Kantara 1 collection day 36: 'ಕಾಂತಾರ-1' ಚಿತ್ರದ 5 ವಾರಗಳ ಗಳಿಕೆ ಲೆಕ್ಕ ಕೊಟ್ಟ ಹೊಂಬಾಳೆ
ಚಿತ್ರಮಂದಿರಗಳಲ್ಲಿ 'ಕಾಂತಾರ- 1' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಓಟಿಟಿಗೆ ಬಂದರೂ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಹಿಂದಿ ವರ್ಷನ್ ಓಟಿಟಿಗೆ ಬಂದಿಲ್ಲ. ಹಾಗಾಗಿ ಉತ್ತರ ಭಾರತದಲ್ಲಿ ಪ್ರೇಕ್ಷಕರು ಇನ್ನು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುತ್ತಿದ್ದಾರೆ.
ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ದಾಖಲೆಯನ್ನು 'ಕಾಂತಾರ- 1' ತನ್ನದಾಗಿಸಿಕೊಂಡಿದೆ. ಸದ್ಯ ಸಿನಿಮಾ 5 ವಾರ ಪೂರೈಸಿ 6ನೇ ವಾರಕ್ಕೆ ಕಾಲಿಟ್ಟಿದೆ. ಬೆಂಗಳೂರಿನ ಸಾಕಷ್ಟು ಕಡೆಗಳಲ್ಲಿ ಸಿನಿಮಾ ಇನ್ನು ಪ್ರದರ್ಶನ ಕಾಣುತ್ತಿದೆ. ಓಟಿಟಿಗೆ ಬಂದಮೇಲೆ ಸಾಮಾನ್ಯವಾಗಿ ಯಾರೂ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಲ್ಲ. ಆದರೆ ಕೆಲ ಸಿನಿಮಾಗಳು ಆ ಮಾತನ್ನು ಸುಳ್ಳಾಗಿಸುತ್ತವೆ.

ಇತ್ತೀಚೆಗೆ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಮನೆಯಲ್ಲೇ 'ಕಾಂತಾರ- 1' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ತಮಿಳು ನಟಿ ಖುಷ್ಬು ಸಿನಿಮಾ ನೋಡಿ ಟ್ವೀಟ್ ಮಾಡಿ ರಿಷಬ್ ಶೆಟ್ಟಿ ಅವರನ್ನು ಅಭಿನಂದಿಸಿದ್ದಾರೆ. ಓಟಿಟಿಗೆ ಬಂದ ಬಳಿಕ ಸಾಕಷ್ಟು ಜನ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ದೊಡ್ಡಮಟ್ಟದಲ್ಲಿ ಸಿನಿಮಾ ಜನರನ್ನು ತಲುಪಿದೆ.
ಕಲೆಕ್ಷನ್ ವಿಚಾರದಲ್ಲಿ ಕೂಡ 'ಕಾಂತಾರ- 1' ಸದ್ದು ಮಾಡ್ತಿದೆ. 5 ವಾರಕ್ಕೆ 883 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೊಂಬಾಳೆ ಸಂಸ್ಥೆಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಭಾರತದಲ್ಲಿ ಸಿನಿಮಾ 615 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ sacnilk.com ವೆಬ್‌ಸೈಟ್ ಮಾಹಿತಿ ನೀಡಿದೆ. ಟಿಕೆಟ್ ದರ ಕಮ್ಮಿ ಮಾಡಿರುವುದು ಕೂಡ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಿದೆ. ಕಳೆದೊಂದು ವಾರದಿಂದ ಸಿನಿಮಾ ಇಂಗ್ಲೀಷ್ ಹಾಗು ಸ್ಪ್ಯಾನಿಷ್ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಿದೆ.

ಹಿಂದಿ ವರ್ಷನ್ ನಿನ್ನೆ(ನವೆಂಬರ್ 6) ಕೂಡ 60 ಲಕ್ಷ ನೆಟ್ ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕಿದ್ದಾರೆ. ಆ ಮೂಲಕ 220.54 ಕೋಟಿ ರೂ. ಬರೀ ಹಿಂದಿ ವರ್ಷನ್ ಗಳಿಸಿದೆ. ತಮಿಳುನಾಡಿನಲ್ಲಿ 70 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಕರ್ನಾಟಕದಲ್ಲಿ 250 ಕೋಟಿ ರೂ. ಗಳಿಕೆ ಕಂಡಿದೆ. ಇನ್ನು ಕೇರಳ 50 ಕೋಟಿ ರೂ. ಹಾಗೂ ಆಂಧ್ರ, ತೆಲಂಗಾಣ ಸೇರಿ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ.
'ಕಾಂತಾರ- 1' ಸಿನಿಮಾ ಪ್ರಮೋಷನ್ ಮುಗಿಸಿ ರಿಷಬ್ ಶೆಟ್ಟಿ ವಿಶ್ರಾಂತಿ ಪಡೆಯುತ್ತಿದ್ದಾರೆ. 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಚಿತ್ರಕ್ಕೆ ಸಿಕ್ಕ ರಾಜ್ಯಪ್ರಶಸ್ತಿಯನ್ನು ರಿಷಬ್ ಇತ್ತೀಚೆಗೆ ಮೈಸೂರಿನಲ್ಲಿ ಸ್ವೀಕರಿಸಿದ್ದರು. ಮುಂದೆ 'ಜೈ ಹನುಮಾನ್' ಚಿತ್ರದಲ್ಲಿ ನಟಿಸುವುದಾಗಿ ಹೇಳುತ್ತಾ ಬರ್ತಿದ್ದಾರೆ. ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ಚಿತ್ರದ ಫೋಟೊಶೂಟ್ ಸಹ ಮಾಡಿದ್ದರು. ಆ ಚಿತ್ರದಲ್ಲಿ ಹನುಮಂತ ವೇಷದಲ್ಲಿ ರಿಷಬ್ ನಟಿಸುತ್ತಿದ್ದಾರೆ.
'ಕಾಂತಾರ- 1' ಬಳಿಕ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ. ಬಹಳ ಹಿಂದೆ ಘೋಷಿಸಿದ್ದ 'ರಿಚರ್ಡ್ ಆಂಟನಿ' ಸಿನಿಮಾ ಬಗ್ಗೆ ಹೊಸ ಅಪ್‌ಡೇಟ್ ಇಲ್ಲ. ಪ್ರಭಾಸ್ ಕಾಂಬಿನೇಷನ್‌ನಲ್ಲಿ 3 ಸಿನಿಮಾಗಳು ಘೋಷಣೆ ಆಗಿದೆ. ಆದರೆ ಸದ್ಯಕ್ಕೆ ಬಾಹುಬಲಿ ನಟ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ 'ಸಲಾರ್- 2' ಸಿನಿಮಾ ಶುರುವಾಗುವುದು ತಡವಾಗಲಿದೆ.
'ಕಾಂತಾರ- 2' ಸಿನಿಮಾ ಮಾಡುವುದಾಗಿಯೂ ಘೋಷಿಸಿದ್ದಾರೆ. ಆದರೆ ಯಾವಾಗ ಎನ್ನುವುದು ಸ್ವತಃ ರಿಷಬ್ ಶೆಟ್ಟಿಗೂ ಗೊತ್ತಿಲ್ಲ. ಇನ್ನು 'ಕೆಜಿಎಫ್- 3' ಸಿನಿಮಾ ಕೂಡ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡಬೇಕಿದೆ.


Click it and Unblock the Notifications











