ಓಟಿಟಿಗೆ ಬಂದ 'ಕೆಡಿ'; ಬಾಕ್ಸಾಫೀಸ್‌ನಲ್ಲಿ ಸಿನಿಮಾ ಗಳಿಸಿದ್ದೆಷ್ಟು? ನಷ್ಟ ಆಗಿದ್ದೆಷ್ಟು?
ಪ್ರೇಮ್ ನಿರ್ದೇಶನದ 'ಕೆಡಿ: ದಿ ಡೆವಿಲ್' ಸಿನಿಮಾ ಸದ್ಯ ಜೀ5ನಲ್ಲಿ ಸ್ಟ್ರೀಮಿಂಗ್ ಆಗ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗಿತ್ತು. ಒಳ್ಳೆ ಓಪನಿಂಗ್ ಪಡೆದುಕೊಂಡರೂ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗಿತ್ತು. ತೆರೆಕಂಡ 33 ದಿನಕ್ಕೆ ಓಟಿಟಿಗೆ ಬಂದಿದೆ. ಕನ್ನಡ ಬಿಟ್ಟರೆ ತೆಲುಗಿನಲ್ಲಿ ಮಾತ್ರ ಸಿನಿಮಾ ಬೆಳ್ಳಿಪರದೆ ಮೇಲೆ ಅಪ್ಪಳಿಸಿತ್ತು.
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಭಾರೀ ಬಜೆಟ್‌ನಲ್ಲೇ 'ಕೆಡಿ' ಸಿನಿಮಾ ನಿರ್ಮಾಣ ಮಾಡಿತ್ತು. ಧ್ರುವ ಸರ್ಜಾ ಜೊತೆಗೆ ಸಂಜಯ್ ದತ್, ರವಿಚಂದ್ರನ್, ರಮೇಶ್ ಅರವಿಂದ್ ಚಿತ್ರದ ತಾರಾಗಣದಲ್ಲಿದ್ದರು. ಅತಿಥಿ ಪಾತ್ರದಲ್ಲಿ ಕಿಚ್ಚ ಸುದೀಪ್ ನಟಿಸಿದ್ದರು. ಪ್ರೇಮ್ ಪ್ರಯತ್ನ, ಧ್ರುವ ಸರ್ಜಾ ನಟನೆ ಬಗ್ಗೆ ಒಳ್ಳೆ ಮಾತುಗಳು ಕೇಳಿಬಂದಿತ್ತು. ಇಬ್ಬರೂ ಸೋಲಿನ ಸುಳಿಯಿಂದ ಹೊರಬಂದಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಆದರೂ
'ಕೆಡಿ' ಬಾಕ್ಸಾಫೀಸ್‌ನಲ್ಲಿ ಜಾದೂ ಮಾಡಲಿಲ್ಲ.

ಓಟಿಟಿಯಲ್ಲಿ ಸಿನಿಮಾ
ಸದ್ಯ 'ಕೆಡಿ' ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಟ್ಟಿದೆ. ಜೀ5ನಲ್ಲಿ ಸಿನಿಮಾ ನೋಡಬಹುದು. ಈಗಾಗಲೇ ಕೆಲವರು ಓಟಿಟಿಯಲ್ಲಿ ಸಿನಿಮಾ ನೋಡಿ ಟ್ವಿಟರ್‌ನಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಆವರೇಜ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಓಟಿಟಿಯಲ್ಲಿ ಕೂಡ ನಿರೀಕ್ಷಿತ ಮಟ್ಟದಲ್ಲಿ ಚಿತ್ರಕ್ಕೆ ರೆಸ್ಪಾನ್ಸ್ ಸಿಕ್ತಿಲ್ಲ ಎನ್ನುವುದು ಬೇಸರದ ಸಂಗತಿ.
ಬಾಕ್ಸಾಫೀಸ್ ಕಲೆಕ್ಷನ್
ಒಟ್ಟಾರೆ 30 ದಿನಗಳ ಬಳಿಕ 'ಕೆಡಿ' ಸಿನಿಮಾ ಓಟಿಟಿಗೆ ಬಂದಿದೆ. ಒಂದೆರಡು ಕಡೆ ಬಿಟ್ಟರೆ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಬಹುತೇಕ ಮುಕ್ತಾಯವಾಗಿದೆ. ಒಟ್ಟಾರೆ ಸಿನಿಮಾ 25ರಿಂದ 30 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಕಲೆಕ್ಷನ್ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಕೊಟ್ಟಿಲ್ಲ. ಕರ್ನಾಟಕದಲ್ಲಿ 30.50 ಕೋಟಿ ರೂ, ಆಂಧ್ರ ತೆಲಂಗಾಣದಲ್ಲಿ 1.98 ಕೋಟಿ ರೂ, ಹಾಗೂ ಹೊರ ರಾಜ್ಯಗಳಲ್ಲಿ 14 ಲಕ್ಷ ರೂ, ಸೇರಿ ಸಿನಿಮಾ 35 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗ್ತಿದೆ. ನೆಟ್ ಕಲೆಕ್ಷನ್ 22ರಿಂದ 25 ಕೋಟಿ ರೂ. ಆಗಿರಬಹುದು ಎಂದು ಊಹಿಸಲಾಗ್ತಿದೆ.

