Retro Boxoffice: 17 ದಿನಗಳ ಕಲೆಕ್ಷನ್ ಘೋಷಿಸಿದ 'ರೆಟ್ರೋ' ಟೀಂ; ನೆಟ್ಟಿಗರು ವ್ಯಂಗ್ಯ
ಸೂರ್ಯ ನಟನೆಯ ತಮಿಳಿನ 'ರೆಟ್ರೋ' ಸಿನಿಮಾ 17 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಈ ರೊಮ್ಯಾಂಟಿಕ್ ಆಕ್ಷನ್ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಮೇ ಡೇ ವೀಕೆಂಡ್‌ನಲ್ಲಿ ತೆರೆಗೆ ಬಂದಿದ್ದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತ್ತು.
ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡು 'ರೆಟ್ರೋ' ಸಿನಿಮಾ ಪ್ರದರ್ಶನ ಮುಂದುವರೆಸಿದೆ. ಇದೆಲ್ಲದರ ನಡುವೆ ಚಿತ್ರತಂಡ ಸಿನಿಮಾ ಕಲೆಕ್ಷನ್ ಘೋಷಣೆ ಮಾಡಿದೆ. ಆದರೆ ಕೊಟ್ಟಿರುವ ಲೆಕ್ಕ ನೋಡಿ ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ. ಮುಸಿ ಮುಸಿ ನಗುತ್ತಿದ್ದಾರೆ. ಮಿಶ್ರಪ್ರತಿಕ್ರಿಯೆ ಪಡೆದುಕೊಂಡ ಸಿನಿಮಾ ಇಷ್ಟು ಗಳಿಕೆ ಮಾಡುವುದಕ್ಕೆ ಹೇಗೆ ಸಾಧ್ಯ? ಸುಳ್ಳು ಲೆಕ್ಕ ಕೊಡಬೇಡಿ ಎನ್ನುತ್ತಿದ್ಧಾರೆ.

60ರ ದಶಕದಲ್ಲಿ ಶುರುವಾಗುವ ರೆಟ್ರೋ ಕಥೆ 90ರ ದಶಕದವರೆಗೂ ಸಾಗಿ ಬರುತ್ತದೆ. ಚಿತ್ರದಲ್ಲಿ ಭಿನ್ನ ವಿಭಿನ್ನ ಗೆಟಪ್‌ಗಳಲ್ಲಿ ಸೂರ್ಯ ಅಬ್ಬರಿಸಿದ್ದಾರೆ. ಪಾರಿವೇಲ್ ಆಗಿ ದರ್ಬಾರ್ ನಡೆಸಿದ್ದಾರೆ. ಆತನ ಪತ್ನಿಯಾಗಿ ಪೂಜಾ ಮಿಂಚಿದ್ದಾರೆ. ಇನ್ನುಳಿದಂತೆ ಜೊಜು ಜಾರ್ಜ್, ಜಯರಾಮ್, ನಾಸರ್, ಪ್ರಕಾಶ್ ರಾಜ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸಂತೋಷ್ ನಾರಾಯಣ್ ಸಂಗೀತ ಚಿತ್ರಕ್ಕಿದ್ದು 'ಕನ್ನಿಮ' ಸಾಂಗ್ ಹಿಟ್ ಆಗಿ ಸಖತ್ ಸದ್ದು ಮಾಡಿತ್ತು.
17 ದಿನಕ್ಕೆ ಸಿನಿಮಾ ವಿಶ್ವದಾದ್ಯಂತ 235 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುದಾಗಿ ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿದೆ. ವಿಶ್ವದಾದ್ಯಂತ ಸಿನಿಮಾ 100 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವುದೇ ಕಷ್ಟ ಇದೆ. ಅಂತಾದ್ರಲ್ಲಿ 17 ದಿನಕ್ಕೆ 235 ಕೋಟಿ ರೂ. ಎಂದು ಸುಳ್ಳು ಯಾಕೆ ಹೇಳುತ್ತೀರಾ ಎಂದು ವ್ಯಂಗ್ಯವಾಡುತ್ತಿದ್ದಾರೆ. 'ಕಂಗುವ' ಸಿನಿಮಾ ಹೀನಾಯವಾಗಿ ಸೋತಿತ್ತು. 'ರೆಟ್ರೋ' ಚಿತ್ರದಿಂದ ಕಂಬ್ಯಾಕ್ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಅದೇ ಕಾರಣಕ್ಕೆ ಮುಖಭಂಗವಾಗಬಾರದು ಎಂದು ಈ ರೀತಿ ಕಲೆಕ್ಷನ್ ಲೆಕ್ಕ ಕೊಟ್ಟಿರಬೇಕು ಎಂದು ಕೆಲವರು ಕುಹಕವಾಡುತ್ತಿದ್ದಾರೆ.
