Raja Shivaji Box Office Day 1 : ರಿತೇಶ್ ದೇಶಮುಖ್ ಕೈ ಹಿಡಿದ ಮರಾಠಿಗರು ; ಮಣಿಕರ್ಣಿಕಾ ದಾಖಲೆ ಮುರಿದ ರಾಜಾ ಶಿವಾಜಿ
ಐತಿಹಾಸಿಕ ಕಥಾಹಂದರವನ್ನೊಂದಿರುವ ಚಿತ್ರ ನಿರ್ಮಾಣ ಮಾಡುವುದು ಸುಲಭ ಅಲ್ಲ. ಇದಕ್ಕೆ ಹಣ ಹೆಚ್ಚು ಖರ್ಚಾಗುತ್ತೆ. ಜೊತೆಗೆ ಹೆಚ್ಚಿನ ಪರಿಶ್ರಮವನ್ನು ಕೂಡ ಈ ಜಾನರ್ ಬೇಡುತ್ತೆ. ತುಂಬಾನೇ ಸೂಕ್ಷ್ಮವಾಗಿ ಈ ಚಿತ್ರಗಳನ್ನು ನಿಭಾಯಿಸಬೇಕಾಗುತ್ತೆ. ವೇಷ ಭೂಷಣದಿಂದ ಹಿಡಿದು ಸಂಭಾಷಣೆಯವರೆಗೆ.. ಪ್ರತಿಯೊಂದು ಚಿಕ್ಕ ಚಿಕ್ಕ ವಿಚಾರ ಕೂಡ ಇಲ್ಲಿ ಮುಖ್ಯವಾಗುತ್ತೆ.
ಚೂರು ಯಾಮಾರಿದರೂ ಪ್ರೇಕ್ಷಕರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತೆ. ಕೈ ಬರಿದು ಮಾಡಿಕೊಂಡು ಮನೆ ಸೇರಬೇಕಾಗುತ್ತೆ. ಹೀಗಾಗಿಯೇ ಹಲವರು ಹಿಸ್ಟರಿಯ ಹಿಂದೆ ಓಡಲ್ಲ. ಅಲ್ಲೊಬ್ಬರು.. ಇಲ್ಲೊಬ್ಬರು ಮಾತ್ರ ಇಂತಹ ಹುಚ್ಚು ಸಾಹಸವನ್ನು ಮಾಡುತ್ತಾರೆ. ಉದಾಹರಣೆಗೆ ರಿತೇಶ್ ದೇಶಮುಖ್.

ಹೌದು, ಪ್ರತಿಭೆಯ ಕಣಜವಾಗಿದ್ದರು ಕೂಡ ಆರಕ್ಕೇರದ ಮೂರಕ್ಕಿಳಿಯದ ಬಾಲಿವುಡ್ ಸ್ಟಾರ್ ಗಳಲ್ಲಿ ರಿತೇಶ್ ದೇಶಮುಖ್ ಕೂಡ ಒಬ್ಬರು. ಹಿಂದಿ ಚಿತ್ರರಂಗದಲ್ಲಿ ತನ್ನ ಸ್ವಂತ ಬಲದಿಂದ ಇಲ್ಲಿಯವರೆಗೆ ಒಂದೇ ಒಂದು ಬ್ಲಾಕ್ ಬಸ್ಟರ್ ಚಿತ್ರವನ್ನು ರಿತೇಶ್ ನೀಡಿಲ್ಲ.
ಹಾಗಂಥ ರಿತೇಶ್ ಸೋಲನ್ನು ಒಪ್ಪಿಕೊಂಡಿಲ್ಲ. ಬದಲಿಗೆ ಪ್ರಯತ್ನ ಮಾಡುತ್ತಿದ್ದಾರೆ. ಮಲ್ಟಿಸ್ಟಾರ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಗೆಲ್ಲುತ್ತಿದ್ದಾರೆ. ರಿತೇಶ್ ದೇಶಮುಖ್ ಕೇವಲ ಅತ್ಯುತ್ತಮ ನಾಯಕ ಮಾತ್ರ ಅಲ್ಲ. ನಿರ್ದೇಶಕ ಕೂಡ ಹೌದು.ನಿರ್ಮಾಪಕ ಕೂಡ ಹೌದು.
ಈಗಾಗಲೇ "ವೇಡ್" ಎಂಬ ಬ್ಲಾಕ್ ಬಸ್ಟರ್ ಚಿತ್ರವನ್ನು ತಮ್ಮ ಪತ್ನಿ ಜೊತೆಗೂಡಿ ರಿತೇಶ್ ದೇಶಮುಖ್ ಮರಾಠಿ ಚಿತ್ರರಂಗಕ್ಕೆ ನೀಡಿದ್ದಾರೆ. ಇಂಥಾ ರಿತೇಶ್ ದೇಶಮುಖ್ ಸದ್ಯ ಮತ್ತೊಂದು ಚಿತ್ರ ನಿರ್ದೇಶಿಸಿದ್ದಾರೆ. ಆ ಚಿತ್ರದ ಹೆಸರು ''ರಾಜಾ ಶಿವಾಜಿ''.
