ಸಪ್ತಸಾಗರದಾಚೆಯೂ ದೈವದ ಘರ್ಜನೆ,ಹಾಲಿವುಡ್ ದಿಗ್ಗಜರಿಗೆಲ್ಲಾ ಮಣ್ಣು ಮುಕ್ಕಿಸಿದ ಕಾಂತಾರ
ಹಿಂದೆ ಒಂದು ಕಾಲ ಇತ್ತು. ಕನ್ನಡ ಚಿತ್ರರಂಗ ಅಂದರೆ ಅಸಡ್ಡೆಯಿಂದ ನೋಡುತ್ತಿದ್ದ ಕಾಲ ಅದು. ಯಾಕೆಂದರೆ.. ನಮ್ಮಲ್ಲಿ ಅನೇಕರು ರಿಮೇಕ್ ಸಂಪ್ರದಾಯಕ್ಕೆ ಆಗ ಶರಣಾಗಿದ್ದರು. ಪ್ರೇಕ್ಷಕರು ಕೂಡ ಏಕತಾನತೆಯಿಂದ ಬೇಸತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಹತ್ತು ಹಲವು ಪ್ರಯೋಗಗಳಾಗುತ್ತಿವೆ. ಮೊದಲೆಲ್ಲಾ ಕನ್ನಡ ಚಿತ್ರರಂಗ ಅಂದರೆ...
ಅಯ್ಯೋ ಎಂದು.. ಕೇವಲವಾಗಿ ನೋಡುತ್ತಿದ್ದವರ ಕಣ್ಣುಗಳಲ್ಲಿಯೇ ಈಗ ಬೆರಗೊಂದು ಪ್ರಜ್ವಲಿಸಲು ಆರಂಭಿಸಿದೆ. ಗಡಿ ಸೀಮೆಯನ್ನೆಲ್ಲ ದಾಟಿಕೊಂಡು ಕನ್ನಡದ ಚಿತ್ರಗಳು ಸದ್ದು ಮಾಡುತ್ತಿವೆ. ಕೇವಲ ಭಾರತದಲ್ಲಿ ಮಾತ್ರವಲ್ಲ. ಕನ್ನಡ ಚಿತ್ರಗಳ ಅಬ್ಬರಕ್ಕೆ ಹಾಲಿವುಡ್‌ನವರು ಕೂಡ ಬೆಚ್ಚಿ ಬೀಳುವ ಕಾಲ ಈಗ ಬಂದಿದೆ. ಇದಕ್ಕೆ ಸದ್ಯದ ಉದಾಹರಣೆ ''ಕಾಂತಾರ- ಅಧ್ಯಾಯ 1''.

ಹೌದು, ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೆ.. ಕಳೆದ 08 ದಿನಗಳಲ್ಲಿ ಹತ್ತು ಹಲವು ದಾಖಲೆಗಳನ್ನು ಪುಡಿ ಪುಡಿ ಮಾಡಿರುವ ''ಕಾಂತಾರ-ಚಾಪ್ಟರ್ 1'' ಸದ್ಯ ಹಾಲಿವುಡ್‌ನವರ ನಿದ್ದೆಯನ್ನು ಕೂಡ ಕೆಡಿಸಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ''ಹಿಂದೂಸ್ತಾನ್ ಟೈಮ್ಸ್''.. ''ಇಂಡಿಯಾ ಟುಡೇ''.. ಈ ಕುರಿತು ವರದಿಯನ್ನು ಮಾಡಿದ್ದು ಟೇಲರ್ ಸ್ವಿಫ್ಟ್.. ಲಿಯೊನಾರ್ಡೊ ಡಿಕಾರ್ಪಿಯೊ.. ಮತ್ತು ಅವತಾರ್ ಚಿತ್ರದ ಅಬ್ಬರ ''ಕಾಂತಾರ ಚಾಪ್ಟರ್ 1''ರ ಮುಂದೆ ನಡೆಯಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಯೆಸ್. ಅಸಲಿಗೆ ಜಗದ್ವಿಖ್ಯಾತ ಗಾಯಕಿ ಟೇಲರ್ ಸ್ವಿಫ್ಟ್ ಅವರ ಜೀವನಾಧಾರಿತ ಚಿತ್ರ ''ದಿ ಆಫೀಶಿಯಲ್ ರಿಲೀಸ್ ಪಾರ್ಟಿ ಆಫ್ ಎ ಶೋ ಗರ್ಲ್" ಕಳೆದ ವಾರ (ಅಕ್ಟೋಬರ್ 3) ಬಿಡುಗಡೆಯಾಗಿತ್ತು. ಕೇವಲ ಎರಡು ದಿನಕ್ಕಷ್ಟೇ ಬಿಡುಗಡೆ ಮಾಡಲಾಗಿದ್ದ 89 ನಿಮಿಷ ಅವಧಿಯ ಈ ಚಿತ್ರ ₹400 ಕೋಟಿಯನ್ನು ಕೊಳ್ಳೆ ಹೊಡೆದಿತ್ತು.
