Mahavatar Narsimha Box Office: 'ಕೆಜಿಎಫ್' ಹಿಂದಿಕ್ಕಿ 'ನರಸಿಂಹ' ಘರ್ಜನೆ; ಕಲೆಕ್ಷನ್ ಲೆಕ್ಕ ಕೊಟ್ಟ ಹೊಂಬಾಳೆ
ಚಿತ್ರಮಂದಿರಗಳಲ್ಲಿ ಆನಿಮೇಷನ್ ಸಿನಿಮಾ 'ಮಹಾವತಾರ್ ನರಸಿಂಹ' ಆರ್ಭಟ ಮುಂದುವರೆದಿದೆ. ಈಗಾಗಲೇ ಸಿನಿಮಾ 25 ದಿನ ಪೂರೈಸಿ ಮುನ್ನಗ್ಗುತ್ತಿದೆ. ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಯಾವುದೇ ನಿರೀಕ್ಷೆ ಇಲ್ಲದೇ ಬಂದ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿದೆ.
ಭಾರತದಲ್ಲಿ ಆನಿಮೇಷನ್ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲ್ಲ. ಸ್ಟಾರ್ ನಟರು ಇರುವ ಸಿನಿಮಾಗಳೇ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸುತ್ತಿವೆ. ಆದರೆ ನಟ, ನಟಿಯರು ಇಲ್ಲದೇ ಬರೀ ಆನಿಮೇಷನ್ ಸಿನಿಮಾ ಹೊಸ ದಾಖಲೆ ಬರೆದಿದೆ. ಭಾರತೀಯ ಚಿತ್ರರಂಗದಲ್ಲೇ ಈವರೆಗೆ ಯಾವುದೇ ಆನಿಮೇಷನ್ ಸಿನಿಮಾ ಮಾಡದ ದಾಖಲೆಯನ್ನು ಈ ಸಿನಿಮಾ ಮಾಡಿದೆ. ಕ್ಲೀಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅಶ್ವಿನ್ ಕುಮಾರ್ ಈ ಚಿತ್ರವನ್ನ ನಿರ್ಮಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡಿದೆ.

ಜುಲೈ 25ರಂದು 'ಮಹಾವತಾರ್ ನರಸಿಂಹ' ಸಿನಿಮಾ ತೆರೆಗಪ್ಪಳಿಸಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು. ಯಾವುದೇ ಆರ್ಭಟ ಇಲ್ಲದೇ ತೆರೆಗೆ ಬಂದಿದ್ದ ಸಿನಿಮಾ ನೋಡನೋಡುತ್ತಲೇ ಸಾಗರದಂತೆ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಲು ಪ್ರಾರಂಭಿಸಿತು. ದಿನಕ್ಕೆ ಲಕ್ಷ ಲಕ್ಷ ಜನ ಆನ್ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಲು ಆರಂಭಿಸಿದ್ದರು. ಅಬಾಲವೃದ್ಧರಾಗಿ ಎಲ್ಲರೂ ಹೋಗಿ ನರಸಿಂಹನ ದರ್ಶನ ಮಾಡಿ ಬರುತ್ತಿದ್ದಾರೆ.
ವಿಷ್ಣು ತನ್ನ ಭಕ್ತನಾದ ಪ್ರಹ್ಲಾದನ ತಂದೆ, ಹಿರಣ್ಯಕಶ್ಯಪು ಎಂಬ ರಾಕ್ಷಸನನ್ನು ಸಂಹಾರ ಮಾಡಲು ನರಸಿಂಹನ ಅವತಾರ ಎತ್ತಿದ ಕಥೆ ಪುರಾಣಗಳಲ್ಲಿದೆ. ಈ ಕಥೆ ನಾಟಕ, ಸಿನಿಮಾ, ಧಾರಾವಾಹಿ ರೂಪದಲ್ಲಿ ಈಗಾಗಲೇ ಸಾಕಷ್ಟು ಬಾರಿ ಜನರ ಮುಂದೆ ಬಂದಿದೆ. ಇದೇ ಕಥೆಯನ್ನು ಬಹಳ ರೋಷಕವಾಗಿ 'ಮಹಾವತಾರ್ ನರಸಿಂಹ' ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಇವತ್ತಿನ ಆಧುನಿಕ ತಂತ್ರಜ್ಞಾನ ಬಳಸಿ ಹೊಸ ರೀತಿಯಲ್ಲಿ ದೃಶ್ಯವೈಭವ ಕಟ್ಟಿಕೊಟ್ಟು ತಂಡ ಗೆದ್ದಿದೆ.
ಒಂದೊಳ್ಳೆ ಚಿತ್ರವನ್ನು ಪ್ರೇಕ್ಷಕರ ಮುಂದೆ ಯಶಸ್ವಿಯಾಗಿ ಕೊಂಡೊಯ್ಯುವಲ್ಲಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಗೆದ್ದಿದೆ. ಒಟ್ಟಾರೆ ಸಿನಿಮಾ ದಾಖಲೆಯ ಗಳಿಕೆ ಕಂಡಿದೆ. 28 ದಿನಕ್ಕೆ ವಿಶ್ವದಾದ್ಯಂತ ಸಿನಿಮಾ 278 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಘೋಷಿಸಿದೆ. ಮುಂದಿನ ವಾರವೇ ಸಿನಿಮಾ ಗಳಿಕೆ 300 ಕೋಟಿ ರೂ. ಗಡಿ ದಾಟುವ ಸುಳಿವು ಸಿಗುತ್ತಿದೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣದ 'ಕೆಜಿಎಫ್'-1 ಸಿನಿಮಾ 250 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಆ ದಾಖಲೆಯನ್ನು ನರಸಿಂಹ ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಗಳಿಕೆಯಲ್ಲಿ 200 ಕೋಟಿ ಬರೀ ಉತ್ತರಭಾರತದಿಂದಲೇ ಬಂದಿದೆ ಎಂದು ಅಂದಾಜಿಸಲಾಗುತ್ತಿದೆ. ಶಾರುಖ್ ಖಾನ್ ನಟನೆಯ 'ರಯೀಸ್' ಹಾಗೂ ಟೈಗರ್ ಶ್ರಾಫ್ 'ಬಾಘೀ'-2 ಚಿತ್ರಗಳ ಬಾಕ್ಸಾಫೀಸ್ ಗಳಿಕೆಯನ್ನು ಕೂಡ ಈ ಆನಿಮೇಷನ್ ಸಿನಿಮಾ ಹಿಂದಿಕ್ಕಿದೆ.
'ಮಹಾವತಾರ್ ನರಸಿಂಹ' ಕನ್ನಡ ವರ್ಷನ್ 7.21 ಕೋಟಿ ರೂ, ತೆಲುಗು 42.67 ಕೋಟಿ ರೂ, ಹಿಂದಿ 165.63 ರೂ, ಹಾಗೂ ತಮಿಳು 2.51 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಲೆಕ್ಕ ಹಾಕಲಾಗ್ತಿದೆ. 28ನೇ ದಿನ ಕೂಡ ಸಿನಿಮಾ ಕಲೆಕ್ಷನ್ 1 ಕೋಟಿ ರೂ. ದಾಟಿದೆ.


Click it and Unblock the Notifications