ಬೆಳ್ಳಿತೆರೆಯಲ್ಲಿ ''ಕಾಂತಾರ-ಚಾಪ್ಟರ್ 1'' ಧಗಧಗ, ಕಂಗಾಲಾದ ಕರಣ್ ಜೋಹರ್
ದಕ್ಷಿಣ ಭಾರತೀಯ ಚಿತ್ರರಂಗದ ಅಬ್ಬರ, ಬಾಲಿವುಡ್ ನ ಬಾವಿಗೆ ತಳ್ಳಿದೆ ಎನ್ನುವುದು ಅನೇಕರ ಅಭಿಪ್ರಾಯ. ಹಾಗೇ ನೋಡಿದರೆ ಈ ಮಾತು ನಿಜಾ ಕೂಡಾ ಹೌದು. ಯಾಕೆಂದರೆ ಕೊರೊನಾ ನಂತರದ ದಿನಗಳಲ್ಲಿ ಬಾಲಿವುಡ್ ಎದ್ದಿದ್ದು ಕಡಿಮೆ. ಬೋರಲು ಬಿದ್ದಿದ್ದೇ ಹೆಚ್ಚು. ಕೊರೊನಾ ನಂತರ ಒಂದು ಕಡೆ ''ಬಾಹುಬಲಿ 1 ಮತ್ತು 2''.. ''ಕೆಜಿಎಫ್ 1 ಮತ್ತು 2'' .. ''ಪುಷ್ಪ 1 ಮತ್ತು 2'' ..''ಆರ್‌ಆರ್‌ಆರ್'' .. ''ಕಾಂತಾರ'' .. ''777 ಚಾರ್ಲಿ'' ...
ಅಂತಹ ಚಿತ್ರಗಳು ಅಬ್ಬರಿಸಿದ್ದರೆ ಬಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರಗಳೆಲ್ಲವೂ ನೆಲಕಚ್ಚಿದ್ದವು. ಆದರೆ.. 2023ರ ಸುಮಾರು ಬಾಲಿವುಡ್ ನಿಧಾನವಾಗಿ ಚೇತರಿಸಿಕೊಳ್ಳಲು ಶುರು ಮಾಡಿತ್ತು. ಹಾಗಂಥ.. ಮೊದಲಿನ ಲಯಕ್ಕೆ ಹಿಂದಿ ಉದ್ಯಮ ಆಗಲೂ ಮರಳಲಿಲ್ಲ. ಈಗಲೂ ಕೂಡ ಮರಳಿಲ್ಲ. ಅಲ್ಲೊಂದು.. ಇಲ್ಲೊಂದು.. ಚಿತ್ರಗಳು ಮಾತ್ರ ಮಕಾಡೆ ಮಲಗಿದ ಬಾಲಿವುಡ್‌ನ ಬಡಿದೆಬ್ಬಿಸುತ್ತಿವೆ.

ಮಿಕ್ಕಂತೆ "ಛಾವಾ" .. "ಸೈಯಾರ" ಹೊರತು ಪಡಿಸಿದರೆ ಸೌತ್ ಸಿನಿಮಾ ರಂಗದವರಿಗೆ ಉತ್ತರ ಕೊಡುವಂತಹ ಒಂದೇ ಒಂದು ಚಿತ್ರವನ್ನು ಕೂಡ ಬಾಲಿವುಡ್ ಕಳೆದ ಐದಾರು ವರ್ಷಗಳಲ್ಲಿ ನೀಡಿಲ್ಲ. ನೀಡಲೂ ಸಾಧ್ಯವಾಗುವುದು ಇಲ್ಲ. ಈ ಮಾತನ್ನೂ "ಕಾಂತಾರ ಚಾಪ್ಟರ್ 1" ಮತ್ತೊಮ್ಮೆ ನಿರೂಪಿಸಿದೆ.
ಹೌದು, ಉತ್ತರ ಭಾರತದಲ್ಲಿ ''ಕಾಂತಾರ'' ಮೊದಲ ಭಾಗಕ್ಕೆ ಸಿಕ್ಕ ಪ್ರತಿಕ್ರಿಯೆ, ಆ ಸಂಭ್ರಮ..ಮೂರು ವರ್ಷದ ಹಿಂದೆ ಚಿತ್ರ ಮಾಡಿದ್ದ ದಾಖಲೆ.. ಎಲ್ಲವನ್ನೂ ಮರೆತು ಬಾಲಿವುಡ್‌ನ ಪ್ರಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ತಮ್ಮ ನಿರ್ಮಾಣದಡಿ ಸಿದ್ದವಾದ "ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ" ಚಿತ್ರವನ್ನು ತೆರೆಗೆ ತಂದಿದ್ದರು.
ಆದರೆ ತಾವು ಮಾಡಿದ ಈ ತಪ್ಪಿಗೆ ಈಗ ಕರಣ್ ಜೋಹರ್‌ಗೆ ಕೈ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ಬಂದಿದೆ. ಯಾಕೆಂದರೆ ''ಕಾಂತಾರ-ಚಾಪ್ಟರ್ 1'' ಎದುರು ಬಂದ ವರುಣ್ ಧವನ್ ಮತ್ತು ಜಾಹ್ನವಿ ಕಪೂರ್ ಅಭಿನಯದ ''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ಚಿತ್ರವನ್ನು ಉತ್ತರ ಭಾರತದ ಪ್ರೇಕ್ಷಕರೇ ಎಡಗಾಲಿನಲ್ಲಿ ಒದ್ದಿದ್ದಾರೆ. ದೈವಾವತಾರ ಮತ್ತು ರಿಷಬ್ ಶೆಟ್ಟಿಯ ರೌದ್ರಾವತಾರದ ಕಥೆಯನ್ನೊಂದಿರುವ ''ಕಾಂತಾರ'' ನೋಡಲು ಬಲಗಾಲಿಟ್ಟು ಚಿತ್ರಮಂದಿರದೊಳಗೆ ಬರುತ್ತಿದ್ದಾರೆ. ಇದಕ್ಕೆ ಕೈಗನ್ನಡಿಯೇ ಈ ಎರಡು ಚಿತ್ರದ ಗಳಿಕೆ.
ಹೌದು, ''ಕಾಂತಾರ'' ಚಿತ್ರದ ಎದುರು ಬಂದ ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್ ನಿರ್ಮಾಣದಡಿ ಸಿದ್ಧವಾದ '' ಸನ್ನಿ ಸಂಸ್ಕಾರಿ ಕಿ ತುಳಿ ಕುಮಾರಿ'' ಚಿತ್ರಕ್ಕೆ ಬಾಕ್ಸಾಫೀಸ್‌ನಲ್ಲಿ ಭಾರೀ ಹಿನ್ನೆಡೆಯಾಗಿದೆ. ಇದಕ್ಕೆ ಪುರಾವೆ ಎನ್ನುವಂತೆ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ '' ಸ್ಯಾಕ್ನಿಲ್'' '' ಸನ್ನಿ ಸಂಸ್ಕಾರಿ ಕಿ ತುಳಿ ಕುಮಾರಿ'' ಚಿತ್ರದ ಮೊದಲ ಎರಡು ದಿನ ಲೆಕ್ಕ ನೀಡಿದ್ದು ಈ ಎರಡು ದಿನದಲ್ಲಿ ₹20 ಕೋಟಿಯ ಗಡಿಯನ್ನು ಕೂಡ ಈ ಚಿತ್ರ ತಲುಪಿಲ್ಲ. ಆದರೆ ಈ ಎರಡು ದಿನದಲ್ಲಿ ಕನ್ನಡದ ''ಕಾಂತಾರ'' ಹಿಂದಿ ಮಾರುಕಟ್ಟೆಯಲ್ಲಿ ₹32 ಕೋಟಿ ಹಣವನ್ನು ಗಳಿಸಿದೆ. ಈ ಹಿನ್ನೆಲೆ ''ಕಾಂತಾರ-ಚಾಪ್ಟರ್ 1'' ಚಿತ್ರದ ಅಬ್ಬರ-ಆಡಂಬರ ಉತ್ತರ ಭಾರತದಲ್ಲಿ ಹೇಗಿದೆ ಎನ್ನುವುದನ್ನು ನೀವೆ ಲೆಕ್ಕ ಹಾಕಿ.

ಸ್ಯಾಕ್ನಿಲ್ ಪ್ರಕಾರ ''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ಚಿತ್ರದ ಮೊದಲ ಎರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ[ಗುರುವಾರ] ₹ 9.25 ಕೋಟಿ
ಎರಡನೇ ದಿನ[ಶುಕ್ರವಾರ] ₹ 5.5 ಕೋಟಿ
ಒಟ್ಟು ಗಳಿಕೆ ₹ 14.75 ಕೋಟಿ
ಬಾಲಿವುಡ್ ಬಾಕ್ಸಾಫೀಸ್ ಪಂಡಿತರಾದ ತರಣ್ ಆದರ್ಶ್ ಪ್ರಕಾರ ''ಕಾಂತಾರ-ಅಧ್ಯಾಯ 1'' (ಹಿಂದಿ ವರ್ಷನ್) ಮೊದಲ ಎರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ[ಗುರುವಾರ] ₹ 18.50 ಕೋಟಿ
ಎರಡನೇ ದಿನ[ಶುಕ್ರವಾರ] ₹ 13.50 ಕೋಟಿ
ಒಟ್ಟು ಗಳಿಕೆ - ₹ 32 ಕೋಟಿ
ಹೀಗೆ ''ಕಾಂತಾರ-ಚಾಪ್ಟರ್ 1'' ಚಿತ್ರ ಹಿಂದಿ ಮಾರುಕಟ್ಟೆಯಲ್ಲಿ ₹ 32 ಕೋಟಿಯನ್ನು ಕೇವಲ ಎರಡೇ ದಿನದಲ್ಲಿ ಕೊಳ್ಳೆ ಹೊಡೆದಿದೆ. ಮತ್ತೊಂದು ಕಡೆ ಅವರದ್ದೇ ಸ್ಟಾರ್‌ಗಳು ಆಕ್ಟ್ ಮಾಡಿರುವ '' ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ಹಣ ಗಳಿಸಲು ಸಾಧ್ಯವಾಗದೇ ಪರದಾಡುತ್ತಿದೆ.''ಕಾಂತಾರ''ದ ಅಲೆಯ ಮುಂದೆ ಕರಣ್ ಜೋಹರ್ ನಿರ್ಮಾಣದ '' ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ನಿಲ್ಲುತ್ತಾ..? ನಿಂತರೂ ಕೂಡ ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











