Peddi Box Office Day 2 : ಪೈಲ್ವಾನ್ 'ಪೆದ್ದಿ'ಗೆ 2ನೇ ದಿನ ಬಿತ್ತು ಭಾರೀ ಪೆಟ್ಟು-ಗ್ಲೋಬಲ್ ಸ್ಟಾರ್ ಕೈ ಹಿಡಿಯುತ್ತಾ ಕುಸ್ತಿ ?
ಆ ಭಾಷೆ ಈ ಭಾಷೆ ಅಂತಲ್ಲ. ಎಲ್ಲ ಭಾಷೆಯಲ್ಲಿಯೂ ಸದ್ಯ ಹಲವರು ಪ್ಯಾನ್ ಇಂಡಿಯಾ ಜ್ವರದಿಂದ ಬಳಲುತ್ತಿದ್ದಾರೆ. ಅದರಲ್ಲಿಯೂ ಕನ್ನಡ ಮತ್ತು ತೆಲುಗಿನಲ್ಲಿ ಪ್ಯಾನ್ ಇಂಡಿಯಾ ಹುಚ್ಚು ಹಲವರಿಗೆ ಹಿಡಿದಿದೆ. ಈ ಪ್ರಯತ್ನ ಮಾಡಿದ ಎಲ್ಲರಿಗೂ ಇಲ್ಲಿ ಫಲ ಸಿಕ್ತಿಲ್ಲ ಎನ್ನುವುದು ಬೇರೆ ವಿಚಾರವಾದರೂ ಕೂಡ ಹಲವರು ಪ್ಯಾನ್ ಇಂಡಿಯಾ ಎಂಬ ಮೆರವಣಿಗೆಯಲ್ಲಿ ತಮ್ಮ ರಥವನ್ನು ಗೆಲುವಿನ ದಡದತ್ತ ಎಳೆಯುವ ಪ್ರಯತ್ನವನ್ನಂತೂ ಮಾಡುತ್ತಲೇ ಇದ್ದಾರೆ. ಉದಾಹರಣೆಗೆ ''ಪೆದ್ದಿ''.
ಹೌದು. ''ಆರ್.ಆರ್.ಆರ್'' ಚಿತ್ರದ ಮೂಲಕ ಗ್ಲೋಬಲ್ ಸ್ಟಾರ್ ಆದ ರಾಮ್ ಚರಣ್ ತಮ್ಮ ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕಿತ್ತು. ಆದರೆ.. ರಾಮ್ ಚರಣ್ ಎಡವಿದರು. ''ಆಚಾರ್ಯ'' ಮತ್ತು ''ಗೇಮ್ ಚೇಂಜರ್'' ಎಂಬ ಪರಮ ತೋಪು ಸಿನಿಮಾಗಳನ್ನು ತಮ್ಮ ಅಭಿಮಾನಿಗಳಿಗೆ ನೀಡಿದರು. ಈ ಮೂಲಕ ನಿರಾಸೆಗೊಳಿಸಿದರು.

ಆದರೆ ಈಗ ರಾಮ್ ಚರಣ್ ತಮ್ಮ ತಪ್ಪನ್ನು ತಿದ್ದಿಕೊಂಡಂತೆ ಇದೆ. ಇದಕ್ಕೆ ಕೈಗನ್ನಡಿಯೇ ''ಪೆದ್ದಿ'' ಚಿತ್ರದ ಗಳಿಕೆ. ಹೌದು, ಅಸಲಿಗೆ ಭಾರತೀಯ ಚಿತ್ರರಂಗದಲ್ಲಿ ಕ್ರೀಡಾ ಆಧಾರಿತ ಚಿತ್ರಕ್ಕೆ ವಿಶೇಷವಾದ ಬೆಲೆ ಇದೆ. ಆದರೆ, ಚಿತ್ರದ ಕಥೆಯಲ್ಲಿ ಭಾವನೆಗಳ ಹೂರಣ ಇರಬೇಕು, ಹೋರಾಟದ ಕಿಚ್ಚಿರಬೇಕು.
ಇದಕ್ಕೆ ಪುರಾವೆ ಎನ್ನುವಂತೆ ''ದಂಗಲ್''.. ''ಚಕ್ ದೇ ಇಂಡಿಯಾ''.. ''ಜೆರ್ಸಿ''.. ಸೇರಿ ಹಲವು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿವೆ. ಈ ಸಾಲಿಗೆ ಈಗ ''ಪೆದ್ದಿ'' ಕೂಡ ಸೇರಿಕೊಳ್ಳುತ್ತಾ ಎನ್ನುವ ಪ್ರಶ್ನೆಗೆ ಇನ್ನೇನು ಕೆಲವೇ ದಿನಗಳಲ್ಲಿ ಸ್ಪಷ್ಟವಾಗಿ ಸಿಗಲಿದೆಯಾದರೂ, ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ಪೆದ್ದಿ'' ಎರಡು ದಿನದಲ್ಲಿ ಕೇವಲ ಭಾರತದಲ್ಲಿ ₹96.40 ಕೋಟಿಯನ್ನು ಕೊಳ್ಳೆ ಹೊಡೆದಿದೆ.
ಸ್ಯಾಕ್ನಿಲ್ ಪ್ರಕಾರ ''ಪೆದ್ದಿ'' ಚಿತ್ರದ ಎರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ.
| ದಿನ (Day) | ಭಾರತದ ನಿವ್ವಳ ಗಳಿಕೆ (India Net) |
|---|---|
| ಪೇಯ್ಡ್ ಪ್ರೀಮಿಯರ್ (ಬುಧವಾರ ) | ₹18.50 ಕೋಟಿ |
| ಮೊದಲ ದಿನ (ಗುರುವಾರ) | ₹51.00 ಕೋಟಿ |
| ಎರಡನೇ ದಿನ (ಶುಕ್ರವಾರ) | ₹26.90 ಕೋಟಿ |
| ಒಟ್ಟು ಭಾರತದ ನಿವ್ವಳ ಗಳಿಕೆ | ₹96.40 ಕೋಟಿ |
ನಿಜಾ, ಮೊದಲ ದಿನಕ್ಕೆ ಹೋಲಿಸಿಕೊಂಡರೆ ಎರಡನೇ ದಿನ 47.3% ಕುಸಿತ ಕಂಡು ಬಂದಿದೆ. ಆದರೆ, ಇಂದು ಮತ್ತು ನಾಳೆ ಚಿತ್ರದ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಈ ವಾರಾಂತ್ಯದ ಗಳಿಕೆಯ ಮೇಲೆಯೇ ''ಪೆದ್ದಿ'' ಮುಂದಿನ ಭವಿಷ್ಯ ಕೂಡ ನಿಂತಿದೆ.

ಇನ್ನು ಆಗಲೇ ಹೇಳಿದಂತೆ ''ಪೆದ್ದಿ'' ಪ್ಯಾನ್ ಇಂಡಿಯಾ ಸಿನಿಮಾ. ಕೇವಲ ತೆಲುಗು ಮಾತ್ರವಲ್ಲ ಕನ್ನಡವನ್ನು ಒಳಗೊಂಡಂತೆ ಬೇರೆ ಬೇರೆ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಿದೆ. ಆದರೆ, ''ಪೆದ್ದಿ''ಗೆ ಜನ ಬೆಂಬಲ ಸಿಕ್ತಿರುವುದು ತೆಲುಗಿನಲ್ಲಿ ಮಾತ್ರ. ತೆಲುಗು ಹೊರತು ಪಡಿಸಿದರೆ ಹಿಂದಿ ಭಾಷೆಯಲ್ಲಿ ರಾಮ್ ಚರಣ್ ಅಬ್ಬರವನ್ನು ಜನ ಕಣ್ತುಂಬಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ''ಪೆದ್ದಿ'' ಯಾವ್ಯಾವ ಭಾಷೆಯಲ್ಲಿ ಎರಡನೇ ದಿನ ಗಳಿಸಿದ್ದೆಷ್ಟು ..? ಈ ಕುತೂಹಲಕ್ಕೆ ಉತ್ತರ ಕೆಳಗಿದೆ.
''ಪೆದ್ದಿ'' ಚಿತ್ರದ ಎರಡನೇ ದಿನದ ಭಾಷಾವಾರು ಗಳಿಕೆ
| ಭಾಷೆ (Language) | ಭಾರತದ ನಿವ್ವಳ ಗಳಿಕೆ (India Net) |
|---|---|
| ತೆಲುಗು (Telugu) | ₹24.20 ಕೋಟಿ |
| ಹಿಂದಿ (Hindi) | ₹2.25 ಕೋಟಿ |
| ತಮಿಳು (Tamil) | ₹0.25 ಕೋಟಿ |
| ಕನ್ನಡ (Kannada) | ₹0.17 ಕೋಟಿ |
| ಮಲಯಾಳಂ (Malayalam) | ₹0.03 ಕೋಟಿ |
ಸದ್ಯ ''ಪೆದ್ದಿ'' ಎರಡು ದಿನದಲ್ಲಿ ಕೇವಲ ಭಾರತದಲ್ಲಿ ₹96.40 ಕೋಟಿಯನ್ನು ಗಳಿಸಿದೆ. ಇಂದು (ಜೂನ್ 6) ನೂರು ಕೋಟಿಯ ಗಡಿಯನ್ನು ಚಿತ್ರ ದಾಟಲಿದೆ. ಇನ್ನು ವರ್ಲ್ಡ್ ವೈಡ್ ಗಳಿಕೆಯ ಲೆಕ್ಕ ಇಲ್ಲಿ ತೆಗೆದುಕೊಂಡರೆ ''ಸ್ಯಾಕ್ನಿಲ್'' ಪ್ರಕಾರ ''ಪೆದ್ದಿ'' ಈಗಾಗಲೇ ₹150.49 ಕೋಟಿಯನ್ನು ಕೊಳ್ಳೆ ಹೊಡೆದಿದೆ. ಈ ವಾರಾಂತ್ಯದೊಳಗೆ ''ಪೆದ್ದಿ'' ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications