Su From So Boxoffice: 'ಸು ಫ್ರಮ್ ಸೋ' ಪಕ್ಕಾ ಕಲೆಕ್ಷನ್ ಲೆಕ್ಕ ಕೊಟ್ಟ ನಿರ್ಮಾಪಕರು
ಚಿತ್ರರಂಗದಲ್ಲಿ ಸಿನಿಮಾ ಕಲೆಕ್ಷನ್, ಕಲಾವಿದರು ಹಾಗೂ ತಂತ್ರಜ್ಞರ ಸಂಭಾವನೆ ವಿಚಾರ ಗುಟ್ಟಾಗಿಯೇ ಇರುತ್ತದೆ. ಸಾಕಷ್ಟು ಸಂದರ್ಭಗಳಲ್ಲಿ ಅಂತೆಕಂತೆ ಸುದ್ದಿಯೇ ಹೆಚ್ಚು ಸದ್ದು ಮಾಡುತ್ತದೆ. ಈ ವರ್ಷ 'ಕಾಂತಾರ- 1' ಬಿಟ್ಟರೆ ದೊಡ್ಡಮಟ್ಟದಲ್ಲಿ ಗೆದ್ದ ಮತ್ತೊಂದು ಕನ್ನಡ ಸಿನಿಮಾ 'ಸು ಫ್ರಮ್ ಸೋ'.
ಜೆಪಿ ತುಮ್ಮಿನಾಡ್ ನಿರ್ದೇಶನದ ಈ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು. ಸ್ಟಾರ್ ಕಲಾವಿದರಿಲ್ಲದೇ ಹೆಚ್ಚು ಬಜೆಟ್, ಪ್ರಚಾರ ಯಾವುದೂ ಇಲ್ಲದೇ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಕನ್ನಡ ಮಾತ್ರವಲ್ಲ ಮಲಯಾಳಂ ಭಾಷೆಗೆ ಡಬ್ ಆಗಿ ಕೇರಳದಲ್ಲಿ ಕೂಡ ಸದ್ದು ಮಾಡಿತ್ತು. ಶಶಿಧರ ಶೆಟ್ಟಿ ಬರೋಡ ಹಾಗೂ ರವಿ ರೈ ಕಳಸ ಅವರೊಟ್ಟಿಗೆ ಸೇರಿ ರಾಜ್ ಬಿ ಶೆಟ್ಟಿ ಚಿತ್ರಕ್ಕೆ ಹಣ ಹೂಡಿದ್ದರು.

ಬರೀ ಮೌತ್ ಟಾಕ್‌ನಿಂದಲೇ ಸಿನಿಮಾ ಪ್ರೇಕ್ಷಕರನ್ನು ದೊಡ್ಡಮಟ್ಟದಲ್ಲಿ ಚಿತ್ರಮಂದಿರಗಳಿಗೆ ಸೆಳೆದಿತ್ತು. ಒಳ್ಳೆ ಸಿನಿಮಾವನ್ನು ಪ್ರೇಕ್ಷಕರು ಕೈಬಿಡಲ್ಲ ಎನ್ನುವುದನ್ನು ಸಾಬೀತು ಮಾಡಿತ್ತು. ಚಿತ್ರಕ್ಕೆ ಯಾವ ಮಟ್ಟಿಗೆ ಬೇಡಿಕೆ ಇತ್ತು ಅಂದ್ರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ವೀಕೆಂಡ್‌ನಲ್ಲಿ ಬೆಳಗ್ಗೆ 5 ಗಂಟೆ 6 ಗಂಟೆಗೆ ಸ್ಪೆಷಲ್ ಶೋಗಳನ್ನು ಏರ್ಪಡಿಸಲಾಗಿತ್ತು. ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದರು.
ಈ ಕಾಮಿಡಿ ಎಂಟರ್‌ಟೈನರ್ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದು ಗೊತ್ತೇಯಿದೆ. ಅಧಿಕೃತವಾಗಿ ಚಿತ್ರತಂಡ ಈ ಬಗ್ಗೆ ಮಾಹಿತಿ ನೀಡಲಿಲ್ಲ. ಬಾಕ್ಸಾಫೀಸ್ ಪಂಡಿತರ ಲೆಕ್ಕದ ಪ್ರಕಾರ 'ಸು ಫ್ರಮ್ ಸೋ' ಚಿತ್ರದ ಗಳಿಕೆ ಬಜೆಟ್‌ಗಿಂತ ಹಲವು ಪಟ್ಟು ದೊಡ್ಡದಾಗಿತ್ತು. 7 ಕೋಟಿಗೆ ಚಿತ್ರದ ಓಟಿಟಿ, ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿತ್ತು.
ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಶಶಿಧರ ಶೆಟ್ಟಿ ಬರೋಡ ಚಿತ್ರದ ಗಳಿಕೆ ಬಗ್ಗೆ ಹೇಳಿದ್ದಾರೆ. ಕರಾವಳಿ ಸಂಗೀತ ಕಲಾವಿದರ ಒಕ್ಕೂಟದಿಂದ ನಡೆದ ಕಾರ್ಯಕ್ರಮದಲ್ಲಿ ಅವರು ಭಾಗಿ ಆಗಿದ್ದರು. ನಟ ಪುಷ್ಪರಾಜ್ ಬೋಳಾರ್ ಕೂಡ ಹಾಜರಿದ್ದರು. ಈ ವೇಳೆ ನಿರ್ಮಾಪಕರಾದ ಶಶಿಧರ ಶೆಟ್ಟಿ ಮಾತನಾಡುತ್ತಾ "ವೇದಿಕೆಯಲ್ಲಿ 'ಸು ಫ್ರಮ್ ಸೋ' ಚಿತ್ರದ ನಟ ಭಾವ ಬಂದರೂ ಖ್ಯಾತಿಯ ನಟ ನಮ್ಮೊಟ್ಟಿಗೆ ಇದ್ದಾರೆ. ಅವರನ್ನು ಇದೇ ಮೊದಲ ಬಾರಿ ನೋಡಿದ್ದು. ಅವರ ನಟನೆಯಿಂದ ನನಗೆ 140 ಕೋಟಿ ರೂ. ಬಂದಿದೆ. ಆದರೆ ಅವ್ರನ್ನು ನೋಡುತ್ತಿರುವುದು ಇದೇ ಮೊದಲು" ಎಂದಿದ್ದಾರೆ. ಆ ಮೂಲಕ ಚಿತ್ರದ ಒಟ್ಟು ಗಳಿಕೆ 140 ಕೋಟಿ ರೂ. ಎನ್ನುವುದು ಸ್ಪಷ್ಟವಾಗುತ್ತಿದೆ.
ಗ್ರಾಸ್ ಕಲೆಕ್ಷನ್ 140 ಕೋಟಿ ರೂ. ಎಲ್ಲಾ ಕಳೆದು 70 ಕೋಟಿ ರೂ.ವರೆಗೆ ಶೇರ್ ಬಂದಿರುವ ಅಂದಾಜಿದೆ. ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳು ಮಾಡದ ಬ್ಯುಸಿನೆಸ್ 'ಸು ಫ್ರಮ್ ಸೋ' ಚಿತ್ರ ಮಾಡಿದೆ.
ರಾಜ್ ಬಿ ಶೆಟ್ಟಿ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ರವಿಯಣ್ಣ ಆಗಿ ಶನೀಲ್ ಗೌತಮ್ ನಟನೆ ಚಿತ್ರಕ್ಕೆ ಪ್ಲಸ್ ಆಗಿತ್ತು. ಬಹಳ ಸಿಂಪಲ್ ಕಥೆ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಪ್ರೇಕ್ಷಕರನ್ನು ರಂಜಿಸಿತ್ತು. ಆರಂಭದಿಂದ ತಮಾಷೆಯಾಗಿ ಸಾಗುವ ಸಿನಿಮಾ ಕೊನೆಯಲ್ಲಿ ಒಂದೊಳ್ಳೆ ಸಂದೇಶದೊಂದಿಗೆ ಮುಕ್ತಾಯವಾಗುತ್ತದೆ.
'ಸು ಫ್ರಮ್ ಸೋ' ಸೀಕ್ವೆಲ್ ಬರಬೇಕು ಎನ್ನುವುದು ಅಭಿಮಾನಿಗಳ ಆಸೆ. ಆದರೆ ಇದಕ್ಕೆ ನಟ, ನಿರ್ಮಾಪಕ ರಾಜ್ ಬಿ ಶೆಟ್ಟಿ ನೋ ಎಂದುಬಿಟ್ಟಿದ್ದಾರೆ. ನನಗಂತೂ ಸೀಕ್ವೆಲ್ ಮಾಡುವ ಮನಸ್ಸಿಲ್ಲ. ಬೇರೆ ಯಾರಾದರೂ ಬೇಕಿದ್ದರೆ ಮಾಡಲಿ ಎಂದಿದ್ದಾರೆ.


Click it and Unblock the Notifications











