Hit- 3 Day 1 Boxoffice; ನಾನಿ 'ಹಿಟ್- 3' ಮೊದಲ ದಿನದ ಗಳಿಕೆ ಘೋಷಣೆ
ತೆಲುಗು ಆಕ್ಷನ್ ಥ್ರಿಲ್ಲರ್ 'ಹಿಟ್- 3' ಸಿನಿಮಾ ತೆರೆಕಂಡು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ನಾನಿ ನಿರ್ಮಿಸಿ ನಟಿಸಿರುವ ಸಿನಿಮಾ ಇದು. ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಮಿಂಚಿದ್ದಾರೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಬಿಡುಗಡೆಯಾಗಿದೆ.
ಐಪಿಎಲ್ ಆರ್ಭಟದ ನಡುವೆಯೂ ಲಾಂಗ್ ವೀಕೆಂಡ್ ಟಾರ್ಗೆಟ್ ಮಾಡಿ 'ಹಿಟ್- 3' ಸಿನಿಮಾ ಬಿಡುಗಡೆ ಮಾಡಲಾಗಿದೆ. ಕಾರ್ಮಿಕರ ದಿನದ ರಜೆ ಚಿತ್ರದ ಗಳಿಕೆಗೆ ಪ್ಲಸ್ ಆಗಿದೆ. ಶೈಲೇಶ್ ಕೋಲನು ನಿರ್ದೇಶನದ ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ವೈಲೆನ್ಸ್ ಅತಿಯಾಯಿತು ಎನ್ನುವ ಆರೋಪದ ನಡುವೆಯೂ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ತಮಿಳಿನ 'ರೆಟ್ರೋ' ಚಿತ್ರ ಕೂಡ ಬಾಕ್ಸಾಫೀಸ್‌ನಲ್ಲಿ ಪೈಪೋಟಿ ಕೊಟ್ಟಿದೆ.

'ದಸರಾ', 'ಹಾಯ್ ನಾನ್ನ', 'ಶನಿವಾರಂ ಸರಿಪೋದ' ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಾನಿ ನಟಿಸಿ ಗೆದ್ದಿದ್ದಾರೆ. ಅದೇ ಸಾಲಿಗೆ 'ಹಿಟ್-3' ಸಿನಿಮಾ ಸೇರಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಸರಣಿಯ ಹಿಂದಿ ಎರಡು ಸಿನಿಮಾಗಳು ಸಕ್ಸಸ್ ಕಂಡಿತ್ತು. ನಾನಿ ಚಿತ್ರಗಳಿಗೆ ನಿರ್ಮಾಪಕರಾಗಿ ಕೈ ಜೋಡಿಸಿದ್ದರು. 3ನೇ ಚಿತ್ರದಲ್ಲಿ ತಾವೇ ಹೀರೊ ಆಗಿಯೂ ನಟಿಸಿ ಗೆದ್ದಿದ್ಧಾರೆ.
ರೊಮ್ಯಾಂಟಿಕ್ ಕ್ಲಾಸ್ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದವರು ನಾನಿ. ಆದರೆ ಇತ್ತೀಚೆಗೆ ನಿಧಾನವಾಗಿ ಮಾಸ್ ಇಮೇಜ್ ಬೆಳೆಸಿಕೊಳ್ಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಜಮಾನದಲ್ಲಿ ಇನ್ನು ಕ್ಲಾಸ್ ಹೀರೊ ಆಗಿ ಉಳಿದರೆ ಪ್ರಯೋಜನವಿಲ್ಲ ಎಂದು ಭಾವಿಸಿದಂತಿದೆ. 'ಹಿಟ್-3' ಚಿತ್ರದಲ್ಲಿ ಕೊಂಚ ವೈಲೆನ್ಸ್ ಜಾಸ್ತಿಯಿದೆ. ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಸಿಕ್ಕಿದೆ. ಮಕ್ಕಳನ್ನು ಸಿನಿಮಾ ನೋಡಲು ಕರ್ಕೊಂಡ್ ಬರಬೇಡಿ ಎಂದು ಮನವಿ ಮಾಡಿದ್ದಾರೆ.
ಸೆನ್ಸಾರ್ ಮಂಡಳಿ ಸಿನಿಮಾ ನೋಡಿ ಶಾಕ್ ಆಗಿತ್ತು. ಕೆಲ ಕ್ರೌರ್ಯದ ಸನ್ನಿವೇಶಗಳನ್ನು ತೆಗೆದರೆ 'ಯು/ಎ' ಸರ್ಟಿಫಿಕೇಟ್ ಕೊಡುವುದಾಗಿ ಹೇಳಿದರೂ ಚಿತ್ರತಂಡ ಒಪ್ಪದೇ 'ಎ' ಸರ್ಟಿಫಿಕೇಟ್ ಪಡೆದುಕೊಂಡಿದೆ. 'ಹಿಟ್' ಸರಣಿಯ ಹಿಂದಿನ ಎರಡು ಸಿನಿಮಾಗಳು ಇದಕ್ಕಿಂತ ಚೆನ್ನಾಗಿತ್ತು ಎಂದು ಹೇಳುವವರು ಇದ್ದಾರೆ. ಆದರೆ ನಾನಿ ಅಭಿಮಾನಿಗಳಿಗೆ ಸಿನಿಮಾ ಇಷ್ಟವಾಗಿದೆ.
ಸರಣಿ ಕೊಲೆಗಳನ್ನು ಮಾಡುವ ಒಂದು ಸೈಕೋ ಗ್ಯಾಂಗ್. ಅದರ ಹಿಂದೆ ಬೀಳುವ ಹೋಮಿಸೈಡ್ ಇಂಟರ್‌ವೆನ್ಷನ್ ಟೀಂ(HIT) ತಂಡದ ಸದಸ್ಯ ಅರ್ಜುನ್ ಸರ್ಕಾರ್ IPS (ನಾನಿ). ಕೊನೆಗೆ ಸೈಕೋಗಳನ್ನು ಅವರಂತೆಯೇ ವ್ಯಾಘ್ರನಾಗಿ ಸರ್ಕಾರ್ ಬಹಳ ಕ್ರೂರವಾಗಿ ನಾಶಮಾಡುವ ಕಥೆ ಚಿತ್ರದಲ್ಲಿದೆ. ವಿದೇಶಗಳಲ್ಲಿ ಕೂಡ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಮೊದಲ ದಿನವೇ ಸಿನಿಮಾ 43 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿದೆ.
ಇದು ನಾನಿ ಸಿನಿ ಕರಿಯರ್‌ನಲ್ಲೇ ಮೊದಲ ದಿನ ಅವರ ಸಿನಿಮಾ ಗಳಿಸಿದ ಅತಿಹೆಚ್ಚು ಮೊತ್ತವಾಗಿದೆ. ಇನ್ನು ತಮಿಳಿನ 'ರೆಟ್ರೋ' ಹಾಗೂ ಬಾಲಿವುಡ್‌ನ 'ರೈಡ್-2' ಸಿನಿಮಾ ಗಳಿಕೆಯನ್ನು ಕೂಡ 'ಹಿಟ್- 3' ಸಿನಿಮಾ ಹಿಂದಿಕ್ಕಿದೆ. ಸನು ಜಾನ್ ವರ್ಗೀಸ್ ಛಾಯಾಗ್ರಹಣ, ಮಿಕ್ಕಿ ಜೆ ಮೇಯರ್ ಸಂಗೀತ ಚಿತ್ರಕ್ಕಿದೆ. ಸೂರ್ಯ ಶ್ರೀನಿವಾಸ್, ರಾವ್ ರಮೇಶ್, ಸಮುದ್ರ ಖನಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಹೈದರಾಬಾದ್, ವಿಶಾಖಪಟ್ಟಣಂ, ಜಮ್ಮು ಮತ್ತು ಕಾಶ್ಮೀರದಲ್ಲಿ 'ಹಿಟ್- 3' ಸಿನಿಮಾ ಚಿತ್ರೀಕರಣ ನಡೆದಿತ್ತು. ಅಂದಹಾಗೆ ಈ ಸರಣಿಯನ್ನು ಮುಂದುವರೆಸಲಾಗುತ್ತಿದೆ. 'ಹಿಟ್- 4' ಚಿತ್ರದಲ್ಲಿ ತಮಿಳು ನಟ ಕಾರ್ತಿ ನಟಿಸಲಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ಎಸ್‌ಪಿ ವೀರಪ್ಪನ್ ಅವತಾದಲ್ಲಿ 'ಕಾರ್ತಿ' ಬಂದು ಹೋಗುತ್ತಾರೆ. ಹಾಗಾಗಿ ಸಹಜವಾಗಿಯೇ ಆ ಸಿನಿಮಾ ಕೂಡ ಕುತೂಹಲ ಮೂಡುವಂತೆ ಮಾಡಿದೆ.


Click it and Unblock the Notifications











