ರಶ್ಮಿಕಾ ಮಂದಣ್ಣ ನಂಬಿ ''ದಿ ಗರ್ಲ್‌ಫ್ರೆಂಡ್'' ನಿರ್ಮಾಪಕ ಕಳೆದುಕೊಂಡ ಹಣ ಎಷ್ಟು ?
ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುವುದು ತುಂಬಾನೇ ಕಡಿಮೆ. ಇಲ್ಲಿ ನಾಯಕಿಯರಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಕೂಡ ಅನಾದಿಕಾಲದಿಂದ ಹೀರೋಯಿಂಸ ವಿಜೃಂಭಿಸುತ್ತಲೇ ಬಂದಿದೆ. ನಾಯಕನ ನಂತರವಷ್ಟೇ ನಾಯಕಿ ಎನ್ನುವ ಮನೋಭಾವ ಹಲವರಲ್ಲಿದೆ. ಇದು ಮಾತ್ರವಲ್ಲದೇ ನಾಯಕಿಯರು ಅಂದರೆ ಕೇವಲ ಮರ ಸುತ್ತಲು, ಚಿತ್ರದ ಗ್ಲ್ಯಾಮರ್ ಹೆಚ್ಚಿಸಲು ಅಷ್ಟೇ ಲಾಯಕ್ಕು ಮನಃಸ್ಥಿತಿ ಕೂಡ ಚಿತ್ರರಂಗದಲ್ಲಿ ಹಲವರಲ್ಲಿದೆ.
ಆದರೆ .. ಈ ಧೋರಣೆಯನ್ನು ಬದಲಿಸುವ ಪ್ರಯತ್ನವನ್ನು ಆಗಾಗ ಹಲವರು ನಾಯಕಿಯರು ಮಾಡುತ್ತಾರೆ. ಪುರುಷ ಪಾರುಪಥ್ಯದ ಕುರಿತು ಕಿಡಿ ಕಾರುತ್ತಾರೆ. ಮತ್ತೂ ಕೆಲ ಒಮ್ಮೆ ಅವಕಾಶ ಸಿಕ್ಕಾಗ ಒಳ್ಳೆಯ ಕಥೆ ಮತ್ತು ತಂಡ ಇದ್ದರೆ ಮಹಿಳಾ ಪ್ರಧಾನ ಚಿತ್ರಗಳು ಕೂಡ ಬಾಕ್ಸಾಫೀಸ್‌ನಲ್ಲಿ ವಂಡರ್ ಸೃಷ್ಟಿಸಬಹುದು ಎನ್ನುವುದನ್ನು ಸಾಬೀತು ಮಾಡುತ್ತಾರೆ. ಇದಕ್ಕೆ ಹಲವಾರು ಉದಾಹರಣೆಗಳು ಕೂಡ ಇವೆ.

ಆದರೆ, ಇನ್ನೂ ಕೆಲ ಒಮ್ಮೆ ಒಳ್ಳೆಯ ತಂಡ ಸಿಕ್ಕರೂ.. ಒಳ್ಳೆಯ ಚಿತ್ರ ಮಾಡಿರುವ ವಿಶ್ವಾಸ ಇದ್ದರೂ.. ಪಾತ್ರಕ್ಕೆ ತನು ಮನ ಅರ್ಪಿಸಿದ್ದರು ಕೂಡ.. ಪ್ರೇಕ್ಷಕರು ಕೈ ಹಿಡಿಯುವುದಿಲ್ಲ. ಎಂದಿನಂತೆ ಹರಸಿ ಹಾರೈಸುವುದಿಲ್ಲ. ಇದಕ್ಕೆ ರಶ್ಮಿಕಾ ಮಂದಣ್ಣ ಮತ್ತು ಅವರ ''ದಿ ಗರ್ಲ್‌ಫ್ರೆಂಡ್'' ಸದ್ಯದ ಉದಾಹರಣೆ.
