ಅದ್ಭುತ, ಅದ್ವಿತೀಯ, ಅತ್ಯಮೋಘ : 'ಕಾಂತಾರ' ಅಬ್ಬರ - ರಶ್ಮಿಕಾ ಮಂದಣ್ಣ, ರಣ್ಬೀರ್ ಕಪೂರ್ 'ಅನಿಮಲ್' ದಾಖಲೆ ಪುಡಿಪುಡಿ
2022.. ಸೆಪ್ಟೆಂಬರ್ 30.. ಕನ್ನಡದ ''ಕಾಂತಾರ'' ಚಿತ್ರ ಕಂಡು ಚಿತ್ರರಂಗ ಬೆಚ್ಚಿ ಬಿದ್ದಿತ್ತು. ಭಾರತದೆಲ್ಲೆಡೆ ''ಕಾಂತಾರ'' ಮೆರವಣಿಗೆ ನಡೆದಿತ್ತು. ಚಿತ್ರಕ್ಕೆ ಹಣ ಹೂಡಿದ್ದ ಹೊಂಬಾಳೆ ಸಂಸ್ಥೆ ಮತ್ತು ರಿಷಬ್ ಶೆಟ್ಟಿಯೇ ಈ ಅದ್ಭುತ .. ಅತ್ಯಮೋಘ.. ಅದ್ವೀತಿಯ ಗೆಲುವನ್ನು ನಿರೀಕ್ಷೆ ಮಾಡಿರಲಿಲ್ಲ. ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿಸಿ ಹೊಸದೊಂದು ಇತಿಹಾಸವನ್ನು ಬರೆದ ಈ ''ಕಾಂತಾರ'' ಚಿತ್ರದ ಕಲರವ ಈಗ ಮತ್ತೆ ಶುರುವಾಗಿದೆ.
ಈ ಬಾರಿ ಕೂಡಾ ಹಳೆಯ ಇತಿಹಾಸ ಮರುಕಳಿಸಿದೆ. ಕಳೆದ ಬಾರಿಗಿಂತ ತುಸು ಹೆಚ್ಚೇ ಬೆಳ್ಳಿತೆರೆಯಲ್ಲಿ ''ಕಾಂತಾರ'' ಧಗಧಗಿಸುತ್ತಿದೆ. ದೈವದ ರುದ್ರ ನರ್ತನಕ್ಕೆ ಬಾಲಿವುಡ್ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ.

ಯಾಕೆಂದರೆ.. ''ಕಾಂತಾರ ಚಾಪ್ಟರ್ 1'' ಬಾಲಿವುಡ್‌ನಲ್ಲಿ ನಿರ್ಮಾಣವಾಗಿದ್ದ ಹತ್ತು ಹಲವು ದಾಖಲೆಗಳನ್ನು ಮುರಿಯುತ್ತಿದೆ. ದೊಡ್ಡ ದೊಡ್ಡವರ ಚಿತ್ರಗಳಿಗೆಲ್ಲಾ ಸೆಡ್ಡು ಹೊಡೆದು ಬಾಕ್ಸಾಫೀಸ್‌ನಲ್ಲಿ ಒಂದೊಂದೆ ಮೆಟ್ಟಿಲೇರುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ''ಕಾಂತಾರ -ಚಾಪ್ಟರ್ 1'' ರಣ್‌ಬೀರ್ ಕಪೂರ್ ಅಭಿನಯದ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ''ಅನಿಮಲ್'' ಚಿತ್ರವನ್ನು ಗಲ್ಲಾಪೆಟ್ಟಿಗೆಯಲ್ಲಿ ಹಿಂದಿಕ್ಕಿದೆ.
ಹೌದು, ಬಾಕ್ಸಾಫೀಸ್‌ನ ಅಂಕಿ-ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿಯ ಪ್ರಕಾರ 2023ರಲ್ಲಿ ತೆರೆಗೆ ಬಂದಿದ್ದ ''ಅನಿಮಲ್'' ಚಿತ್ರ ಕೇವಲ ಭಾರತದಲ್ಲಿ ₹ 553.87 ಕೋಟಿಯನ್ನು ದೋಚಿತ್ತು. ಇಷ್ಟೊಂದು ಹಣ ಗಳಿಸಲು 56 ದಿನದ ಸಮಯವನ್ನು ಕೂಡ ತೆಗೆದುಕೊಂಡಿತ್ತು.
ವಿಶೇಷ ಅಂದರೆ ಈ ಗಳಿಕೆಯನ್ನು ''ಕಾಂತಾರ-ಚಾಪ್ಟರ್ 1'' ಕೇವಲ 22 ದಿನದಲ್ಲಿಯೇ ಹಿಂದಿಕ್ಕಿದೆ. ''ಸ್ಯಾಕ್ನಿಲ್'' ವರದಿಯ ಪ್ರಕಾರ 22 ದಿನದಲ್ಲಿ ₹ 560.29 ಕೋಟಿಯನ್ನು ಗಳಿಸಿದೆ. ಈ ಮೂಲಕ ಅತೀ ಹೆಚ್ಚು ಹಣ ಗಳಿಸಿದ ಭಾರತದ ಹತ್ತು ಚಿತ್ರಗಳ ಲಿಸ್ಟ್‌ನಲ್ಲಿ ''ಕಾಂತಾರ ಚಾಪ್ಟರ್ 1'' ಸದ್ಯ ಒಂಬತ್ತನೇ ಸ್ಥಾನಕ್ಕೇರಿದೆ.
ಭಾರತದ ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಹಣ ಗಳಿಸಿದ ಹನ್ನೊಂದು ಚಿತ್ರಗಳ ಪಟ್ಟಿ ಈ ಕೆಳಗಿನಂತೆ ಇದೆ
1. ಪುಷ್ಪ-2 : ₹1267.97 ಕೋಟಿ
2. ಬಾಹುಬಲಿ 2 : ₹1031 ಕೋಟಿ
3.ಕೆಜಿಎಫ್-2 : ₹856 ಕೋಟಿ
4.ಆರ್‌ಆರ್‌ಆರ್ : ₹772ಕೋಟಿ
5.ಕಲ್ಕಿ 2898AD : ₹653.21ಕೋಟಿ
6. ಜವಾನ್ : ₹640.42ಕೋಟಿ
7. ಸ್ಕ್ರೀ 2 : 627.5 ಕೋಟಿ
8.ಛಾವಾ : ₹615.39 ಕೋಟಿ
9.ಕಾಂತಾರ -1 : 560.29ಕೋಟಿ *
10.ಅನಿಮಲ್- ₹553.87ಕೋಟಿ
11. ಪಠಾಣ್ - ₹543.22ಕೋಟಿ

ಅಂದ್ಹಾಗೇ ''ಕಾಂತಾರ ಚಾಪ್ಟರ್ 1'' ಬಿಡುಗಡೆಯಾಗಿ 22 ದಿನಗಳಾಗಿವೆ. ಆದರೆ ಇಂದು ಕೂಡ ಕ್ರೇಜ್ ಕಡಿಮೆಯಾಗಿಲ್ಲ. ದೀಪಾವಳಿ ಹಬ್ಬದ ರಜೆಯಂದು ಹಲವರ ಮೊದಲ ಆಯ್ಕೆ ಕನ್ನಡದ ''ಕಾಂತಾರ'' ಆಗಿದ್ದು ವಿಶೇಷ. ಹಿಂದಿಯ ''ಥಮ್ಮಾ'' ಚಿತ್ರಕ್ಕೂ ಉತ್ತರ ಭಾರತದವರು ಮಣೆ ಹಾಕಿಲ್ಲ.
ಈ ಹಿನ್ನೆಲೆ ಭಾರತದ ಬಾಕ್ಸಾಫೀಸ್‌ನಲ್ಲಿ ''ಕಾಂತಾರ 1'' ವಿಕ್ಕಿ ಕೌಶಲ್ ಅಭಿನಯದ ''ಛಾವಾ'' ಚಿತ್ರವನ್ನು ಅನಾಯಾಸವಾಗಿ ಸೆಡ್ಡು ಹೊಡೆಯುತ್ತೆ ಎನ್ನುವ ಅಭಿಪ್ರಾಯವನ್ನು ಟ್ರೇಡ್ ವಿಶ್ಲೇಷಕರು ವ್ಯಕ್ತಪಡಿಸುತ್ತಿದ್ದಾರೆ. ''ಸ್ತ್ರೀ-2''.. ''ಜವಾನ್'' ಮತ್ತು ''ಕಲ್ಕಿ''ಯ ಗಳಿಕೆಯನ್ನು ಕೂಡ ''ಕಾಂತಾರ-1'' ಹಿಂದಿಕ್ಕುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ''ಕಾಂತಾರ-1'' ಇನ್ನು ಯಾವೆಲ್ಲಾ ಚಿತ್ರಗಳನ್ನು ಹಿಂದಿಕ್ಕಲಿದೆ ಎನ್ನುವುದು ಕಾದು ನೋಡಬೇಕಿದೆ. ಅತೀ ಹೆಚ್ಚು ಹಣ ಗಳಿಸಿದ ಚಿತ್ರ ಎನ್ನುವ ಹೆಗ್ಗಳಿಕೆ ''ಕಾಂತಾರ 1'' ಪಾತ್ರವಾಗಲು ಇನ್ನೂ 8 ಹೆಜ್ಜೆ ಬಾಕಿ ಇದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ


Click it and Unblock the Notifications











