Raja Shivaji Box Office Day 2 ; ಬಾಕ್ಸಾಫೀಸ್‌ನಲ್ಲಿ ರಾಜಾ ಶಿವಾಜಿ ಅಬ್ಬರ, ಶೋಗಳ ಸಂಖ್ಯೆ ಹೆಚ್ಚಳ -2ನೇ ದಿನ ಗಳಿಸಿದ್ದೆಷ್ಟು?
ಛತ್ರಪತಿ ಶಿವಾಜಿ ಮಹಾರಾಜ್ ಮೇಲೆ ಭಾರತೀಯ ಚಿತ್ರರಂಗಕ್ಕೆ ಅದರಲ್ಲಿಯೂ ಬಾಲಿವುಡ್‌ಗೆ ತುಂಬಾನೇ ಪ್ರೀತಿ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ 1993ರಲ್ಲಿ ಬಂದ ''ಸಿಂಹಗಡ'' ಚಿತ್ರದಿಂದ ಹಿಡಿದು 2020ರ ಬ್ಲಾಕ್ ಬಸ್ಟರ್ ''ತಾನಾಜಿ''ಯವರೆಗೆ ಹಿಂದಿ ಚಿತ್ರರಂಗದಲ್ಲಿ ಹಲವಾರು ಬಾರಿ ಜೈ ಭವಾನಿ, ಜೈ ಶಿವಾಜಿ ಎಂಬ ಘೋಷ ವಾಕ್ಯ ಮೊಳಗಿದೆ.
ದಾರ್ಶನಿಕ ನಾಯಕ .. ಗೆರಿಲ್ಲಾ ಯುದ್ದ ತಂತ್ರದ ಚತುರ.. ಹಿಂದವೀ ಸ್ವರಾಜ್ಯಕ್ಕೆ ಹೋರಾಡಿದ ಯೋಧ.. ಹೀಗೆ ನಾನಾ ರೂಪದಲ್ಲಿ ಬೆಳ್ಳಿಪರದೆಯ ಮೇಲೆ ಶಿವಾಜಿಯ ಪರಾಕ್ರಮ ಮತ್ತು ಪರಂಪರೆಯನ್ನು ಅನಾವರಣ ಮಾಡಲಾಗಿದೆ. ಸದ್ಯ ರಿತೇಶ್ ದೇಶಮುಖ್ ಕೂಡ ಇಂತಹದ್ದೇ ಒಂದು ಪ್ರಯತ್ನ ಮಾಡಿದ್ದಾರೆ. ಆ ಪ್ರಯತ್ನದ ಹೆಸರು ''ರಾಜಾ ಶಿವಾಜಿ''. ವಿಶೇಷ ಅಂದರೆ ಇವರ ಈ ಪ್ರಯತ್ನಕ್ಕೆ ಫಲ ಕೂಡ ಸಿಕ್ತಿದೆ.

ಹೌದು. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಬಾಕ್ಸಾಫೀಸ್‌ನಲ್ಲಿ ''ರಾಜಾ ಶಿವಾಜಿ'' ಅಬ್ಬರಿಸುತ್ತಿದೆ. ಎರಡು ದಿನದಲ್ಲಿ ₹21.90 ಕೋಟಿಯನ್ನು ಗಳಿಸಿದೆ.
ನಿಜಾ. ಮೊದಲ ದಿನಕ್ಕೆ ಹೋಲಿಸಿಕೊಂಡರೆ ಎರಡನೇ ದಿನದ ಗಳಿಕೆಯಲ್ಲಿ 7% ಕುಸಿತ ಕಂಡು ಬಂದಿದೆ. ಆದರೆ.. ಇಂದು (ಮೇ 3) ಚಿತ್ರದ ಗಳಿಕೆ ಹೆಚ್ಚಾಗುವ ವಿಶ್ವಾಸ ಟ್ರೇಡ್ ವಿಶ್ಲೇಷಕರಿಗಿದೆ. ಇದಕ್ಕೆ ಪೂರಕವಾಗಿ ಚಿತ್ರದ ಪ್ರದರ್ಶನದ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.
''ಸ್ಯಾಕ್ನಿಲ್'' ಪ್ರಕಾರ ಭಾರತದಲ್ಲಿ ಮೊದಲ ದಿನ 6,192 ಪ್ರದರ್ಶನ ಕಂಡ ''ರಾಜಾ ಶಿವಾಜಿ'' ನಿನ್ನೆ (ಮೇ2) ಅಂದರೆ ಎರಡನೇ ದಿನ 6,275 ಪ್ರದರ್ಶನ ಕಂಡಿದೆ. ಇಂದು (ಮೇ 3 ) ಶೋ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.
ಇನ್ನು ''ರಾಜಾ ಶಿವಾಜಿ'' ಕೇವಲ ಮರಾಠಿಯಲ್ಲಿ ಮಾತ್ರ ಬಿಡುಗಡೆ ಆಗಿಲ್ಲ. ಬದಲಿಗೆ ಹಿಂದಿಯಲ್ಲಿ ಕೂಡ ಈ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಆದರೆ. ಮರಾಠಿ ಪ್ರೇಕ್ಷಕರು ಮಾತ್ರ ''ರಾಜಾ ಶಿವಾಜಿ''ಯನ್ನು ಹೊತ್ತು ಮೆರೆಸುತ್ತಿದ್ದಾರೆ. ಹಿಂದಿ ಪ್ರೇಕ್ಷಕರಲ್ಲಿ ಉದಾಸೀನತೆ ಕಂಡು ಬರುತ್ತಿದೆ.

ಇದಕ್ಕೆ ಪುರಾವೆ ಎಂಬಂತೆ ಹಿಂದಿಯಲ್ಲಿ ನಿನ್ನೆ (ಮೇ 2) ''ರಾಜಾ ಶಿವಾಜಿ'' ₹3.40 ಕೋಟಿ ಗಳಿಸಿದೆ. ಮಿಕ್ಕಿರುವ ₹7.15 ಕೋಟಿ ಹಣ ಮರಾಠಿ ಪ್ರೇಕ್ಷಕರು ರಿತೇಶ್ ದೇಶಮುಖ್‌ಗೆ ನೀಡಿದ್ದಾರೆ.
ಸ್ಯಾಕ್ನಿಲ್ ಪ್ರಕಾರ ರಾಜಾ ಶಿವಾಜಿಯ ಎರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ.
| ದಿನ | ಹಿಂದಿ Net | ಮರಾಠಿ Net | ಭಾರತದಲ್ಲಿ ಒಟ್ಟು ಗಳಿಕೆ Net |
|---|---|---|---|
| ಮೊದಲ ದಿನ (ಶುಕ್ರವಾರ) | ₹3.35 Cr | ₹8.00 Cr | ₹11.35 Cr |
| ಎರಡನೇ ದಿನ (ಶನಿವಾರ) | ₹3.40 Cr | ₹7.15 Cr | ₹10.55 Cr |
| ಎರಡು ದಿನದ ಒಟ್ಟು ಗಳಿಕೆ | ₹6.75 Cr | ₹15.15 Cr | ₹21.90 Cr |
ರಿತೇಶ್ ಜೊತೆ ಸೇರಿ ಚಿತ್ರ ನಿರ್ಮಾಣ ಮಾಡಿರುವ ಜೀಯೋ ಸ್ಟುಡಿಯೋ ಕೂಡ ಚಿತ್ರದ ಅಂಕಿ ಅಂಶಗಳನ್ನು ಅಧಿಕೃತವಾಗಿ ಹಂಚಿಕೊಂಡಿದ್ದು ಆ ಪ್ರಕಾರ ಚಿತ್ರ ಎರಡು ದಿನದಲ್ಲಿ ₹23.90 ಕೋಟಿಯನ್ನು ''ರಾಜಾ ಶಿವಾಜಿ'' ಚಿತ್ರ ಗಳಿಸಿದೆ.
ಒಟ್ನಲ್ಲಿ ಮೊದಲ ಎರಡು ದಿನ ಎರಡಂಕಿಯ ಗಳಿಕೆಯನ್ನು ''ರಾಜಾ ಶಿವಾಜಿ'' ಕಂಡಿದೆ. ಇಂದು ( ಮೇ 3 ) ಚಿತ್ರದ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಸಾಲು ಸಾಲು ರಜೆಗಳು ಮುಕ್ತಾಯವಾದ ಹಿನ್ನೆಲೆ ಸೋಮವಾರ (ಮೇ 4) ದಿಂದ ಚಿತ್ರದ ಗಳಿಕೆಯಲ್ಲಿ ಸಹಜವಾಗಿ ಕುಸಿತ ಕಂಡು ಬರಲಿದೆ.
ಆದರೆ ಈ ಕುಸಿತದ ಪ್ರಮಾಣ ಎಷ್ಟಿರಲಿದೆ..? ಚಿತ್ರಕ್ಕೆ ತನು ಮನ ಅರ್ಪಿಸುವುದಲ್ಲದೇ ಹಣ ಕೂಡ ಹೂಡಿರುವ ರಿತೇಶ್ ದೇಶಮುಖ್‌ಗೆ ಹಾಕಿದ ಬಂಡವಾಳದ ಮೇಲೆ ಲಾಭ ಬರುತ್ತಾ..? ಮರಾಠಿ ಚಿತ್ರರಂಗದಲ್ಲಿ ''ರಾಜಾ ಶಿವಾಜಿ'' ಐತಿಹಾಸಿಕ ದಾಖಲೆ ಬರೆಯುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications