Peddi advance box office collection: ಗಂಟೆಗೆ 40 ಸಾವಿರ ಟಿಕೆಟ್ ಸೋಲ್ಡೌಟ್.. 'ಪೆದ್ದಿ' ಕಲೆಕ್ಷನ್ ಎಷ್ಟಾಯ್ತು?
ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ದೊಡ್ಡಮಟ್ಟದ ಓಪನಿಂಗ್ ಪಡೆಯುವ ಸುಳಿವು ಸಿಕ್ಕಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಎಲ್ಲೆಡೆ ಭರ್ಜರಿ ಕಲೆಕ್ಷನ್ ಆಗ್ತಿದೆ. ಟಿಕೆಟ್ ದರ ಹೆಚ್ಚಿದ್ದರೂ ಅಭಿಮಾನಿಗಳು ಮುಗಿಬಿದ್ದು ಬುಕ್ ಮಾಡುತ್ತಿದ್ದಾರೆ. ಸಂಜೆ(ಜೂನ್ 3)ಯಿಂದಲೇ ಪ್ರೀಮಿಯರ್ ಶೋಗಳು ಶುರುವಾಗ್ತಿದೆ.
ನಾಳೆ(ಜೂನ್ 4, ಗುರುವಾರ) ವಿಶ್ವದಾದ್ಯಂತ 'ಪೆದ್ದಿ' ಸಿನಿಮಾ ಬಿಡುಗಡೆ ಆಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ರಾಮ್‌ಚರಣ್ ಜೋಡಿಯಾಗಿ ಜಾನ್ವಿ ಕಪೂರ್ ನಟಿಸಿದ್ದಾರೆ. ಶಿವಣ್ಣ, ಜಗಪತಿ ಬಾಬು, ದಿವ್ಯೇಂದು ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಐಪಿಎಲ್ ಟೂರ್ನಿ ಮುಗಿದ ಬಳಿಕ ಬರ್ತಿರೋ ದೊಡ್ಡ ಸಿನಿಮಾ ಇದು. ಹಾಗಾಗಿ ನಿರೀಕ್ಷೆ ಹೆಚ್ಚಾಗಿದೆ. ಸಿನಿಮಾ ಅದ್ಭುತವಾಗಿದೆ ಎನ್ನುವ ಟಾಕ್ ಶುರುವಾಗಿದೆ. ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಸಿನಿಮಾ ಸ್ವಾಗತಿಸಲು ತಯಾರಿ ನಡೆಸಿದ್ದಾರೆ.

ಅಡ್ವಾನ್ಸ್ ಬುಕ್ಕಿಂಗ್
ಭಾನುವಾರದಿಂದಲೇ 'ಪೆದ್ದಿ' ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿತ್ತು. ಬೆಂಗಳೂರಿನಲ್ಲೇ ಮೊದಲಿಗೆ ಬುಕ್‌ಮೈ ಶೋನಲ್ಲಿ ಬುಕ್ಕಿಂಗ್ ಓಪನ್ ಆಗಿತ್ತು. ಗುರುವಾರ ಬೆಳಗಿನ ಜಾವ 6.30ಕ್ಕೆ ಸಾಕಷ್ಟು ಕಡೆಗಳಲ್ಲಿ ಮೊದಲ ಪ್ರದರ್ಶನ ಶುರುವಾಗಲಿದೆ. ಅಭಿಮಾನಿಗಳ ಆತುರ ನೋಡಿ ಕೆಲವೆಡೆ ಇಂದು ಸಂಜೆಯೇ ಪ್ರೀಮಿಯರ್ ಶೋಗಳನ್ನು ಏರ್ಪಡಿಸಲಾಗಿದೆ. ಬೇಡಿಕೆಗೆ ತಕ್ಕಂತೆ ಟಿಕೆಟ್ ದರ ಹೆಚ್ಚಿಸಲಾಗಿದೆ. ಆದರೂ ರೆಸ್ಪಾನ್ಸ್ ಜೋರಾಗಿದೆ.
25 ಕೋಟಿ ರೂ. ಕಲೆಕ್ಷನ್?
'ಪೆದ್ದಿ' ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿಯಿದೆ. ಅದಕ್ಕೂ ಮುನ್ನ ಸಿನಿಮಾ 25 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಗಂಟೆಗೆ 40 ಸಾವಿರ ಟಿಕೆಟ್ ಬುಕ್‌ಮೈಶೋನಲ್ಲಿ ಬುಕ್ ಮಾಡುತ್ತಿದ್ದಾರೆ. ಅಡ್ವಾನ್ಸ್ ಬುಕ್ಕಿಂಗ್‌ನಿಂದ ಭಾರತದಲ್ಲಿ 15 ಕೋಟಿ ರೂ.ಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಆಗಿರುವ ಅಂದಾಜಿದೆ. ಓವರ್‌ಸೀಸ್ ಮಾರ್ಕೆಟ್‌ನಲ್ಲಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸಿನಿಮಾ ವಿತರಣೆ ಮಾಡ್ತಿದೆ. ಅಮೆರಿಕಾ, ಕೆನಡಾ ಸೇರಿ ಓವರ್‌ಸೀಸ್ ಮಾರ್ಕೆಟ್‌ನಲ್ಲಿ 1.5 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ. ಆ ಲೆಕ್ಕದಲ್ಲಿ ಸಿನಿಮಾ 10 ಕೋಟಿ ರೂ.ಗೂ ಹೆಚ್ಚು ಕೊಳ್ಳೆ ಹೊಡದಂತಾಗಿದೆ. ಒಟ್ಟಾರೆ ಸಿನಿಮಾ ಈಗಾಗಲೇ 25 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ವರದಿ ಆಗ್ತಿದೆ.

ಕರ್ನಾಟಕದಲ್ಲಿ 2 ಕೋಟಿ ರೂ.?
ರಾಜ್ಯದಲ್ಲಿ ಕೂಡ 'ಪೆದ್ದಿ' ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದೆ. ಮುಖ್ಯವಾಗಿ ಬೆಂಗಳೂರಿನಲ್ಲಿ ಸಿನಿರಸಿಕರು ಸಿನಿಮಾ ನೋಡಲು ಕಾತುರರಾಗಿದ್ದಾರೆ. ಈಗಾಗಲೇ ಟಿಕೆಟ್ ಬುಕ್ ಮಾಡಿ ಸೀಟ್ ಕಾದಿರಿಸುತ್ತಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ 2 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿರುವುದಾಗಿ ಲೆಕ್ಕ ಹಾಕುತ್ತಿದ್ದಾರೆ.
50 ಕೋಟಿ ರೂ. ಓಪನಿಂಗ್?
ಪ್ರೀಮಿಯರ್ ಶೋಗಳು ಹಾಗೂ ಮೊದಲ ದಿನದ ಕಲೆಕ್ಷನ್ ಸೇರಿ 'ಪೆದ್ದಿ' ಸಿನಿಮಾ 50 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ಗ್ರ್ಯಾಂಡ್ ಓಪನಿಂಗ್ ಪಡೆಯುವ ಲೆಕ್ಕಾಚಾರ ಶುರುವಾಗಿದೆ. 'ಆರ್‌ಆರ್‌ಆರ್' ಬಳಿಕ ರಾಮ್‌ಚರಣ್ ನಟನೆಯ ಯಾವುದೇ ಸಿನಿಮಾ ಗೆದ್ದಿಲ್ಲ. ಹಾಗಾಗಿ ಈ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ.
ಅಭಿಮಾನಿಗಳ ತಯಾರಿ
'ಪೆದ್ದಿ' ಸಿನಿಮಾ ರಿಲೀಸ್ ಹತ್ತಿರವಾಗುತ್ತಿದ್ದಂತೆ ಮೆಗಾ ಫ್ಯಾನ್ಸ್ ಸಂಭ್ರಮ ಮುಗಿಲು ಮುಟ್ಟಿದೆ. ಚಿತ್ರಮಂದಿರಗಳ ಆವರಣದಲ್ಲಿ ಭಾರೀ ಕಟೌಟ್ ಹಾಕಿ ಅದ್ಧೂರಿಯಾಗಿ 'ಪೆದ್ದಿ'ರಾಜು ಸ್ವಾಗತಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನ ಕೆಲವು ಚಿತ್ರಮಂದಿರಗಳ ಮುಂದೆ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದಾರೆ. ನಗರದ ಕೆಜಿ ರಸ್ತೆಯ ತ್ರಿವೇಣಿ ಹಾಗೂ ಬೊಮ್ಮನಹಳ್ಳಿ ಹೊಂಗಸಂದ್ರದ ಬೃಂದಾ ಚಿತ್ರಮಂದಿರಗಳ ಮುಂದೆ ಭಾರೀ ಕಟೌಟ್ ಎದ್ದು ನಿಂತಿದೆ.


Click it and Unblock the Notifications