ಬೆಳ್ಳಿತೆರೆಯಲ್ಲಿ 'ಕಾಂತಾರ' ಜ್ವಾಲಾಮುಖಿ ; ಇನ್ನೂ ಒಂದೇ ಹೆಜ್ಜೆ- ರಿಷಬ್ ಶೆಟ್ಟಿ ಆಗ್ತಾರಾ ಬಾಕ್ಸಾಫೀಸ್‌ನ ಅಧಿಪತಿ ?
ಕುಂದಾಪುರದವರಾದರೂ ಬೆಂಗಳೂರಿಗೆ ಬಂದು ಕಾಲೇಜು ಮುಗಿಸಿ .. ಅದರ ಜೊತೆ ಜೊತೆಗೆ ರಂಗಭೂಮಿಯ ನಂಟಿಗೆ ಬಿದ್ದವರು ರಿಷಬ್ ಶೆಟ್ಟಿ. ಸದಭಿರುಚಿಯ ಚಿತ್ರಗಳನ್ನು ಮಾಡುತ್ತಲೇ ಕನ್ನಡ ಕಲಾರಸಿಕರ ಹೃದಯ ಗೆದ್ದ ರಿಷಬ್ ಸದ್ಯ ''ಕಾಂತಾರ-ಚಾಪ್ಟರ್ 1'' ಮೂಲಕ ಎಲ್ಲರನ್ನು ಇನ್ನೊಮ್ಮೆ ನಿಬ್ಬೇರಗಾಗಿಸಿದ್ದಾರೆ. ತಮ್ಮ ಅಭಿನಯದಿಂದ ಎಲ್ಲರನ್ನು ಮಂತ್ರ ಮುಗ್ದಗೊಳಿಸಿದ್ದಾರೆ. ನಂಬಿ ಹಣ ಹೂಡಿದ ಹೊಂಬಾಳೆ ನಿರ್ಮಾಣ ಸಂಸ್ಥೆಯ ಕೈಗೆ ಚಿನ್ನದ ನಿಧಿಯನ್ನೇ ನೀಡಿದ್ದಾರೆ.
ಇಂಥಾ ರಿಷಬ್ ಇನ್ನೂ ಒಂದೇ ಒಂದು ಹೆಜ್ಜೆ ಮುಂದೆ ಇಟ್ಟರೆ ಬಾಕ್ಸಾಫೀಸ್‌ನ ಅಧಿಪತಿ ಕೂಡ ಆಗಲಿದ್ದಾರೆ. ಹೌದು, ಎಲ್ಲರಿಗೆ ಗೊತ್ತಿರುವಂತೆ ಸದ್ಯ ಎಲ್ಲೆಲ್ಲೂ ಕಾಂತಾರ ಚಾಪ್ಟರ್ 1 ಕುರಿತು ಮಾತು ಕೇಳಿ ಬರುತ್ತಿದೆ. ಎರಡು ವಾರ ಆದರೂ ಕೂಡ ಬಾಕ್ಸಾಫೀಸ್‌ನಲ್ಲಿ ಎರಡಂಕಿಯ ಗಳಿಕೆಯನ್ನೇ ಚಿತ್ರ ಮಾಡುತ್ತಿದೆ.

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಕೇವಲ ಭಾರತದಲ್ಲಿಯೇ ''ಕಾಂತಾರ-ಅಧ್ಯಾಯ 1'' ಈ 15 ದಿನದಲ್ಲಿ ₹ 478.26 ಕೋಟಿ ಹಣ ದೋಚಿದೆ. ಇನ್ನು ''www.koimoi.com'' ವರದಿಯ ಪ್ರಕಾರ ಹೊರ ದೇಶದಲ್ಲಿ ಚಿತ್ರ ನೂರು ಕೋಟಿಯ ಗಡಿ ದಾಟಿದೆ. ₹104 ಕೋಟಿಯನ್ನು ಕೊಳ್ಳೆ ಹೊಡೆದಿದೆ. ಈ ಮೂಲಕ ಒಟ್ಟಾರೆಯಾಗಿ ₹582.26 ಕೋಟಿಯನ್ನು ಚಿತ್ರ ಗಳಿಸಿದೆ. ಇದರ ಜೊತೆಯಲ್ಲಿ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಚಿತ್ರಗಳ ಸಾಲಿನಲ್ಲಿ ಎರಡನೇ ಸ್ಥಾನಕ್ಕೆ ಬಂದು ''ಕಾಂತಾರ 1'' ತಲುಪಿದೆ.
ಇನ್ನೇನೇ ಇದ್ದರೂ ಕಣ್ಮುಂದೆ ಇರುವುದು ''ಛಾವಾ'' ಚಿತ್ರದ ಗಳಿಕೆ ಮಾತ್ರ. ''ಛಾವಾ'' ದಾಖಲೆ ಮುರಿದರೆ ವಿಕ್ಕಿ ಕೌಶಲ್ ಕುಳಿತಿದ್ದ ಸ್ಥಾನದಲ್ಲಿ ರಿಷಬ್ ಬಂದು ವಿರಾಜಮಾನರಾಗಲಿದ್ದಾರೆ.

ಹೌದು, ಈ ವರ್ಷದ ಆರಂಭದಲ್ಲಿ ತೆರೆಗೆ ಬಂದ ''ಛಾವಾ'' ಚಿತ್ರಮಂದಿರದಲ್ಲಿ 98 ದಿನ ಪ್ರದರ್ಶನ ಕಂಡಿತ್ತು. ''ಸ್ಯಾಕ್ನಿಲ್'' ಪ್ರಕಾರ ಭಾರತದಲ್ಲಿ ₹ 601.54 ಕೋಟಿ ಗಳಿಸಿತ್ತು. ಇನ್ನೂ ವಿದೇಶದ ಗಳಿಕೆಯನ್ನು ಕೂಡ ಸೇರಿಸಿದರೆ ''ಛಾವಾ'' ಚಿತ್ರದ ಒಟ್ಟು ಗಳಿಕೆ ₹ 807.91 ಕೋಟಿಯಾಗಿತ್ತು. ಈ ದಾಖಲೆಯ ಹತ್ತಿರಕ್ಕೆ ಈಗ ರಿಷಬ್ ಶೆಟ್ಟಿ ಬಂದು ತಲುಪಿದ್ದಾರೆ. ಇನ್ನೇನಿದ್ದರೂ ಈ ದಾಖಲೆಯನ್ನು ಹಿಂದಿಕ್ಕುವ ಸವಾಲು ಮಾತ್ರ ಇದೆ. ದೀಪಾವಳಿ ಹಬ್ಬದ ಪ್ರಯುಕ್ತ ಸಾಲು ಸಾಲು ರಜೆಗಳು ಶುರುವಾಗುವ ಹಿನ್ನೆಲೆ ರಿಷಬ್ ಶೆಟ್ಟಿ ಈ ದಾಖಲೆ ಮುರಿಯುವ ಸಾಧ್ಯತೆ ಇದೆ.
ಟ್ರೇಡ್ ವಿಶ್ಲೇಷಕರ ಪ್ರಕಾರ ರಿಷಬ್ ಶೆಟ್ಟಿಗೆ ಇದು ಸುಗಮದ ಹಾದಿ. ಹಾಗೊಂದು ವೇಳೆ ಇದು ನಿಜಾ ಆದರೆ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಚಿತ್ರ ''ಕಾಂತಾರ ಚಾಪ್ಟರ್ 1'' ಆಗಲಿದೆ. ಅತಿ ಹೆಚ್ಚು ಹಣ ಗಳಿಸಿದ ಚಿತ್ರದ ನಾಯಕ ಮತ್ತು ನಿರ್ದೇಶಕ ಎಂಬ ಹೆಗ್ಗಳಿಕೆಗೆ ರಿಷಬ್ ಶೆಟ್ಟಿ ಪಾತ್ರವಾಗಲಿದ್ದಾರೆ. ಬೆಳ್ಳಿತೆರೆಯಲ್ಲಿ ಈ ಪವಾಡ ನಡೆಯುತ್ತಾ ? ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ


Click it and Unblock the Notifications