ಇನ್ನೂ ಇದಕ್ಕೂ ಮುನ್ನ ಅಂದರೆ ಸೆಪ್ಟೆಂಭರ್ 26ರಂದು ಟೈಟಾನಿಕ್ ಹೀರೋ ಲಿಯೊನಾರ್ಡೊ ಡಿಕಾಪ್ರಿಯೊ ಅಭಿನಯದ ''ಒನ್ ಬ್ಯಾಟಲ್ ಆಫ್ಟರ್ ಆ್ಯನದರ್'' ಚಿತ್ರ ಬಿಡುಗಡೆಯಾಗಿತ್ತು.
ಮೊದಲ ವಾರದಲ್ಲಿಯೇ ₹663.9 ಕೋಟಿಯನ್ನು ದೋಚಿದ್ದ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿತ್ತು. ಪ್ರೇಕ್ಷಕರ ಜೊತೆ ವಿಮರ್ಷಕರ ಮೆಚ್ಚುಗೆಗೆ ಕೂಡ ಪಾತ್ರವಾಯ್ತು. ಆದರೆ.. ಅಕ್ಟೋಬರ್ 2ರ ನಂತರ ''ಕಾಂತಾರ-1'' ತೆರೆಗೆ ಅಪ್ಪಳಿಸಿದ ಬೆನ್ನಲ್ಲಿಯೇ ಈ ಚಿತ್ರದ ಗಳಿಕೆ ಗಣನೀಯವಾಗಿ ಕಡಿಮೆಯಾಗಿದೆ. ಎರಡನೇ ವಾರ ₹355 ಕೋಟಿಯನ್ನಷ್ಟೇ ಚಿತ್ರ ಗಳಿಸಿದೆ.

ಈ ಎರಡು ಚಿತ್ರಗಳು ಮಾತ್ರವಲ್ಲ.''ಅವತಾರ್: ಫೈರ್ ಆ್ಯಂಡ್ ಆ್ಯಶಸ್'' ಬಿಡುಗಡೆಯಾಗುತ್ತಿರುವ ಹಿನ್ನೆಲೆ ''ಅವತಾರ್ : ದಿ ವೇ ಆಫ್ ವಾಟರ್'' ಚಿತ್ರವನ್ನು ಕೂಡ ಅಕ್ಟೋಬರ್ 3ರಂದು ಮರು ಬಿಡುಗಡೆ ಮಾಡಲಾಗಿತ್ತು. ಮೊದಲ ವಾರದಲ್ಲಿ ₹88 ಕೋಟಿಯನ್ನು ಕೂಡ ಗಳಿಸಿತ್ತು.
ವಿಶೇಷ ಅಂದರೆ ಜಾಗತಿಕ ಮಟ್ಟದಲ್ಲಿನ ಗಳಿಕೆಯಲ್ಲಿ ಕನ್ನಡದ ''ಕಾಂತಾರ-ಚಾಪ್ಟರ್ 1'' ಚಿತ್ರ ಈ ಮೂರು ಚಿತ್ರಗಳನ್ನು ಹಿಂದಿಕ್ಕಿದೆ. ''ಸ್ಯಾಕ್ನಿಲ್'' ವರದಿಯ ಪ್ರಕಾರ ಮೊದಲ ವಾರ ವರ್ಲ್ಡ್ ವೈಡ್ ₹414 ಕೋಟಿಯನ್ನು ಲೂಟಿ ಮಾಡಿದೆ. ಈ ಮೂಲಕ ಹೊಸದೊಂದು ಇತಿಹಾಸವನ್ನು ''ಕಾಂತಾರ -ಚಾಪ್ಟರ್ 1'' ನಿರ್ಮಾಣ ಮಾಡಿದೆ. ಹಾಲಿವುಡ್‌ನ ದಿಗ್ಗಜರಿಗೆಲ್ಲಾ ರಿಷಬ್ ಶೆಟ್ಟಿ ನಿರ್ದೇಶನದ ಕನ್ನಡದ ನೆಲದ ಈ ಸಿನಿಮಾ ಮಣ್ಣು ಮುಕ್ಕಿಸಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











