Ramayana vs Godzilla Minus Zero; ಯಶ್, ರಣ್ಬೀರ್ 'ರಾಮಾಯಣ' ಚಿತ್ರಕ್ಕೆ ಜಪಾನ್ ಗಾಡ್ಜಿಲ್ಲಾ ಭೀತಿ!
ಚಿತ್ರರಂಗದಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್ ಹೊಸದೇನು ಅಲ್ಲ. ಆದರೆ ಹೀಗೆ ಎರಡು ಸಿನಿಮಾಗಳು ಒಟ್ಟಿಗೆ ತೆರೆಗಪ್ಪಳಿಸಿದಾಗ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತದೆ ಎನ್ನುವುದು ಪ್ರಶ್ನೆ. ಮುಖ್ಯವಾಗಿ ಸ್ಕ್ರೀನ್‌ಗಳ ಹಂಚಿಕೆ ವಿಚಾರದಲ್ಲಿ ಸಮಸ್ಯೆ ಆಗುತ್ತದೆ. ಸದ್ಯ 'ರಾಮಾಯಣ' ಚಿತ್ರದ ಎದುರು ಈ ದೀಪಾವಳಿಗೆ 'ಗಾಡ್ಜಿಲ್ಲಾ ಮೈನಸ್ ಝೀರೋ' ಸಿನಿಮಾ ತೆರೆಗಪ್ಪಳಿಸುತ್ತಿದೆ.
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಅಂದಾಜು 4000 ಕೋಟಿ ರೂ. ಬಜೆಟ್‌ನಲ್ಲಿ ಎರಡು ಭಾಗಗಳಾಗಿ ಸಿನಿಮಾ ಕಟ್ಟಿಕೊಡಲಾಗ್ತಿದೆ. ಈಗಾಗಲೇ ಚಿತ್ರದ ಮೊದಲ ಟೀಸರ್ ಬಂದು ಗಮನ ಸೆಳೆದಿದೆ. ಸಿನಿಮಾಕಾನ್ ಸಮಾವೇಶದಲ್ಲಿ ಯಶ್ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತೆಯಾಗಿ ಸಾಯಿಪಲ್ಲವಿ ಹಾಗೂ ರಾವಣನಾಗಿ ಯಶ್ ಚಿತ್ರದಲ್ಲಿ ನಟಿಸಿದ್ದಾರೆ.

ನವೆಂಬರ್ 3ಕ್ಕೆ ಜಪಾನ್ ದೇಶದ 'ಗಾಡ್ಜಿಲ್ಲಾ ಮೈನಸ್ ಝೀರೋ' ಸಿನಿಮಾ ಬಿಡುಗಡೆ ಆಗ್ತಿದೆ. ನವೆಂಬರ್ ಮೊದಲ ವಾರವೇ 'ರಾಮಾಯಣ' ಸಿನಿಮಾ ಕೂಡ ವಿಶ್ವದಾದ್ಯಂತ ತೆರೆಗೆ ಬರಲಿದೆ. ಮುಖ್ಯವಾಗಿ ಐಮ್ಯಾಕ್ಸ್ ಸ್ಕ್ರೀನ್‌ಗಳಿಗಾಗಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ಎರಡೂ ಚಿತ್ರಗಳಿಗೆ ಅದರದ್ದೇ ಆದ ಪ್ರೇಕ್ಷಕ ವರ್ಗ ಇದೆ. ಹಾಗಾಗಿ ಬಾಕ್ಸಾಫೀಸ್‌ನಲ್ಲಿ ಅಂತಹ ದೊಡ್ಡಮಟ್ಟದ ಪೈಪೋಟಿ ಏರ್ಪಡುವುದಿಲ್ಲ. ಆದರೆ ಐಮ್ಯಾಕ್ಸ್ ಸ್ಕ್ರೀನ್‌ಗೋಸ್ಕರ 'ರಾಮಾಯಣ' ಹಾಗೂ 'ಗಾಡ್ಜಿಲ್ಲಾ ಮೈನಸ್ ಝೀರೋ' ಚಿತ್ರಗಳ ನಡುವೆ ಪೈಪೋಟಿ ಸಾಧ್ಯತೆ ದಟ್ಟವಾಗಿದೆ.
ಭಾರತದಲ್ಲಿ ಹೆಚ್ಚು ಕಮ್ಮಿ 30 ಐಮ್ಯಾಕ್ಸ್ ಸ್ಕ್ರೀನ್‌ಗಳಿವೆ. ಸಾಮಾನ್ಯವಾಗಿ ಹಾಲಿವುಡ್ ಸಿನಿಮಾಗಳು, 'ಗಾಡ್ಜಿಲ್ಲಾ' ರೀತಿಯ ದೊಡ್ಡ ದೊಡ್ಡ ಸಿನಿಮಾಗಳನ್ನು ಐಮ್ಯಾಕ್ಸ್ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಮಾಡುತ್ತಾರೆ. 'ರಾಮಾಯಣ' ಚಿತ್ರವನ್ನು ಕೂಡ ಐಮ್ಯಾಕ್ಸ್ ಸ್ಕ್ರೀನ್‌ಗಳಿಗಾಗಿ ಚಿತ್ರೀಕರಿಸಲಾಗಿದೆ. ಹಾಗಾಗಿ ಸಾಕಷ್ಟು ಜನ ಐಮ್ಯಾಕ್ಸ್ ಸ್ಕ್ರೀನ್‌ನಲ್ಲಿ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಹೀಗಾಗಿ ಯಾವ ಚಿತ್ರಕ್ಕೆ ಹೆಚ್ಚು ಐಮ್ಯಾಕ್ಸ್ ಸ್ಕ್ರೀನ್ ಸಿಗುತ್ತದೆ ಎನ್ನುವ ಕುತೂಹಲ ಮೂಡಿದೆ.
