ಲ.
ಸ್ಯಾಕ್ನಿಲ್‌ನಲ್ಲಿಯೇ ಉಲ್ಲೇಖವಾದಂತೆ ಸಿತಾರೆ ಜಮೀನ್ ಪರ್ ಮೊದಲ ದಿನ ಕೇವಲ 10.7 ಕೋಟಿಯನ್ನಷ್ಟೇ ಗಳಿಸಿತ್ತು. ಇನ್ನು ಕೇಸರಿ 2 ಚಿತ್ರದ ಮೊದಲ ದಿನದ ಗಳಿಕೆ ಕೇವಲ 7 ಕೋಟಿ ಮಾತ್ರ. ಅಜಯ್ ದೇವಗನ್ ಅಭಿನಯದ ರೇಡ್ 2 ಕೂಡ ಮೊದಲ ದಿನ 20 ಕೋಟಿ ಹಣವನ್ನು ಗಳಿಸಿರಲಿಲ್ಲ. ಬದಲಿಗೆ ₹ 19.25 ಕೋಟಿ ಹಣ ಗಳಿಸಿತ್ತು. ಈ ಎಲ್ಲಾ ಗಳಿಕೆಯನ್ನು ಅಹಾನ್ ತನ್ನ ಮೊದಲ ಚಿತ್ರದಲ್ಲಿಯೇ ಹಿಂದಿಕ್ಕಿದ್ದಾರೆ. ಹೀಗಾಗಿ ಹೊಸ ಸೂಪರ್ ಸ್ಟಾರ್‌ನ ಉದಯವಾಗಿದೆ ಎಂದು ಸದ್ಯ ಬಾಲಿವುಡ್ ಮಾತನಾಡುತ್ತಿದೆ. ಅಹಾನ್ ಅಬ್ಬರಕ್ಕೆ ಬಾಲಿವುಡ್‌ನ ಸೂಪರ್ ಸ್ಟಾರ್‌ಗಳ ಬಣ ಬೆಚ್ಚಿ ಬಿದ್ದಿದೆ. ನೆಪೋ ಕಿಡ್‌ಗಳಲ್ಲಿ ಕೂಡ ತಲ್ಲಣ ಸೃಷ್ಟಿಯಾಗಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











