JanaNayagan Booking: ಲೀಕ್ ಆದ್ರು ತಗ್ಗದ 'ಜನನಾಯಗನ್' ಕ್ರೇಜ್; ಬೆಂಗಳೂರಿನಲ್ಲಿ ₹1000 ದಾಟಿದ ಟಿಕೆಟ್ ದರ
ತಮಿಳುನಾಡು ಸಿಎಂ ವಿಜಯ್ ನಟನೆಯ 'ಜನನಾಯಗನ್' ಸಿನಿಮಾ ಫೀವರ್ ಶುರುವಾಗಿದೆ. ಬಹಳ ತಡವಾಗಿ ಸಿನಿಮಾ ಚಿತ್ರಮಂದಿರಗಳಿಗೆ ಬರ್ತಿದೆ. ಆದರೂ ಅಭಿಮಾನಿಗಳ ಕ್ರೇಜ್ ಕಮ್ಮಿ ಆಗಿದೆ. ಈಗಾಗಲೇ ಆನ್ಲೈನ್‌ನಲ್ಲಿ ಸಂಪೂರ್ಣ ಸಿನಿಮಾ ಲೀಕ್ ಆಗಿದೆ. ಸಾಕಷ್ಟು ಜನ ಸಿನಿಮಾ ನೋಡಿದ್ದಾರೆ. ಆದರೂ ದೊಡ್ಡ ಪರದೆಯಲ್ಲಿ ವಿಜಯ್ ಆರ್ಭಟ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಬೆಂಗಳೂರಿನಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.
ಜುಲೈ 23ರಂದು ವಿಶ್ವದಾದ್ಯಂತ 'ಜನನಾಯಗನ್' ಸಿನಿಮಾ ತೆರೆಗಪ್ಪಳಿಸಲಿದೆ. ಹೆಚ್. ವಿನೋದ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಮಮಿತಾ ಬೈಜು ನಟಿಸಿದ್ದಾರೆ. ಅನಿರುದ್ದ್ ರವಿಚಂದರ್ ಸಂಗೀತದಲ್ಲಿ ಸಿನಿಮಾ ಸಾಂಗ್ಸ್ ಹಿಟ್ ಆಗಿದೆ. ವಿಜಯ್ ನಟನೆಯ ಕೊನೆಯ ಸಿನಿಮಾ ಇದು ಎನ್ನುವಂತೆ ಬಿಂಬಿಸಲಾಗಿದೆ.

ಜುಲೈ 23ರಂದು ಬೆಳಗ್ಗೆ 6 ಗಂಟೆಗೆ ಸಾಕಷ್ಟ ಕಡೆಗಳಲ್ಲಿ 'ಜನನಾಯಗನ್' ಸಿನಿಮಾ ಪ್ರದರ್ಶನ ಆರಂಭವಾಗಲಿದೆ. ಬೆಂಗಳೂರಿನಲ್ಲಿ ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಅಭಿಮಾನಿಗಳು ಟಿಕೆಟ್ ಬುಕ್ ಮಾಡಲು ಮುಗಿಬಿದ್ದಿದ್ದಾರೆ. ಟಿಕೆಟ್ ದರ 1000 ರೂ.ಗೂ ಅಧಿಕ ಇದ್ದರೂ ಅಭಿಮಾನಿಗಳ ಉತ್ಸಾಹ ಕಮ್ಮಿ ಆಗಿಲ್ಲ. ಬುಕ್ಕಿಂಗ್ ಶುರುವಾದ ಅರ್ಧ ಗಂಟೆಯಲ್ಲಿ ಶ್ರೀರಾಮಪುರದ ಅರುಣ ಚಿತ್ರಮಂದಿರದಲ್ಲಿ ಬೆಳಗ್ಗೆ 6 ಗಂಟೆ ಶೋ ಟಿಕೆಟ್ದ್ ಸೋಲ್ಡೌಟ್ ಆಗಿದೆ.
ಟೆಕೆಟ್ ದರ ಹೇಗಿದೆ ?
ಕ್ರೇಜ್‌ಗೆ ತಕ್ಕಂತೆ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ದರ ಹೆಚ್ಚಿಸಲಾಗಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್‌ನಲ್ಲೇ ಸಿಲ್ವರ್ ಕ್ಲಾಸ್ ಟಿಕೆಟ್ ದರ 800 ರೂ, ಗೋಲ್ಡ್ ಕ್ಲಾಸ್ 1000 ರೂ. ನಿಗದಿಪಡಿಸಲಾಗಿದೆ. ಎಂ. ಜಿ ರಸ್ತೆಯ ಸ್ವಾಗತ್ ಶಂಕರ್‌ನಾಗ್ ಚಿತ್ರಮಂದಿರದಲ್ಲಿ ಗೋಲ್ಡ್ ರಿಕ್ಲಿನರ್ ಸೀಟ್ ಟಿಕೆಟ್ 16000 ರೂ.ಗೆ ಮಾರಾಟವಾಗ್ತಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಜನವರಿ 9ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. ಬೆಂಗಳೂರಿನಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಆರಂಭವಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಸಿನಿಮಾ ಬಿಡುಗಡೆ ರದ್ದಾಗಿತ್ತು. ಹಾಗಾಗಿ ಟಿಕೆಟ್ ಹಣ ಮರುಪಾವತಿ ಮಾಡಿದ್ದರು.