ಭಾರತ ಮಾತ್ರವಲ್ಲ ಜಪಾನ್ ಹಾಗೂ ಅಮೆರಿಕಾದ ಐಮ್ಯಾಕ್ಸ್ ಸ್ಕ್ರೀನ್‌ಗಳಲ್ಲಿ ಕೂಡ ಎರಡು ಸಿನಿಮಾಗಳು ಎದುರುಬದುರಾಗುತ್ತಿವೆ. ಇದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ದೈತ್ಯಾಕಾರದ ರಕ್ಕಸ ಜೀವಿ ಗಾಡ್ಜಿಲ್ಲಾ ಸರಣಿ ಸಿನಿಮಾಗಳಿಗೆ ಹಾಲಿವುಡ್‌ನಲ್ಲಿ ಭಾರೀ ಕ್ರೇಜ್ ಇದೆ. 'ಗಾಡ್ಜಿಲ್ಲಾ ಮೈನಸ್ ಝೀರೋ' ಚಿತ್ರಕ್ಕೆ ತಕಾಶಿ ಯಮಜಾಕಿ ಆಕ್ಷನ್ ಕಟ್ ಹೇಳಿದ್ದಾರೆ. 3 ವರ್ಷಗಳ ಹಿಂದೆ ಬಂದಿದ್ದ 'ಗಾಡ್ಜಿಲ್ಲಾ ಮೈನಸ್ ಒನ್' ಚಿತ್ರದ ಸೀಕ್ವೆಲ್ ಇದು.
ಸಿನಿಮಾಕಾನ್ ವೇದಿಕೆಯಲ್ಲಿ 'ಗಾಡ್ಜಿಲ್ಲಾ ಮೈನಸ್ ಝೀರೋ' ಚಿತ್ರದ ಟೀಸರ್ ಪ್ರದರ್ಶನ ಮಾಡಲಾಗಿದೆ. ನವೆಂಬರ್ ಮೊದಲ ವಾರದಲ್ಲೇ ದಿ ಕ್ಯಾಟ್ ಇನ್ ಹ್ಯಾಟ್ ಎನ್ನುವ ಆನಿಮೇಷನ್ ಸಿನಿಮಾ ತೆರೆಗೆ ಬರಲಿದೆ. 'ಅರ್ಚಂಜಲ್', 'ಜಿಮ್ಮಿ', 'ದಿ ಗ್ರೇಟ್ ಬಿಯಾಂಡ್' ಎಂಬ ಹಾಲಿವುಡ್ ಸಿನಿಮಾಗಳು ಪಟ್ಟಿಯಲ್ಲಿವೆ. 'ರಾಮಾಯಣ' ಸಿನಿಮಾ ಏಕಕಾಲಕ್ಕೆ ಹಾಲಿವುಡ್‌ನಲ್ಲಿ ದೊಡ್ಡಮಟ್ಟದಲ್ಲಿ ಬಿಡುಗಡೆ ಆಗಲಿಲ್ಲ. ಅಲ್ಲೆಲ್ಲಾ ಈ ಹಾಲಿವುಡ್ ಸಿನಿಮಾಗಳ ಪೈಪೋಟಿ ಎದುರಿಸಬೇಕಿದೆ.
ಹಿಂದಿ ಜೊತೆಗೆ ಇಂಗ್ಲೀಷ್ ಭಾಷೆಗಳಲ್ಲಿ 'ರಾಮಾಯಣ' ಚಿತ್ರ ನಿರ್ಮಾಣವಾಗಿದೆ. ದೇಶ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಆಗಲಿದೆ. ಡಬ್ಬಿಂಗ್ ಮಾಡಿದ್ದಾರೆ ಎಂದು ಗೊತ್ತಾಗದಂತೆ ಕಲಾವಿದರ ತುಟಿ ಚಲನೆಯನ್ನು ಆಯಾ ಭಾಷೆಗೆ ತಕ್ಕಂತೆ ಬದಲಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಹಾಗಾಗಿ 'ರಾಮಾಯಣ' ಸಿನಿಮಾ ಪ್ರತಿಭಾಷೆಯಲ್ಲಿ ಒರಿಜಿನಲ್ ಸಿನಿಮಾ ಎನ್ನುವಂತೆ ಭಾಸವಾಗಲಿದೆ. ಭಾರೀ ಬಜೆಟ್ ಚಿತ್ರದಿಂದ ಭಾರೀ ಕಲೆಕ್ಷನ್ ನಿರೀಕ್ಷಿಸಲಾಗುತ್ತಿದೆ. ದೊಡ್ಡ ಹಾಲಿವುಡ್ ಸಂಸ್ಥೆಗಳು ಈ ಸಿನಿಮಾ ವಿತರಣೆಗೆ ಕೈ ಜೋಡಿಸಲಿವೆ.


Click it and Unblock the Notifications