Hari Hara Veera Mallu Box Office Day 2:₹50 ಕೋಟಿ ಗಡಿದಾಟಿದ ಪವನ್ ಕಲ್ಯಾಣ್, 2ನೇ ದಿನ ಚಿತ್ರ ಗಳಿಸಿದ್ದೆಷ್ಟು ?
ಚಿತ್ರರಂಗ ಮತ್ತು ರಾಜಕೀಯದ ರಣರಂಗ.. ಈ ಎರಡು ದೋಣಿಗಳ ನಾಯಕ ಪವನ್ ಕಲ್ಯಾಣ್. ಇದ್ದಕ್ಕಿದ್ದಂತೆಯೇ ಚಿತ್ರರಂಗಕ್ಕೆ ಮರಳುವ .. ಆಂಧ್ರದಲ್ಲಿ ಆಗಾಗ ಕ್ರಾಂತಿಯ ಕಹಳೆ ಮೊಳಗಿಸುವ ಪವನ್ ಕಲ್ಯಾಣ್ ಸದ್ಯ ತಮ್ಮ ಪುರಾತನ ಕಾಲದ ''ಹರಿಹರ ವೀರಮಲ್ಲು'' ಚಿತ್ರವನ್ನು ತಮ್ಮ ಸಮಸ್ತ ಪ್ರೇಕ್ಷಕರ ಮಡಿಲಿಗೆ ಹಾಕಿದ್ದಾರೆ. ವಿಶೇಷ ಅಂದರೆ ಚಿತ್ರ ಐದು ವರ್ಷದ ಹಳೆಯದಾದರೂ ..
ಚಿತ್ರಕ್ಕೆ ಸಾಮಾನ್ಯ ಪ್ರೇಕ್ಷಕರಿಂದ ಮತ್ತು ವಿಮರ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ .. ಪವನ್ ಅವರ ಅಸಂಖ್ಯಾತ ಅಭಿಮಾನಿಗಳು ರಾಜಕೀಯದಲ್ಲಿ ಕಳೆದು ಹೋಗಿದ್ದ ತಮ್ಮ ಪವರ್ ಸ್ಟಾರ್‌ನ ಬೆಳ್ಳಿತೆರೆಯ ಮೇಲೆ ಕಂಡು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಕೂದಲು ಕೆದರಿಕೊಂಡು ಬಂದು ಸಂಭ್ರಮ ಪಡುತ್ತಿದ್ದಾರೆ.

ಇದಕ್ಕೆ ಕೈಗನ್ನಡಿ ಎಂಬಂತೆ ಮೊದಲ ದಿನ ''ಹರಿಹರ ವೀರಮಲ್ಲು'' ಪವನ್ ಕಲ್ಯಾಣ್ ಅವರದ್ದೇ ಹಳೆಯ ಚಿತ್ರಗಳ ದಾಖಲೆಯನ್ನು ಮುರಿದಿದೆ. ಪವನ್ ಕಲ್ಯಾಣ್ ವೃತ್ತಿ ಬದುಕಿನ ಬೆಸ್ಟ್ ಓಪನರ್ ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ. ಆದರೆ ..ಸ್ಟಾರ್ ಯಾರೇ ಇರಲಿ. ಅಭಿಮಾನಿಗಳ ಅಭಿಮಾನ ಮಾತ್ರ ಯಾವ ಚಿತ್ರವನ್ನು ಕೂಡ ಬ್ಲಾಕ್ ಬಸ್ಟರ್‌ನನ್ನಾಗಿಸಲು ಸಾಧ್ಯ ಇಲ್ಲ. ಈ ಹಂತ ತಲುಪಲು ಸಾಮಾನ್ಯ ಪ್ರೇಕ್ಷಕರ ಬೆಂಬಲವೂ ಬೇಕು.
ಆದರೆ ಆಗಲೇ ಹೇಳಿದಂತೆ ''ಹರಿಹರ ವೀರಮಲ್ಲು'' ಸಾಮಾನ್ಯ ಚಿತ್ರ ರಸಿಕರಿಗೆ ಅಷ್ಟಾಗಿ ರುಚಿಸಿಲ್ಲ. ಹೀಗಾಗಿ ಅಭಿಮಾನಿಗಳ ಅಬ್ಬರದ ಜಾತ್ರೆ ಮುಗಿದ ನಂತರ ಅಂದರೆ ಸೋಮವಾರದ ನಂತರ ''ಹರಿಹರ ವೀರಮಲ್ಲು'' ಚಿತ್ರದ ಗಳಿಕೆ ಕುಸಿಯುವ ಸಾಧ್ಯತೆಯಂತೂ ಸದ್ಯಕ್ಕೆ ಸ್ಪಷ್ಟವಾಗಿ ಕಂಡು ಬರುತ್ತಿದೆ. ಇದಕ್ಕೆ ಪುರಾವೆ ಎಂಬಂತೆ ಮೊದಲ ದಿನ ಎರಡಂಕಿ ದಾಟಿದ ಚಿತ್ರದ ಗಳಿಕೆ ನಿನ್ನೆ ಒಂದಂಕಿಗೆ ಬಂದು ತಲುಪಿದೆ.
ಹೌದು. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಭಾರತದಲ್ಲಿ ಮೊದಲ ದಿನ ಅಂದಾಜು ₹ 34.75 ಕೋಟಿ ಹಣವನ್ನು ದೋಚಿದ್ದ ''ಹರಿಹರ ವೀರಮಲ್ಲು'' ಚಿತ್ರ ನಿನ್ನೆ [ಜುಲೈ 25] ಕೇವಲ ಅಂದಾಜು ₹8 ಕೋಟಿಯನ್ನು ಮಾತ್ರ ಗಳಿಸಿದೆ. ಇನ್ನು ''ಹರಿಹರ ವೀರಮಲ್ಲು'' ಚಿತ್ರದ ಬಿಡುಗಡೆಗೂ ಹಿಂದಿನ ದಿನ ಹಲವಡೆ ''ಪ್ರೀಮಿಯರ್ ಪ್ರದರ್ಶನ''ವನ್ನು ಚಿತ್ರತಂಡ ಹಮ್ಮಿಕೊಂಡಿತ್ತು. ಆಂಧ್ರ ಮತ್ತು ತೆಲಂಗಾಣ ಮಾತ್ರವಲ್ಲ ಕರ್ನಾಟಕದಲ್ಲಿ ಕೂಡ ಹಮ್ಮಿಕೊಳ್ಳಲಾಗಿದ್ದ ಈ ಪ್ರದರ್ಶನದಿಂದನೇ ₹12.7 ಕೋಟಿ ಹಣ ಹರಿದು ಬಂದಿತ್ತು. ಈ ಮೂಲಕ ಎರಡು ದಿನದ ನಂತರ ಚಿತ್ರದ ಒಟ್ಟಾರೆ ಗಳಿಕೆ ₹55.50 ಕೋಟಿಯಾಗಿದೆ ಎಂದು ''ಸ್ಯಾಕ್ನಿಲ್'' ಉಲ್ಲೇಖಿಸಿದೆ.

''ಸ್ಯಾಕ್ನಿಲ್'' ವೆಬ್ ಸೈಟ್ ಪ್ರಕಾರ ''ಹರಿಹರ ವೀರಮಲ್ಲು'' ಚಿತ್ರದ ಎರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ.
ವಿಶೇಷ ಪ್ರೀಮಿಯರ್ ದಿನ - [ ಬುಧವಾರ ] - ₹ 12.75 ಕೋಟಿ
ಮೊದಲ ದಿನ [ ಗುರುವಾರ] - ₹34.75 ಕೋಟಿ
ಎರಡನೇ ದಿನ [ ಶುಕ್ರವಾರ ] - ₹ 8 ಕೋಟಿ
ಒಟ್ಟು ಗಳಿಕೆ - ₹ 55.50 ಕೋಟಿ
ಸದ್ಯ ಎರಡನೇ ದಿನದ ಗಳಿಕೆಯಲ್ಲಿ ಕುಸಿತ ಕಂಡು ಬಂದಿದೆ. ಇಂದು ಮತ್ತು ನಾಳೆ ಚಿತ್ರದ ಗಳಿಕೆಯಲ್ಲಿ ಏರಿಕೆಯಾಗುವ ವಿಶ್ವಾಸ ತೆಲುಗು ಚಿತ್ರಪಂಡಿತರಿಗಿದೆ. ವಾರಾಂತ್ಯದೊಳಗೆ ಚಿತ್ರ ಎಷ್ಟು ಗಳಿಸುತ್ತೆ ? ಸೋಮವಾರದ ಪರೀಕ್ಷೆಯಲ್ಲಿ ಚಿತ್ರದ ಫಲಿತಾಂಶವೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











