Mahavatar Narsimha Day 1 Box Office; ಬಾಕ್ಸಾಫೀಸ್ ಕೊಳ್ಳೆ ಹೊಡೆದ ಹೊಂಬಾಳೆ ಫಿಲ್ಮ್ಸ್ 'ನರಸಿಂಹ'
ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳ ಆರ್ಭಟ ಜೋರಾಗಿದೆ. 'ಸು ಫ್ರಂ ಸೋ' ಮಾತ್ರವಲ್ಲ 'ಮಹಾವತಾರ್ ನರಸಿಂಹ' ಸಿನಿಮಾ ಕೂಡ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಸ್ಟಾರ್ ನಟ, ನಟಿಯರು ಇಲ್ಲದ ಆನಿಮೇಷನ್ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಎಲ್ಲೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಬಾಕ್ಸಾಫೀಸ್ ಶೇಕ್ ಮಾಡ್ತಿದೆ.
ಮೊಬೈಲ್ ಇದೆ, ಓಟಿಟಿ ಇದೆ. ಈಗ ಯಾರು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುತ್ತಾರೆ ಎನ್ನುವ ಆರೋಪವನ್ನು ಈ ಸಿನಿಮಾಗಳು ಸುಳ್ಳಾಗಿಸಿವೆ. ಒಳ್ಳೆ ಸಿನಿಮಾ ಮಾಡಿದ್ರೆ ಜನ ಚಿತ್ರಮಂದಿರಗಳಿಗೆ ಬಂದೇ ಬರ್ತಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಹೊಂಬಾಳೆ ಫಿಲ್ಮ್ಸ್ ಅರ್ಪಿಸಿರುವ ಆನಿಮೇಷನ್ ಸಿನಿಮಾ ತ್ರಿಡಿಯಲ್ಲಿ ಕಣ್ಣಿಗೆ ಹಬ್ಬ ಎನ್ನುವಂತಿದೆ. ಹಿರಣ್ಯ ಕಶ್ಯಪು ಆರ್ಭಟ, ಅಪ್ಪನ ಎದುರು ನಿಲ್ಲುವ ಪ್ರಹ್ಲಾದ. ನರಸಿಂಹ ಅವತಾರ ತಾಳಿ ಹಿರಣ್ಯ ಕಶ್ಯಪು ಸಂಹಾರ ಮಾಡುವ ವಿಷ್ಣು ಕಥೆ ಈ ಚಿತ್ರದಲ್ಲಿದೆ.

ಕ್ಲೀಮ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣದ 'ಮಹಾವತಾರ್ ನರಸಿಂಹ' ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬೆಂಬಲವಾಗಿ ನಿಂತಿದೆ. ಅಶ್ವಿನ್ ಕುಮಾರ್ ಎಂಬುವವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಸಿ ತಮ್ಮ ಪೌರಾಣಿಕ ಕಥೆಯನ್ನು ರೋಚಕವಾಗಿ ತೆರೆಗೆ ತಂದಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಿಗೆ ಸಿನಿಮಾ ಡಬ್ ಆಗಿ ರಿಲೀಸ್ ಆಗಿದೆ.
ಫಸ್ಟ್ ಡೇ ಕಲೆಕ್ಷನ್
ಮೊದಲ ದಿನ 'ಮಹಾವತಾರ್ ನರಸಿಂಹ' ಸಿನಿಮಾ 2.50 ಕೋಟಿ ರೂ. ಕಲೆಕ್ಷನ್ ಮಾಡಿ ಹುಬ್ಬೇರಿಸಿದೆ. ಸ್ಟಾರ್ ನಟರಿಲ್ಲದ, ದೊಡ್ಡದಾಗಿ ಪ್ರಚಾರ ಮಾಡದ ಆನಿಮೇಷನ್ ಚಿತ್ರವೊಂದಕ್ಕೆ ಭಾರತದಲ್ಲಿ ಈಮಟ್ಟಿಗೆ ಪ್ರತಿಕ್ರಿಯೆ ಸಿಕ್ಕಿರುವುದು ಅಚ್ಚರಿ ಮೂಡಿಸಿದೆ. ಟಿವಿಯಲ್ಲಿ ಸಾಕಷ್ಟು ಆನಿಮೇಷನ್ ಸಿನಿಮಾಗಳು ಬರ್ತಾವೆ. ಚಿತ್ರಮಂದಿರಕ್ಕೆ ಹೋಗಿ ಈಗಾಗಲೇ ಗೊತ್ತಿರುವ ಕಥೆಯನ್ನು ಯಾರು ನೋಡುತ್ತಾರೆ ಎನ್ನುವ ಅನುಮಾನವನ್ನು ಈ ಸಿನಿಮಾ ಸುಳ್ಳಾಗಿಸಿದೆ.

