'ಸು ಫ್ರಮ್ ಸೋ' ಅಬ್ಬರ, ರಾಜ್ ಬಿ ಶೆಟ್ಟಿ ಮತ್ತು ಹುಡುಗರಿಂದ 'ಕಾಟೇರ' ದಾಖಲೆ ಧ್ವಂಸ ..!
''ಕಾಂತಾರ'' ಚಿತ್ರದ ನಂತರ ಕನ್ನಡ ಚಿತ್ರರಂಗಕ್ಕೆ ಮಂಕು ಬಡಿದಂತೆ ಆಗಿತ್ತು. ''ಕೆಜಿಎಫ್'' ಮತ್ತು ''ಕಾಂತಾರ''ದಂಥಾ ಚಿತ್ರ ಕಣ್ತುಂಬಿಕೊಂಡ ಪ್ರೇಕ್ಷಕರಿಗೆ ಬೇರೆ ಚಿತ್ರಗಳು ರುಚಿಸಿದಂತೆ ಆಗಿತ್ತು. ಅಲ್ಲೊಂದು.. ಇಲ್ಲೊಂದು.. ಸಿನಿಮಾ ಗೆಲ್ಲುತ್ತಿದ್ದವಾದರೂ ಆ ಗೆಲುವಿನ ಬೆಳಕು ಅಷ್ಟಾಗಿ ಹರಡಿರಲಿಲ್ಲ. ಆದರೆ.. '' ಸು ಫ್ರಮ್ ಸೋ'' ಗೆಲುವು ಹಾಗಲ್ಲ. ಹೊಸ ತಂಡದ ಈ ಹೊಸ ಪ್ರಯತ್ನದ ಕುರಿತು ಭಾರತದೆಲ್ಲೆಡೆ ಚರ್ಚೆಗಳಾಗುತ್ತಿವೆ.
ಕನ್ನಡದಲ್ಲಿ ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಹಲವರನ್ನು ನಿಬ್ಬೇರಗಾಗಿಸಿದೆ. ಕನ್ನಡದಲ್ಲಿ ಮಾತ್ರವಲ್ಲದೇ ಈ ಚಿತ್ರ ಮಲಯಾಳಂನಲ್ಲಿ ಕೂಡ ಸದ್ದು ಮಾಡುತ್ತಿದೆ. ತೆಲುಗಿನಲ್ಲಿ ಕೂಡ ಡಬ್ ಆಗಿದೆ. ಇನ್ನೂ ಬಾಕ್ಸಾಫೀಸ್‌ನ ವಿಚಾರಕ್ಕೆ ಬಂದರೆ ಅಲ್ಲಿ ಈ ಚಿತ್ರ ಬೆಳೆಯುತ್ತಿರುವುದು ಅಕ್ಷರಶಃ ಚಿನ್ನದಂತಹ ಬೆಳೆ.

ಯಾರು ಊಹೆ ಮಾಡದ ರೀತಿಯಲ್ಲಿ ಸದ್ದು ಗದ್ದಲ ಮಾಡುತ್ತಿರುವ ರಾಜ್ ಬಿ ಶೆಟ್ಟಿ ನಿರ್ಮಾಣದ ಈ ''ಸು ಫ್ರಮ್ ಸೋ'' ಸದ್ಯ ''ಕಾಟೇರ'' ಚಿತ್ರದ ದಾಖಲೆಯನ್ನು ಮುರಿಯುವ ಸನಿಹದಲ್ಲಿದೆ ಅಂದರೆ ನೀವು ನಂಬ್ತೀರಾ.? ನಂಬ್ಲೇಬೇಕು ಯಾಕೆಂದರೆ ಇದೇ ವಾಸ್ತವ.
ಹೌದು, ಅಸಲಿಗೆ ದರ್ಶನ್ ಅವರ ಅಸಂಖ್ಯಾತ ಅಗಣಿತ ಅಭಿಮಾನಿಗಳ ಪ್ರಕಾರ ''ಕಾಟೇರ'' ಚಿತ್ರ ಬಾಕ್ಸಾಫೀಸ್‌ನಲ್ಲಿ 100-200 ಕೋಟಿಯನ್ನು ಗಳಿಸಿದೆ. ಆದರೆ.. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ''ಕಾಟೇರ'' ಭಾರತದಲ್ಲಿ ₹ 68.1 ಕೋಟಿಯನ್ನು ಗಳಿಸಿದೆ.
ಈ ದಾಖಲೆಯನ್ನು ಈಗ ''ಸು ಫ್ರಮ್ ಸೋ'' ಇಂದು ಅಥವಾ ನಾಳೆ ಮುರಿಯಲಿದೆ.ಯಾಕೆಂದರೆ.. ಇದೇ ''ಸ್ಯಾಕ್ನಿಲ್'' ಪ್ರಕಾರ '' ಸು ಫ್ರಮ್ ಸೋ'' ಇಲ್ಲಿಯವರೆಗೆ ₹ 63.65 ಕೋಟಿಯನ್ನು ಗಳಿಸಿದೆ. ಇನ್ನು ಇಂದು ಸೋಮವಾರವಾದ ಹಿನ್ನೆಲೆ ಚಿತ್ರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಬಹುದು. ಗಳಿಕೆ ಕಡಿಮೆಯಾಗಬಹುದು.
ಆದರೆ.. ''ಕಾಟೇರ'' ದಾಖಲೆ ಮುರಿಯುವುದು ಅಸಾಧ್ಯವೇನಲ್ಲ. ಯಾಕೆಂದರೆ.. ಬೇಕಿರುವುದು ಕೆಲವೇ ಕೋಟಿಗಳು ಮಾತ್ರ. ಎಲ್ಲಕ್ಕಿಂತ ಹೆಚ್ಚಾಗಿ ಬಿಡುಗಡೆಯಾಗಿ ಮೂರು ವಾರವಾಗುತ್ತಾ ಬಂದರು ಕೂಡ ''ಸು ಫ್ರಮ್ ಸೋ'' ಅಬ್ಬರ ಕಡಿಮೆಯಾಗಿಲ್ಲ.

ನಿಜಾ.. ಈ ಶುಕ್ರವಾರ ತೆರೆಗೆ ಬರುತ್ತಿರುವ ''ಕೂಲಿ'' ಮತ್ತು ''ವಾರ್ 2'' ಚಿತ್ರದಿಂದ '' ಸು ಫ್ರಮ್ ಸೋ'' ಮೇಲೆ ಪರಿಣಾಮವಾಗಬಹುದು. ಚಿತ್ರದ ಪ್ರದರ್ಶನಗಳ ಸಂಖ್ಯೆ ಕಡಿಮೆಯಾಗಬಹುದು. ಆದರೆ.. ಹೇಗೆ ನೋಡಿದರು ಕೂಡ ''ಕಾಟೇರ'' ಚಿತ್ರದ ದಾಖಲೆಯನ್ನು '' ಸು ಫ್ರಮ್ ಸೋ'' ಮುರಿಯುವುದು ಖಚಿತ.
ಅಂದ್ಹಾಗೇ ₹68 ಕೋಟಿಯನ್ನು ಗಳಿಸಲು ''ಕಾಟೇರ'' ಚಿತ್ರಕ್ಕೆ ನಾಲ್ಕು ವಾರ ಬೇಕಾಗಿತ್ತು. ಆದರೆ ಹೊಸಬರ ''ಸು ಫ್ರಮ್ ಸೋ'' ಮೂರು ವಾರಕ್ಕೆ ಈ ಗಡಿಯ ಹತ್ತಿರ ಬಂದು ನಿಂತಿದೆ.
ಇನ್ನೂ.. ಹೊರದೇಶದಿಂದ ಬಂದ ಹಣವನ್ನು ಸೇರಿಸಿದರೆ ''ಸ್ಯಾಕ್ನಿಲ್'' ಪ್ರಕಾರ ''ಕಾಟೇರ'' ಚಿತ್ರದ ಗಳಿಕೆ ₹80.5 ಕೋಟಿ ಇದೆ. ''ಸು ಫ್ರಮ್ ಸೋ'' ವಿಚಾರದಲ್ಲಿ ಈ ಲೆಕ್ಕ ₹70 ಕೋಟಿ ಆಸು ಪಾಸಿನಲ್ಲಿದೆ. ಈ ಹಿನ್ನೆಲೆ ಭಾರತದ ಬಾಕ್ಸಾಫೀಸ್‌ನಲ್ಲಿ ''ಕಾಟೇರ'' ಚಿತ್ರವನ್ನು ಹಿಂದಿಕ್ಕಲಿರುವ ''ಸು ಫ್ರಮ್ ಸೋ'' ವರ್ಲ್ಡ್ ವೈಡ್ ಕಲೆಕ್ಷನ್ ರೇಸ್‌ನಲ್ಲಿ ಕೂಡ ''ಕಾಟೇರ'' ಚಿತ್ರವನ್ನು ಹಿಂದಿಕ್ಕುತ್ತಾ ಎನ್ನುವ ಕುತೂಹಲ ಸದ್ಯ ಗರಿಗೇದರಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications










