2026 First Half: 6 ತಿಂಗಳು.. 115 ಸಿನಿಮಾ.. ₹200 ಕೋಟಿ ಬಜೆಟ್; ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?
ವರ್ಷದ ಮೊದಲ 6 ತಿಂಗಳು ಕಳೆದೇ ಹೋಯ್ತು. ಕನ್ನಡದಲ್ಲಿ 110ಕ್ಕೂ ಹೆಚ್ಚು ಸಿನಿಮಾಗಳು ಈಗಾಗಲೇ ಬಿಡುಗಡೆಯಾಗಿದೆ. ಆದರೆ ಹೇಳಿಕೊಳ್ಳಲು ಸಿಗುವುದು ಒಂದೆರಡು ಸಿನಿಮಾ ಮಾತ್ರ. ಅಕ್ಕಪಕ್ಕದ ಇಂಡಸ್ಟ್ರಿಗಳಿಗೆ ಹೋಲಿಸಿದರೆ ಈ ವರ್ಷ ಕನ್ನಡ ಚಿತ್ರರಂಗದ ಸಾಧನೆ ಏನೇನು ಇಲ್ಲ.
ಸಿನಿಮಾ ಗೆಲುವಿಗೆ ಯಾವುದೇ ಸೂತ್ರ ಇಲ್ಲ. ಆದರೆ ಒಳ್ಳೆ ಪ್ರಯತ್ನಗಳಿಗೆ ಖಂಡಿತ ಯಶಸ್ಸು ಸಿಗುತ್ತದೆ. ಈ ವರ್ಷ ಅಂತಹ ಪ್ರಯತ್ನಗಳು ನಡೆಯಲೇ ಇಲ್ಲ ಎನ್ನುವುದು ಬೇಸರದ ಸಂಗತಿ. ಸ್ಟಾರ್ ನಟರೆಲ್ಲಾ ಪ್ಯಾನ್ ಇಂಡಿಯಾ ಹುಚ್ಚಿಗೆ ಬಿದ್ದು ಕನ್ನಡ ಸಿನಿಮಾಗಳನ್ನು ಕೇಳುವವರೇ ಇಲ್ಲ ಎನ್ನುವಂತಾಗಿದೆ. ಒಳ್ಳೆ ಸಿನಿಮಾಗಳು ಬರದೇ ಕನ್ನಡ ಪ್ರೇಕ್ಷಕರು ಪರಭಾಷೆ ಸಿನಿಮಾ ನೋಡುವಂತಾಗಿದೆ. ಬಹಳ ನಿರೀಕ್ಷೆ ಮೂಡಿಸಿರುವ 'ಟಾಕ್ಸಿಕ್' ಸಿನಿಮಾ ಇನ್ನು ಬಿಡುಗಡೆ ಆಗದೇ ಇರುವುದು ಬೇಸರದ ಸಂಗತಿ.

ಮೊದಲ 6 ತಿಂಗಳಲ್ಲೇ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳ ಒಟ್ಟಾರೆ ಕಲೆಕ್ಷನ್ ತಲಾ 800 ಕೋಟಿ ರೂ. ದಾಟಿದೆ. ಕನ್ನಡದಲ್ಲಿ 110 ಸಿನಿಮಾಗಳು ಬಿಡುಗಡೆ ಆಗಿದ್ದರೂ ಗಳಿಕೆ ಮಾತ್ರ 50-60 ಕೋಟಿ ರೂ. ಕೂಡ ದಾಟಿಲ್ಲ. ಆ ಲೆಕ್ಕದಲ್ಲಿ ಬೇರೆ ಭಾಷೆಯ ಸಿನಿಮಾಗಳ ಜೊತೆ ಕನ್ನಡ ಸಿನಿಮಾಗಳು ಪೈಪೋಟಿಯಲ್ಲೇ ಇಲ್ಲ. 2026ರಲ್ಲಿ ಕನ್ನಡದಲ್ಲಿ ಗೆದ್ದಿರುವುದು ಎರಡೇ ಎರಡು ಸಿನಿಮಾ ಮಾತ್ರ.
110 ಸಿನಿಮಾ ಬಿಡುಗಡೆ
ಜೂನ್ 19ಕ್ಕೆ ಬಿಡುಗಡೆಯಾದ 'ಊರಬ್ಬ', 'ಕಾಲಘಟ್ಟ', 'ದೊಡ್ಮನ್ಸ', 'ಎಜುಕೇಟೆಡ್ ಬುಲ್ಸ್' ಸೇರಿ ಈ ವರ್ಷ ಒಟ್ಟು 110 ಸಿನಿಮಾಗಳು ತೆರೆಗೆ ಬಂದಿದೆ. ಮುಂದಿನ ವಾರ ಇನ್ನು 5 ಸಿನಿಮಾಗಳನ್ನು ಸೇರಿಸಿಕೊಂಡರೆ ಒಟ್ಟು 115 ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಂತಾಗಿದೆ. ಇದರಲ್ಲಿ 10ರಿಂದ 15 ಸಿನಿಮಾಗಳು ಮಾತ್ರ ಕೊಂಚಮಟ್ಟಿಗೆ ಸದ್ದು ಮಾಡಿದ್ದವು. ಇನ್ನುಳಿದ 100 ಸಿನಿಮಾಗಳು ಬಂದು ಹೋಗಿದ್ದೇ ಯಾರಿಗೂ ಗೊತ್ತಾಗಲಿಲ್ಲ.

200 ಕೋಟಿ ರೂ. ಬಂಡವಾಳ
ಹೌದು.. ಒಟ್ಟು 115 ಸಿನಿಮಾಗಳಿಂದ ಹೆಚ್ಚು ಕಮ್ಮಿ 200 ಕೋಟಿ ರೂ. ಬಂಡವಾಳ ಹೂಡಿದಂತಾಗಿದೆ. ಇದರಲ್ಲಿ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್ ಸಿನಿಮಾ ಬಜೆಟ್ 50 ಕೋಟಿ ರೂ. ದಾಟಿದೆ ಎನ್ನುವ ಮಾತಿದು. ಇನ್ನುಳಿದಂತೆ ತಲಾ ಒಂದು ಕೋಟಿ, ಎರಡು ಕೋಟಿ ರೂ. ಎಂದು ಸರಾಸರಿ ಲೆಕ್ಕ ಹಾಕಿದ್ರು ಹೆಚ್ಚು ಕಮ್ಮಿ ಅಂದಾಜು 200 ಕೋಟಿ ರೂ.ಗೂ ಹೆಚ್ಚು ಹಣ ಹೂಡಿಕೆ ಮಾಡಿದಂತಾಗಿದೆ. ವಿಪರ್ಯಾಸ ಅಂದ್ರೆ 50 ಕೋಟಿ ರೂ. ಕೂಡ ವಾಪಸ್ ಬಂದಿಲ್ಲ.
2 ಹಿಟ್ ಮಾತ್ರ
110 ಸಿನಿಮಾಗಳಲ್ಲಿ ಗೆದ್ದ ಸಿನಿಮಾಗಳ ಸಂಖ್ಯೆ ಕೇವಲ ಎರಡು ಮಾತ್ರ ಎಂದರೆ ಅಚ್ಚರಿ ಆಗಬಹುದು. ರಾಜ್ ಬಿ ಶೆಟ್ಟಿ ನಟನೆಯ ಹಾರರ್ ಥ್ರಿಲ್ಲರ್ 'ರಕ್ಕಸಪುರದೋಳ್' ವರ್ಷದ ಮೊದಲ ಹಿಟ್ ಸಿನಿಮಾ ಎನಿಸಿಕೊಂಡಿತ್ತು. ಹಾಕಿ ಬಂಡವಾಳಕ್ಕಿಂತ ಕೊಂಚ ಲಾಭವೇ ಸಿಕ್ಕಿತ್ತು. 'ಲವ್ ಮಾಕ್ಟೇಲ್- 3' ಈ ವರ್ಷ ಮತ್ತೊಂದು ಹಿಟ್ ಸಿನಿಮಾ ಎನ್ನುವುದರಲ್ಲಿ ಎರಡು ಮಾತಿಲ್ಲ. ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಟಿಸಿದ ಸಿನಿಮಾ 16ರಿಂದ 18 ಕೋಟಿ ರೂ. ಗಳಿಕೆ ಕಂಡಿತ್ತು. ವರ್ಷದ ನಿಜವಾದ ಸೂಪರ್ ಹಿಟ್ ಇದು.
ನಿರಾಸೆ ಮೂಡಿಸಿದ 'ಕೆಡಿ'
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡೋಕೆ ಬಂದ 'ಕೆಡಿ' ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ. ಒಂದು ಹಂತಕ್ಕೆ ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕರೂ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಸಿನಿಮಾ ನೋಡಲು ಬರಲಿಲ್ಲ. ಫಸ್ಟ್ ವೀಕೆಂಡ್ ಬಳಿಕ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕುಂಟಲು ಆರಂಭಿಸಿತ್ತು. 20 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ರು, ಅತಿಯಾದ ಬಜೆಟ್ ಕಾರಣಕ್ಕೆ ಸಿನಿಮಾ ಸೋಲುಂಡಿತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲೇ ಇಲ್ಲ.