ಬೆಂಗಳೂರಿನಲ್ಲಿ ವಿಜಯ್ ಆರ್ಭಟ
ಸಿಲಿಕಾನ್ ಸಿಟಿಯಲ್ಲಿ ವಿಜಯ್ ಸಿನಿಮಾಗಳು ಮೊದಲಿನಿಂದಲೂ ಸದ್ದು ಮಾಡ್ತಿದೆ. ಈ ಹಿಂದೆ ಬಿಡುಗಡೆಯಾಗಿದ್ದ 'ಲಿಯೋ', 'GOAT' ಸಿನಿಮಾಗಳಿಗೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಒಟ್ಟಾರೆ ಫಲಿತಾಂಶ ಹೇಗೆ ಇದ್ದರೂ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಟಿಕೆಟ್ ದರ ಕೂಡ ಗಣನೀಯವಾಗಿ ಹೆಚ್ಚಿಸಲಾಗಿತ್ತು. ಆದರೂ ಅಭಿಮಾನಿಗಳು ಸಿನಿಮಾ ನೋಡಲು ಹಿಂದೆ ಬೀಳಲಿಲ್ಲ.
ಕ್ಲೈಮ್ಯಾಕ್ಸ್ ಬದಲಾವಣೆ
ತೆಲುಗಿನ 'ಭಗವಂತ್ ಕೇಸರಿ' ಸಿನಿಮಾ ರೀಮೆಕ್ 'ಜನನಾಯಗನ್'. ಬಾಲಕೃಷ್ಣ ಹಾಗೂ ಶ್ರೀಲೀಲಾ ಮಾಡಿದ್ದ ಪಾತ್ರಗಳಲ್ಲಿ ವಿಜಯ್ ಹಾಗೂ ಮಮಿತಾ ಬೈಜು ನಟಿಸಿದ್ದಾರೆ. ರಾಜಕೀಯರಂಗ ಪ್ರವೇಶಿಸಲು ಸಜ್ಜಾಗಿದ್ದ ವಿಜಯ್ ಒಂದು ರಾಜಕೀಯ ಅಂಶಗಳನ್ನು ಚಿತ್ರದಲ್ಲಿ ಸೇರಿಸಿದ್ದರು. ಭ್ರಷ್ಟ ರಾಜಕಾರಣಗಳ ವಿರುದ್ಧ ಸಮರ ಸಾರುವ ಕಥೆ ಇತ್ತು. ಈಗ ವಿಜಯ್ ಚುನಾವಣೆಯಲ್ಲಿ ಗೆದ್ದು ಸಿಎಂ ಆಗಿದ್ದಾರೆ. ಹಾಗಾಗಿ ಚಿತ್ರದಲ್ಲಿ ಒಂದಷ್ಟು ಬದಲಾವಣೆ ಮಾಡಲಾಗಿದೆ. ಕ್ಲೈಮ್ಯಾಕ್ಸ್‌ನಲ್ಲಿ ಸಣ್ಣದೊಂದು ದೃಶ್ಯ ಸೇರಿಸಿದ್ದಾರೆ. ಈ ವಿಚಾರವನ್ನು ನಿರ್ಮಾಪಕ ವೆಂಕಟ್ ಕೊನಂಕಿ ಕೂಡ ಸ್ಪಷ್ಟಪಡಿಸಿದ್ದಾರೆ. ಟೈಟಲ್ ಕಾರ್ಟ್‌ನಲ್ಲಿ ದಳಪತಿ ವಿಜಯ್ ಬದಲು ಸಿಎಂ ವಿಜಯ್ ಎಂದು ಬದಲಿಸಲಾಗಿದೆ.
ದೊಡ್ಡ ಪರದೆಯಲ್ಲಿ ಹವಾ
ಈಗಾಗಲೇ ಸಿನಿಮಾ ಪೈರಸಿ ಆಗಿ ಸಾಕಷ್ಟು ಜನ ನೋಡಿದ್ದಾರೆ. ಆದರೂ ದೊಡ್ಡ ಪರದೆಯಲ್ಲಿ ವಿಜಯ್ ದರ್ಬಾರ್ ಅನುಭವ ಪಡೆಯಲು ಕಾಯುತ್ತಿದ್ದಾರೆ. ಹಾಗಾಗಿ ಭರ್ಜರಿ ಕಲೆಕ್ಷನ್ ನಿರೀಕ್ಷೆ ಮಾಡಲಾಗುತ್ತಿದೆ. ತೆರೆಗೆ ಬಂದ 3 ವಾರಕ್ಕೆ ಸಿನಿಮಾ ಓಟಿಟಿಗೆ ಬರುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಈ ಸಂಬಂಧ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ.


Click it and Unblock the Notifications