Kaantha Box Office ; ದುಲ್ಕರ್ ಸಲ್ಮಾನ್ 'ಕಾಂತ' ಕಥೆ ಏನಾಯ್ತು ? 4 ದಿನದಲ್ಲಿ ಗಳಿಸಿದ್ದೆಷ್ಟು ? ಹಿಟ್ಟಾ ಫ್ಲಾಪಾ ?
ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲ ಪಕ್ಕದ ಕಾಲಿವುಡ್‌ನಲ್ಲಿ ಕೂಡ ಈ ವರ್ಷ ಗೆದ್ದ ಚಿತ್ರಗಳ ಸಂಖ್ಯೆ ಕಡಿಮೆ ಇದೆ. ''ಟೂರಿಸ್ಟ್ ಫ್ಯಾಮಿಲಿ''.. ''ಡ್ರ್ಯಾಗನ್''.. ಹೀಗೆ ಒಂದು ನಾಲ್ಕೈದು ಚಿತ್ರಗಳು ಮಾತ್ರ ತಮಿಳುನಾಡಿನಲ್ಲಿ ಗೆದ್ದಿವೆ. ಸದ್ದು ಮಾಡಿವೆ. ಇನ್ನು, ಸ್ಟಾರ್‌ಗಳಿಗೆ ಈ ಆರು ತಿಂಗಳಿನಲ್ಲಿ ದಕ್ಕಿದ್ದು ಸೋಲು ಮಾತ್ರ. ಚಿಯಾನ್ ವಿಕ್ರಮ್.. ಸೂರ್ಯ.. ಕಮಲ್ ಹಾಸನ್.. ಅವರ..
ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಈ ವರ್ಷ ಮಕಾಡೆ ಮಲಗಿವೆ. ಅಜಿತ್ ಅಭಿನಯದ ''ಗುಡ್ ಬ್ಯಾಡ್ ಅಗ್ಲಿ'' ಮಾತ್ರ ಹಣವನ್ನು ದೋಚುವಲ್ಲಿ ಯಶಸ್ವಿಯಾಗಿದೆ. ಇದೇ ಅಜಿತ್ ಅಭಿನಯದ ''ವಿಡಾಮುಯಾರ್ಚಿ'' ಈ ವರ್ಷದ ಪರಮತೋಪು ಚಿತ್ರಗಳಲ್ಲಿ ಒಂದು. ಇನ್ನೂ ಧನುಷ್ ಅಭಿನಯದ ''ಕುಬೇರ'' ಕೂಡ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಗೆಲ್ಲಲಿಲ್ಲ. ಇವರು ಪ್ರೀತಿಯಿಂದ ಮಾಡಿದ್ದ ''ಇಡ್ಲಿ ಕಡೇ''ಯನ್ನು ಕೂಡ ಪ್ರೇಕ್ಷಕರು ತಿನ್ನಲಿಲ್ಲ.

ಕಳೆದ ತಿಂಗಳು ಬಂದ ''ಡ್ಯೂಡ್'' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು ಅಷ್ಟೇ. ಹೀಗಿರುವಾಗ ಇದೀಗ ಮಾಲಿವುಡ್‌ನ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ ಅಭಿನಯದ ತಮಿಳು ಚಿತ್ರ ''ಕಾಂತ'' ತೆರೆಗೆ ಬಂದಿದೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಪ್ರೇಕ್ಷಕರ ನಾಡಿ ಮಿಡಿತ ಬಲ್ಲ ಕೆಲವೇ ಕೆಲ ಸ್ಟಾರ್‌ಗಳಲ್ಲಿ ದುಲ್ಕರ್ ಸಲ್ಮಾನ್ ಕೂಡ ಒಬ್ಬರು. ಸದಾ ಹೊಸತನದ ಬೆನ್ನತ್ತುವ ದುಲ್ಕರ್ ಆಯ್ಕೆ ಮಾಡಿಕೊಳ್ಳುವ ಕಥೆಗಳು ವಿಶೇಷವಾಗಿರುತ್ತವೆ. ವಿಶಿಷ್ಠವಾಗಿರುತ್ತವೆ.
ಈ ಹಿನ್ನೆಲೆ ''ಕಾಂತ'' ಮೇಲೆ ಎಲ್ಲರ ಕಣ್ಣಿತ್ತು. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಯುವ ನಿರೀಕ್ಷೆ ಇತ್ತು. ಆದರೆ ಸದ್ಯಕ್ಕೆ ಈ ನಿರೀಕ್ಷೆ ಹುಸಿಯಾಗಿದ್ದು ''ಕಾಂತ'' ಬಾಕ್ಸಾಫೀಸ್‌ನಲ್ಲಿ ತೆವಳುತ್ತಾ ಸಾಗುತ್ತಿದೆ.
ಹೌದು, ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಕಳೆದ ನವೆಂಬರ್ 14ರಂದು ತೆರೆಗೆ ಬಂದ ''ಕಾಂತ'' ಮೊದಲ ದಿನ ₹ 4.35 ಕೋಟಿಯನ್ನು ಗಳಿಸಿತ್ತು. ಎರಡನೇ ದಿನ ಗಳಿಕೆಯಲ್ಲಿ ಚೂರು ಏರಿಕೆ ಕಂಡು ಬಂದಿತ್ತು. ಚಿತ್ರ ₹ 5 ಕೋಟಿಯನ್ನು ಗಳಿಸಿತ್ತು. ಮೂರನೇ ದಿನ ಅಂದರೆ ಭಾನುವಾರ (ನವೆಂಬರ್ 16 ) ಚಿತ್ರದ ಗಳಿಕೆ ಇನ್ನೂ ಹೆಚ್ಚಾಗುತ್ತೆ ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ, ಭಾನುವಾರದ ಗಳಿಕೆಯಲ್ಲಿ 10% ಕುಸಿತ ಕಂಡು ಬಂತು. ಚಿತ್ರ ಕೇವಲ ₹4.5 ಕೋಟಿಯನ್ನಷ್ಟೇ ಗಳಿಸಿತು.
ಇನ್ನೂ ನಿನ್ನೆ ಸೋಮವಾರ ( ನವೆಂಬರ್ 17 ) ಚಿತ್ರದ ಗಳಿಕೆ ಕುಸಿಯುವುದು ಸಾಮಾನ್ಯ. ಅದರಂತೆ ನಿನ್ನೆ ಈ ಚಿತ್ರ ಅಂದಾಜು ₹1.65 ಕೋಟಿ ಹಣವನ್ನು ದೋಚಿದೆ. ನಾಲ್ಕು ದಿನದಲ್ಲಿ ₹ 15.50 ಕೋಟಿ ಹಣವನ್ನು ಗಳಿಸಿದೆ. ಈ ಮೂಲಕ ದುಲ್ಕರ್ ಸಲ್ಮಾನ್ ಅಭಿಮಾನಿಗಳಿಗೆ ಮತ್ತು ತಮಿಳು ಚಿತ್ರರಂಗದ ಪಂಡಿತರಿಗೆ ಈ ಚಿತ್ರ ನಿರಾಸೆ ಮಾಡಿದೆ.

ಯಾಕೆಂದರೆ ದುಲ್ಕರ್ ಸಲ್ಮಾನ್ ಸ್ಟಾರ್ ಪವರ್‌ಗೆ ₹ 15.50 ಕೋಟಿ ಗಳಿಕೆ ತೀರಾ ಕಡಿಮೆ. ಇವರ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾದ ''ಲಕ್ಕಿ ಭಾಸ್ಕರ್'' ಮೊದಲ ದಿನವೇ ₹7.50 ಕೋಟಿ ಹಣವನ್ನು ದೋಚಿತ್ತು.
ಇನ್ನು ಇವರ ಹಿಂದಿನ ಫ್ಲಾಪ್ ಚಿತ್ರ ''ಕಿಂಗ್ ಆಫ್ ಕೋಟಾ'' ಮೊದಲ ದಿನ ₹8.5 ಕೋಟಿಯನ್ನು ಗಳಿಸಿತ್ತು. ಈ ಹಿನ್ನೆಲೆ ''ಕಾಂತ''ದ ಈ ಗಳಿಕೆ ಸದ್ಯ ಕಡಿಮೆಯಾದರೂ ಕೂಡ ಚಿತ್ರದ ಭವಿಷ್ಯವನ್ನು ಈಗಲೇ ನಿರ್ಧಾರ ಮಾಡಲು ಸಾಧ್ಯ ಇಲ್ಲ. ಮುಂಬರುವ ವಾರಾಂತ್ಯದಲ್ಲಿ ''ಕಾಂತ'' ಕಥೆ ಬದಲಾದರು ಬದಲಾಗಬಹುದು. ಚಿತ್ರಕ್ಕೆ ಹಾಕಿದ ಹಣ ಮರಳಿ ಬಂದು ಈ ಚಿತ್ರ ಹಿಟ್ ಲಿಸ್ಟ್‌ಗೆ ಸೇರಬಹುದು. ಸ್ಪಷ್ಟವಾದ ಫಲಿತಾಂಶ ಈ ವಾರಾಂತ್ಯಕ್ಕೆ ಸಿಗಲಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











