ಮೊದಲ ವಾರ ಕರ್ನಾಟಕದಲ್ಲಿ 'ಪೆದ್ದಿ' ಗಳಿಸಿದ್ದೆಷ್ಟು? ವಿತರಕರ ಷೇರು ಎಷ್ಟು? ಇಲ್ಲಿದೆ ಪೈಸಾಪೈಸಾ ಲೆಕ್ಕ
ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. 2ನೇ ವಾರ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಕರ್ನಾಟಕದಲ್ಲಿ ಕೂಡ ಸಿನಿಮಾ ಗಳಿಕೆ ಚೆನ್ನಾಗಿದೆ. ಈಗಾಗಲೇ 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡ್ತಿದೆ. ಆಂಧ್ರ, ತೆಲಂಗಾಣ ಬಿಟ್ಟರೆ ಕರ್ನಾಟಕದಲ್ಲೇ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ.
ಜೂನ್ 3ರಂದು 'ಪೆದ್ದಿ' ಸಿನಿಮಾ ಪ್ರೀಮಿಯರ್ ಶೋಗಳು ಆರಂಭವಾಗಿದ್ದವು. ಮೊದಲ ಪ್ರದರ್ಶನದಿಂದಲೇ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಬಿಕೆಟಿ ಏರಿಯಾ ಹಾಗೂ ದುರ್ಗದಲ್ಲಿ ರಾಮ್‌ಚರಣ್ ಆರ್ಭಟಕ್ಕೆ ಪ್ರೇಕ್ಷಕರು ಬಹುಪರಾಕ್ ಎನ್ನುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ಶಿವರಾಜ್‌ಕುಮಾರ್ ಕೂಡ ನಟಿಸಿರುವುದು ಚಿತ್ರದ ಗಳಿಕೆ ಹೆಚ್ಚುವಂತೆ ಮಾಡಿದೆ.

ಪರಭಾಷಾ ಸಿನಿಮಾಗಳಲ್ಲಿ ಕರ್ನಾಟಕದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಗುವುದು ಮೊದಲಿನಿಂದ ನೋಡುತ್ತಿದ್ದೇವೆ. 'ಕರುಪ್ಪು' ಹಾಗೂ 'ದೃಶ್ಯಂ- 3' ಚಿತ್ರಗಳು ಕೂಡ ರಾಜ್ಯದಲ್ಲಿ ಬಾಕ್ಸಾಫೀಸ್ ಶೇಕ್ ಮಾಡ್ತಿವೆ. 'ಪೆದ್ದಿ' ಕೂಡ ಅದೇ ಹಾದಿಯಲ್ಲಿ ಮುಂದುವರೆಯುತ್ತಿದೆ. 18 ಕೋಟಿ ರೂ. ಚಿತ್ರದ ಕರ್ನಾಟಕ ರೈಟ್ಸ್ ಕೊಂಡುಕೊಳ್ಳಲಾಗಿದೆ. 'ಜೇಮ್ಸ್' ಸಿನಿಮಾ ನಿರ್ಮಾಪಕ ಕಿಶೋರ್ ಪತ್ತಿಕೊಂಡ ರಾಜ್ಯಾದ್ಯಂತ 'ಪೆದ್ದಿ' ಸಿನಿಮಾ ರಿಲೀಸ್ ಮಾಡಿದ್ದಾರೆ.
ಮೊದಲ ವಾರದ ಕಲೆಕ್ಷನ್
ಕರ್ನಾಟಕದಲ್ಲಿ ಮೊದಲ ವಾರ 'ಪೆದ್ದಿ' ಸಿನಿಮಾ 23ರಿಂದ 25 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಕನ್ನಡ ವರ್ಷನ್ ಕೂಡ 1 ಕೋಟಿ ರೂ. ಬಾಚಿದೆ. ಪ್ರೀಮಿಯರ್ ಶೋಗಳು ಸೇರಿ ಮೊದಲ ವೀಕೆಂಡ್‌ನಲ್ಲೇ 21 ಕೋಟಿ ರೂ. ವಸೂಲಿ ಮಾಡಿತ್ತು. 5ನೇ ದಿನ 1.32 ಕೋಟಿ ರೂ, 6ನೇ ದಿನ 1.15 ಕೋಟಿ ರೂ, ಹಾಗೂ 7ನೇ ದಿನ 93 ಲಕ್ಷ ರೂ. ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ.