ಓಟಿಟಿ, ಸ್ಯಾಟಲೈಟ್ ರೈಟ್ಸ್
ಕನ್ನಡ ಸಿನಿಮಾಗಳನ್ನು ಕೊಂಡುಕೊಳ್ಳಲು ಓಟಿಟಿ ಸಂಸ್ಥೆಗಳು ಹಿಂದೇಟು ಹಾಕುತ್ತಿವೆ. ಪೇ ಫಾರ್ ವೀವ್ ಲೆಕ್ಕದಲ್ಲಿ ಸ್ಟ್ರೀಮಿಂಗ್ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. 'ಕೆಡಿ' ಸಿನಿಮಾ ಓಟಿಟಿ ರೈಟ್ಸ್ ಕೂಡ ನಿರೀಕ್ಷಿತ ಮಟ್ಟದಲ್ಲಿ ಆದಾಯ ತಂದುಕೊಟ್ಟಿಲ್ಲ ಎನ್ನಲಾಗ್ತಿದೆ. ಒಟ್ಟಾರೆ ಚಿತ್ರತಂಡ ಮೌನಕ್ಕೆ ಜಾರಿದ್ದು ಯಾವುದೇ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
'ಕೆಡಿ' ಚಿತ್ರದಿಂದ ನಷ್ಟ?
ಒಂದು ಹಂತಕ್ಕೆ 'ಕೆಡಿ' ಸಿನಿಮಾ ಗಳಿಕೆ ಚೆನ್ನಾಗಿಯೇ ಇದೆ. ಆದರೆ ಬಜೆಟ್ ಹೆಚ್ಚಾಗಿ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಿದೆ. ಚಿತ್ರಕ್ಕಾಗಿ ಪ್ರೇಮ್, ಧ್ರುವ, ಸಂಜಯ್ ದತ್ ಭಾರೀ ಮೊತ್ತದ ಸಂಭಾವನೆ ಪಡೆದಿದ್ದಾರೆ. ಇನ್ನು ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದಾರೆ. ಹಾಗಾಗಿ ಬಜೆಟ್ 50 ಕೋಟಿ ರೂ. ದಾಟಿದೆ ಎಂದು ಹೇಳಲಾಗ್ತಿದೆ. ಸದ್ಯ ಬಾಕ್ಸಾಫೀಸ್, ಓಟಿಟಿ- ಸ್ಯಾಟಲೈಟ್ ರೈಟ್ಸ್ ಎಲ್ಲಾ ಲೆಕ್ಕ ಹಾಕಿದ್ರು, ಸಿನಿಮಾ ಗಳಿಕ 35 ಕೋಟಿ ರೂ. ದಾಟಿರುವುದು ಅನುಮಾನ. ಇದೇ ಕಾರಣಕ್ಕೆ ಸಿನಿಮಾ ನಷ್ಟ ಅನುಭವಿಸಿದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ.
'ಕೆಡಿ' ಪಾರ್ಟ್- 2 ಯಾವಾಗ?
ಕ್ಲೈಮ್ಯಾಕ್ಸ್‌ನಲ್ಲಿ ಸುದೀಪ್ ಪಾತ್ರವನ್ನು ಪರಿಚಯಿಸಿ ಪ್ರೇಮ್ ಸರ್‌ಪ್ರೈಸ್ ನೀಡಿದ್ದರು. 'ಕೆಡಿ' ಪಾರ್ಟ್- 2 ಮಾಡುವುದಾಗಿ ಘೋಷಿಸಿದ್ದಾರೆ. ಆದರೆ ಮೊದಲ ಭಾಗದ ಫಲಿತಾಂಶ ನೋಡಿದ ಮೇಲೆ ಸೀಕ್ವೆಲ್ ಕಥೆ ಏನು? ಎನ್ನುವ ಚರ್ಚೆ ಶುರುವಾಗಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications