Junior Box Office Day 1 ; ಜನಾರ್ಧನ್ ರೆಡ್ಡಿ ಮಗ ಕಿರೀಟಿಯ ‘ಜೂನಿಯರ್’ ಮೊದಲ ದಿನ ಗಳಿಸಿದ್ದೆಷ್ಟು?
ಕನ್ನಡದಲ್ಲಿ ಇರುವುದು ಬೆರಳಣಿಕೆಯ ಸ್ಟಾರ್‌ಗಳು ಮಾತ್ರ. ಆ ಪೈಕಿ ಕೆಲವರು ಪ್ಯಾನ್ ಇಂಡಿಯಾ ಗುಂಗಿನಲ್ಲಿ ಮುಳುಗಿ ಹೋಗಿದ್ದಾರೆ. ಇನ್ನು ಕೆಲವರು ಕನ್ನಡದಲ್ಲಿಯೇ ಚಿತ್ರಗಳನ್ನು ಮಾಡುತ್ತಿದ್ದಾರೆ ಆದರೂ ಇವರ ಚಿತ್ರ ಕೂಡ ವರ್ಷಕ್ಕೆ ಒಂದು ಬಂದರೆ ಅದೇ ಹೆಚ್ಚು ಎನ್ನುವಂತಾಗಿದೆ. ಇನ್ನು ಪ್ರತಿ ವಾರ ಇಲ್ಲಿ ಒಂದಲ್ಲ ಒಂದು ಹೊಸ ಚಿತ್ರತಂಡ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತೆ.
ಈ ಮೂಲಕ ಹೊಸ ನಾಯಕ ಮತ್ತು ನಾಯಕಿಯ ಉದಯವೂ ಆಗುತ್ತೆ. ಆದರೆ.. ಹೀಗೆ ಬಂದವರಲ್ಲಿ ಬಹುತೇಕರು ಪ್ರೇಕ್ಷಕರ ಹೃದಯ ಗೆಲ್ಲುವುದಿಲ್ಲ. ಪ್ರೇಕ್ಷಕರು ಕೂಡ ಸುಲಭವಾಗಿ ಯಾರನ್ನು ಹೊಸ ಸ್ಟಾರ್ ಎಂದು ಒಪ್ಪಿಕೊಳ್ಳುತ್ತಲೂ ಇಲ್ಲ. ಹೀಗಿರುವಾಗ ಕನ್ನಡ ಮತ್ತು ತೆಲುಗು ಚಿತ್ರರಂಗಕ್ಕೆ ಗಾಲಿ ಜನಾರ್ಧನ್ ರೆಡ್ಡಿ ಅವರ ಮಗ ಕಿರೀಟಿ ಬಂದಿದ್ದಾರೆ. ತಮ್ಮ ಮೊದಲ ಪ್ರಯತ್ನದ ಮೂಲಕ ಭರವಸೆಯನ್ನು ಕೂಡ ಮೂಡಿಸಿದ್ದಾರೆ.

ಜೂನಿಯರ್ ಚಿತ್ರವನ್ನು ನೋಡಿದ ಅನೇಕರು ಕಿರೀಟಿಯ ಶ್ರದ್ಧೆ ಮತ್ತು ಶ್ರಮವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಅಭಿನಯ ಮತ್ತು ಡ್ಯಾನ್ಸ್‌ಗೆ ಮನ ಸೋತಿದ್ದಾರೆ. ಇನ್ನು ಸಾಮಾನ್ಯವಾಗಿ ಮೊದಲ ದಿನ ಹೊಸ ಹುಡುಗನ ಚಿತ್ರಕ್ಕೆ ಪ್ರೇಕ್ಷಕರು ಬರುವುದು ಕಡಿಮೆ. ಆದರೆ.. ಕಿರೀಟಿಯ ಮೊದಲ ಪ್ರಯತ್ನವನ್ನು ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ವಿಶೇಷವಾಗಿ ತೆಲುಗಿನಲ್ಲಿ. ಇದಕ್ಕೆ ಕೈಗನ್ನಡಿ ಎಂಬಂತೆ ಮೊದಲ ದಿನ ಜೂನಿಯರ್ ಚಿತ್ರ ಭರ್ಜರಿ ಹಣವನ್ನು ಗಳಿಸಿದೆ.
ಹೌದು, ಚಿತ್ರದ ಗಳಿಕೆಯ ಅಂಕಿ-ಅಂಶವನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವೆಬ್ ಸೈಟ್ ಪ್ರಕಾರ ಕಿರೀಟಿಯ ಜೂನಿಯರ್ ಚಿತ್ರ ಮೊದಲ ದಿನ ಅಂದಾಜು ₹ 1.40 ಕೋಟಿ ಹಣವನ್ನು ಗಳಿಸಿದೆ. ಬೆಳಗ್ಗೆಗೆ ಹೋಲಿಸಿದರೆ ನಿನ್ನೆ ರಾತ್ರಿ ಈ ಚಿತ್ರ ನೋಡಲು ಪ್ರೇಕ್ಷಕರ ದಂಡು ಹೆಚ್ಚು ಕಂಡು ಬಂದಿದ್ದು, ವಿಶಾಖಪಟ್ಟಣಂ, ಮೆಹಬೂಬ್ ನಗರ್, ವಿಜಯವಾಡಾದಲ್ಲಿ ಹೆಚ್ಚಿನ ಆಕ್ಯುಪೆನ್ಸಿ ಕಂಡು ಬಂದಿದೆ. ಅದರಲ್ಲಿಯೂ ಗುಂಟೂರ್ ನಲ್ಲಿ ನಿನ್ನೆ 70.50% ಆಕ್ಯುಪೆನ್ಸಿ ಇತ್ತು ಎಂದು ಸ್ಯಾಕ್ನಿಲ್ ವರದಿಯನ್ನು ಮಾಡಿದೆ.

ಇನ್ನು ಬೆಂಗಳೂರಿನಲ್ಲಿ 14.25%.. ಹುಬ್ಬಳ್ಳಿಯಲ್ಲಿ 13.67%.. ಕುಂದಾಪುರದಲ್ಲಿ19.25%.. ಕಲಬುರ್ಗಿಯಲ್ಲಿ 16.00.. ರಾಯಚೂರಿನಲ್ಲಿ 18.00% ಆಕ್ಯುಪೆನ್ಸಿ ಕಂಡು ಬಂದಿದ್ದು ತುಮಕೂರಿನಲ್ಲಿ ಜೂನಿಯರ್ ಚಿತ್ರ ನೋಡುವ ಉತ್ಸಾಹ { 61.25%} ಪ್ರೇಕ್ಷಕರಲ್ಲಿ ಹೆಚ್ಚು ಕಂಡು ಬಂದಿದೆ ಎಂದು ಸ್ಯಾಕ್ನಿಲ್ ವರದಿಯಲ್ಲಿ ಉಲ್ಲೇಖಿಸಿದೆ.
ಹೀಗೆ ಮೊದಲ ದಿನ ₹1.40 ಕೋಟಿ ಗಳಿಸಿರುವ ಜೂನಿಯರ್ ಚಿತ್ರ ಇಂದು ಕೂಡ ಉತ್ತಮ ಗಳಿಕೆ ಕಾಣುವ ನಿರೀಕ್ಷೆ ಇದೆ. ಕನ್ನಡಕ್ಕಿಂತ ತೆಲುಗು ವರ್ಷನ್‌ಗೆ ಸದ್ಯ ಡಿಮ್ಯಾಂಡ್ ಕಂಡು ಬರುತ್ತಿದ್ದು ಇಂದು ಮತ್ತು ನಾಳೆಯ ಗಳಿಕೆಯ ಮೇಲೆ ಜೂನಿಯರ್‌ನ ಮುಂದಿನ ಭವಿಷ್ಯ ನಿಂತಿದೆ. ಈ ವಾರಾಂತ್ಯ ಮುಗಿಯುವಷ್ಟರಲ್ಲಿ ಜೂನಿಯರ್ ಎಷ್ಟು ಗಳಿಸಬಹುದು ಎನ್ನುವ ಕುತೂಹಲ ಕೂಡ ಸದ್ಯ ಮನೆ ಮಾಡಿದೆ.
ಇನ್ನುಳಿದಂತೆ ರಾಧಾಕಷ್ಣ ರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಸುಧಾರಾಣಿ, ರಾವ್ ರಮೇಶ್, ಅಚ್ಯುತ್ ರಾವ್ ಇದ್ದಾರೆ. ದೇವಿಶ್ರೀ ಪ್ರಸಾದ್ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಮಾಡಿದ್ದು, ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಇವರ ವೈರಲ್ ವಯ್ಯಾರಿ ಹಾಡು ಕೂಡ ಪ್ರಮುಖ ಪಾತ್ರವನ್ನು ವಹಿಸಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











