Kuberaa Box Office Day 1 ; ಕಮಲ್ ಹಾಸನ್ 'ಥಗ್ ಲೈಫ್' ಗಳಿಕೆ ಹಿಂದಿಕ್ಕಲು ವಿಫಲವಾದ ‘ಕುಬೇರ’ !
ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲ ಪಕ್ಕದ ಕಾಲಿವುಡ್‌ನಲ್ಲಿ ಕೂಡ ಈ ವರ್ಷ ಗೆದ್ದ ಚಿತ್ರಗಳ ಸಂಖ್ಯೆ ಕಡಿಮೆ ಇದೆ. ಟೂರಿಸ್ಟ್ ಫ್ಯಾಮಿಲಿ.. ಡ್ರ್ಯಾಗನ್.. ಹೀಗೆ ಒಂದು ನಾಲ್ಕೈದು ಚಿತ್ರಗಳು ಮಾತ್ರ ತಮಿಳುನಾಡಿನಲ್ಲಿ ಗೆದ್ದಿವೆ. ಸದ್ದು ಮಾಡಿವೆ. ಇನ್ನು, ಸ್ಟಾರ್‌ಗಳಿಗೆ ಈ ಆರು ತಿಂಗಳಿನಲ್ಲಿ ದಕ್ಕಿದ್ದು ಸೋಲು ಮಾತ್ರ. ಚಿಯಾನ್ ವಿಕ್ರಮ್.. ಸೂರ್ಯ.. ಕಮಲ್ ಹಾಸನ್.. ಅವರ..
ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಈ ವರ್ಷ ಮಕಾಡೆ ಮಲಗಿವೆ. ಅಜಿತ್ ಅಭಿನಯದ ಗುಡ್ ಬ್ಯಾಡ್ ಅಗ್ಲಿ ಮಾತ್ರ ಹಣವನ್ನು ದೋಚುವಲ್ಲಿ ಯಶಸ್ವಿಯಾಗಿದೆ. ಇದೇ ಅಜಿತ್ ಅಭಿನಯದ ವಿಡಾಮುಯಾರ್ಚಿ ಈ ವರ್ಷದ ಪರಮತೋಪು ಚಿತ್ರಗಳಲ್ಲಿ ಒಂದು.

ಹೀಗಿರುವಾಗ ಇದೀಗ ಅಖಾಡಕ್ಕೆ ಧನುಷ್ ಇಳಿದಿದ್ದಾರೆ. ತಮ್ಮ ಕುಬೇರ ಚಿತ್ರವನ್ನು ಪ್ರೇಕ್ಷಕರ ಮಡಿಲಿಗೆ ಹಾಕಿದ್ದಾರೆ. ಆದರೆ.. ಧನುಷ್ ನಿರೀಕ್ಷೆ ಮಾಡಿದ್ದ ಸ್ವಾಗತ ಕುಬೇರಗೆ ಸಿಕ್ಕಿಲ್ಲ. ಕಮಲ್ ಹಾಸನ್ ಅಭಿನಯದ 'ಥಗ್ ಲೈಫ್' ಚಿತ್ರದ ಗಳಿಕೆಯನ್ನು ಮೊದಲ ದಿನ ಕುಬೇರ ಹಿಂದಿಕ್ಕಲಿಲ್ಲ.
ಹೌದು, ಚಿತ್ರದ ಗಳಿಕೆಯ ಲೆಕ್ಕಾಚಾರವನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಕುಬೇರ ನಿನ್ನೆ { ಜೂನ್ 20 } ಕೇವಲ ₹13 ಕೋಟಿಯನ್ನು ಗಳಿಸಿದೆ.
ಇನ್ನು, ಅಪಾರವಾದ ನಿರೀಕ್ಷೆಗಳೊಂದಿಗೆ ಕರ್ನಾಟಕ ಹೊರತು ಪಡಿಸಿ ಬೇರೆ ಎಲ್ಲೆಡೆ ತೆರೆಗೆ ಬಂದಿದ್ದ ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಚಿತ್ರ ಸ್ಯಾಕ್ನಿಲ್ ವರದಿಯ ಪ್ರಕಾರ ಮೊದಲ ದಿನ ₹15.5 ಕೋಟಿಯನ್ನು ಗಳಿಸಿತ್ತು. ಆದರೆ ಕುಬೇರ ಕೇವಲ ₹13 ಕೋಟಿ ಗಳಿಸಿದೆ. ಈ ಮೂಲಕ ಥಗ್ ಲೈಫ್ ಗೆ ಸೆಡ್ಡು ಹೊಡೆಯುವಲ್ಲಿ ಕುಬೇರ ವಿಫಲವಾಗಿದೆ.