ನಿನ್ನೆ (ಮೇ 1) ಈ ಚಿತ್ರ ತೆರೆಗೆ ಬಂದಿದ್ದು ಮೊದಲ ದಿನ ಉತ್ತಮವಾದ ಓಪನಿಂಗ್ ಪಡೆದುಕೊಂಡಿದೆ. ಬಾಕ್ಸಾಫೀಸ್‌ನ ಅಂಕಿ ಅಂಶ ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ₹11.35 ಕೋಟಿಯನ್ನು ಗಳಿಸಿದೆ.

ಇನ್ನು ''ರಾಜಾ ಶಿವಾಜಿ'' ಕೇವಲ ಮರಾಠಿಯಲ್ಲಿ ಮಾತ್ರ ಬಿಡುಗಡೆಯಾಗಿಲ್ಲ. ಹಿಂದಿಯಲ್ಲಿಯೂ ಕೂಡ ಬಿಡುಗಡೆಯಾಗಿದೆ. ಆದರೆ, ತಮ್ಮ ಬಾಲಿವುಡ್ ಹೀರೋಗೆ ಹಿಂದಿ ಪ್ರೇಕ್ಷಕರು ಜೈ ಅಂದಿಲ್ಲ. ಬದಲಿಗೆ ಕೈ ಕೊಟ್ಟಿದ್ದಾರೆ. ಮರಾಠಿಗರು ರಿತೇಶ್ ದೇಶಮುಖ್ ಕೈ ಹಿಡಿದಿದ್ಧಾರೆ.
''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖ ಮಾಡಿರುವಂತೆ ''ರಾಜಾ ಶಿವಾಜಿ'' ಹಿಂದಿಯಲ್ಲಿ 4,251 ಪ್ರದರ್ಶನ ಕಂಡಿದೆ. ಆದರೆ ಬಾಕ್ಸಾಫೀಸ್‌ನಲ್ಲಿ ಕೇವಲ ₹3.35 ಕೋಟಿ ಮಾತ್ರ ಗಳಿಸಿದೆ. ಅದೇ ಮರಾಠಿಯಲ್ಲಿ ಕೇವಲ 1,941 ಪ್ರದರ್ಶನ ಕಂಡ ''ರಾಜಾ ಶಿವಾಜಿ'' ₹8 ಕೋಟಿಯನ್ನು ಗಳಿಸಿದೆ. ಈ ಮೂಲಕ ₹11.35 ಕೋಟಿಯನ್ನು ಮೊದಲ ದಿನ '' ರಾಜಾ ಶಿವಾಜಿ'' ಗಳಿಸಿದೆ.
ಇನ್ನು ಐತಿಹಾಸಿಕ ಚಿತ್ರಗಳ ಪಟ್ಟಿಯಲ್ಲಿ ''ರಾಜಾ ಶಿವಾಜಿ'' ಸದ್ಯ ಕಂಗನಾ ರಣಾವತ್ ಅಭಿನಯಿಸಿ, ನಿರ್ದೇಶಿಸಿದ್ದ ''ಮಣಿಕರ್ಣಿಕಾ'' ಚಿತ್ರವನ್ನು ಹಿಂದಿಕ್ಕಿದೆ. 2019ರಲ್ಲಿ ಬಿಡುಗಡೆಯಾಗಿದ್ದ ''ಮಣಿಕರ್ಣಿಕಾ'' ಮೊದಲ ದಿನ ₹8.75 ಕೋಟಿಯನ್ನು ಗಳಿಸಿತ್ತು. ಇನ್ನು 2020ರಲ್ಲಿ ಬಂದ ಅಜಯ್ ದೇವಗನ್ ಅಭಿನಯದ ''ತಾನಾಜಿ'' ಮೊದಲ ದಿನ ₹15.10 ಕೋಟಿ ಗಳಿಸಿತ್ತು. ವಿಕ್ಕಿ ಕೌಶಲ್ ಅಭಿನಯದ ''ಛಾವಾ'' ₹33.50 ಕೋಟಿ ಗಳಿಸುವ ಮೊದಲ ಐತಿಹಾಸಿಕ ದಾಖಲೆ ಬರೆದಿತ್ತು.
ಸದ್ಯ ಮೊದಲ ದಿನ ₹11.35 ಕೋಟಿಯನ್ನು ''ರಾಜಾ ಶಿವಾಜಿ'' ಗಳಿಸಿದ್ದು ಇಂದು ಮತ್ತು ನಾಳೆಯ ಗಳಿಕೆಯ ಮೇಲೆ ಈ ಚಿತ್ರದ ಮುಂದಿನ ಭವಿಷ್ಯ ನಿಂತಿದೆ. ರಿತೇಶ್ ದೇಶಮುಖ್ ವೃತ್ತಿ ಬದುಕಿನ ಮೈಲಿಗಲ್ಲು ''ರಾಜಾ ಶಿವಾಜಿ'' ಆಗುತ್ತಾ..? ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications