Raid 2 Box Office Day 10 ; ಅಜಯ್ ದೇವಗನ್ ಎದುರು ಇನ್ಮುಂದೆ ಕೆಮ್ಮಂಗಿಲ್ಲ ಸಲ್ಮಾನ್ ಖಾನ್..!
ಈಗೀಗ ಸುಮಾರು ಸಿನಿಮಾಗಳು ಬರುತ್ತಿವೆ, ಹೋಗುತ್ತಿವೆ. ಆದರೆ ಗೆಲುವು ಮಾತ್ರ ಬಹುತೇಕರ ಕೈಗೆ ಸಿಗುತ್ತಿಲ್ಲ. ಹೇಗಾದರೂ ಮಾಡಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದುತರಲು ಚಿತ್ರತಂಡಗಳು ಹರಸಾಹಸ ಮಾಡುತ್ತಿವೆ. ನಾನಾ ಕಸರತ್ತುಗಳನ್ನು ಮಾಡುತ್ತಿವೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ಇದು ಕೇವಲ ಕನ್ನಡ ಚಿತ್ರರಂಗದ ಕಥೆ ಮಾತ್ರ ಅಲ್ಲ, ಎಲ್ಲ ಭಾಷೆಯ ಕಥೆ ಕೂಡ ಒಂದೇ ತರ ಇದೆ.
ಇನ್ನು ಮೊದಲಾದರೆ ಹೊಸಬರು ಮಾತ್ರ ಗೆಲ್ಲಲು ಹೆಣಗುತ್ತಿದ್ದರು. ಹೊಸಬರ ಪ್ರಯತ್ನ-ಪ್ರಯೋಗಗಳು ಸ್ಟಾರ್‌ಗಳ ಬಿಗ್ ಬಜೆಟ್ ಕಮರ್ಷಿಯಲ್ ಚಿತ್ರಗಳ ಮುಂದೆ ಕಳೆದು ಹೋಗುತ್ತಿದ್ದವು. ಆದರೆ ಈಗ ಸೂಪರ್ ಸ್ಟಾರ್ ಪಟ್ಟವನ್ನು ಅಲಂಕರಿಸಿದವರು ಕೂಡ ಒದ್ದಾಡುತ್ತಿದ್ದಾರೆ.

ಹೀಗಿರುವಾಗ ಇದಕ್ಕೆ ತದ್ವಿರದ್ದ ಎಂಬಂತೆ ಸದ್ಯ ಅಜಯ್ ದೇವಗನ್ ಬಾಲಿವಡ್‌ನಲ್ಲಿ ಗೆಲುವಿನ ಬಾವುಟ ಹಾರಿಸಿದ್ದಾರೆ. ನೂರು ಕೋಟಿಯ ಗಡಿಯನ್ನು ದಾಟಿದ್ದಾರೆ. ಬಾಲಿವುಡ್‌ನ ಮಾಸ್ ಮಹಾರಾಜಾ ಸಲ್ಮಾನ್ ಖಾನ್ ಅವರ ಪಕ್ಕದಲ್ಲಿ ಬಂದು ನಿಂತಿದ್ದಾರೆ.
ಹೌದು, ರೇಡ್ 2.. ಮೇ 1 ರಂದು ತೆರೆಗೆ ಬಂದ ಚಿತ್ರ. ಅಪಾರ ನಿರೀಕ್ಷೆಯನ್ನೊತ್ತು ತೆರೆಗೆ ಬಂದ ಈ ಚಿತ್ರ ಗೆಲ್ಲುವ ವಿಶ್ವಾಸ ಬಾಲಿವುಡ್‌ಗೆ ಇತ್ತು. ಈ ನಂಬಿಕೆ ಹುಸಿಯಾಗಿಲ್ಲ. ನಿಧಾನಕ್ಕೆ ಚಿತ್ರ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ನೂರು ಕೋಟಿಯ ಗಡಿಯನ್ನು ಚಿತ್ರ ಪಾರು ಮಾಡಿದೆ.
ಬಾಲಿವುಡ್ ಚಿತ್ರಗಳ ಅಂಕಿ- ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ನಿನ್ನೆ { ಮೇ 10 } ಚಿತ್ರದ ಗಳಿಕೆಯಲ್ಲಿ ಶುಕ್ರವಾರಕ್ಕೆ { ಮೇ 09 } ಹೋಲಿಸಿದರೆ ಶೇಕಡಾ 66 % ಗಳಿಕೆಯಲ್ಲಿ ಏರಿಕೆಯಾಗಿದ್ದು ಚಿತ್ರ ₹8.25 ಕೋಟಿಯನ್ನು ಗಳಿಸಿದೆ. ಈ ಮೂಲಕ ರೇಡ್ 2 ಈ ಹತ್ತು ದಿನದಲ್ಲಿ 109 ಕೋಟಿ ಹಣವನ್ನು ಗಳಿಸಿದೆ.
ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ರೇಡ್ 2 ಚಿತ್ರದ ಹತ್ತು ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ { ಗುರುವಾರ } - ₹19.25 ಕೋಟಿ
ಎರಡನೇ ದಿನ { ಶುಕ್ರವಾರ } - ₹ 12 ಕೋಟಿ
ಮೂರನೇ ದಿನ { ಶನಿವಾರ } - ₹ 18 ಕೋಟಿ
ನಾಲ್ಕನೇ ದಿನ { ಭಾನುವಾರ }- ₹ 22 ಕೋಟಿ
ಐದನೇ ದಿನ { ಸೋಮವಾರ }- ₹ 7.5 ಕೋಟಿ
ಆರನೇ ದಿನ { ಮಂಗಳವಾರ } - ₹ 7 ಕೋಟಿ
ಏಳನೇ ದಿನ { ಬುಧವಾರ } - ₹4.75 ಕೋಟಿ
ಎಂಟನೇ ದಿನ { ಗುರುವಾರ } - ₹5.25 ಕೋಟಿ
ಮೊದಲ ವಾರದ ಒಟ್ಟು ಗಳಿಕೆ - ₹95.75ಕೋಟಿ
ಒಂಬತ್ತನೇ ದಿನ {ಎರಡನೇ ಶುಕ್ರವಾರ } - ₹ 5ಕೋಟಿ
ಹತ್ತನೇ ದಿನ {ಎರಡನೇ ಶನಿವಾರ } - ₹ 8.25 ಕೋಟಿ
ಒಟ್ಟು ಗಳಿಕೆ - ₹109 ಕೋಟಿ
ಹೀಗೆ ಈ ಹತ್ತು ದಿನದಲ್ಲಿ ₹109 ಕೋಟಿ ಹಣವನ್ನು ರೇಡ್ 2 ಚಿತ್ರ ಗಳಿಸಿದ್ದು ಇಂದು { ಮೇ 11 } ಭಾನುವಾರದ ಹಿನ್ನೆಲೆ ಚಿತ್ರದ ಗಳಿಕೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಬಾಲಿವುಡ್ ಪಂಡಿತರ ಲೆಕ್ಕಾಚಾರದ ಪ್ರಕಾರ ಇಂದು ರೇಡ್ 2 ₹10 ಕೋಟಿಗೂ ಅಧಿಕ ಹಣವನ್ನು ಗಳಿಸಲಿದೆ.
ಇನ್ನು ರೇಡ್ 2 ಚಿತ್ರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ನಡುವೆ ಕೂಡ ಬಾಕ್ಸಾಫೀಸ್‌ನಲ್ಲಿ ಉತ್ತಮವಾದ ಗಳಿಕೆಯನ್ನು ಮಾಡಿದೆ. ಇದು ಹಲವರ ಅಚ್ಚರಿಗೆ ಕಾರಣವಾಗಿದೆ. ಯಾಕೆಂದರೆ ಯುದ್ದದ ಸಮಯದಲ್ಲಿ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಬರುವುದಿಲ್ಲ ಎನ್ನುವ ವಾದವನ್ನು ಅನೇಕರು ಮಾಡುತ್ತಿದ್ದರು. ಮೊನ್ನೆ ಮೇ 09ರಂದು ಬಿಡುಗಡೆಯಾಗಬೇಕಿದ್ದ ಭೂಲ್ ಚೂಕ್ ಮಾಫ್ ಚಿತ್ರವನ್ನು ಇದೇ ಕಾರಣದಿಂದ ಚಿತ್ರಮಂದಿರದ ಬದಲು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಹೀಗಿರುವಾಗ ಆಪರೇಷನ್ ಸಿಂಧೂರ್ ನಡೆದ ಮರುದಿನ ಅಂದರೆ ಮೇ 8ರಂದು { ಗುರುವಾರ } ರೇಡ್ 2 ₹5.25 ಕೋಟಿ ಮತ್ತು ಮೇ 9ರಂದು { ಶುಕ್ರವಾರ } ₹5 ಕೋಟಿ ಹಣವನ್ನು ಗಳಿಸಿದೆ.
ಇನ್ನು ರೇಡ್ 2 ಚಿತ್ರದ ಮೂಲಕ ₹109 ಕೋಟಿಯನ್ನು ಹತ್ತು ದಿನದಲ್ಲಿ ಕೊಳ್ಳೆ ಹೊಡೆದಿರುವ ಅಜಯ್ ದೇವಗನ್, ಸಲ್ಮಾನ್ ಖಾನ್ ಅವರ ಪಕ್ಕ ಬಂದು ನಿಂತಿದ್ದಾರೆ. ಹೌದು, ಅಸಲಿಗೆ ಇಲ್ಲಿಯವರೆಗೆ ಸಲ್ಮಾನ್ ಖಾನ್ ಅಭಿನಯದ ಹನ್ನೊಂದು ಚಿತ್ರಗಳು ₹100 ಕೋಟಿಯಿಂದ ₹200 ಕೋಟಿಯೊಳಗೆ ಹಣವನ್ನು ಗಳಿಸಿವೆ. ಈ ಸಾಲಿಗೆ ಈಗ ಅಜಯ್ ದೇವಗನ್ ಕೂಡ ಬಂದು ಸೇರಿಕೊಂಡಿದ್ದು ₹100 ಕೋಟಿ ಗಳಿಸಿದ ಅಜಯ್ ದೇವಗನ್ ಅಭಿನಯದ ಹನ್ನೊಂದನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ರೇಡ್ 2 ಪಾತ್ರವಾಗಿದೆ.
ನೂರು ಕೋಟಿಯ ಗಡಿಯನ್ನು ದಾಟಿರುವ ಸಲ್ಮಾನ್ ಖಾನ್ ಅಭಿನಯದ ಸಿನಿಮಾಗಳು
1. ದಬಾಂಗ್
2. ರೆಡಿ
3. ಬಾಡಿಗಾರ್ಡ್
4. ಏಕ್ ಥಾ ಟೈಗರ್
5. ದಬಾಂಗ್ 2
6. ಜೈ ಹೋ
7. ಟ್ಯೂಬ್ ಲೈಟ್
8. ರೇಸ್ 3
9. ದಬಾಂಗ್ 3
10. ಕಿಸಿ ಕಾ ಭಾಯಿ ಕಿಸಿ ಕಾ ಜಾನ್,
11, ಸಿಕಂದರ್,
ನೂರು ಕೋಟಿಯ ಗಡಿಯನ್ನು ದಾಟಿರುವ ಅಜಯ್ ದೇವಗನ್ ಅಭಿನಯದ ಸಿನಿಮಾಗಳು
1. ಗೋಲ್‌ಮಾಲ್ 3
2. ಸಿಂಗಂ
3. ಬೋಲ್ ಬಚ್ಚನ್
4. ಸನ್ ಆಫ್ ಸರ್ದಾರ್
5. ಸಿಂಗಂ ರಿಟರನ್ಸ್
6. ಶಿವಾಯ್
7. ರೇಡ್
8. ಟೋಟಲ್ ಧಮಾಲ್
9. ದೇ ದೇ ಪ್ಯಾರ್ ದೇ
10. ಶೈತಾನ್
11. ರೇಡ್ 2
ರೇಡ್ 2 ವರ್ಸಸ್ ರೇಡ್
ಇನ್ನು ರೈಡ್ 2 ಚಿತ್ರದ ಮೊದಲ ಭಾಗ 2018ರಲ್ಲಿ ತೆರೆಗೆ ಬಂದಿತ್ತು. ಆ ಕಾಲದಲ್ಲಿ ಬಂದ ರೇಡ್ ಬಾಕ್ಸಾಫೀಸ್‌ನಲ್ಲಿ ₹101.45 ಕೋಟಿ ಹಣವನ್ನು ಗಳಿಸಿತ್ತು.ಕೇವಲ ಹತ್ತು ದಿನದಲ್ಲಿ ರೇಡ್ 2 ಈ ದಾಖಲೆಯನ್ನು ಮುರಿದಿದೆ. ₹109 ಕೋಟಿಯನ್ನು ಗಳಿಸಿದೆ.
ಇನ್ನು ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಬಾಲಿವುಡ್ ಚಿತ್ರಗಳ ಸಾಲಿನಲ್ಲಿ ರೇಡ್ 2 ಚಿತ್ರ ಸದ್ಯ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ಅಕ್ಷಯ್ ಕುಮಾರ್ ಅಭಿನಯದ ಕೇಸರಿ 2 ಮತ್ತು ಸನ್ನಿ ಡಿಯೋಲ್ ಅಭಿನಯದ ಜಾಟ್ ಚಿತ್ರವನ್ನು ಕೂಡ ರೇಡ್ 2 ಚಿತ್ರ ಹಿಂದಿಕ್ಕಿದೆ. ಮೇ 18ರೊಳಗೆ ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಚಿತ್ರದ ದಾಖಲೆಯನ್ನು ಕೂಡ ಮುಂಬರುವ ದಿನ ಗಳಲ್ಲಿ ರೇಡ್ 2 ಮುರಿಯುವ ಸಾಧ್ಯತೆ ಇದೆ.
ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಬಾಲಿವುಡ್‌ನ 5 ಚಿತ್ರಗಳು
ಚಿತ್ರದ ಹೆಸರು ಚಿತ್ರದ ಗಳಿಕೆ
1.ಛಾವಾ ₹615.39 ಕೋಟಿ
2.ಸ್ಕೈ ಫೋರ್ಸ್ ₹134.93 ಕೋಟಿ
3.ಸಿಕಂದರ್ ₹129.95 ಕೋಟಿ
4.ರೇಡ್ 2 ₹109 ಕೋಟಿ
5. ಜಾಟ್ ₹89.28 ಕೋಟಿ
ಒಟ್ನಲ್ಲಿ ಸದ್ಯ ರೇಡ್ 2 ಚಿತ್ರ ನೂರು ಕೋಟಿಯ ಗಡಿಯನ್ನು ದಾಟಿದೆ. ಈ ವಾರ ಬೇರೆ ಯಾವ ದೊಡ್ಡ ಚಿತ್ರಗಳು ಹಿಂದಿಯಲ್ಲಿ ಬಿಡುಗಡೆಯಾಗುತ್ತಿಲ್ಲ. ಇನ್ನು ಐಪಿಎಲ್ ಬೇರೆ ರದ್ದಾಗಿದೆ. ಈ ಹಿನ್ನೆಲೆ ಚಿತ್ರ ಇನ್ನು ಹೆಚ್ಚಿನ ಹಣ ಗಳಿಸುವ ಸಾಧ್ಯತೆ ಇದೆ. ಛಾವಾ ನಂತರ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಎರಡನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಕೂಡ ರೇಡ್ 2 ಪಾತ್ರವಾಗುವ ಸಾಧ್ಯತೆ ಇದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ಕೊಯಿ ಮೊಹಿ ವೆಬ್ ಸೈಟ್, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