ರಾಯನ್ ವರ್ಸಸ್ ಕುಬೇರ
ಕಳೆದ ವರ್ಷ ತೆರೆಗೆ ಬಂದಿದ್ದ, ಧನುಷ್ ಅಭಿನಯಿಸಿ ನಿರ್ದೇಶಿಸಿದ್ದ 'ರಾಯನ್' ಚಿತ್ರ ಮೊದಲ ದಿನ ಹಿಂದೂಸ್ತಾನ್ ಟೈಮ್ಸ್ ವರದಿಯಂತೆ ₹15.7 ಕೋಟಿಯನ್ನು ಗಳಿಸಿತ್ತು. ಈ ಗಳಿಕೆಯನ್ನು ಕೂಡ ಹಿಂದಿಕ್ಕುವಲ್ಲಿ ಕುಬೇರ ವಿಫಲವಾಗಿದೆ.
ಇನ್ನು ಕುಬೇರ ಕೇವಲ ತಮಿಳಿನಲ್ಲಿ ಮಾತ್ರವಲ್ಲ ನಾಗಾರ್ಜುನ ಮತ್ತು ರಶ್ಮಿಕಾ ಮಂದಣ್ಣ ಚಿತ್ರದಲ್ಲಿರುವ ಹಿನ್ನೆಲೆ ತೆಲುಗಿನಲ್ಲಿ ಕೂಡ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ವಿಶೇಷ ಅಂದರೆ ಹೈದರಾಬಾದ್‌ನಲ್ಲಿ ಚೆನ್ನೈಗಿಂತ ಹೆಚ್ಚಿನ ಆಕ್ಯುಪೆನ್ಸಿ ಚಿತ್ರಮಂದಿರಗಳಲ್ಲಿ ಕಂಡು ಬಂದಿದೆ. ಹೈದರಾಬಾದ್‌ನಲ್ಲಿ ಶೇಕಡಾ 67 % ಆಕ್ಯುಪೆನ್ಸಿ ಕಂಡು ಬಂದರೆ ಚೆನ್ನೈನಲ್ಲಿ ಶೇಕಡಾ 48.75% ಆಕ್ಯುಪೆನ್ಸಿ ಕಂಡು ಬಂದಿದೆ. ಬೆಂಗಳೂರಿನಲ್ಲಿ ತೆಲುಗು ಅವತರಣಿಕೆಗೆ 35.25% ಮತ್ತು ತಮಿಳು ವರ್ಷನ್‌ಗೆ 24% ಪ್ರೇಕ್ಷಕರ ಬೆಂಬಲ ಸಿಕ್ಕಿದೆ ಎಂದು ಸ್ಯಾಕ್ನಿಲ್ ವೆಬ್ ಸೈಟ್ ವರದಿಯನ್ನು ಮಾಡಿದೆ.
ಅಂದ್ಹಾಗೇ ಕುಬೇರ ಚಿತ್ರಕ್ಕೆ ಪ್ರೇಕ್ಷಕರಿಂದ ಮತ್ತು ವಿಮರ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬುಕ್ ಮೈ ಶೋನಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಜನ ಈ ಚಿತ್ರಕ್ಕೆ ರೇಟಿಂಗ್ ನೀಡಿದ್ದು ಒಟ್ಟಾರೆಯಾಗಿ 8.7 ರೇಟಿಂಗ್‌ನ ಈ ಚಿತ್ರ ಪಡೆದಿದೆ. ಈ ಹಿನ್ನೆಲೆ ಇಂದು ಮತ್ತು ನಾಳೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಚಿತ್ರದ ಗಳಿಕೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
ಒಟ್ನಲ್ಲಿ ಸದ್ಯ ಮೊದಲ ದಿನ ಕುಬೇರ ₹13 ಕೋಟಿಯನ್ನು ಗಳಿಸಿದ್ದು ಇಂದು ಮತ್ತು ನಾಳೆ ಚಿತ್ರ ಎಷ್ಟು ಗಳಿಸಲಿದೆ ? ಸೋಲುಗಳಿಂದ ಬೇಸತ್ತಿರುವ ತಮಿಳು ಚಿತ್ರರಂಗಕ್ಕೆ ಈ ಮೂಲಕ 'ಕುಬೇರ' ವರ ಸಿಗುತ್ತಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











