Junior Box Office Day 3 ; ಗಣಿ ಧಣಿ ಮಗನಿಗೆ ಭಾನುವಾರ ಹೊಡೆಯಿತಾ ಲಾಟರಿ, ‘ಜೂನಿಯರ್’ ಮೂರನೇ ದಿನ ಗಳಿಸಿದ್ದೆಷ್ಟು?
ಕನ್ನಡ ಚಿತ್ರರಂಗಕ್ಕೆ ಹೊಸ ನಾಯಕನೊಬ್ಬನ ಅವಶ್ಯಕತೆ ಇದೆ ಎನ್ನುವ ಮಾತು ಕಳೆದ ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಯಾಕೆಂದರೆ.. ಇಲ್ಲಿ ಹೆಸರು ಮಾಡಿರುವ ಸ್ಟಾರ್‌ಗಳಲ್ಲಿ ದೇಶವ್ಯಾಪಿ ಹೆಸರು ಮಾಡುವ ಆಸೆ ಚಿಗುರೊಡೆದಿದೆ. ಹೀಗಾಗಿಯೇ ಹೊಸತನವನ್ನು ಕನ್ನಡದ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ. ಅದರಂತೆ.. ಅನೇಕ ಹೊಸಬರು ಕೂಡ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ತಿದ್ದಾರೆ.
ಆದರೆ.. ಗೆಲುವು ಮಾತ್ರ ಸುಲಭವಾಗಿ ಯಾರಿಗೂ ಇಲ್ಲಿ ಸಿಗುತ್ತಿಲ್ಲ. ಭರವಸೆಯನ್ನು ಕೂಡಾ ಯಾರು ಮೂಡಿಸುತ್ತಿಲ್ಲ. ಹೊಸಬರ ಆಗಮನವಾದಾಗ ಹೊಸತನದ ಅಲೆ ಎದ್ದಿತು ಎಂಬ ನಿರೀಕ್ಷೆಯೊಂದು ಕನ್ನಡದ ಪ್ರೇಕ್ಷಕರಲ್ಲಿರುವುದು ಸುಳ್ಳಲ್ಲ.

ಇಂಥಾದ್ದೊಂದು ವಾತಾವರಣದಲ್ಲೀಗ ಗಣಿ ಧಣಿ ಜನಾರ್ಧನ್ ರೆಡ್ಡಿ ಅವರ ಮಗ ಕಿರೀಟಿಯ ರಂಗ ಪ್ರವೇಶವಾಗಿದೆ. ಮೊದಲೆರಡು ದಿನ ಪ್ರೇಕ್ಷಕರ ಬೆಂಬಲ ಮತ್ತು ಪ್ರೀತಿ ಕೂಡ ಕಿರೀಟಿಗೆ ಸಿಕ್ಕಿದೆ. ಭಾನುವಾರ ಅಂದರೆ ನಿನ್ನೆ { ಜುಲೈ 20 } ಕೂಡ ಕಿರೀಟಿಯ ಡ್ಯಾನ್ಸ್ ಮತ್ತು ಅಭಿನಯಕ್ಕೆ ಬಾಕ್ಸಾಫೀಸ್‌ನಲ್ಲಿ ಕಾಂಚಾಣದ ಸದ್ದು ಕೇಳಿ ಬಂದಿದೆ.
ಹೌದು, ಚಿತ್ರದ ಗಳಿಕೆಯ ಅಂಕಿ-ಅಂಶವನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವೆಬ್ ಸೈಟ್ ಪ್ರಕಾರ ಕಿರೀಟಿಯ ಜೂನಿಯರ್ ಚಿತ್ರ ನಿನ್ನೆ { ಜುಲೈ 20 } ಅಂದಾಜು ₹ 2.10 ಕೋಟಿಯನ್ನು ಗಳಿಸಿದೆ. ಈ ₹ 2.10 ಕೋಟಿಯಲ್ಲಿ ಕನ್ನಡದ ಪಾಲು ಎಷ್ಟಿದೆ ಎನ್ನುವುದು ಸದ್ಯಕ್ಕೆ ಗೊತ್ತಿಲ್ಲವಾದರು ಮೂರು ದಿನದಲ್ಲಿ ಚಿತ್ರ ₹ 5.40 ಕೋಟಿ ಹಣವನ್ನು ಕಿರೀಟಿಯ ಜೂನಿಯರ್ ಗಳಿಸಿದೆ ಎಂದು ''ಸ್ಯಾಕ್ನಿಲ್'' ವರದಿಯನ್ನು ಮಾಡಿದೆ.

ಸ್ಯಾಕ್ನಿಲ್ ಪ್ರಕಾರ ಜೂನಿಯರ್ ಚಿತ್ರದ ಮೂರು ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ[ಶುಕ್ರವಾರ]₹1.5ಕೋಟಿ[ತೆಲುಗು:₹1.3ಕೋಟಿ,ಕನ್ನಡ ₹20ಲಕ್ಷ]
ಎರಡನೇ ದಿನ[ಶನಿವಾರ]₹1.8ಕೋಟಿ[ತೆಲುಗು:₹1.55ಕೋಟಿ,ಕನ್ನಡ ₹25ಲಕ್ಷ]
ಮೂರನೇ ದಿನ[ಭಾನುವಾರ]₹2.10ಕೋಟಿ * ಅಂದಾಜು
ಒಟ್ಟು ಗಳಿಕೆ ₹ 5.40 ಕೋಟಿ
ಇನ್ನು ಆಕ್ಯುಪೆನ್ಸಿ ವಿಚಾರಕ್ಕೆ ಬಂದರೆ ಬೆಂಗಳೂರಿನಲ್ಲಿ ಜೂನಿಯರ್ ಚಿತ್ರವನ್ನು ಕನ್ನಡದಲ್ಲಿ ನೋಡುವುದಕ್ಕಿಂತ ತೆಲುಗುದಲ್ಲಿ ನೋಡಬೇಕೆನ್ನುವ ಉತ್ಸಾಹ ಹೆಚ್ಚು ಕಂಡು ಬಂದಿದೆ.ಕನ್ನಡದಲ್ಲಿ 25.50% ಆಕ್ಯುಪೆನ್ಸಿ ಇದ್ದರೆ ತೆಲುಗಿನಲ್ಲಿ 25.75% ಆಕ್ಯುಪೆನ್ಸಿ ಇತ್ತು ಎಂದು ಸ್ಯಾಕ್ನಿಲ್ ವರದಿಯಲ್ಲಿ ಉಲ್ಲೇಖಿಸಿದೆ. ಬೆಂಗಳೂರು ಹೊರತು ಪಡಿಸಿದರೆ ಹುಬ್ಬಳ್ಳಿಯಲ್ಲಿ 34.00%, ಮಂಗಳೂರಿನಲ್ಲಿ 29.75% ಮೈಸೂರಿನಲ್ಲಿ 29.75% ಆಕ್ಯುಪೆನ್ಸಿ ಕಂಡು ಬಂದಿದೆ. ಕಲ್ಬುರ್ಗಿಯಲ್ಲಿ ಜೂನಿಯರ್ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು ಭಾನುವಾರ ಕಲ್ಬುರ್ಗಿಯಲ್ಲಿ 49.50% ಆಕ್ಯುಪೆನ್ಸಿ ಕಂಡು ಬಂದಿದೆ.
ಹೀಗೆ ಮೊದಲ ಮೂರು ದಿನದಲ್ಲಿ ₹5.40 ಕೋಟಿ ಗಳಿಸಿರುವ 'ಜೂನಿಯರ್'ನ ಅಗ್ನಿ ಪರೀಕ್ಷೆ ಇಂದಿನಿಂದ ಆರಂಭವಾಗಿದೆ. ವಾರದ ಈ ದಿನಗಳಲ್ಲಿ ಜೂನಿಯರ್ ಪ್ರೇಕ್ಷಕರನ್ನು ಎಷ್ಟರ ಮಟ್ಟಿಗೆ ಸೆಳೆಯುವಲ್ಲಿ ಯಶಸ್ವಿಯಾಗುತ್ತಾನೆ ? ಕನ್ನಡ ತೆಲುಗುದಲ್ಲಿ ಎಷ್ಟು ಹಣ ಗಳಿಸುತ್ತಾನೆ ? ಎನ್ನುವುದನ್ನು ಕಾದು ನೋಡಬೇಕಿದೆ.
ಇನ್ನುಳಿದಂತೆ ರಾಧಾಕಷ್ಣ ರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಸುಧಾರಾಣಿ, ರಾವ್ ರಮೇಶ್, ಅಚ್ಯುತ್ ರಾವ್ ಇದ್ದಾರೆ. ದೇವಿಶ್ರೀ ಪ್ರಸಾದ್ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಮಾಡಿದ್ದು, ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಇವರ ವೈರಲ್ ವಯ್ಯಾರಿ ಹಾಡು ಕೂಡ ಪ್ರಮುಖ ಪಾತ್ರವನ್ನು ವಹಿಸಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