ಗೆಲುವಿಗಿಂತ ಸೋಲು ಹೆಚ್ಚು
ಒಟ್ಟಾರೆ ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಗೆದ್ದ ಸಿನಿಮಾಗಳಿಗಿಂತ ಸೋತ ಸಿನಿಮಾಗಳ ಸಂಖ್ಯೆಯೇ ಹೆಚ್ಚು. 'ಲ್ಯಾಂಡ್‌ಲಾರ್ಡ್', 'ತೀರ್ಥರೂಪ ತಂದೆಯವರಿಗೆ', 'ಸೆಕೆಂಡ್ ಕೇಸ್ ಆಫ್ ಸೀತಾರಾಮ್', 'ಮ್ಯಾಂಗೋ ಪಚ್ಚ', 'ವಲವಾರ' ರೀತಿಯ ಸಿನಿಮಾಗಳನ್ನು ನೋಡಿದವರು ಮೆಚ್ಚಿದ್ದರು. ಆದರೆ ಹೆಚ್ಚು ಪ್ರೇಕ್ಷಕರನ್ನು ಸೆಳೆಯಲು ಈ ಸಿನಿಮಾಗಳು ವಿಫಲವಾಗಿದ್ದವು. 1.50 ಕೋಟಿ ರೂ. ಬಜೆಟ್ ಹಾಕಿ ನಿರ್ಮಾಪರೊಬ್ಬರು ಹಾರರ್ ಕಾಮಿಡಿ ಸಿನಿಮಾ ನಿರ್ಮಿಸಿದ್ದರು. ತಕ್ಕ ಮಟ್ಟಿಗೆ ಚಿತ್ರಕ್ಕೆ ಪ್ರೇಕ್ಷಕರ ರೆಸ್ಪಾನ್ಸ್ ಸಿಕ್ಕಿತ್ತು. ಆದರೂ 40 ಲಕ್ಷ ರೂ. ಕೂಡ ವಾಪಸ್ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಚಿತ್ರಮಂದಿರಕ್ಕೆ ಬಾರದ ಸ್ಟಾರ್ಸ್
ಮೊದಲ 6 ತಿಂಗಳಲ್ಲಿ ಧ್ರುವ ಸರ್ಜಾ ಹಾಗೂ ದುನಿಯಾ ವಿಜಯ್ ಬಿಟ್ಟರೆ ಯಾವುದೇ ಸ್ಟಾರ್ ನಟರ ಸಿನಿಮಾ ತೆರೆಗೆ ಬರಲಿಲ್ಲ. 'ಮಾರ್ಕ್' ಸಿನಿಮಾ ಕಳೆದ ವರ್ಷ ಕೊನೆಗೆ ಬಂದಿತ್ತು. ಸದ್ಯ ಸುದೀಪ್ ನಟನೆಯ ಯಾವುದೇ ಸಿನಿಮಾ ಬಿಡುಗಡೆಗೆ ಸಜ್ಜಾಗಿಲ್ಲ. 'ಕಾಂತಾರ'-1 ಬಳಿಕ ರಿಷಬ್ ಸಿನಿಮಾ ಈ ವರ್ಷ ಬರ್ತಿಲ್ಲ. ಗಣೇಶ್ ನಟನೆಯ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿಲ್ಲ. 'ಟಾಕ್ಸಿಕ್' ಸದ್ಯಕ್ಕಿಲ್ಲ. ಶ್ರೀಮುರಳಿ, ರಕ್ಷಿತ್ ಶೆಟ್ಟಿ ಅವರನ್ನು ಕೇಳುವಂತಿಲ್ಲ. ಶಿವಣ್ಣ ಮಾತ್ರ ಈ ವರ್ಷ 2 ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬರುವ ನಿರೀಕ್ಷೆಯಿದೆ.
ಸೆಕೆಂಡ್ ಹಾಫ್ ಹೇಗಿರುತ್ತೆ?
ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳು ಹೀಗೆ ಸೋಲುವುದು ಹೊಸದೇನು ಅಲ್ಲ. ಆದರೆ ಒಂದೆರಡು ಹಿಟ್ ಸಿನಿಮಾಗಳು ಎಲ್ಲಾ ಸೋಲನ್ನು ಮರೆಸಿಬಿಡುತ್ತವೆ. 'ಟಾಕ್ಸಿಕ್', 'ಸಿಟಿಲೈಟ್ಸ್', 'ಬೇಲ್', 'ಬೃಂದಾವಿಹಾರಿ' ಹೀಗೆ ಒಂದಷ್ಟು ಸಿನಿಮಾಗಳು ನಿರೀಕ್ಷೆ ಮೂಡಿಸಿವೆ.


Click it and Unblock the Notifications