ಬುಕ್ಕಿಂಗ್ ಜೋರು
ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಂ ಸೋ' ಸಿನಿಮಾ ಸಖತ್ ಸದ್ದು ಮಾಡುತ್ತಿರುವುದು ಗೊತ್ತೇಯಿದೆ. ಹೊಸಬರ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಗಂಟೆಗೆ 7 ಸಾವಿರ ಟಿಕೆಟ್ ಆನ್‌ಲೈನ್‌ನಲ್ಲಿ ಬುಕ್ ಆಗುತ್ತಿದೆ. ಕಡಿಮೆ ಶೋಗಳು ಇದ್ದರೂ ಇಷ್ಟರಮಟ್ಟಿಗೆ ಬುಕ್ಕಿಂಗ್ ನೋಡಿ ಸಿನಿರಸಿಕರು ಶಾಕ್ ಆಗಿದ್ದಾರೆ. ಆದರೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಮಹಾವತಾರ್ ನರಸಿಂಹ' ಚಿತ್ರದ ಟಿಕೆಟ್ ಗಂಟೆಗೆ 11 ಸಾವಿರ ಬುಕ್ ಆಗಿ ಶಾಕ್ ಕೊಟ್ಟಿದೆ.
7 ಸಿನಿಮಾ ಘೋಷಣೆ
'ಮಹಾವತಾರ್ ನರಸಿಂಹ' ಸಿನಿಮಾ ಬಿಡುಗಡೆಗೂ ಮುನ್ನ 7 ಸಿನಿಮಾಗಳನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಘೋಷಿಸಿತ್ತು. ಎಲ್ಲವೂ ಇದೇ ರೀತಿಯ ಆನಿಮೇಷನ್ ಸಿನಿಮಾಗಳು. ವಿಷ್ಣು ದಶಾವತಾರಗಳನ್ನು ಆಧರಿಸಿ ನಿರ್ಮಾಣ ಮಾಡಲು ಮುಂದಾಗಿರುವ ಚಿತ್ರಗಳು. ಸಿನಿಮಾಗಳು ಘೋಷಣೆ ಆದಾಗ ಯಾರು ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಈಗ 'ಮಹಾವತಾರ್ ನರಸಿಂಹ' ಚಿತ್ರಕ್ಕೆ ಸಿಕ್ಕಿರುವ ರೆಸ್ಪಾನ್ಸ್ ನೋಡಿ ಮುಂದೆ ಆ ಚಿತ್ರಗಳು ಸದ್ದು ಮಾಡುವ ಲೆಕ್ಕಾಚಾರ ಶುರುವಾಗಿದೆ.
'ಮಹಾವತಾರ್ ರಘುನಂದನ್', 'ಮಹಾವತಾರ್ ದ್ವಾರಕಾಧೀಶ್', 'ಮಹಾವತಾರ್ ಗೋಕುಲಾನಂದನ್', 'ಮಹಾವತಾರ್ ಕಲ್ಕಿ ಭಾಗ -1', 'ಮಹಾವತಾರ್ ಕಲ್ಕಿ ಭಾಗ- 2' ಹೀಗೆ ಒಟ್ಟು 7 ಸಿನಿಮಾಗಳನ್ನು ಮುಂದಿನ ದಿನಗಳಲ್ಲಿ ತೆರೆಗೆ ತರಲಾಗುತ್ತಿದೆ.


Click it and Unblock the Notifications