11 ಕೋಟಿ ರೂ. ಶೇರ್
ಮೊದಲ ವಾರ 23ರಿಂದ 25 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ 'ಪೆದ್ದಿ' ಸಿನಿಮಾ ವಿತರಕರಿಗೆ 11 ಕೋಟಿ ರೂ. ಶೇರ್ ತಂದುಕೊಟ್ಟಿದೆ ಎಂದು ಗಾಂಧಿನಗರದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಒಟ್ಟಾರೆ 60ರಿಂದ 70 ರಷ್ಟು ಬಂಡವಾಳ ವಾಪಸ್ ಬಂದಂತೆ ಆಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಹೇಗೆ ಸದ್ದು ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಸೆಕೆಂಡ್ ವೀಕೆಂಡ್ ಚಿತ್ರಕ್ಕೆ ಬಹಳ ಮುಖ್ಯವಾಗಿದೆ. ಈ ವೀಕೆಂಡ್ ಗಳಿಕೆ ಸಿನಿಮಾ ಫಲಿತಾಂಶ ಏನು ಎನ್ನುವುದನ್ನು ನಿರ್ಧರಿಸಲಿದೆ.
ಎಲ್ಲೆಲ್ಲಿ ಭರ್ಜರಿ ರೆಸ್ಪಾನ್ಸ್
'ಪೆದ್ದಿ' ಚಿತ್ರಕ್ಕೆ ಕರ್ನಾಟಕದಲ್ಲಿ ಬಿಕೆಟಿ(ಬೆಂಗಳೂರು, ಕೋಲಾರ ಹಾಗೂ ತುಮಕೂರು) ಭಾಗಗಳಲ್ಲಿ ಮತ್ತು ಚಿತ್ರದುರ್ಗದಲ್ಲಿ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಕಮ್ಮಿ ಆಗಿದ್ದು ಜನ ಚಿತ್ರಮಂದಿರಗಳಲ್ಲೇ ಟಿಕೆಟ್ ಖರೀದಿಸಿ ಸಿನಿಮಾ ನೋಡಲು ಮುಂದಾಗಿದ್ದಾರೆ. ವಾರದ ದಿನಗಳಲ್ಲಿ ಕಲೆಕ್ಷನ್ ಸಹಜವಾಗಿಯೇ ಕಮ್ಮಿ ಆಗಿದೆ. ನಾಳೆ ಶನಿವಾರ(ಜೂನ್ 12) ಹಾಗೂ ಭಾನುವಾರ ಸಿನಿಮಾ ಗಳಿಕೆ ನಿರ್ಣಾಯಕ ಎನಿಸಿಕೊಂಡಿದೆ.
'ಪೆದ್ದಿ' ಮುಂದಿದೆ ದೊಡ್ಡ ಸವಾಲು
ದೊಡ್ಡ ಸಿನಿಮಾಗಳ ಆರ್ಭಟ ಒಂದೇ ವಾರಕ್ಕೆ ಮುಗಿದು ಹೋಗುತ್ತದೆ. 'ಧುರಂಧರ್' ರೀತಿಯ ಸಿನಿಮಾಗಳು ಮಾತ್ರ ವಾರದ ಬಳಿಕ ಕೂಡ ಬಾಕ್ಸಾಫೀಸ್ ಶೇಕ್ ಮಾಡಬಲ್ಲವು. 'ಪೆದ್ದಿ' ಹವಾ ಕಮ್ಮಿ ಆಗಿರುವುದು ನಿಜ. ಆದರೂ ತಮಿಳುನಾಡು, ಕೇರಳ ಹಾಗೂ ಉತ್ತರ ಭಾರತಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಸಿನಿಮಾ ಗಳಿಕೆ ಚೆನ್ನಾಗಿದೆ. ಸದ್ಯ ವಿತರಕರಿಗೆ 11 ಕೋಟಿ ರೂ. ಶೇರ್ ಬಂದಿದೆ. ಇನ್ನು 7ರಿಂದ 8 ಕೋಟಿ ವಾಪಸ್ ಬರಬೇಕಿದೆ. ಆ ಬಳಿಕ ಲಾಭದ ಲೆಕ್ಕ ಶುರುವಾಗಲಿದೆ. ಹಾಗಾಗಿ 'ಪೆದ್ದಿ'ಗೆ ಮುಂದೆ ದೊಡ್ಡ ಸವಾಲು ಎದುರಾಗಿದೆ.


Click it and Unblock the Notifications