ಸೂರ್ಯ ನಟನೆಯ ಈ ಹಿಂದಿನ ಎಲ್ಲಾ ಸಿನಿಮಾಗಳ ಕಲೆಕ್ಷನ್ ಮೀರಿ 'ರೆಟ್ರೋ' ದಾಖಲೆ ಬರೆದಂತೆ ಆಗಿದೆ. 'ಕಂಗುವ' ಚಿತ್ರಕ್ಕೆ ಹೆಚ್ಚು ಹೈಪ್ ಕೊಟ್ಟಿದ್ದು ಎಡವಟ್ಟಾಗ್ಗಿತ್ತು. ಹಾಗಾಗಿ ಈ ಬಾರಿ ಚಿತ್ರತಂಡ ಆ ತಪ್ಪು ಮಾಡಲಿಲ್ಲ. ಆದರೂ ಪ್ರೇಕ್ಷಕರಿಂದ ಮಿಕ್ಸ್ಡ್ ಟಾಕ್ ಬಂದಿತ್ತು. ಹಾಗಾಗಿ ದೊಡ್ಡಮಟ್ಟದಲ್ಲಿ ಸಿನಿಮಾ ನೋಡಲು ಜನ ಬರಲಿಲ್ಲ.
ಚಿಕ್ಕಂದಿನಲ್ಲೇ ಪಾರಿವೇಲ್ ಕಣ್ಣನ್ (ಸೂರ್ಯ) ತನ್ನ ಪೋಷಕರಿಂದ ದೂರಾಗಿ ಗ್ಯಾಂಗ್‌ಸ್ಟರ್ ತಿಲಕನ್(ಜೋಜು ಜಾರ್ಜ್) ಆಶ್ರಯದಲ್ಲಿ ಬೆಳೆದು ದೊಡ್ಡವನಾಗುತ್ತಾನೆ. ತಿಲಕನ್ ಪ್ರಭಾವಳಿಯಲ್ಲಿ ಪಾರಿ ಕೂಡ ದೊಡ್ಡ ಗ್ಯಾಂಗ್‌ಸ್ಟರ್ ಆಗಿ ಬೆಳೆಯುತ್ತಾನೆ. ಆದರೆ ರುಕ್ಮಿಣಿ(ಪೂಜಾ ಹೆಗ್ಡೆ) ಜೊತೆ ಮದುವೆ ಬಳಿಕ ಕ್ರೈಂ ಮಾಡಬಾರದು ಎಂದು ನಿರ್ಧರಿಸುತ್ತಾನೆ. ಇದು ಸಾಧ್ಯವಾಗುತ್ತಾ? ಈ ಹಾದಿಯಲ್ಲಿ ಎದುರಾಗುವ ಗೋಲ್ಡ್ ಫಿಶ್ ಡೀಲ್ ಏನು? ಸಾಕು ತಂದೆ ತಿಲಕನ್‌ಗೆ ಪಾರಿ ಎದುರು ನಿಲ್ಲುವುದು ಯಾಕೆ? ಮತ್ತೆ ಆಯುಧ ಹಿಡಿದು ಅಖಾಡಕ್ಕಿಳಿದು ಏನು ಮಾಡುತ್ತಾನೆ? ಎನ್ನುವ 'ರೆಟ್ರೋ' ಚಿತ್ರದ ಉಳಿದ ಕಥೆ.
ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಬಂದಿರುವ ಕಥೆಯನ್ನೇ ಕಾರ್ತಿಕ್ ಸುಬ್ಬರಾಜ್ ಹೊಸ ರೀತಿ ಹೇಳುವ ಪ್ರಯತ್ನ ಮಾಡಿದ್ದರು. ಸೂರ್ಯ ನಟನೆ ಕೂಡ ಚೆನ್ನಾಗಿದೆ. ಆದರೂ ಸಿನಿಮಾ ದೊಡ್ಡದಾಗಿ ಸದ್ದು ಮಾಡ್ತಿಲ್ಲ. ಇದಕ್ಕೂ ಮುನ್ನ ಸೂರ್ಯ ನಟಿಸಿದ ಸಿಂಗಂ-2 ಸಿನಿಮಾ 136 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಬಳಿಕ 'ಸಿಂಗಂ- 3' ಸಿನಿಮಾ 110 ಕೋಟಿ ರೂ. 'ಕಂಗುವ' ಸಿನಿಮಾ 106 ಕೋಟಿ ರೂ. '7th ಸೆನ್ಸ್' 105 ಕೋಟಿ ರೂ. ಕಲೆಕ್ಷನ್ ಮಾಡಿ ಗಮನ ಸೆಳೆದಿತ್ತು. ಅದೆನ್ನೆಲ್ಲಾ ಮೀರಿ ಈಗ 'ರೆಟ್ರೋ' ಸಿನಿಮಾ 235 ಕೋಟಿ ರೂ. ಕಲೆಕ್ಷನ್ ಮಾಡಿ ಮೊದಲ ಸ್ಥಾನಕ್ಕೇರಿದೆ.


Click it and Unblock the Notifications











