Peddi Day 4 Boxoffice: ಟೀಕೆಗಳಿಗೆ ಜಗ್ಗದೇ ಗಲ್ಲಾಪೆಟ್ಟಿಗೆ ದೋಚಿದ 'ಪೆದ್ದಿ'; ಭಾನುವಾರ ಭರ್ಜರಿ ಕಲೆಕ್ಷನ್
ಇವತ್ತು ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೆಳೆಯುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ಫಿಲ್ಮ್ ಮೇಕರ್ಸ್ ಮಾಡುವ ಕಸರತ್ತು ಒಂದೆರಡಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದ 'ಪೆದ್ದಿ' ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ರಾಮ್‌ಚರಣ್ ಆರ್ಭಟಕ್ಕೆ ಬ್ರೇಕ್ ಹಾಕುವವರು ಇಲ್ಲ. ಬುಧವಾರ ಸಿನಿಮಾ ಪ್ರೀಮಿಯರ್ ಶೋಗಳು ಆರಂಭವಾಗಿತ್ತು. ಬಳಿಕ ಗುರುವಾರ, ಶುಕ್ರವಾರ, ಶನಿವಾರ ಬಾಕ್ಸಾಫೀಸ್ ಶೇಕ್ ಮಾಡಿದ್ದ ಸಿನಿಮಾ ಭಾನುವಾರವೂ ದಾಖಲೆ ಬರೆದಿದೆ.
ಮೊದಲ 3 ದಿನದಲ್ಲೇ 'ಪೆದ್ದಿ' ಸಿನಿಮಾ ಗ್ರಾಸ್ ಕಲೆಕ್ಷನ್ 200 ಕೋಟಿ ರೂ. ಗಡಿ ದಾಟಿತ್ತು. ಭಾನುವಾರದ ರಜಾದಿನ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದರು. ಪರಿಣಾಮ ಒಳ್ಳೆ ಗಳಿಕೆ ಕಂಡಿದೆ. ಜಾನ್ವಿ ಕಪೂರ್ ಪಾತ್ರದ ವಿಚಾರದ ಭುಗಿಲೆದ್ದ ವಿವಾದ ಕೂಡ ಚಿತ್ರಕ್ಕೆ ವರವಾದಂತೆ ಕಾಣುತ್ತಿದೆ.

ಐಪಿಎಲ್ ಹಿನ್ನೆಲೆ ಎರಡ್ಮೂರು ತಿಂಗಳಲ್ಲಿ ದೊಡ್ಡ ಸಿನಿಮಾಗಳ ಅಭಾವ ಎದ್ದು ಕಾಣುತ್ತಿತ್ತು. ಏಪ್ರಿಲ್, ಮೇ ತಿಂಗಳಲ್ಲಿ ತೆಲುಗಿನ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬರಲಿಲ್ಲ. ಕನ್ನಡದಲ್ಲಿ 'ಕೆಡಿ', ತಮಿಳಿನಲ್ಲಿ 'ಕರುಪ್ಪು' ಹಾಗೂ ಮಲಯಾಳಂನಲ್ಲಿ 'ದೃಶ್ಯಂ- 3' ಚಿತ್ರಗಳು ಬಂದಿದ್ದೇ ಹೆಚ್ಚು. ಹಾಗಾಗಿ 'ಪೆದ್ದಿ' ಸಿನಿಮಾ ನೋಡಲು ಸಿನಿರಸಿಕರು ಕಾತರದಿಂದ ಕಾಯುತ್ತಿದ್ದರು. ಸದ್ಯ ಸಿನಿಮಾ ಅಭಿಮಾನಿಗಳ ಮನಗೆದ್ದು ಮುನ್ನುಗ್ಗುತ್ತಿದೆ. ಪ್ರೇಕ್ಷಕರಿಂದ ಸೂಪರ್ ಎನಿಸಿಕೊಳ್ಳದಿದ್ದರೂ ಓಕೆ ಓಕೆ ಎನಿಸಿಕೊಂಡು 'ಪೆದ್ದಿ' ಗೆದ್ದಿದ್ದಾನೆ.
ಫಸ್ಟ್ ವೀಕೆಂಡ್ ಕಲೆಕ್ಷನ್
ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರ 'ಪೆದ್ದಿ' ಸಿನಿಮಾ ಗಳಿಕೆ ಹೆಚ್ಚಾಗಿತ್ತು. ಭಾನುವಾರ ಕೂಡ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ಹುಬ್ಬೇರಿಸಿದೆ. ಚಿತ್ರತಂಡವೇ ಈ ಬಗ್ಗೆ ಮಾಹಿತಿ ನೀಡಿದೆ. ವಿಶ್ವದಾದ್ಯಂತ 'ಪೆದ್ದಿ' ಸಿನಿಮಾ ಮೊದಲ 4 ದಿನದಲ್ಲಿ 292.5 ಕೋಟಿ ರೂ. ಕಲೆಕ್ಷನ್ ಮಾಡಿದೆ. ಭಾನುವಾರವೇ ಸಿನಿಮಾ 56 ಕೋಟಿ ರೂ. ಕಲೆಕ್ಷನ್ ಮಾಡಿ ಹುಬ್ಬೇರಿಸಿದೆ. ಬುಧವಾರ ಪ್ರೀಮಿಯರ್ ಶೋಗಳನ್ನು ಸೇರಿಸಿ ಗುರುವಾರ 135 ಕೋಟಿ ರೂ, ಕಲೆಕ್ಷನ್ ಮಾಡಿದ್ದ ಸಿನಿಮಾ ಶುಕ್ರವಾರ ಹಾಗೂ ಶನಿವಾರ ಕ್ರಮವಾಗಿ 46 ಕೋಟಿ ರೂ, 55 ಕೋಟಿ ರೂ, ಗಳಿಕೆ ಕಂಡಿತ್ತು. ಕರ್ನಾಟಕದಲ್ಲೇ 4 ದಿನಕ್ಕೆ ಸಿನಿಮಾ 21 ಕೋಟಿ ರೂ. ಬಾಚಿಕೊಂಡಿದೆ.
ರಾಮ್‌ಚರಣ್ ಕರಿಯರ್ ಬೆಸ್ಟ್
ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಸಿನಿಮಾ ಮೂಲಕ ರಾಮ್‌ಚರಣ್ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟ ಅಲಂಕರಿಸಿದ್ದರು. ಆ ಸಿನಿಮಾ 1250 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಅದು ಮಲ್ಟಿಸ್ಟಾರರ್ ಸಿನಿಮಾ. ಚರಣ್ ಜೊತೆಗೆ ಜ್ಯೂ. ಎನ್‌ಟಿಆರ್ ನಟಿಸಿದ್ದರು. ಜಕ್ಕಣ್ಣ ಆಕ್ಷನ್ ಕಟ್ ಹೇಳಿದ್ದರು. ಹಾಗಾಗಿ ಯಶಸ್ಸಿನ ಪಾಲು ಅವರಿಬ್ಬರಿಗೂ ಸಿಗಬೇಕು. ಆದರೆ ರಾಮ್‌ಚರಣ್ ಸೋಲೊ ಹೀರೊ ಆಗಿ ನಟಿಸಿರುವ ಸಿನಿಮಾ ಇದು. ಈವರೆಗೆ ರಾಮ್‌ಚರಣ್ ನಟನೆಯ ಸಿನಿಮಾಗಳಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ 'ಪೆದ್ದಿ' ಪಾತ್ರವಾಗಿದೆ. ಅದು ಕೂಡ ಕೇವಲ 4 ದಿನಕ್ಕೆ.
ಸೋಮವಾರದ ಪರೀಕ್ಷೆ?
ದೊಡ್ಡ ಸಿನಿಮಾಗಳ ಆರ್ಭಟ ಒಂದೇ ವಾರಕ್ಕೆ ಮುಗಿದು ಹೋಗುತ್ತದೆ. ಫಸ್ಟ್ ವೀಕೆಂಡ್ ಕ್ರೇಜ್ ತಕ್ಕಂತೆ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತದೆ. ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡುತ್ತಾರೆ. ಅಷ್ಟರಲ್ಲೇ ಪೈರಸಿ ಕಾಪಿಗಳು ವೈರಲ್ ಆಗಿಬಿಡುತ್ತದೆ. ಸೋಮವಾರ ಅಸಲಿ ಲೆಕ್ಕ ಶುರುವಾಗುತ್ತದೆ. ವೀಕೆಂಡ್ ಬಳಿಕ ಮೊದಲ ವಾರದ ದಿನ ಸಿನಿಮಾ ಪ್ರೇಕ್ಷಕರನ್ನು ಸೆಳೆದರೆ ಗೆದ್ದಂತೆ. ಇಲ್ಲದಿದ್ದರೆ ಕಷ್ಟ. ಸದ್ಯ 'ಪೆದ್ದಿ'ಗೆ ಇವತ್ತು(ಜೂನ್ 8) ಸೋಮವಾರದ ಅಗ್ನಿ ಪರೀಕ್ಷೆ ಶುರುವಾಗಿದೆ. ಈ ಪರೀಕ್ಷೆಯಲ್ಲಿ ರಾಮ್‌ಚರಣ್ ಗೆಲ್ತಾರಾ ಕಾದು ನೋಡಬೇಕಿದೆ.


Click it and Unblock the Notifications