2026 First Half: ವರ್ಷದ ಮೊದಲ 6 ತಿಂಗಳಲ್ಲಿ 5 ಚಿತ್ರರಂಗಗಳ ಒಟ್ಟು ಬಾಕ್ಸಾಫೀಸ್ ಗಳಿಕೆ ಎಷ್ಟು?
ಮೊನ್ನೆ ಮೊನ್ನೆ ಹೊಸ ವರ್ಷ ಆರಂಭವಾದಂತಿದೆ. ಆದರೆ ಈಗಾಗಲೇ 6 ತಿಂಗಳು ಮುಗಿಯುತ್ತಾ ಬಂದಿದೆ. ಭಾರತೀಯ ಚಿತ್ರರಂಗದಲ್ಲಿ ಈಗಾಗಲೇ 400ಕ್ಕೂ ಅಧಿಕ ಸಿನಿಮಾಗಳು ಬಿಡುಗಡೆಯಾಗಿದೆ. ಕನ್ನಡದಲ್ಲೇ ಈವರೆಗೆ 100ಕ್ಕೂ ಹೆಚ್ಚು ಸಿನಿಮಾ ತೆರೆಕಂಡು ಪ್ರೇಕ್ಷಕರನ್ನು ರಂಜಿಸಿವೆ. ಆದರೆ ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗದ ಸಾಧನೆ ತೀರಾ ಕಮ್ಮಿ ಎನ್ನಬಹುದು.
'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗದೇ ಇರುವುದು ಕನ್ನಡ ಚಿತ್ರರಂಗದ ಹಿನ್ನಡೆಗೆ ಕಾರಣ ಎನ್ನಬಹುದು. ಇನ್ನುಳಿದಂತೆ ಈ ವರ್ಷ ಯಾವುದೇ ದೊಡ್ಡ ಕನ್ನಡ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. 'ಕೆಡಿ' ಸಿನಿಮಾ ಕೂಡ ನಿರೀಕ್ಷೆ ಹುಸಿ ಮಾಡಿತ್ತು. ಈ ವರ್ಷ ಬಾಲಿವುಡ್ ಆರ್ಭಟ ಜೋರಾಗಿದೆ. ಕೆಲ ವರ್ಷಗಳ ಹಿಂದೆ ದಕ್ಷಿಣದ ಸಿನಿಮಾಗಳ ಮುಂದೆ ಮಂಕಾಕಿದ್ದ ಬಾಲಿವುಡ್ ಮತ್ತೆ ಚೇತರಿಸಿಕೊಂಡಿದೆ. ಖಾತ್‌ತ್ರಯರ ದೊಡ್ಡ ಸಿನಿಮಾಗಳು ಬರದೇ ಇದ್ದರೂ ಬಾಕ್ಸಾಫೀಸ್ ಶೇಕ್ ಆಗಿದೆ. ತೆಲುಗು, ತಮಿಳು, ಮಲಯಾಳಂ ಸಿನಿಮಾಗಳ ಆರ್ಭಟವೂ ಜೋರಾಗಿತ್ತು. ಈ ವರ್ಷ ಮೊದಲ 6 ತಿಂಗಳಲ್ಲಿ ಯಾವ ಚಿತ್ರರಂಗದ ಬಾಕ್ಸಾಫೀಸ್ ಸಾಧನೆ ಹೇಗಿದೆ? ಬನ್ನಿ ನೋಡೋಣ.

ಟಾಲಿವುಡ್ ಬಾಕ್ಸಾಫೀಸ್
ಈ ವರ್ಷ ತೆಲುಗು ಚಿತ್ರರಂಗದಕ್ಕೆ ಸೋಲು ಗೆಲುವು ಎರಡೂ ಸಿಕ್ಕಿದೆ. ವರ್ಷದ ಆರಂಭದಲ್ಲೇ 'ದಿ ರಾಜಾಸಾಬ್' ಸಿನಿಮಾ ಬಂದು ನಿರಾಸೆ ಮೂಡಿಸಿತ್ತು. ಆದರೂ 200 ಕೋಟಿ ರೂ. ಬಾಕ್ಸಾಫೀಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಇನ್ನು ಚಿರಂಜೀವಿ ನಟನೆಯ 'ಮನ ಶಂಕರವರ ಪ್ರಸಾದ್‌ಗಾರು' ಸಿನಿಮಾ 300 ಕೋಟಿ ರೂ. ಕಲೆಕ್ಷನ್ ಮಾಡಿ ಬ್ಲಾಕ್‌ಬಸ್ಟರ್ ಹಿಟ್ ಎನಿಸಿಕೊಂಡಿತ್ತು. ಸದ್ಯ ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ 390 ಕೋಟಿ ರೂ.ಗೂ ಹೆಚ್ಚು ಕೊಳ್ಳೆ ಹೊಡೆದು ಮುನ್ನುಗ್ಗುತ್ತಿದೆ. 'ಅನಗನಗ ಒಕರೋಜು' ಎಂಬ ಸಿನಿಮಾ 100 ಕೋಟಿ ರೂ. ಕ್ಲಬ್ ಸೇರಿತ್ತು. ಒಟ್ಟಾರೆ ಮೊದಲ 6 ತಿಂಗಳಲ್ಲಿ ತೆಲಗು ಸಿನಿಮಾಗಳು 1200 ಕೋಟಿ ರೂ. ಕಲೆಕ್ಷನ್ ಮಾಡಿರುವ ಅಂದಾಜಿದೆ.
ಕಾಲಿವುಡ್ ಗಲ್ಲಾಪೆಟ್ಟಿಗೆ
ಈ ವರ್ಷ ತಮಿಳು ಚಿತ್ರರಂಗದ ಸಾಧನೆ ಕೂಡ ಚೆನ್ನಾಗಿಯೇ ಇದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ 'ಕರುಪ್ಪು' ಚಿತ್ರದ ಗೆಲುವು ಕಾಲಿವುಡ್ ಇಂಡಸ್ಟ್ರಿಗೆ ಈ ಬಾರಿ ಬಲ ತುಂಬಿದೆ. 'ಕರುಪ್ಪು' ಸಿನಿಮಾ 340 ಕೋಟಿ ರೂ, 'ಪರಾಶಕ್ತಿ' ಸಿನಿಮಾ 80 ಕೋಟಿ ರೂ, 'ತಾಯ್ ಕಿಳವಿ' ಚಿತ್ರ 75 ಕೋಟಿ ರೂ, 'ಯೂತ್' ಸಿನಿಮಾ 70 ಕೋಟಿ ರೂ, ಲವ್ ಇನ್ಸುರೆನ್ಸ್ ಕಂಪನಿ ಚಿತ್ರ 60 ಕೋಟಿ ರೂ, ಸೇರಿ ಒಟ್ಟಾರೆ 800 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ.

ಬಾಲಿವುಡ್ ಬ್ಯಾಂಗ್ ಬ್ಯಾಂಗ್
'ಧುರಂಧರ್'-2 ಸಿನಿಮಾ ಒಂದೇ ಈ ವರ್ಷ 1500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು. ಇನ್ನುಳಿದಂತೆ 'ಬಾರ್ಡರ್- 2' ಸಿನಿಮಾ 464 ಕೋಟಿ ರೂ, ಭೂತ್ ಬಂಗ್ಲಾ 247 ಕೋಟಿ ರೂ, ಸೇರಿ ಒಟ್ಟು ಗಳಿಕೆ 3000 ಕೋಟಿ ರೂ, ಗಡಿ ದಾಟಿದೆ. ಆ ಮೂಲಕ ವರ್ಷದ ಮೊದಲಾರ್ಧದಲ್ಲೇ ಬಾಲಿವುಡ್ ದರ್ಬಾರ್ ಜೋರಾಗಿದೆ. ದ್ವಿತಿಯಾರ್ಧದಲ್ಲಿ ಮತ್ತಷ್ಟು ದೊಡ್ಡ ಸಿನಿಮಾಗಳು ತೆರೆಗಪ್ಪಳಿಸಲಿವೆ.
ಮಾಲಿವುಡ್ ಮ್ಯಾಜಿಕ್
ಮಲಯಾಳಂ ಚಿತ್ರಗಳು ನಿಯಮಿತವಾಗಿ ಗೆಲ್ಲುತ್ತಾ ಬರ್ತಿವೆ. ಕೇರಳ ಜೊತೆಗೆ ಗಲ್ಫ್ ದೇಶಗಳಿಂದ ಮಾಲಿವುಡ್ ಚಿತ್ರಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಈ ವರ್ಷ ಸೂಪರ್ ಹಿಟ್ 'ದೃಶ್ಯಂ' ಸರಣಿಯ 3ನೇ ಸಿನಿಮಾ ಬಂದು ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ. ಮೋಹನ್ ಲಾಲ್ ನಟನೆಯ ಕ್ರೈಂ ಥ್ರಿಲ್ಲರ್ ಸಿನಿಮಾ 240 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡಿದೆ. ಇನ್ನುಳಿದಂತೆ 'ವಾಳಾ-2' ಚಿತ್ರ 234 ಕೋಟಿ ರೂ, 'ಆಡು- 3' ಸಿನಿಮಾ 120 ಕೋಟಿ ರೂ. ಸೇರಿ ಮಲಯಾಳಂ ಸಿನಿಮಾಗಳು ಒಟ್ಟು ಈ ವರ್ಷ 900 ಕೋಟಿ ರೂ. ಲೂಟಿ ಮಾಡಿರುವ ಲೆಕ್ಕ ಸಿಗುತ್ತಿದೆ.
ಸ್ಯಾಂಡಲ್‌ವುಡ್ ನಿರಾಸೆ
ಈ ವರ್ಷ ಕನ್ನಡ ಚಿತ್ರರಂಗದ ಸಾಧನೆ ಹೇಳಿಕೊಳ್ಳುವಂತಿಲ್ಲ. 'ಕೆಡಿ' ಸಿನಿಮಾ 23 ಕೋಟಿ ರೂ. ಹಾಗೂ 'ಲವ್ ಮಾಕ್ಟೇಲ್- 3' ಚಿತ್ರ 16 ಕೋಟಿ ರೂ. ಕಲೆಕ್ಷನ್ ಮಾಡಿರುವುದು ಹೆಚ್ಚು. ಇನ್ನುಳಿದಂತೆ 100ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ತೆರೆಗೆ ಬಂದಿವೆ. ಎಲ್ಲಾ ಸಿನಿಮಾಗಳ ಗಳಿಕೆ ಕೂಡಿದರೂ 70 ಕೋಟಿ ರೂ. ದಾಟುವುದಿಲ್ಲ.


Click it and Unblock the Notifications