Dhurandhar Box Office Day 18 ; ಧುರಂಧರ್ ಧಮಾಕ, ಸಾವಿರ ಕೋಟಿ ಸರ್ದಾರ ಆಗ್ತಾರಾ ರಣ್ವೀರ್ ಸಿಂಗ್ ?
''ಸೂಪರ್ ಸ್ಟಾರ್'' ಎಂಬ ಭ್ರಮೆಯಲ್ಲಿ ಮೆರೆದಾಡುತ್ತಿರುವವರನ್ನು ಪ್ರೇಕ್ಷಕರು ಮೂಲೆಗುಂಪು ಮಾಡುತ್ತಿರುವ ಕಾಲ ಇದು. ಈ ಕಾಲದಲ್ಲಿ.. ಚಿತ್ರಕ್ಕೆ ಯಾರು ಎಷ್ಟೇ ಬೆವರು ಸುರಿಸಿರಲಿ.. ಆ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಚಿತ್ರದಲ್ಲಿನ ತಾರೆಯರು ತಮ್ಮ ರಕ್ತವನ್ನೇ ಹರಿಸಿರಲಿ.. ಪ್ರೇಕ್ಷಕರು ಅದ್ಯಾವುದನ್ನು ನೋಡುವುದಿಲ್ಲ. ಚಿತ್ರದ ಕಥೆ ಅವರಿಗೆ ಆಪ್ತವಾದರೆ ಸಾಕು. ಆ ಚಿತ್ರವನ್ನಷ್ಟೇ ಅವರು ಹೊತ್ತು ಮೆರೆಸುತ್ತಾರೆ. ಗೆಲ್ಲಿಸುತ್ತಾರೆ. ಉದಾಹರಣೆಗೆ ''ಧುರಂಧರ್''.
ಹೌದು, ''ಧುರಂಧರ್'' .. ಸತತ ಸೋಲುಗಳಿಂದ ಹೈರಾಣಾಗಿದ್ದ ಬಾಲಿವುಡ್‌ಗೆ ವರ್ಷಾಂತ್ಯದಲ್ಲಿ ಆಸರೆಯಾದ ಸಿನಿಮಾ. ತೆರೆಗೆ ಬಂದು ಕೇವಲ 17 ದಿನದಲ್ಲಿ ಹತ್ತು ಹಲವು ದಾಖಲೆಗಳನ್ನು ಪುಡಿ ಪುಡಿ ಮಾಡಿದ ಚಿತ್ರ ಇದು. ಈಗಾಗಲೇ ದಂಗಲ್ ದಾಖಲೆ ಧೂಳಿಪಟ ಮಾಡಿರುವ ''ಧುರಂಧರ್'' ಪ್ರಭಾಸ್ ''ಸಲಾರ್'' ಸಾಮ್ರಾಜ್ಯವನ್ನು ಕೂಡ ನೆಲಕ್ಕುರುಳಿದೆ.

ಇಷ್ಟೇ ಅಲ್ಲ ಶಂಕರ್ ನಿರ್ದೇಶನದ ರಜಿನಿಕಾಂತ್ ಅಭಿನಯದ ''2.0'' ಚಿತ್ರದ (₹407.05 ಕೋಟಿ) ಗಳಿಕೆಯನ್ನು ಕೂಡ ಹಿಂದಿಕ್ಕಿದೆ. ರಾಜಮೌಳಿಯ ದೃಶ್ಯಕಾವ್ಯ ''ಬಾಹುಬಲಿ ದಿ ಬಿಗಿನಿಂಗ್'' ಚಿತ್ರದ ದಾಖಲೆ ( ₹421 ಕೋಟಿ ) ಕೂಡ ಮುರಿದಿದೆ.
''ಗದರ್ 2'' ಚಿತ್ರವನ್ನು ಕೂಡ ಬಾಕ್ಸಾಫೀಸ್ ರೇಸ್‌ನಲ್ಲಿ ಹಿಂದಿಕ್ಕಿರುವ ''ಧುರಂಧರ್'' ರಣಬೀರ್ ಕಪೂರ್ ಅಭಿನಯದ ''ಅನಿಮಲ್'' ಚಿತ್ರದ ಗಳಿಕೆಯನ್ನು ಹಿಂದಿಕ್ಕಿದೆ. ''ಪಠಾಣ್'' ಚಿತ್ರದ ದಾಖಲೆ ಕೂಡ ''ಧುರಂಧರ್'' ಅಬ್ಬರದ ಎದುರು ಧೂಳಿಪಟವಾಗಿದೆ. ಈ ಮೂಲಕ ಭಾರತ ಚಿತ್ರರಂಗದ ಇತಿಹಾಸದಲ್ಲಿ ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ 10ನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ''ಧುರಂಧರ್'' ಪಾತ್ರವಾಗಿದೆ.
ಹೀಗೆ ಬೆಳ್ಳಿತೆರೆಯಲ್ಲಿ ಧಗಧಗಿಸುತ್ತಿರುವ ''ಧುರಂಧರ್'' ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ₹ 574.03 ಕೋಟಿಯನ್ನು ಈ ಚಿತ್ರ ಈ 17 ದಿನದಲ್ಲಿ ದೋಚಿದೆ. ಇನ್ನೂ ಸಾಮಾನ್ಯವಾಗಿ ಸ್ಟಾರ್ ಯಾರೇ ಇರಲಿ.. ಆ ಚಿತ್ರ ಹೇಗೆ ಇರಲಿ.. ಸೋಮವಾರ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬರುತ್ತೆ. ''ಧುರಂಧರ್'' ವಿಚಾರದಲ್ಲಿ ಕೂಡ ಇದೇ ಆಗಿದೆ.
ಆದರೆ ಈ ಕುಸಿತ ಮೊದಲ ವಾರ ಅಲ್ಲ ಎರಡನೇ ವಾರದಲ್ಲಿ ಅಲ್ಲ ಬದಲಿಗೆ ಮೂರನೇ ವಾರದಲ್ಲಿ ಕಂಡು ಬಂದಿದೆ. ಹಾಗಂಥ ಚಿತ್ರ ತೀರಾ ಕಳಪೆ ಪ್ರದರ್ಶನವನ್ನೇನು ಸೋಮವಾರ (ಡಿಸೆಂಬರ್ 22 ) ಕಂಡಿಲ್ಲ. ಬದಲಿಗೆ ಕಳೆದ ಭಾನುವಾರ (ಡಿಸೆಂಬರ್ 21 ) ₹ 38.5 ಕೋಟಿಯನ್ನು ಗಳಿಸಿದ್ದ ಚಿತ್ರ ಸೋಮವಾರ ₹ 16.5 ಕೋಟಿಯನ್ನು ಗಳಿಸಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಇಂದು ಕೂಡ ಚಿತ್ರದ ಗಳಿಕೆ ಎರಡಂಕಿಯನ್ನು ದಾಟುವ ಸಾಧ್ಯತೆ ಇದೆ. ಇನ್ನು 25ರಿಂದ ಕ್ರಿಸ್ಮಸ್ ರಜೆ ಇದೆ. ಆ ನಂತರ ವಾರಾಂತ್ಯ. ಹೀಗಾಗಿ ಡಿಸೆಂಬರ್ 25, 26, 27, 28 ರಂದು ''ಧುರಂಧರ್'' ಗಳಿಕೆಯಲ್ಲಿ ಮತ್ತೆ ಏರಿಕೆಯಾಗುತ್ತೆ ಎನ್ನುವ ವಿಶ್ವಾಸ ಬಾಲಿವುಡ್ ಪಂಡಿತರಿಗಿದೆ. ಸದ್ಯ ''ಧುರಂಧರ್'' ಕಣ್ಣೇದುರು ಸ್ತ್ರೀ 2 (₹597.99 ಕೋಟಿ ) ದಾಖಲೆ ಇದೆ. ಆ ನಂತರ ''ಛಾವಾ'' ದಾಖಲೆ ಮುರಿಯುವ ಸವಾಲು ಇದೆ. ಇನ್ನು ಭಾರತದಲ್ಲಿ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಚಿತ್ರದ ಲಿಸ್ಟ್‌ನಲ್ಲಿ ಮೊದಲ ಸ್ಥಾನಕ್ಕೇರಲು ''ಕಾಂತಾರ-ಚಾಪ್ಟರ್ 1'' ಚಿತ್ರವನ್ನು ಕೂಡ ''ಧುರಂಧರ್'' ಹಿಂದಿಕ್ಕಬೇಕಿದೆ.
