Masti 4 Box Office Day 1 :ಹಾಸ್ಯ ರಸಾಯನ ಸವಿಯಲು ಬಾರದ ಪ್ರೇಕ್ಷಕರು,ಮೊದಲ ದಿನವೇ ಆಘಾತ-ಪುಟಿದೇಳುತ್ತಾ ಮಸ್ತಿ 4 ?
ದಕ್ಷಿಣ ಭಾರತೀಯ ಚಿತ್ರರಂಗದ ಅಬ್ಬರ, ಬಾಲಿವುಡ್ ನ ಬಾವಿಗೆ ತಳ್ಳಿದೆ ಎನ್ನುವುದು ಅನೇಕರ ಅಭಿಪ್ರಾಯ. ಹಾಗೇ ನೋಡಿದರೆ ಈ ಮಾತು ನಿಜಾ ಕೂಡಾ ಹೌದು. ಯಾಕೆಂದರೆ ಕೊರೊನಾ ನಂತರದ ದಿನಗಳಲ್ಲಿ ಬಾಲಿವುಡ್ ಎದ್ದಿದ್ದು ಕಡಿಮೆ. ಬೋರಲು ಬಿದ್ದಿದ್ದೇ ಹೆಚ್ಚು. ಕೊರೊನಾ ನಂತರ ಒಂದು ಕಡೆ ''ಬಾಹುಬಲಿ 1 ಮತ್ತು 2''.. ''ಕೆಜಿಎಫ್ 1 ಮತ್ತು 2'' ..
''ಪುಷ್ಪ 1 ಮತ್ತು 2'' ..''ಆರ್‌ಆರ್‌ಆರ್'' .. ''ಕಾಂತಾರ'' .. ''777 ಚಾರ್ಲಿ'' ...ಅಂತಹ ಚಿತ್ರಗಳು ಅಬ್ಬರಿಸಿದ್ದರೆ ಬಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರಗಳೆಲ್ಲವೂ ನೆಲಕಚ್ಚಿದ್ದವು. ಆದರೆ.. 2023ರ ಸುಮಾರು ಬಾಲಿವುಡ್ ನಿಧಾನವಾಗಿ ಚೇತರಿಸಿಕೊಳ್ಳಲು ಶುರು ಮಾಡಿತ್ತು. ಹಾಗಂಥ.. ಮೊದಲಿನ ಲಯಕ್ಕೆ ಹಿಂದಿ ಉದ್ಯಮ ಆಗಲೂ ಮರಳಲಿಲ್ಲ. ಈಗಲೂ ಕೂಡ ಮರಳಿಲ್ಲ. ಅಲ್ಲೊಂದು.. ಇಲ್ಲೊಂದು.. ಚಿತ್ರಗಳು ಮಾತ್ರ ಮಕಾಡೆ ಮಲಗಿದ ಬಾಲಿವುಡ್‌ನ ಬಡಿದೆಬ್ಬಿಸುತ್ತಿವೆ. ಗೆಲ್ಲುತ್ತಿವೆ. ಈ ಸಾಲಿಗೆ ''ಮಸ್ತಿ-4'' ಸೇರುತ್ತಾ ಗೊತ್ತಿಲ್ಲ. ಆದರೆ .. ಚಿತ್ರದ ಆರಂಭ ಮಾತ್ರ ಚಿತ್ರತಂಡದ ಪಾಲಿಗೆ ನಿರಾಶಾದಾಯಕವಾಗಿದೆ.

ಹೌದು, ''ಮಸ್ತಿ 4''... ಭಾರತದ ಅಡಲ್ಟ್ ಕಾಮಿಡಿ ಜಾನರ್‌ನಲ್ಲಿ ಹೊಸ ಅಲೆ ಎಬ್ಬಿಸಿದ್ದ ''ಮಸ್ತಿ'' ಚಿತ್ರದ ಮುಂದುವರೆದ ಭಾಗ. ಎರಡು ದಶಕದ ಇತಿಹಾಸ ಈ ಫ್ರಾಂಚೈಸಿಗೆ ಇದೆ. ಇಲ್ಲಿಯವರೆಗೆ ಈ ಫ್ರಾಂಚೈಸಿ ಅಡಿ ಬಂದ 3 ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ದಾವೆ. ಅದರಲ್ಲಿಯೂ ಚಿತ್ರದ ಎರಡನೇ ಭಾಗ ''ಗ್ರ್ಯಾಂಡ್ ಮಸ್ತಿ'' ಬಾಕ್ಸಾಫೀಸ್‌ನಲ್ಲಿ 100 ಕೋಟಿಗೂ ಅಧಿಕ ಹಣ ಗಳಿಸುವ ಮೂಲಕ ಹೊಸ ಇತಿಹಾಸ ಬರೆದಿತ್ತು. 100 ಕೋಟಿಯ ಗಡಿ ದಾಟಿದ ಮೊದಲ ಅಡಲ್ಟ್ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಈ ಎಲ್ಲಾ ಕಾರಣಗಳಿಂದ ''ಮಸ್ತಿ 4'' ಮೇಲೆ ವ್ಯಾಪಕವಾದ ನಿರೀಕ್ಷೆಗಳಿವೆ. ಸೋಲುಗಳಿಂದ ಹೈರಾಣಾದ ಬಾಲಿವುಡ್‌ಗೆ ಈ ಚಿತ್ರ ಆಸರೆಯಾಗುತ್ತೆ ಎನ್ನುವ ವಿಶ್ವಾಸ ಇದೆ. ಈ ಭರವಸೆ ಹುಸಿಯಾಗುತ್ತಾ..? ನಿಜವಾಗುತ್ತಾ..? ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಬಾಲಿವುಡ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ಮಸ್ತಿ 4'' ಮೊದಲ ದಿನ ಕೇವಲ ₹ 2.75 ಕೋಟಿಯನ್ನು ಮಾತ್ರ ಗಳಿಸಿದೆ.
ಅಂದ್ಹಾಗೇ 2004ರಲ್ಲಿ ತೆರೆಗೆ ಬಂದಿದ್ದ ''ಮಸ್ತಿ'' ಮೊದಲ ₹1.8 ಕೋಟಿ ಗಳಿಸಿತ್ತು. ಆ ನಂತರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿ ಗೆದ್ದಿತ್ತು. 09 ವರ್ಷದ ನಂತರ ಅಂದರೆ 2013ರಲ್ಲಿ ಈ ಚಿತ್ರ ಎರಡನೇ ಭಾಗ ''ಗ್ರ್ಯಾಂಡ್ ಮಸ್ತಿ'' ಹೊಸ ಮೈಲಿಗಲ್ಲು ಸ್ಥಾಪಿಸಿತ್ತು. ಮೊದಲ ದಿನವೇ ₹12.50 ಕೋಟಿಯನ್ನು ದೋಚಿತ್ತು. ಇಲ್ಲಿಯವರೆಗೆ ಬಂದ ನಾಲ್ಕು ಚಿತ್ರಗಳಲ್ಲಿ ಈ ಚಿತ್ರದ ಗಳಿಕೆಯೇ ಅತ್ಯಧಿಕ.
ಆ ನಂತರ 2016ರಲ್ಲಿ ಚಿತ್ರದ ಮೂರನೇ ಭಾಗ ''ಗ್ರೇಟ್ ಗ್ರ್ಯಾಂಡ್ ಮಸ್ತಿ'' ಬಂದಿತ್ತು. ಬಿಡುಗಡೆಯ ಮೊದಲೇ ಈ ಚಿತ್ರ ಆನ್‌ಲೈನ್‌ನಲ್ಲಿ ಲೀಕ್ ಆಗಿತ್ತು. ಮೊದಲ ದಿನ ₹2.65 ಕೋಟಿಯನ್ನು ಈ ಚಿತ್ರ ಗಳಿಸಿತ್ತು. ಇದೀಗ ''ಮಸ್ತಿ 4'' ಬಂದಿದೆ. ಮೊದಲ ದಿನ ₹2.75 ಗಳಿಸಿದೆ. ಈ ಮೂಲಕ ''ಮಸ್ತಿ'' ಫ್ರಾಂಚೈಸಿಯಲ್ಲಿ ಮೊದಲ ದಿನ ಅತೀ ಹೆಚ್ಚು ಹಣವನ್ನು ಗಳಿಸಿದ ಎರಡನೇ ಚಿತ್ರವಾಗಿ ಹೊರ ಹೊಮ್ಮಿದೆ.

ಆದರೆ ''ಮಸ್ತಿ 4'' ಕೆಲವರಿಗೆ ಇಷ್ಟ ಆಗಿದೆ. ಇನ್ನೂ ಕೆಲವರಿಗೆ ಇಷ್ಟ ಆಗಿಲ್ಲ. ವಿಮರ್ಷಕರ ವಲಯ ಕೂಡ ಈ ಚಿತ್ರ ವಿಚಾರದಲ್ಲಿ ಇಬ್ಭಾಗವಾಗಿದೆ. ಹೀಗಾಗಿ ವ್ಯಕ್ತವಾದ ಈ ಮಿಶ್ರ ಪ್ರತಿಕ್ರಿಯೆಯಿಂದ ಇಂದು ( ಶನಿವಾರ ) ಮತ್ತು ನಾಳೆ ( ಭಾನುವಾರ ) ಗಳಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಒಂದು ವೇಳೆ ಈ ಎರಡು ದಿನದಲ್ಲಿ ಗಳಿಕೆ ಕುಸಿದರೆ ''ಮಸ್ತಿ 4'' ಕಥೆ ಮುಗಿದಂತೆಯೇ. ಸೋಮವಾರದ ನಂತರ ''ಮಸ್ತಿ 4'' ಪುಟಿದೇಳುವುದು ಅಸಾಧ್ಯ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