ಹೌದು, ''ದಿ ಗರ್ಲ್‌ಫ್ರೆಂಡ್''.. ರಶ್ಮಿಕಾ ಮಂದಣ್ಣ ಅವರ ಕನಸಿನ ಕೂಸು. ಹೃದಯಕ್ಕೆ ತುಂಬಾ ಹತ್ತಿರವಾದ ಚಿತ್ರ. ಈ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಲು ರಶ್ಮಿಕಾ ತುಂಬಾ ಕಷ್ಟ ಪಟ್ಟಿದ್ದಾರೆ. ಹಗಲಿರುಳು ಬೆವರು ಸುರಿಸಿದ್ದಾರೆ. ಇಷ್ಟೇ ಅಲ್ಲ ಈ ಚಿತ್ರಕ್ಕೆ ವಿಶೇಷ ಮುತುವರ್ಜಿ ವಹಿಸಿ ಬೇರೆ ತಮ್ಮ ಯಾವ ಚಿತ್ರಕ್ಕೂ ಮಾಡದಷ್ಟು ಪ್ರಚಾರವನ್ನು ರಶ್ಮಿಕಾ ಮಂದಣ್ಣ ಈ ಚಿತ್ರಕ್ಕೆ ಮಾಡಿದ್ದಾರೆ. ಪ್ರಚಾರದ ಸಮಯದಲ್ಲಿ ಇದು ನನ್ನದೇ ಕತೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಈ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನವನ್ನು ಕೂಡ ಮಾಡಿದ್ದಾರೆ.
ಆದರೂ, ಅದ್ಯಾಕೋ ರಶ್ಮಿಕಾ ಮಂದಣ್ಣ ಮಾಡಿದ ಈ ಎಲ್ಲ ಪ್ರಯತ್ನಗಳಿಗೆ ಫಲ ಸಿಕ್ಕಿಲ್ಲ. ವಿಮರ್ಷಕರ ಪ್ರೀತಿಯನ್ನು ಚಿತ್ರ ಗಳಿಸಿದರು ಕೂಡ ರಶ್ಮಿಕಾ ಮಂದಣ್ಣ ಅವರ ಆತ್ಮಕಥನ ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲಿಲ್ಲ. ಇದಕ್ಕೆ ಕೈಗನ್ನಡಿಯೇ ''ದಿ ಗರ್ಲ್‌ಫ್ರೆಂಡ್'' ಚಿತ್ರದ ಈ ಹತ್ತು ದಿನದ ಗಳಿಕೆ.
ಹೌದು, ಅಸಲಿಗೆ '' ದಿ ಗರ್ಲ್‌ಫ್ರೆಂಡ್'' ಚಿತ್ರ ಮೊದಲ ನೀರಸ ಪ್ರದರ್ಶನ ಕಂಡಿತ್ತು. 1.3 ಕೋಟಿಯನ್ನು ಗಳಿಸಿತ್ತು. ನಿಜಾ.. ಸ್ಟಾರ್ ಹೀರೋಗಳಿರದ ಈ ಚಿತ್ರದ ಈ ಗಳಿಕೆ ನಿಜಕ್ಕೂ ಮೆಚ್ಚುವಂತಹದ್ದೇ.ಆದರೂ ರಶ್ಮಿಕಾ ಮಂದಣ್ಣ ಅವರ ಸ್ಟಾರ್ ಪವರ್‌ಗೆ ಈ ಗಳಿಕೆ ಕಡಿಮೆ ಎನ್ನುವ ವಾದವನ್ನು ಬಾಕ್ಸಾಫೀಸ್ ಪಂಡಿತರು ಮಾಡಿದ್ದರು. ಇದಕ್ಕೆ ಪೂರಕವಾಗಿ ಚಿತ್ರದ ಎರಡನೇ ಮತ್ತು ಮೂರನೇ ದಿನದ ಗಳಿಕೆಯಲ್ಲಿ ಏರಿಕೆ ಕಂಡು ಬಂದಿತ್ತು. ಮೂರು ದಿನದಲ್ಲಿ ₹ 6.98 ಕೋಟಿ ಹಣ ದೋಚಿತ್ತು. ಈ ಮೂಲಕ ಭರವಸೆ ಮೂಡಿಸಿತ್ತು.

ಆದರೆ, ನಾಲ್ಕನೇ ದಿನದಿಂದ ಗಳಿಕೆ ಕುಸಿಯಲು ಶುರುವಾಯ್ತು. ಸೋಮವಾರವಾದ ಹಿನ್ನೆಲೆ ಅದು ಸಹಜ ಕೂಡ. ಹಾಗಂಥ ತೀರಾ ಕಳಪೆ ಗಳಿಕೆಯನ್ನೇನು ಈ ಚಿತ್ರ ಮಾಡಿಲ್ಲ. ಸೋಮವಾರದಿಂದ ( ನವೆಂಬರ್ 7) ಇಲ್ಲಿಯವರೆಗೆ (ನವೆಂಬರ್ 17) ನಿರಂತರವಾಗಿ ದಿನನಿತ್ಯ ಒಂದು ಕೋಟಿಗೂ ಅಧಿಕ ಗಳಿಕೆಯನ್ನು ಈ ಚಿತ್ರ ಮಾಡುತ್ತಲೇ ಬರುತ್ತಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಈ 10 ದಿನದಲ್ಲಿ₹15.4 ಕೋಟಿಯನ್ನು ಕೂಡ ಚಿತ್ರ ಗಳಿಸಿದೆ. ಬಹುಶಃ ಇತಿಮಿತಿಯಲ್ಲಿ ಚಿತ್ರದ ನಿರ್ಮಾಣವನ್ನು ಮಾಡಿದ್ದರೆ ಇಷ್ಟೊತ್ತಿಗೆ ''ದಿ ಗರ್ಲ್‌ಫ್ರೆಂಡ್'' ಕಥೆ ಬೇರೆಯಾಗಿರುತ್ತಿತ್ತು. ನಿರ್ಮಾಪಕರಿಗೆ ಲಾಭ ಅಲ್ಲದಿದ್ದರೂ ಹಾಕಿದ ಬಂಡವಾಳ ಮರಳಿ ಬರುತ್ತಿತ್ತು.