ಅಂದ್ಹಾಗೇ ರಣ್ವೀರ್ ಸಿಂಗ್ ಚಿತ್ರರಂಗಕ್ಕೆ ಬಂದು 15 ವರ್ಷಗಳಾಗಿವೆ. ಈ 15 ವರ್ಷದಲ್ಲಿ ಹಲವು ಚಿತ್ರಗಳನ್ನು ರಣ್ವೀರ್ ಸಿಂಗ್ ಮಾಡಿದ್ದರೂ ಕೂಡ ಇಲ್ಲಿಯವರೆಗೆ ಇವರ ಯಾವ ಚಿತ್ರವೂ 500 ಕೋಟಿಯ ಗಡಿಯನ್ನು ದಾಟಿರಲಿಲ್ಲ. ದಾಟುವುದು ಬಿಡಿ ಹತ್ತಿರವೂ ಕೂಡ ಬಂದಿರಲಿಲ್ಲ. ₹ 302.15 ಕೋಟಿಯನ್ನು ಗಳಿಸಿದ್ದ ''ಪದ್ಮಾವತ್'' ಇವರ ಇಲ್ಲಿಯವರೆಗಿನ ನಂಬರ್ ಒನ್ ಸಿನಿಮಾ ಆಗಿತ್ತು. ಆದರೆ ಈಗ ಆ ಸ್ಥಾನ ''ಧುರಂಧರ್'' ಪಾಲಾಗಿದೆ. ಈ ಮೂಲಕ ಹೊಸದೊಂದು ದಾಖಲೆಯನ್ನು ರಣವೀರ್ ಸಿಂಗ್ ಬರೆದಿದ್ದಾರೆ.
ಇನ್ನುಳಿದಂತೆ ಬಾಲಿವುಡ್ ಕೈಯಿಂದ ಇಲ್ಲಿಯವರೆಗೆ ಕೇವಲ ಭಾರತದಲ್ಲಿಯೇ 1000 ಕೋಟಿಯನ್ನು ಗಳಿಸಲು ಸಾಧ್ಯವಾಗಿಲ್ಲ. ನಿಜಾ ''ದಂಗಲ್'' ಗಳಿಕೆ ಸಾವಿರದ ಮೇಲಿದೆ. ಆದರೆ.. ಈ ಗಳಿಕೆಯಲ್ಲಿ ಬಹುಪಾಲು ಚೀನಾ ಮಾರುಕಟ್ಟೆಯಿಂದ ಬಂದಿದೆ. ಹೀಗಾಗಿ ಭಾರತದಲ್ಲಿ 1000 ಕೋಟಿ ಗಳಿಸಿದ ಭಾರತದ ಚಿತ್ರಗಳ ಸಾಲಿನಲ್ಲಿ ''ಪುಷ್ಪ 2'' ಮೊದಲ ಸ್ಥಾನದಲ್ಲಿದ್ದರೆ, ''ಬಾಹುಬಲಿ 2'' ಎರಡನೇ ಸ್ಥಾನದಲ್ಲಿದೆ. ಈ ಎರಡು ಚಿತ್ರಗಳಿಗೆ ''ಧುರಂಧರ್'' ಸೆಡ್ಡು ಹೊಡೆಯುತ್ತಾ..? ಈ ಮೂಲಕ ಭಾರತದಲ್ಲಿ 1000 ಕೋಟಿ ಗಳಿಸಿದ ಮೊದಲ ಬಾಲಿವುಡ್ ಚಿತ್ರ ಎನ್ನುವ ಹೆಗ್ಗಳಿಕೆಗೆ ''ಧುರಂಧರ್'' ಪಾತ್ರವಾಗುತ್ತಾ..? ರಣ್ವೀರ್ ಸಿಂಗ್ ಬಾಲಿವುಡ್‌ನ ಮೊದಲ ಸಾವಿರ ಕೋಟಿಯ ಸರ್ದಾರನಾಗ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











