KD Boxoffice Day 4: ಗುರುವಾರಕ್ಕಿಂತ ಭಾನುವಾರ ಜಾಸ್ತಿ; 'ಕೆಡಿ' ಫಸ್ಟ್ ವೀಕೆಂಡ್ ಕಲೆಕ್ಷನ್ ಎಷ್ಟು?
ಧ್ರುವ ಸರ್ಜಾ ನಟನೆಯ 'ಕೆಡಿ: ದಿ ಡೆವಿಲ್' ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆದಿದೆ. ಫಸ್ಟ್ ವೀಕೆಂಡ್ ಒಳ್ಳೆ ಗಳಿಕೆ ಕಂಡಿರುವ ಸಿನಿಮಾ ಸೋಮವಾರಕ್ಕೆ ಕಾಲಿಟ್ಟಿದೆ. ಗುರುವಾರಕ್ಕೆ ಹೋಲಿಸಿದರೆ ಭಾನುವಾರ ಸಿನಿಮಾ ಕಲೆಕ್ಷನ್ ಹೆಚ್ಚಾಗಿದೆ. ಒಟ್ಟಾರೆ ಫಸ್ಟ್ ವೀಕೆಂಡ್ ಪ್ರೇಕ್ಷಕರಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಅಧಿಕೃತವಾಗಿ ಚಿತ್ರತಂಡ ಸಿನಿಮಾ ಕಲೆಕ್ಷನ್ ಲೆಕ್ಕ ಕೊಟ್ಟಿಲ್ಲ. ಆದರೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ 'ಕೆಡಿ' ಕಲೆಕ್ಷನ್ ಹೇಗಿದೆ ಎನ್ನುವುದಕ್ಕೆ ದಿಕ್ಸೂಚಿಯಾಗಿದೆ. ಆದರೆ ಇಷ್ಟು ದೊಡ್ಡ ಬಜೆಟ್ ಚಿತ್ರಕ್ಕೆ ಇದು ಕಮ್ಮಿ ಆಯ್ತು. ಚಿತ್ರಕ್ಕೆ ಪಾಸಿಟಿವ್ ಟಾಕ್ ಬಂದಿದ್ದೇ ಸಮಾಧಾನಕರ ಸಂಗತಿ. ಪ್ರೇಮ್ ಹಾಗೂ ಧ್ರುವ ಸರ್ಜಾ ಇಬ್ಬರಿಗೂ ಒಂದು ಬ್ರೇಕ್ ಬೇಕಿತ್ತು. ಸಾಧ್ಯವಾದ ಮಟ್ಟಕ್ಕೆ 'ಕೆಡಿ' ಇಬ್ಬರ ಕೈ ಹಿಡಿದಿದ್ದಾನೆ. ಶನಿವಾರ ಸಿನಿಮಾ ಕಲೆಕ್ಷನ್ ಕೊಂಚ ಕಮ್ಮಿ ಆಗಿತ್ತು. ಭಾನುವಾರ ಮತ್ತೆ ಚೇತರಿಕೆ ಕಂಡಿದೆ.

4ನೇ ದಿನದ ಕಲೆಕ್ಷನ್
sacnilk.com ವರದಿ ಪ್ರಕಾರ 4ನೇ ದಿನ ಅಂದ್ರೆ ಭಾನುವಾರ 'ಕೆಡಿ' ಚಿತ್ರ 4.67 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಆ ಮೂಲಕ ಫಸ್ಟ್ ವೀಕೆಂಡ್ 13.72 ಕೋಟಿ ರೂ. ದೋಚಿದಂತಾಗಿದೆ. ಗುರುವಾರ ಹಾಗೂ ಶುಕ್ರವಾರ 3.50 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಆಕ್ಷನ್ ಥ್ರಿಲ್ಲರ್ ಶನಿವಾರ 2.05 ಕೋಟಿ ರೂ. ಕಮಾಯಿ ಮಾಡಿತ್ತು.
ಆನ್‌ಲೈನ್ ಟಿಕೆಟ್ ಬುಕ್ಕಿಂಗ್
ಬುಕ್‌ಮೈ ಶೋನದಲ್ಲಿ 'ಕೆಡಿ' ಚಿತ್ರಕ್ಕೆ ರೆಸ್ಪಾನ್ಸ್ ಹೇಗಿದೆ ಎನ್ನುವುದು ಗೊತ್ತಾಗುತ್ತಿದೆ. 52 ಸಾವಿರ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆಗಿತ್ತು. ಬಳಿಕ ಗುರುವಾರ 50, ಶುಕ್ರವಾರ 73 ಸಾವಿರ, ಶನಿವಾರ 39 ಸಾವಿರ ಹಾಗೂ ಭಾನುವಾರ 50 ಸಾವಿರ ಟಿಕೆಟ್ ಆನ್‌ಲೈನ್‌ನಲ್ಲು ಬುಕ್ ಆಗಿದೆ.

ಸೋಮವಾರ ನಿರ್ಣಾಯಕ
'ಕೆಡಿ' ಸಿನಿಮಾ ಬಾಕ್ಸಾಫೀಸ್ ಲೆಕ್ಕಾಚಾರ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಯಾವುದೇ ಸಿನಿಮಾ ಫಸ್ಟ್ ವೀಕೆಂಡ್ ಒಳ್ಳೆ ಗಳಿಕೆ ಮಾಡುತ್ತದೆ. ಆದರೆ ವೀಕೆಂಡ್ ಮುಗಿದು ವಾರದ ದಿನಗಳು ಆರಂಭವಾಗುತ್ತಿದ್ದಂತೆ ಅಸಲಿ ಬಂಡವಾಳ ಗೊತ್ತಾಗುತ್ತದೆ. ಸೋಮವಾರ(ಮೇ 4) ಧ್ರುವ ಸಿನಿಮಾ ಹೇಗೆ ಸದ್ದು ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಾ ಎನ್ನುವುದು ಗೊತ್ತಾಗಲಿದೆ.
ಅತಿಯಾದ ಬಜೆಟ್
ಒಂದು ಹಂತಕ್ಕೆ 'ಕೆಡಿ' ಗಳಿಕೆ ಚೆನ್ನಾಗಿದೆ. ಆದರೆ ಅತಿಯಾದ ಬಜೆಟ್ ಭಾರಕ್ಕೆ ಚಿತ್ರ ಕುಸಿಯುವಂತಾಗಿದೆ. ಅದ್ಧೂರಿಯಾಗಿ ನಿರ್ಮಾಣವಾಗಿರುವ ಚಿತ್ರ ನಿರ್ಮಾಪಕರಿಗೆ ಲಾಭ ತಂದುಕೊಡುವುದು ಸುಳ್ಳಲ್ಲ. ಓಟಿಟಿ, ಸ್ಯಾಟಲೈಟ್ ರೈಟ್ಸ್ ಕೂಡ ನಿರೀಕ್ಷಿತ ಮಟ್ಟದಲ್ಲಿ ಆದಾಯ ತಂದು ಕೊಟ್ಟಿಲ್ಲ ಎನ್ನಲಾಗ್ತಿದೆ. ಅಮೇಜಾನ್ ಪ್ರೈಂನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುವ ನಿರೀಕ್ಷೆಯಿದೆ.
ಪ್ಯಾನ್ ಇಂಡಿಯಾ ಪೆಟ್ಟು
'ಕೆಡಿ' ಚಿತ್ರವನ್ನು 5 ಭಾಷೆಗಳಲ್ಲಿ ದೊಡ್ಡಮಟ್ಟದಲ್ಲಿ ಕಟ್ಟಿಕೊಡುವ ಪ್ರಯತ್ನ ನಡೀತು. ಅದೇ ಕಾರಣಕ್ಕೆ ಸಂಜಯ್ ದತ್ ಹಾಗೂ ಶಿಲ್ಪಾ ಶೆಟ್ಟಿ ಅವರನ್ನು ಪ್ರೇಮ್ ಆಯ್ಕೆ ಮಾಡಿಕೊಂಡಿದ್ದರು. ಭಾರೀ ಸಂಭಾವನೆ ಕೊಟ್ಟು, ಕೋಟಿ ಕೋಟಿ ಸುರಿದು ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ಮಾಡಿದ್ದರು. ಚಿತ್ರದ ಸ್ಪೆಷಲ್ ಸಾಂಗ್ ವಿವಾದ ಹುಟ್ಟಾಕಿ ಹಿನ್ನಡೆ ಆಗಿತ್ತು. ಇನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಿಲ್ಲ. ಕನ್ನಡದಲ್ಲಿ ರೆಸ್ಪಾನ್ಸ್ ನೋಡಿಕೊಂಡು ಮುಂದೆ ಬೇರೆ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡುತ್ತೇವೆ ಎಂದು ಪ್ರೇಮ್ ಹೇಳಿದ್ದಾರೆ.
'ಕೆಡಿ' ಸೀಕ್ವೆಲ್
ಈಗಾಗಲೇ 'ಕೆಡಿ' ಸೀಕ್ವೆಲ್ ಕೂಡ ಘೋಷಣೆ ಮಾಡಲಾಗಿದೆ. ಕಿಚ್ಚ ಸುದೀಪ್ ಕೂಡ ಪ್ರೇಮ್ ಜೊತೆ ಕೈ ಜೋಡಿಸಿರುವುದರಿಂದ 2ನೇ ಭಾಗದ ಬಗ್ಗೆ ಕೊಂಚ ನಿರೀಕ್ಷೆಯಿದೆ. ಇನ್ನೊಂದು ವರ್ಷದಲ್ಲಿ ಸಿನಿಮಾ ತೆರೆಗೆ ಬರುತ್ತದೆ ಎಂದು ಹೇಳಲಾಗ್ತಿದೆ.


Click it and Unblock the Notifications