ಆದರೆ..''ದಿ ಗರ್ಲ್‌ಫ್ರೆಂಡ್'' ಚಿತ್ರಕ್ಕೆ www.koimoi.com ವರದಿಯ ಪ್ರಕಾರ ನಿರ್ಮಾಪಕರು ₹42 ಕೋಟಿ ಹಣ ಖರ್ಚು ಮಾಡಿದ್ದಾರೆ. ಆ ಪೈಕಿ ಬಾಕ್ಸಾಫೀಸ್‌ನಲ್ಲಿ ಸದ್ಯ ಶೇಕಡಾ 36% ಹಣ ಅಂದರೆ ₹ 15.4 ಕೋಟಿ ಮಾತ್ರ ಮರಳಿ ಬಂದಿದೆ. ಇನ್ನು ಸದ್ಯ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಚಿತ್ರಗಳು ತೆರೆಗೆ ಬಂದಿವೆ. ಈ ಹಿನ್ನೆಲೆ ಮುಂಬರುವ ದಿನಗಳಲ್ಲಿ ಚಿತ್ರಮಂದಿರದಲ್ಲಿ ಚಿತ್ರ ಉಳಿಯುವುದು ಅನುಮಾನ. ಉಳಿದರು ಕೂಡ ₹42 ಕೋಟಿಯ ಗಡಿಯನ್ನು ದಾಟುವುದು ಅಸಾಧ್ಯ. ಹೆಚ್ಚೆಂದರೆ ₹20 ರಿಂದ ₹25 ಕೋಟಿಯ ಗಡಿಯನ್ನು ''ದಿ ಗರ್ಲ್‌ಫ್ರೆಂಡ್'' ದಾಟಬಹುದು ಎಂಬ ಲೆಕ್ಕಾಚಾರ ಮುಂದಿಡುತ್ತಿರುವ ಟ್ರೇಡ್ ಪಂಡಿತರು ''ದಿ ಗರ್ಲ್‌ಫ್ರೆಂಡ್'' ಚಿತ್ರದ ನಿರ್ಮಾಪಕರಿಗೆ ಹತ್ತು ಹನ್ನೆರಡು ಕೋಟಿ ನಷ್ಟ ಆಗುವುದು ಗ್ಯಾರಂಟಿ ಎಂಬ ಭವಿಷ್ಯವಾಣಿಯನ್ನು ಸದ್ಯ ಹೇಳುತ್ತಿದ್ದಾರೆ.
ಒಟ್ನಲ್ಲಿ ಸದ್ಯ ''ದಿ ಗರ್ಲ್‌ಫ್ರೆಂಡ್'' ಚಿತ್ರಕ್ಕೆ ಹಾಕಿದ ಬಂಡವಾಳ ಮರಳಿ ಬರುವುದು ಬಹುತೇಕ ಅನುಮಾನ ಎನ್ನುವ ಮಾತು ಕೇಳಿ ಬರುತ್ತಿದೆ. ಸದ್ಯ '' ದಿ ಗರ್ಲ್‌ಫ್ರೆಂಡ್'' ಇನ್ನೂ ಚಿತ್ರಮಂದಿರದಲ್ಲಿರುವ ಹಿನ್ನೆಲೆ, ಇನ್ನೆಷ್ಟು ಹಣವನ್ನು ಈ ಚಿತ್ರ ಗಳಿಸುತ್ತೆ ಎನ್ನುವುದನ್ನು ನೋಡಬೇಕಿದೆ. ಆಗಲೇ ನಿರ್ಮಾಪಕರಿಗೆ ಆದ ನಷ್ಟದ ನಿಖರವಾದ ಲೆಕ್ಕ ಗೊತ್ತಾಗಲಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











