Drishyam -3 Boxoffice Day 7: ಮೊದಲ ವಾರದ ಗಳಿಕೆ ಲೆಕ್ಕ ಕೊಟ್ಟ 'ದೃಶ್ಯಂ- 3' ಟೀಂ; ಕರ್ನಾಟಕದ ಪಾಲು ಎಷ್ಟು?
ಮೋಹನ್ ಲಾಲ್ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ 'ದೃಶ್ಯಂ- 3' ಸಿನಿಮಾ ಯಶಸ್ವಿಯಾಗಿ 2ನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ಹಲವು ದಾಖಲೆಗಳನ್ನು ಅಳಿಸಿ ಹಾಕಿದೆ. ತಮಿಳಿನ 'ಕರುಪ್ಪು' ಸಿನಿಮಾ ಆರ್ಭಟದ ನಡುವೆಯೂ ಜಾರ್ಜ್‌ಕುಟ್ಟಿ ಆರ್ಭಟ ಜೋರಾಗಿದೆ. ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಕ್ಸಸ್ ಕಂಡಿದೆ.
ಬಿಡುಗಡೆಯಾದ 58 ಗಂಟೆಗಳಲ್ಲಿ 'ದೃಶ್ಯಂ- 3' ಸಿನಿಮಾ 100 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇದೀಗ 7 ದಿನ ಪೂರೈಸಿದೆ. ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಮುಂದುವರೆದಿದೆ. ಸರಣಿಯ ಹಿಂದಿನ ಎರಡು ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾ ದೊಡ್ಡದಾಗಿ ಪ್ರೇಕ್ಷಕರನ್ನು ರಂಜಿಸಲ್ಲ. ಆದರೆ ಮೋಹನ್ ಲಾಲ್ ನಟನೆಯ ಕಟ್ಟಿಹಾಕಿಬಿಡುತ್ತದೆ. ಮುಂದೆ 4ನೇ ಭಾಗ ಸಿನಿಮಾ ಮಾಡುವುದಾಗಿಯೂ ಸುಳಿವು ಕೊಟ್ಟಿದ್ದಾರೆ.

ಬಾಕ್ಸಾಫೀಸ್ ಕಲೆಕ್ಷನ್
ಮೊದಲ 7 ದಿನಕ್ಕೆ 'ದೃಶ್ಯಂ- 3' ಸಿನಿಮಾ 200 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿದೆ. ಸರಣಿಯ 3 ಸಿನಿಮಾಗಳನ್ನು ಗೆಲ್ಲಿಸಿದ್ದಕ್ಕೆ ಧನ್ಯವಾದ ಎಂದು ಪೋಸ್ಟ್ ಮಾಡಿದ್ದಾರೆ. ಕೇರಳದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಮುಖ್ಯವಾಗಿ ಗಲ್ಫ್ ದೇಶಗಳಲ್ಲಿ ಒಳ್ಳೆ ಗಳಿಕೆ ಆಗ್ತಿದೆ. ಕೇರಳದಲ್ಲಿ ಮಾತ್ರ 7 ದಿನಕ್ಕೆ ಚಿತ್ರದ ಕಲೆಕ್ಷನ್ 50 ಕೋಟಿ ರೂ. ಗಡಿ ದಾಟಿದೆ. ಮೋಹನ್ ಲಾಲ್ ನಟಿಸಿದ 5 ಸಿನಿಮಾಗಳು ಈ ದಾಖಲೆ ಮಾಡಿದಂತಾಗಿದೆ. ವಿದೇಶಗಳಲ್ಲಿ ಅಂದಾಜು 100 ಕೋಟಿ ರೂ. ಕಲೆಕ್ಷನ್ ಮಾಡಿರುವ ಲೆಕ್ಕಾಚಾರ ನಡೀತಿದೆ. 2ನೇ ವಾರ ಕೇರಳದ 500 ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಮುಂದುವರೆದಿದೆ.
ಕರ್ನಾಟಕ ಕಲೆಕ್ಷನ್
ರಾಜ್ಯದಲ್ಲಿ ಕೂಡ 'ದೃಶ್ಯಂ- 3' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿ ರಿಲೀಸ್ ಆಗಿದೆ. ಆದರೆ ಸಾಕಷ್ಟು ಕಡೆಗಳಲ್ಲಿ ಕನ್ನಡ ಶೋ ಕೊಟ್ಟಿಲ್ಲ ಎಂದು ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಮೊದಲ ವಾರ 11.23 ಕೋಟಿ ರೂ. ಬಾಚಿದೆ. ಈ ಮೂಲಕ ರಾಜ್ಯದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಮಲಯಾಳಂ ಸಿನಿಮಾಗಳ ಪಟ್ಟಿಯಲ್ಲಿ 'ದೃಶ್ಯಂ- 3' ಸಿನಿಮಾ 4ನೇ ಸ್ಥಾನಕ್ಕೇರಿದೆ. 15.8 ಕೋಟಿ ರೂ. ಕಲೆಕ್ಷನ್ ಮಾಡಿ 'ಮಂಜುಮೇಲ್ ಬಾಯ್ಸ್' ಮೊದಲ ಸ್ಥಾನದಲ್ಲಿದೆ. ಆ ದಾಖಲೆಯನ್ನು ಜಾರ್ಜ್‌ಕುಟ್ಟಿ ಮುರಿಯುವುದು ಗ್ಯಾರಂಟಿ.
6ನೇ ಸ್ಥಾನಕ್ಕೆ 'ದೃಶ್ಯಂ- 3'
ಅತಿಹೆಚ್ಚು ಕಲೆಕ್ಷನ್ ಮಾಡಿದ ಮಲಯಾಳಂ ಸಿನಿಮಾಗಳ ಪಟ್ಟಿಯಲ್ಲಿ 'ದೃಶ್ಯಂ- 3' ಸದ್ಯ 6ನೇ ಸ್ಥಾನಕ್ಕೇರಿದೆ. 303 ಕೋಟಿ ರೂ. ಕಲೆಕ್ಷನ್ ಮಾಡಿದ್ದ 'ಲೋಕಾ ಚಾಪ್ಟರ್-1: ಚಂದ್ರ' ಸಿನಿಮಾ ಮೊದಲ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ 'ಎಂಪುರಾನ್'(266 ಕೋಟಿ ರೂ.), 3ನೇ ಸ್ಥಾನದಲ್ಲಿ 'ಮಂಜುಮೇಲ್ ಬಾಯ್ಸ್'(242 ಕೋಟಿ ರೂ.), 4ನೇ ಸ್ಥಾನದಲ್ಲಿ 'ವಾಳಾ- 2'(234 ಕೋಟಿ ರೂ.) ಹಾಗೂ 'ಥುಡರುಂ'(233 ಕೋಟಿ ರೂ.) 5ನೇ ಸ್ಥಾನದಲ್ಲಿದೆ. ಇನ್ನೊಂದು ವಾರದಲ್ಲಿ 'ವಾಳಾ- 2' ದಾಖಲೆ ಹಿಂದಿಕ್ಕಿ 'ದೃಶ್ಯಂ- 3' ಸಿನಿಮಾ 4ನೇ ಸ್ಥಾನಕ್ಕೇರುವ ಸುಳಿವು ಸಿಕ್ತಿದೆ.
'ದೃಶ್ಯಂ- 3' ಓಟಿಟಿ ರಿಲೀಸ್?
ಸಾಕಷ್ಟು ಜನ ಓಟಿಟಿಯಲ್ಲಿ 'ದೃಶ್ಯಂ- 3' ಸಿನಿಮಾ ನೋಡಲು ಕಾಯುತ್ತಿದ್ದಾರೆ. ಅಮೇಜಾನ್ ಪ್ರೈಂ ವೀಡಿಯೋಗೆ ಚಿತ್ರದ ಡಿಜಿಟಲ್ ರೈಟ್ಸ್ ಮಾರಾಟವಾಗಿದೆ. 6ರಿಂದ 8 ವಾರಗಳ ಬಳಿಕ ಸಿನಿಮಾ ಓಟಿಟಿಗೆ ಬರುವ ನಿರೀಕ್ಷೆಯಿದೆ. ಅಂದರೆ ಜೂನ್ ಅಂತ್ಯದ ವೇಳೆಗೆ ಮನೆಯಲ್ಲೇ ನೀವು ಜಾರ್ಜ್‌ಕುಟ್ಟಿ ಹೊಸ ಆಟ ನೋಡಬಹುದು.


Click it and Unblock the Notifications